ಮನೆ ಸಿಕ್ಕ ಸಂಭ್ರಮ : ಮುಸ್ಲಿಂ ಮಹಿಳೆಯಿಂದ ಸಿರಿಗೆರೆ ಶ್ರೀಗಳವರಿಗೆ ಗೌರವ ಸಲ್ಲಿಕೆ
ಸಿರಿಗೆರೆ ಜೂ-24: ಇಲ್ಲಿನ ಸದ್ಧರ್ಮ ನ್ಯಾಯಪೀಠದಲ್ಲಿ ತನ್ನ ಮನೆ ವಿವಾದ ಬಗೆಹರಿಸಿದ್ದ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಮುಸ್ಲಿಂ ಮಹಿಳೆಯೊಬ್ಬರು ಸೋಮವಾರ ಅಭಿನಂದಿಸಿದರು.
ಸಮೀಪದ ಗೌರಮ್ಮನಹಳ್ಳಿ ನಿವಾಸಿ, 85 ವರ್ಷದ ನೂರ್ ಜಾನ್ ಬೇಗಂ ತಮ್ಮ ಕನಸಿನ ಮನೆಯಲ್ಲಿ ಬದುಕುವ ಅವಕಾಶವನ್ನು ಮತ್ತೆ ಒದಗಿಸಿದ್ದಕ್ಕಾಗಿ ಧನ್ಯತಾ ಭಾವದಿಂದ ಶ್ರೀಗಳಿಗೆ ಗೌರವ ಸಲ್ಲಿಸಿದರು.
ಕೈಯಲ್ಲೊಂದು ಬುಟ್ಟಿ ಹಿಡಿದುಕೊಂಡು ಅದರ ತುಂಬ ಹೂವು, ಹಣ್ಣು ತುಂಬಿಕೊಂಡು ಸಭಾಂಗಣದಲ್ಲಿ ನಿಂತಿದ್ದ ಇಳಿವಯಸ್ಸಿನ ನೂರ್ ಜಾನ್ ಬೇಗಂ ಅವರನ್ನು ಕಂಡ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕರೆದು ಕುಶಲೋಪರಿ ವಿಚಾರಿಸಿದರು. “ಬಹಳ ಸಂತೋಷವಾಗಿದೆ. ತಮ್ಮ ಕೃಪೆಯಿಂದ ನಾನು ನನ್ನ ಮನೆಗೆ ವಾಪಸ್ ಹೋಗಿದ್ದೇನೆ. ತಮ್ಮ ಕೃಪೆಯಿಂದ ಮನೆಯ ಖಾತೆಯೂ ನನ್ನ ಹೆಸರಿಗೆ ಆಗಿದೆ” ಎಂದು ಹೇಳುತ್ತಲೇ ನೂ ಜಾನ್ ಶ್ರೀಗಳ ಪಾದಕ್ಕೆ ಸಮಸ್ಕರಿಸಿದರು. ಗೌರಮ್ಮನಹಳ್ಳಿಯಲ್ಲಿ ಮುಸ್ಲಿಂ ಕುಟುಂಬಗಳೇ ಹೆಚ್ಚು ನೆಲೆಸಿವೆ. ಎರಡು ವರ್ಷಗಳ ಹಿಂದೆ ನೂರ್ ಜಾನ್ ಬೇಗಂ ಅವರನ್ನು ಹಿರಿಯ ಪುತ್ರ ಮನೆಯಿಂದ ಹೊರಗೆ ಹಾಕಿದ್ದರು. ಇದರಿಂದ ಅವರು ಒಂಟಿಯಾಗಿದ್ದರು.
ಪ್ರತಿ ವರ್ಷ ಮೊಹರಂ ಹಬ್ಬದ ವೇಳೆ ಗೌರಮ್ಮನಹಳ್ಳಿಗೆ ಭೇಟಿ ನೀಡುತ್ತಿದ್ದ ತರಳಬಾಳು ಶ್ರೀಗಳ ಬಗ್ಗೆ ತಿಳಿದುಕೊಂಡಿದ್ದ ನೂರ್ ಜಾನ್ ಒಮ್ಮೆ ಸದ್ಧರ್ಮ ನ್ಯಾಯಪೀಠಕ್ಕೆ ಬಂದು ತಮ್ಮ ಸಂಕಟ ಹೇಳಿಕೊಂಡಿದ್ದರು.
ಅವರ ನೋವು ಆಲಿಸಿದ್ದ ಶ್ರೀಗಳವರು, ಅವರ ಮಕ್ಕಳು, ಸಂಬಂಧಿಕರನ್ನು ನ್ಯಾಯಪೀಠಕ್ಕೆ ಕರೆಸಿ ವಿಚಾರಣೆ ನಡೆಸಿದ್ದರು. ಎಲ್ಲರ ಅಹವಾಲು ಆಲಿಸಿ, ಆ ಮನೆಯಲ್ಲಿ ವಾಸ ಮಾಡಲು ನೂರ್ ಜಾನ್ಗೆ ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದರು.