ಕುಣಿಯುವ ಮನಸ್ಸಿಗೆ ಕುಣಿಕೆ ಹಾಕುವುದೇ ಯೋಗ!
ವಿಶ್ವದ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ವಿಶ್ವದ ಜನತೆಯ ಸಮಷ್ಟಿ ಚೇತನವನ್ನು ಜಾಗೃತಗೊಳಿಸುವ ಸಲುವಾಗಿ ವಿಶ್ವರಾಷ್ಟ್ರ ಸಂಸ್ಥೆಯು ವರ್ಷದುದ್ದಕ್ಕೂ ಒಂದೊಂದು ದಿನವನ್ನು ಒಂದೊಂದು ವಿಶ್ವದಿನವನ್ನಾಗಿ ಆಚರಿಸುವ ಪದ್ಧತಿಯನ್ನು ಜಾರಿಗೆ ತಂದಿದೆ. ಉದಾಹರಣೆಗೆ ವಿಶ್ವ ಶಾಂತಿ ದಿನ, ವಿಶ್ವ ಪರಿಸರ ದಿನ, ವಿಶ್ವ ಮಹಿಳೆಯರ ದಿನ ಇತ್ಯಾದಿ. ಇವುಗಳ ಸಾಲಿನಲ್ಲಿ 2014 ರಲ್ಲಿ ಸೇರ್ಪಡೆಯಾದ ದಿನ “ವಿಶ್ವ ಯೋಗ ದಿನ”. ಇದಕ್ಕೆ ಪ್ರೇರೇಪಣೆ ಭಾರತ. ಜೂನ್ 21 ರಂದು ಇದನ್ನು ಆಚರಿಸಲು 10 ವರ್ಷಗಳ ಹಿಂದೆ ಪ್ರಸ್ತಾಪಿಸಿದ ವಿಶ್ವರಾಷ್ಟ್ರ ಸಂಸ್ಥೆಯ ಗೊತ್ತುವಳಿಯನ್ನು ಸುಮಾರು 192 ರಾಷ್ಟ್ರಗಳು ಬೆಂಬಲಿಸಿ ಆಚರಿಸುತ್ತಾ ಬಂದಿವೆ. ಯೋಗಾಯೋಗವೋ ಎಂಬಂತೆ ಕ್ರಿ.ಪೂ. 2ನೆಯ ಶತಮಾನದಲ್ಲಿ ಮಹರ್ಷಿ ಪತಂಜಲಿಯಿಂದ ರಚಿತವಾದ “ಯೋಗಸೂತ್ರ” ಗ್ರಂಥದಲ್ಲಿರುವ ಒಟ್ಟು ಸೂತ್ರಗಳ ಸಂಖ್ಯೆ 196. “ವಿಶ್ವ ಯೋಗ ದಿನ” ವನ್ನು ಜೂನ್ 21 ರಂದೇ ಆಚರಿಸಲು ಕೈಗೊಂಡ ನಿರ್ಧಾರದ ಹಿಂದೆ ಒಂದು ವಿಶೇಷ ಕಾರಣವಿದೆ.
ಅಂದು ಉತ್ತರ ಗೋಳಾರ್ಧ ಖಂಡಗಳು ಮತ್ತು ದೇಶಗಳಲ್ಲಿ ಹಗಲು ಹೆಚ್ಚು ಇರುತ್ತದೆ. ಮರು ದಿನದಿಂದ ಹಗಲು ಕಡಿಮೆಯಾಗಿ ರಾತ್ರಿ ಹೆಚ್ಚುತ್ತಾ ಹೋಗುತ್ತದೆ. ಆದಕಾರಣ ವರ್ಷದ ಅತ್ಯಂತ ದೀರ್ಘಾವಧಿಯ ದಿನವಾದ (longest day) ಅಂದು ಹೆಚ್ಚಿನ ಬೆಳಕು ಇರುವಂತೆ ಯೋಗಾಭ್ಯಾಸದಿಂದ ವ್ಯಕ್ತಿಯ ಬದುಕಿನಲ್ಲಿ ಹೊಸ ಬೆಳಕು ನವ ಚೈತನ್ಯ ಮೂಡುತ್ತದೆ ಎಂಬ ಆಶಯ ಈ ದಿನಾಂಕದ ಆಯ್ಕೆಯ ಹಿಂದೆ ಇದೆ.
ಯೋಗವು ಯಾವುದೇ ಮತಧರ್ಮದ ಚೌಕಟ್ಟಿಗೆ ಒಳಪಡುವುದಿಲ್ಲ. ಪ್ರಾಚೀನ ಭಾರತೀಯ ತತ್ವಶಾಸ್ತ್ರದಲ್ಲಿ ಒಟ್ಟು ಆರು ದರ್ಶನಶಾಸ್ತ್ರಗಳಿವೆ. ಇವು ಯಾವೂ ಈಗಿನ Religion ಎಂಬ ಅರ್ಥದಲ್ಲಿ ಪರಿಗಣಿಸಲ್ಪಟ್ಟ ಮತಧರ್ಮಗಳಲ್ಲ. ಜೀವ, ಜಗತ್ತು ಮತ್ತು ಇವುಗಳ ಒಳಹೊರಗೆ ಕಾಣದಂತೆ ಅಡಗಿರುವ ಚೈತನ್ಯವನ್ನು ಕುರಿತು ಆಳವಾಗಿ ಚಿಂತನೆ ಮಾಡಿದ ಅನೇಕ ಋಷಿಮುನಿಗಳ ವಿಭಿನ್ನ ವಿಚಾರಧಾರೆಗಳು. ಇವುಗಳನ್ನು ಷಡ್ ದರ್ಶನಗಳೆಂದು (Six Schools of Indian Philosophy) ಕರೆಯುತ್ತಾರೆ: 1.ಸಾಂಖ್ಯ, 2.ಯೋಗ, 3.ನ್ಯಾಯ, 4.ವೈಶೇಷಿಕ, 5.ಪೂರ್ವಮೀಮಾಂಸಾ ಮತ್ತು 6.ಉತ್ತರ ಮೀಮಾಂಸಾ (ವೇದಾಂತ). ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶಕ್ತಿವಿಶಿಷ್ಟಾದ್ವೈತ ಇವೇ ಮೊದಲಾದವು ಆರನೆಯ ದರ್ಶನಶಾಸ್ತ್ರವಾದ ವೇದಾಂತದ ಶಾಖೆಗಳು. ಯೋಗವು ಈ ಷಡ್ ದರ್ಶನಗಳಲ್ಲಿ ಒಂದಾದರೂ ಇದರ ಪ್ರಮುಖ ಅಂಶಗಳು ಉಳಿದೆಲ್ಲ ದರ್ಶನಗಳಲ್ಲಿಯೂ ಹಾಸುಹೊಕ್ಕಾಗಿ ಬೆರೆತಿವೆ. ಹಾಗೆಯೇ ವಿಶ್ವದಲ್ಲಿರುವ ವಿಭಿನ್ನ ಧರ್ಮೀಯರೂ ಸಹ ತಮ್ಮ ನಿತ್ಯಜೀವನದಲ್ಲಿ ಶಾರೀರಿಕ ಮತ್ತು ಮಾನಸಿಕ ನೆಮ್ಮದಿಗಾಗಿ ಇದನ್ನು ಅನುಸರಿಸಲು ಹಾತೊರೆಯುತ್ತಿದ್ದಾರೆ.
ಕಳೆದ ಶತಮಾನದ 70ರ ದಶಕದಲ್ಲಿ ವಿದೇಶಗಳಲ್ಲಿ ಭಾರತದಿಂದ ಬರುವ ಯೋಗಿಗಳಿಗೆ ವಿಶೇಷ ಮನ್ನಣೆ ಇತ್ತು. “Transcendental Meditation” (ಅತೀಂದ್ರಿಯ ಧ್ಯಾನ) ಬಹಳ ಪ್ರಚಾರದಲ್ಲಿತ್ತು. ಅದರ ಪ್ರತಿಪಾದಕರಾದ ಮಹರ್ಷಿ ಮಹೇಶ್ ಯೋಗಿಯವರು ಅಮೇರಿಕಾ ಮತ್ತು ಯೂರೋಪ್ ನಲ್ಲಿ ತುಂಬಾ ಪ್ರಖ್ಯಾತಿಯನ್ನು ಪಡೆದಿದ್ದರು. ಇವರ ಆಶ್ರಮದ ಕೇಂದ್ರಸ್ಥಾನವು ಸ್ವಿಟ್ಸರ್ ಲ್ಯಾಂಡಿನ ಸೇಲಿಸ್ ಬೆರ್ಗ್ ನಗರದಲ್ಲಿ ಇತ್ತು. ರಾಕ್ ಸಂಗೀತದ ಬೀಟಲ್ ಸಹೋದರರು ಇವರ ಪ್ರಭಾವಕ್ಕೆ ಒಳಗಾಗಿ ಅತೀಂದ್ರಿಯ ಧ್ಯಾನ ತರಬೇತಿಯನ್ನು ಪಡೆದು ಡ್ರಗ್ಸ್ ಸೇವಿಸುವುದನ್ನು ಬಿಟ್ಟದ್ದು ವಿದೇಶೀಯರಲ್ಲಿ ಭಾರೀ ಸಂಚನಲವನ್ನು ಮೂಡಿಸಿತ್ತು. ಯೋಗದ ಹೆಸರಿನಲ್ಲಿರುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿತ್ತು. ಆಗ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ನಾವು ಸಮೀಪದಲ್ಲಿದ್ದ ಒಂದು ಪುಸ್ತಕದ ಅಂಗಡಿಗೆ ಹೋಗಿದ್ದೆವು. ಒಳಗೆ ಪ್ರವೇಶಿಸುತ್ತಿದ್ದಂತೆಯೇ New Arrivals ಎಂಬ ಸೂಚನಾಫಲಕದಡಿಯಲ್ಲಿ ಹೊಸದಾಗಿ ಜರ್ಮನ್ ಭಾಷೆಯಲ್ಲಿ ಪ್ರಕಟಗೊಂಡಿದ್ದ “Yoga-Kochbuch” (ಯೋಗಪಾಕಶಾಸ್ತ್ರ) ಎಂಬ ಶಿರೋನಾಮೆಯ ಒಂದು ಪುಸ್ತಕ ನಮ್ಮ ಕಣ್ಣಿಗೆ ಬಿತ್ತು. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢಕಾಯರಾಗಿ ಆರೋಗ್ಯವಂತರಾಗಿರಲು ಅನೇಕ yogic diet ಗಳನ್ನು ಕೊಟ್ಟಿರುವುದಾಗಿ ಪುಸ್ತಕದ ಮುಖಪುಟದಲ್ಲಿ ನಮೂದಿಸಲಾಗಿತ್ತು. ಕುತೂಹಲದಿಂದ ಆ ಪುಸ್ತಕವನ್ನು ಕೈಗೆತ್ತಿಕೊಂಡು ಅದರ ಪುಟಗಳನ್ನು ತಿರುವಿಹಾಕಿದಾಗ ನಮಗೆ ಅಲ್ಲಿ ಕಂಡು ಬಂದದ್ದು ಇಡ್ಲಿ, ದೋಸೆ, ವಡೆ, ಸಾಂಬಾರ್ ಇತ್ಯಾದಿ ಭಾರತೀಯ ಸಸ್ಯಾಹಾರದ ವಿಶೇಷ ಭಕ್ಷ್ಯಭೋಜ್ಯಗಳನ್ನು ರುಚಿರುಚಿಯಾಗಿ ತಯಾರುಮಾಡುವ ಬಗೆ ಹೇಗೆ ಎಂಬ ವಿವರಗಳು! ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆಂದೇ ಇದ್ದ ಸುಸಜ್ಜಿತ ಪಾಕಶಾಲೆಯಲ್ಲಿ ಸ್ವತಃ ಕೈಯಡಿಗೆ ಮಾಡಿಕೊಂಡು ಉಣ್ಣುತ್ತಿದ್ದ ನಮಗೆ ಎಂ.ಟಿ.ಆರ್ ಫುಡ್ ಪ್ಯಾಕೆಟ್ ಸಿಗದ ಆ ವಿದೇಶೀ ನೆಲದಲ್ಲಿ ಬಾಯೂರುವಂತೆ ಮಾಡಿತು. ಪುಸ್ತಕವನ್ನು ಖರೀದಿಸಲು ಆಗ ನಮ್ಮ ಜೇಬಿನಲ್ಲಿ ಸಾಕಷ್ಟು ಹಣವಿರಲಿಲ್ಲ. ಮಾರನೆಯ ದಿನ ಹಣ ತೆಗೆದುಕೊಂಡು ಹೋದಾಗ ಆ ಪುಸ್ತಕದ ಎಲ್ಲ ಪ್ರತಿಗಳೂ ಆಗಲೇ ಮಾರಾಟವಾಗಿದ್ದವು!
ಯೋಗವು ಸಂಯಮ ಹಾಗೂ ಶಿಸ್ತುಬದ್ಧ ಜೀವನ. ಶರೀರ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡುವ ಒಂದು ಸಾಧನ. ಆತ್ಮಸಾಕ್ಷಾತ್ಕಾರ ಪಡೆಯಲು ಮಹರ್ಷಿ ಪತಂಜಲಿಯು ಪ್ರತಿಪಾದಿಸಿದ ಅಷ್ಟಾಂಗಯೋಗದ ಎಂಟು ಹಂತಗಳೆಂದರೆ: 1)ಯಮ, 2)ನಿಯಮ, 3)ಆಸನ, 4)ಪ್ರಾಣಾಯಾಮ, 5)ಪ್ರತ್ಯಾಹಾರ, 6)ಧಾರಣಾ, 7)ಧ್ಯಾನ ಮತ್ತು 8)ಸಮಾಧಿ. ಇವುಗಳಲ್ಲಿ ಯೋಗಾಸನಗಳು ಮೂರನೆಯ ಹಂತ. ಅದಕ್ಕೂ ಪೂರ್ವದಲ್ಲಿರುವ ಎರಡು ಹಂತಗಳಾದ ಯಮ (ಅಹಿಂಸಾ-ಸತ್ಯ-ಅಸ್ತೇಯ-ಬ್ರಹ್ಮಚರ್ಯ-ಅಪರಿಗ್ರಹ) ಮತ್ತು ನಿಯಮ (ಶೌಚ-ಸಂತೋಷ-ತಪಸ್ಸು-ಸ್ವಾಧ್ಯಾಯ-ಈಶ್ವರ ಪ್ರಣಿಧಾನ) ಶರೀರ ಮತ್ತು ಮನಸ್ಸಿನ ಶುಚಿತ್ವವನ್ನು ಬೋಧಿಸುತ್ತವೆ. ಇವುಗಳನ್ನಷ್ಟೇ ಜನರು ಪಾಲಿಸಿದರೆ ಸಾಕು ಜಗತ್ತಿನಲ್ಲಿ ಎಷ್ಟೋ ಸಂಘರ್ಷಗಳು ನಿಲ್ಲುತ್ತವೆ. ಅಷ್ಟಾಂಗಯೋಗದಲ್ಲಿ ಮೊದಲನೆಯ ನಾಲ್ಕು(ಯಮ-ನಿಯಮ-ಆಸನ-ಪ್ರಾಣಾಯಾಮ) ಬಹಿರಂಗ ಸಾಧನಗಳಾದರೆ ಕೊನೆಯ ನಾಲ್ಕು (ಪ್ರತ್ಯಾಹಾರ-ಧಾರಣಾ- ಧ್ಯಾನ-ಸಮಾಧಿ) ಅಂತರಂಗ ಸಾಧನಗಳು. ಈ ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗಶುದ್ದಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ” ಎಂಬ ಬಸವಣ್ಣನವರ ವಚನದಲ್ಲಿ ಇನ್ನೂ ಹೆಚ್ಚಿನ ವಿವರಗಳೊಂದಿಗೆ ಕಾಣಬಹುದು. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಾಧನೆಯೇ ಯೋಗ. ಯೋಗಾಸನಗಳಲ್ಲಿ ಪರಿಣತಿಯನ್ನು ಪಡೆದ ಮಾತ್ರಕ್ಕೆ ಯಾರೂ ಯೋಗಿಯಾಗುವುದಿಲ್ಲ. ಹೆಚ್ಚೆಂದರೆ ಯೋಗ ಪಟು ಎನಿಸಬಹುದು. ಯೋಗ ಎಂದರೆ ಏನೆಂದು ಮಹರ್ಷಿ ಪತಂಜಲಿ ತನ್ನ ಮೊದಲ ಸೂತ್ರದಲ್ಲಿ ಹೀಗೆ ಹೇಳುತ್ತಾನೆ: “ಯೋಗಶ್ಚಿತ್ತವೃತ್ತಿನಿರೋಧಃ” (ಸೂ.1.1) ಅಂದರೆ ಮನಸ್ಸಿನಲ್ಲಿ ಹರಿದಾಡುವ ಆಲೋಚನೆಗಳನ್ನು ನಿಯಂತ್ರಿಸುವುದೇ ಯೋಗ. ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ಉಂಟಾಗಲು ಕಾರಣಗಳು ಪತಂಜಲಿಯ ಇನ್ನೊಂದು ಸೂತ್ರದ ಪ್ರಕಾರ: “ಅವಿದ್ಯಾಸ್ಮಿತಾರಾಗದ್ವೇಷಾಭಿನಿವೇಶಾಃ ಕ್ಲೇಶಾಃ” (ಸೂ.2.3). ಅಂದರೆ ಅಜ್ಞಾನ, ಅಹಂಕಾರ, ರಾಗ, ದ್ವೇಷ ಮತ್ತು ಮೋಹ ಎಂಬ ಕ್ಲೇಶಗಳು ಮನುಷ್ಯನ ಮನಸ್ಸನ್ನು ವಿಕೃತಗೊಳಿಸಲು ಮೂಲ ಕಾರಣ.
ಮನಸ್ಸು ಒಂದು ನೀರಿನ ಕೊಳ ಇದ್ದಂತೆ. ಕೊಳಕ್ಕೆ ಕಲ್ಲೆಸೆದರೆ ಕೊಳದ ನೀರಿನಲ್ಲಿ ಅಲೆಗಳು ಉಂಟಾಗುತ್ತವೆ. ಹಾಗೆಯೇ ನಿತ್ಯಜೀವನದಲ್ಲಿ ಸಂಭವಿಸುವ ಅಹಿತಕರ ಘಟನೆಗಳು ಮನುಷ್ಯನ ಮನಸ್ಸನ್ನು ಘಾಸಿಗೊಳಿಸುತ್ತವೆ; ವಿಕೃತ ಭಾವನೆಗಳು ದಾರಿತಪ್ಪಿಸುತ್ತವೆ. ಅಂತಹ ಸಂದರ್ಭಗಳಲ್ಲಿ ತಲ್ಲಣಗೊಳ್ಳದೆ, ವಿವೇಕವನ್ನು ಕಳೆದುಕೊಳ್ಳದೆ ಮನಸ್ಸನ್ನು ಸದೃಢಗೊಳಿಸಿಕೊಳ್ಳುವುದೇ ಯೋಗ, ಅದನ್ನು ಸಾಧಿಸುವುದು ಹೇಗೆ ಎಂದರೆ ಪತಂಜಲಿಯ ಮತ್ತೊಂದು ಸೂತ್ರದ ಪ್ರಕಾರ “ಅಭ್ಯಾಸ-ವೈರಾಗ್ಯಾಭ್ಯಾಂ ತನ್ನಿರೋಧಃ” (ಸೂ.1.12) ಅಂದರೆ ಸತತ ಅಭ್ಯಾಸ ಮತ್ತು ವೈರಾಗ್ಯಭಾವನೆಯನ್ನು ಬೆಳೆಸಿಕೊಳ್ಳುವುದರಿಂದ ಸಾಧ್ಯ. “ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜ” ಎನ್ನುತ್ತಾಳೆ ಅಕ್ಕಮಹಾದೇವಿ. ಇಲ್ಲಿ “ಚೇಷ್ಟೆ” ಎಂಬ ಶಬ್ದಕ್ಕೆ ಎರಡು ಅರ್ಥಗಳಿವೆ: ಒಂದು ಸಾಮಾನ್ಯ ಕ್ರಿಯೆ (action) ಮತ್ತೊಂದು ವಿಕೃತ ನಡೆ (misdeed), “ಕಪಿಚೇಷ್ಟೆ” ಎಂಬ ಕನ್ನಡದ ಆಡುನುಡಿಯಲ್ಲಿ ವಿಕೃತ ನಡೆ ಎಂಬ ಅರ್ಥವನ್ನು ಕಾಣಬಹುದು. ಮೂಲ ಸಂಸ್ಕೃತದಲ್ಲಿ “ಚೇಷ್ಟಾ” ಎಂದರೆ ಕ್ರಿಯೆ. ಎರಡನೆಯ “ವಿಕೃತ ನಡೆ” ಎಂಬ ಅರ್ಥ ಸಂಸ್ಕೃತದಲ್ಲಿ ಇಲ್ಲ. “ಲೋಕದ ಚೇಷ್ಟೆಗೆ ರವಿ ಬೀಜವಾದಂತೆ” ಎಂದರೆ ಲೋಕ ವ್ಯವಹಾರಕ್ಕೆ ರವಿ ಕಾರಣನಾದಂತೆ ಎಂದರ್ಥ. “ಕರಣಂಗಳ ಚೇಷ್ಟೆಗೆ ಮನವೇ ಬೀಜ” ಎಂದರೆ ಮನುಷ್ಯನ ಇಂದ್ರಿಯಗಳ ವಿಕೃತ ನಡೆಗೆ ಮನಸ್ಸೇ ಕಾರಣ ಎಂದರ್ಥ. ಹೆಣ್ಣಾಗಲೀ, ಹೊನ್ನಾಗಲೀ, ಮಣ್ಣಾಗಲೀ ಮಾಯೆಯಲ್ಲ. “ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ” ಎನ್ನುತ್ತಾರೆ ಅನುಭಾವಿ ಅಲ್ಲಮ ಪ್ರಭುಗಳು. ಮನುಷ್ಯನು ಇಂದ್ರಿಯಗಳ ವಿಕಾರದ ಸುಳಿಯಲ್ಲಿ ಸಿಕ್ಕಿಕೊಂಡು ಹೇಗೆ ತೊಳಲಾಡುತ್ತಾನೆ ಎಂಬುದನ್ನು ಬಸವಣ್ಣನವರು ಸಾಧನಾವಸ್ಥೆಯಲ್ಲಿ ಆತ್ಮನಿರೀಕ್ಷಣೆ ಮಾಡಿಕೊಂಡು ಈ ಮುಂದಿನಂತೆ ವಿಷಾದಿಸಿದ್ದಾರೆ:
ಕಾಯವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇಂದ್ರಿಯವಿಕಾರ ಸುಳಿವುದಯ್ಯಾ!
ಸುಳಿವಿನೊಳಗೆ ಸುಳಿಯುತ್ತಲಿದ್ದೇನೆ, ಸಿಲುಕಿಸದಿರಯ್ಯಾ
ಅನ್ಯ ಚಿತ್ತವಿರಿಸದಿರಯ್ಯಾ; ನಿಮ್ಮ ಚಿತ್ತವಿರಿಸಯ್ಯಾ
ಅನುಪಮಸುಖಸಾರಾಯ ಶರಣರಲ್ಲಿ
ಕೂಡಲ ಸಂಗಮದೇವಯ್ಯಾ, ಇದನೇ ಬೇಡುವೆನಯ್ಯಾ
ಮನುಷ್ಯನು ತನ್ನ ಮನಸ್ಸನ್ನು ಬುದ್ದಿಯ ಅಂಕೆಯಲ್ಲಿಟ್ಟುಕೊಳ್ಳಬೇಕು. ಚಂಚಲತೆಯಿಂದ ಕುಣಿದಾಡುವ ಮನಸ್ಸಿಗೆ ನಿಶ್ಚಲತೆಯ ಕುಣಿಕೆಯನ್ನು ಹಾಕಬೇಕು. ನಾಯಿಯು ಬಾಲವನ್ನು ಅಲ್ಲಾಡಿಸಬೇಕೇ ಹೊರತು ಬಾಲವೇ ನಾಯಿಯನ್ನು ಅಲ್ಲಾಡಿಸುವಂತಾಗಬಾರದು! ಬಸವಣ್ಣನವರು ಹೇಳುವಂತೆ ಮನಸ್ಸು ಶರೀರವೆಂಬ ಬುಟ್ಟಿಯಲ್ಲಿರುವ ಹಾವು! ಹಾವಾಡಿಗನು ಹಾವಿನ ವಿಷದ ಹಲ್ಲುಗಳನ್ನು ಕಿತ್ತು ತನ್ನ ಬುಟ್ಟಿಯಲ್ಲಿಟ್ಟುಕೊಳ್ಳುತ್ತಾನೆ. ಪುಂಗಿಯನ್ನೂದಿ ಅದನ್ನು ಆಟ ಆಡಿಸುತ್ತಾನೆ. ಹಾಗೆಯೇ ಸಾಧಕನು ದೇವರ ಧ್ಯಾನ ಮತ್ತು ಪೂಜೆಯಲ್ಲಿ ತೊಡಗಿ ಶರೀರವೆಂಬ ಬುಟ್ಟಿಯಲ್ಲಿ ವಿಷಸರ್ಪದಂತಿರುವ ಮನಸ್ಸಿನ ವಿಕೃತ ಆಲೋಚನೆಗಳನ್ನು ಹತ್ತಿಕ್ಕಬಲ್ಲ ಗಾರುಡಿಗನಾಗಬೇಕು!
ಮನವೇ ಸರ್ಪ, ತನುವೇ ಹೇಳಿಗೆ:
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ:
ಇನ್ನಾವಾಗ ತಿಂದಹುದೆಂದರಿಯೆ!
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲೊಡೆ
ಅದೇ ಗಾರುಡ, ಕೂಡಲಸಂಗಮದೇವಾ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.27-6-2024.