ಬರದ ಬವಣೆ ನೀಗಿಸಿದ ಭರಮಸಾಗರ ಕೆರೆ

  •  
  •  
  •  
  •  
  •    Views  

ವರ್ಷದ ಬರಲಾಗದ ಪರಾಕಾಷ್ಠೆ, ಪಶು-ಪಕ್ಷಿಗಳ ಜೊತೆಗೆ ಬತ್ತಿ ಬಾಡಿಹೋದ ಗಿಡ-ಮರಗಳ ಮೂಕ ವೇದನೆಗಳಲ್ಲಿ, ನಮ್ಮ ಜನಪದರು ಅನುಭವಿಸಿ ಕಟ್ಟಿಕೊಟ್ಟ ಗ್ರಾಮ್ಯಜನ್ಯ ಹಾಡು "ಯಾಕಾರ ಮಳೆ ಹೋದವೋ..." ತಾನು-ತಾನಾಗೇ ಗುನುಗುನಿಸುತ್ತದೆ.

ಕೃಷಿ ಪ್ರಧಾನವಾದ ನಮ್ಮ ಭಾರತ ದೇಶದಲ್ಲಿ ಒಂದೊಮ್ಮೆ ಶೇ. 90 ರೈತಾಪಿ ವರ್ಗ ಇತ್ತು. ಉತ್ತು-ಬಿತ್ತಿ ಬೆಳೆ ತೆಗೆದು, ತಾನೂ ಉಂಡು ದೇಶವನ್ನೂ ಉಣಪಡಿಸುತ್ತಿದ್ದ. ಜನಪದ ಹಾಡು-ಕುಣಿತ, ನಾದ ನಗಾರಿಗಳ ನಾದಗಳಲ್ಲಿ ಕುಣಿದು ಕುಪ್ಪಳಿಸುತ್ತಿದ್ದ.

ಮಳೆರಾಯ ಉಯ್ಯಾಲಿ
ಕೆರೆರಾಯ ತುಂಬಾಲಿ
ನೆಲ್ಲಕ್ಕಿ ಬಯಲು ಬೆಳೆಯಾಲಿ...
ನೆಲ್ಲಕ್ಕಿ ಬಯಲು ಬೆಳೆಯಾಲಿ, 
ನಮ್ಮೂರ ತೇರು ಹರಿಯಾಲಿ...

ನಮ್ಮ ಜನಪದರು ಕಟ್ಟಿದ ಈ ಪದ್ಯದಲ್ಲಿ ಇಡೀ ಮಾನವ ಜನಾಂಗದ ಆಶಯವೇ ಅಡಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಮಳೆ ಬಂದರೆ ಬೆಳೆ, ಮಳೆ ಬಂದರೆ ಕೆರೆ ತುಂಬೋದು. ಕೆರೆ ತುಂಬಿದರೆ ನೀರು ಹರಿಸಿ ಭತ್ತ ಬೆಳೆದು ನೆಲ್ಲಕ್ಕಿಬಾನ ಬಾಯಿ ಸೇರೋದು... ಈ ಎಲ್ಲಾ ತೃಪ್ತಿ-ಸಂತೃಪ್ತಿಯಲ್ಲಿ ಊರ ದೇವರ ಜಾತ್ರೆ-ತೇರು ಹರಿಸೋದು ಈ ಸಂಭ್ರಮ ಸಡಗರದಲ್ಲಿ ಹೊಸ ಬಟ್ಟೆ ಪೋಷಕು... ನೃತ್ಯ-ಕುಣಿತ, ನಾಟಕ; ಬೀಗರು ಬಿಜ್ಜರ ಸಮಾಗಮ...! ಹೌದಲ್ಲವೇ! ಈ ಒಂದು ಪದ್ಯದಲ್ಲಿ ನಮ್ಮ ಗ್ರಾಮೀಣ ಅಜ್ಞಾತ ಕವಿಗಳು ಇಡೀ ಮನುಕುಲದ ನಲಿವುಗಳನ್ನ ಕಟ್ಟಿಕೊಟ್ಟಿದ್ದಾರೆ...

ಲೇಖನದ ಆರಂಭದಲ್ಲೇ ಜನಪದ ಕವಿಗಳ ಎರಡು ಪದ್ಯಗಳ ಉಲ್ಲೇಖ ಮಾಡಿದ ಉದ್ದೇಶ ಇಷ್ಟೇ... ಮಳೆ ಮತ್ತು ಕೆರೆಗಳು ನಮ್ಮ ರೈತ ಜನಾಂಗದ ಜೀವನಾಡಿ ಅನ್ನುವುದು ಅಷ್ಟೇ ಅಲ್ಲ...ಜೀವನ ಜಗತ್ತಿಗೆ ಉಸಿರುಳಿಯಲು ಒಡನಾಡಿ... ವಿಜ್ಞಾನ ಅದ್ಭುತವಾಗಿ ಆವಿಷ್ಕಾರಗೊಂಡಿದೆ. ಚಂದ್ರ-ಸೂರ್ಯರ ಒಡಲ ಸತ್ಯದ ಮೇಲೆ ಬೆಳಕು ಚೆಲ್ಲುತ್ತದೆ. ಆದರೆ ಮನುಷ್ಯನ, ಪ್ರಾಣಿ-ಪಕ್ಷಿಗಳ ಒಡಲು ತುಂಬಲು ರೈತ ಬೆಳೆಯಲೇ ಬೇಕು. ವಿಜ್ಞಾನ-ತಂತ್ರಜ್ಞಾನ ಮೂಲಕ ನಮ್ಮ ದಿನನಿತ್ಯದ ಅವಶ್ಯಕತೆಗಳನ್ನು ಸುಲಭೀಕರಿಸಿಕೊಳ್ಳಬಹುದೇ ವಿನಃ ಉದರ ತುಂಬಿಕೊಳ್ಳಲು ನೆಲ್ಲಕ್ಕಿಬಾನ, ರೊಟ್ಟಿ-ಮುದ್ದೆಯೇ ಬೇಕಲ್ಲವೇ?

ಈ ಸಾಮಾನ್ಯ ಜ್ಞಾನದ ಮೂಲಕವೇ ನಮ್ಮಲ್ಲಿ ಕೆರೆ-ಕಟ್ಟೆ ನಿರ್ಮಿಸುವ ಕೆಲಸವನ್ನು ಅನಾದಿಕಾಲದಿಂದ ಮಾಡಿಕೊಂಡು ಬರಲಾಗಿದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕೆರೆಕಟ್ಟೆಗಳು ಯಥೇಚ್ಛವಾಗಿದ್ದವು. ರಾಜ ಮಹಾರಾಜರುಗಳು, ಪಾಳೇಗಾರರು ತಮ್ಮ ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಕೆರೆಕಟ್ಟೆಗಳನ್ನು ಕಟ್ಟಿಸಿ ರೈತರ ಬೆಳಗೆ, ಕುಡಿಯುವ ನೀರಿಗೆ ಅನುಕೂಲ ಮಾಡಿದ್ದರು. ಇತ್ತೀಚಿನವರೆಗೆ, ಅಂದರೆ 1900ರ ವರೆಗೆ ಕೆರೆಕಟ್ಟೆಗಳು ಒಡಲು ತುಂಬಿಕೊಂಡು ತುಂಬಿ ತುಳುಕುತ್ತಿದ್ದವು. ಆಧುನಿಕ ತಂತ್ರಜ್ಞಾನ ಕಾಲಿಟ್ಟಿತು ನೋಡಿ...! ನಮ್ಮ ಕಾಡುಗಳಿಗೆ ಕಂಠಕ ಬಂದಿತು. ಅಭಿವೃದ್ಧಿಯ ಹೆಸರಿನಲ್ಲಿ ಬರೀ ಕಾಡು ಕರಗಲಿಲ್ಲ, ನಮ್ಮ ಕೆರೆಕಟ್ಟೆಗಳು ತಮ್ಮ ಅಸ್ಥಿತ್ವ ಕಳೆದುಕೊಂಡು ನಾಡವರ ಕಾಂಕ್ರಿಟ್ ಕಟ್ಟಡಳಿಗೆ ಅಂಗಾತ ಮಲಗಿ ಅವಸಾನಗೊಂಡವು. ಪುಣ್ಯಕ್ಕೆ ಅಲ್ಲೊಂದು ಇಲ್ಲೊಂದು ದೊಡ್ಡ ದೊಡ್ಡ ಕೆರೆಗಳು ಉಳಿದುಕೊಂಡರೂ ಮಳೆ ಪ್ರಮಾಣ ಕುಸಿಯುತ್ತಾ ಬಂದಂತೆ, ಮತ್ತೊಂದು ಕಡೆ "ಕೆರೆಗಳ ಕಡೆ ಹರಿಯುವ ಹಳ್ಳ-ಝರಿಗಳೂ ಮುಚ್ಚಿ ಹೋಗಿ" ಖಾಲಿಖಾಲಿ ಕೆರೆ ಅಂಗಳಗಳಾಗಿ ಉಳಿದುಕೊಂಡವು.

ಇಂತಹ ಕೆರೆಗಳಲ್ಲಿ ಭರಮಸಾಗರದಲ್ಲಿ ಮುನ್ನೂರು ವರ್ಷಗಳ ಹಿಂದೆ ಚಿತ್ರದುರ್ಗದ ಪಾಳೇಗಾರ ಭರಮಣ್ಣ ನಾಯಕ ಕಟ್ಟಿದ ಕೆರೆಯೂ ಒಂದು. ಈ ಕೆರೆಯ ಆಶ್ರಯದಲ್ಲಿ ಸುತ್ತ ಎಡಬಲ ಕನಿಷ್ಠ ಐವತ್ತು  ಹಳ್ಳಿಗೆ ಕುಡಿಯುವ ನೀರು ಸಹಿತ ಕೆರೆ-ತೋಟಗಳಿಗೆ ಪರೋಕ್ಷವಾಗಿ ಆಸರೆ ಆಗುತ್ತಿತ್ತು. 


ಈ ಕೆರೆ ತುಂಬಿದರೆ ಅಂತರಜಲ ಹೆಚ್ಚಿ ಸುತ್ತಲಿನ ಹಳ್ಳಿಗಳ ತೋಟದ ಬಾವಿಗಳು ತುಂಬಿಕೊಳ್ಳುತ್ತಿದ್ದವು. ಅಲ್ಲದೇ ಕೆರೆಯ ಕೋಡಿ ಬಿದ್ದರೆ ತುಪ್ಪದಹಳ್ಳಿ ಕೆರೆಯವರೆಗೆ ಬರುವ ಎಲ್ಲಾ ಕೆರೆಗಳೂ ತುಂಬಿಕೊಳ್ಳುತ್ತಿದ್ದವು. ಇದೆಲ್ಲಾ ಹಳೆಯ ಮಾತು... ಆದರೆ ಕಳೆದ ಇಪ್ಪತ್ತು-ಮೂವತ್ತು ವರ್ಷಗಳಿಂದ ಕೆರೆಗಳ ಅಸ್ತಿತ್ವ ಇದ್ದರೂ ಒಡಲು ಬರಿದು. ಬರದ ಛಾಯೆ, ಬೇಸಿಗೆಯಲ್ಲಿ ಕುಡಿವ ನೀರಿಗೂ ಪರದಾಟ...! ಇಂತಹ ಸಂದರ್ಭದಲ್ಲಿ ನಮ್ಮ ಕೆರೆಗಳನ್ನು ತುಂಬಿಸಬೇಕು, ಬಯಲು ಸೀಮೆ ಜನರಿಗೆ-ರೈತರಿಗೆ ಆಸರೆ ಆಗಬೇಕು ಎಂಬ ದಿವ್ಯ ಲೋಚನೆ ಶುರು ಆಗಿದ್ದು, ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಲ್ಲಿ ಬಂತಲ್ಲದೆ ಭಗೀರಥ ಯತ್ನಕ್ಕೆ ತಮ್ಮ ಇಚ್ಛಾಶಕ್ತಿಯನ್ನು ಕ್ರಿಯಾಶಕ್ತಿಯನ್ನಾಗಿಸಿ ಒರೆಗಚ್ಚಿ ಹೊರಟರು.

ಈ ಕಾರ್ಯದಲ್ಲಿ ಆರಂಭದಲ್ಲಿ ದಾವಣಗೆರೆ ತಾಲ್ಲೂಕಿನಲ್ಲಿ ಇಪ್ಪತ್ತೆರಡು ಕೆರೆಗಳಿಗೆ ತುಂಗಭದ್ರ ನದಿಯ ಮೂಲಕ ನೀರು ತುಂಬಿಸುವ ಪ್ರಯತ್ನ ಶುರು ಆಯ್ತು. ದಿವಂಗತ ಡಾ. ಮಂಜುನಾಥಗೌಡ ಅವರು ಈ ಬಗ್ಗೆ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಮಾರ್ಗದರ್ಶನದಲ್ಲಿ ಒಂದು ಆಂದೋಲನದ ರೀತಿ ಕಾರ್ಯ ನಿರ್ವಹಿಸಿದ್ದರು. ಅದೇ ರೀತಿ ಚನ್ನಗಿರಿ ತಾಲ್ಲೂಕಿಗೆ ನೀರುಣಿಸುವ ಉಮ್ರಾಣಿ ಏತನೀರಾವರಿ ಕಾರ್ಯರೂಪಕ್ಕೆ ಬಂದಿದ್ದವು. ಈ ಎರಡು ಯೋಜನೆಗಳಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂತರದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾಮಂತ್ರಿ ಆಗಿದ್ದ, ಎಸ್.ಎಸ್.ಮಲ್ಲಿಕಾರ್ಜುನ್ ಶ್ರೀಗಳಿಗೆ ಬೆಂಬಲವಾಗಿ ನಿಂತದ್ದು ನಮ್ಮ ಕಣ್ಣ ಮುಂದಿದೆ. ಹರಿಹರ ತಾಲ್ಲೂಕು ರಾಜನಹಳ್ಳಿ ಬಳಿ ತುಂಗಭದ್ರ ನದಿ ನೀರೆತ್ತುವ ಯಂತ್ರಗಾರ ತಲೆ ಎತ್ತಿ ನಿಂತಿತು. ಇಪ್ಪತ್ತೆರಡು ಕೆರೆಗಳ ಬಹು ನಿರೀಕ್ಷಿತ ಈ ಯೋಜನೆಗೆ ಸ್ವಾಮೀಜಿಯವರು ಪದೇ ಪದೇ ಅಧಿಕಾರಿಗಳ ಸಭೆ ನಡೆಸಿದ್ದೂ ಉಂಟು... ಅದೇ ರೀತಿ ಉಬ್ರಾಣಿ ಏತ ನೀರಾವರಿ ಬಗ್ಗೆಯೂ ಸ್ವಾಮೀಜಿಯವರು ಹಾಗೂ ಸ್ಥಳೀಯ ಮುಖಂಡರು ಆಸ್ಥೆ ವಹಿಸಿದ್ದರೂ ಪದೇ ಪದೇ ತಾಂತ್ರಿಕ ತೊಂದರೆ ಆದದ್ದು ಉಂಟು....

ಮೇಲಿನ ಯೋಜನೆಗಳ ಲೋಪದೋಷಗಳನ್ನು ಗಮನಿಸಿದ್ದ ತರಳಬಾಳು ಶ್ರೀಗಳು ಭರಮಸಾಗರ ಹಾಗೂ ಸುತ್ತಮುತ್ತಣ ನಲವತ್ಮೂರು ಕೆರೆಗಳ ನೀರು ತುಂಬಿಸುವ ಯೋಜನೆಯನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಿಸಿದ್ದರು. ಅದೂ ಅಲ್ಲದೇ ಇಡೀ ಯೋಜನೆಗೆ ತಗುಲುವ ವೆಚ್ಚ 543 ಕೋಟಿ ರೂಪಾಯಿಗಳನ್ನು ಹಠ ಹಿಡಿದು ಬಿಡುಗಡೆ ಮಾಡಿಸಿಕೊಂಡರು. ಈ ಹಣ ಬಿಡುಗಡೆ ಬಜೆಟ್ ಗೆ ಸೇರಿಸಿ ಬಿಡುಗಡೆ ಆದ ಸಂದರ್ಭಗಳಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಹಾಗೂ ಎಡೆಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಗಳಿದ್ದವು. ಸ್ವಾಮೀಜಿಯವರು ಈ ಎರಡೂ ಸರ್ಕಾರಗಳ ಮುಖ್ಯಮಂತ್ರಿಗಳನ್ನು, ನೀರಾವರಿ ಮಂತ್ರಿಗಳನ್ನು ಹಾಗೂ ಹಣಕಾಸು ಇಲಾಖೆ ಮುಖ್ಯಸ್ಥರನ್ನು ಎಡಬಿಡದೆ ಬೆಂಬತ್ತಿ ಭರಮಸಾಗರ ಕೆರೆ ಯೋಜನೆಯ 543 ಕೋಟಿ ಅಲ್ಲದೆ ಬರದ ತಾಲ್ಲೂಕು ಜಗಳೂರಿನ 53 ಕೆರೆಗಳ ಯೋಜನೆಗೆ ಬೇಕಾದ ಒಟ್ಟು 1200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿಸಿದ ರೋಚಕ ಕ್ಷಣಗಳನ್ನು ನೆನಪಿಸಿಕೊಳ್ಳಬಾಗುತ್ತದೆ. ಈಗ್ಗೆ ಮೂರು ನೂರು ವರ್ಷಗಳ ಹಿಂದೆ ಭರಮಣ್ಣ ನಾಯಕ ತನ್ನ ರೈತಾಪಿ ಜನರಿಗಾಗಿ ಕಟ್ಟಿಸಿದ ಕೆರೆಯು, ನೀರಿಲ್ಲದೆ ಕೆರೆ ಅಂಗಳವಾಗಿತ್ತು. ಈಗ ಮುನ್ನೂರು ವರ್ಷಗಳು ಸಂದ ಸಂದರ್ಭಗಳಲ್ಲಿ ಕೆರೆ ಮೈದುಂಬಿ ಭರಮಣ್ಣ "ಸಾಗರ" ಆಗಿ ತುಂಬಿ ಸುತ್ತಣ ನಲವತ್ಮೂರು ಕೆರೆಗಳಿಗೆ ವಿತರಣಾ ಕೆರೆಯಾಗಿ ಈ ಭಾಗದ ಜನರ ಜೀವಜಲವಾಗಿದೆ. ಭೂತಾಯಿ ಒಡಲ ಧಗೆ ನೀಗಿಸಿ ತಂಬುಣಿಸಿದೆ.

ಈ ವರ್ಷದ ಬಿರು ಬೇಸಿಗೆಯಲ್ಲಿ ಬರಗಾಲದಿಂದ ನಾಡು ತತ್ತರಿಸುತ್ತಿದೆ. ಮಳೆಯ ಕೊರತೆಯಿಂದ ಜನ ಜಾನುವಾರುಗಳು ಬೇಗೆಯಲ್ಲಿ ಬಳಲುತ್ತಿವೆ. ಅನೇಕ ಕಡೆ ಕನಸಿನ ಅಡಕೆ ತೋಟಗಳು ಮುಗಿಲೆತ್ತರಕ್ಕೆ ಬೆಳೆದು ನಿಂತು ನೀರಲ್ಲದೆ ಒಣಗುತ್ತಿವೆ. ಕಂಗಾಲಾಗಿರುವ ರೈತ ಸಮುದಾಯ ತೋಟ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕುತೂಹಲದಿಂದ ಭರಮಸಾಗರ ಕೆರೆ ಸೇರಿದಂತೆ ಸುತ್ತಮುತ್ತಣ ಹಳ್ಳಿಗಳಿಗೆ ಭೇಟಿ ನೀಡಿದೆವು. ಅಲ್ಲಲ್ಲಿ ರೈತರನ್ನು ಮಾತನಾಡಿಸುತ್ತಾ ಹೋದಾಗ ಈ ಭಾಗದ ರೈತರ ಕೊಳವೆ ಬಾವಿಗಳಲ್ಲಿ ಗಂಗೆಯ ಸೆಲೆಯೊಡೆದು, ಮೂರಿಂಚು ಮೂರೂವರೆ ಇಂಚು ನೀರು ಬರುತ್ತಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ನಾಡೆಲ್ಲಾ ತಲ್ಲಣಿಸುತ್ತಿರುವಾಗ ಭರಮಸಾಗರ ಸುತ್ತಮುತ್ತಲ ರೈತರು ಸಿರಿಗೆರೆ ಶ್ರೀಗಳ ಜಲಕ್ರಾಂತಿಯನ್ನು ನೆನೆದು ಮನದಲ್ಲಿಯೇ ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡು ಬಂದಿತು.

ಅಂದ ಹಾಗೆ ಭರಮಸಾಗರ ಜಾಕ್ವೆಲ್ (ಮರು ವಿತರಣಾ ಕೇಂದ್ರ)ನಿಂದ ಅತ್ತ ಹಂಪನೂರು ನೀರ್ಥಡಿಯಿಂದ ಇತ್ತ ಸಾದರಹಳ್ಳಿ ಕಾತ್ರಾಳು ಸೇರಿದಂತೆ 43 ಕೆರೆಗಳನ್ನು ತುಂಬಲಾಗುತ್ತದೆ. ಈ ಯೋಜನೆಗೆ ತುಂಗಭದ್ರಾ ನದಿಯ ತಟದಿಂದ ಸುಮಾರು ಐವತ್ತೈದು ಕಿ.ಮೀ. ಪೈಪ್ ಲೈನ್ ತರಲಾಗಿದೆ. ತುಂಗಭದ್ರಾ ನದಿಯ ಬಳಿ ಮೋಟರ್ ಬಟನ್ ಒತ್ತಿದರೆ ಅರ್ಧ ಗಂಟೆಯಲ್ಲಿ ಭರಮಸಾಗರ ಕೆರೆಗೆ ನೀರು ಚಿಮ್ಮುತ್ತದೆ. "ಮೋಡಗಟ್ಟಿದ ಆಕಾಶಕ್ಕೆ ಬಾಣ ಹೂಡಿ ನೀರಿಳಿಸಿದಂತೆ" ಅನ್ನತ್ತಾರೆ.

ಈಗ ಶರವೇಗದಿಂದ ಜಗಳೂರಿನ ಏತ ನೀರಾವರಿ ಕೆಲಸ ನಡೆದಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಮುಗಿದು ಜಗಳೂರು ತಾಲ್ಲೂಕಿನ 53 ಕೆರೆಗಳು ಒಡಲು ತುಂಬಿಕೊಳ್ಳುತ್ತವೆ. ಸರ್ಕಾರ ಈ ಯೋಜನೆಗಳಿಗೆ ನೀಡಿದ್ದು 200 ಕೋಟಿ ರೂಪಾಯಿಗಳು ಮಾತ್ರ. ನಮ್ಮ ರೈತರು ಕೇವಲ ಒಂದೇ ಪೀಕಿಗೆ 12 ಸಾವಿರ ಕೋಟಿ ಬೆಳೆ ಬೆಳೆಯುತ್ತಾರೆ.ನಾಡಿನ ಹಸಿವು ನೀಗುತ್ತಾರೆ. ಗಿಡಮರಗಳು ನಳನಳಿಸುತ್ತವೆ. ಪ್ರಾಣಿ ಪಕ್ಷಿಗಳು ಚಿಲಿಪಿಲಿಗುಟ್ಟುತ್ತವೆ... ಭರಮಸಾಗರ, ಜಗಳೂರು ಏತ ನೀರಾವರಿ ಯೋಜನೆಯಿಂದ, ಅವುಗಳ ಅನುಷ್ಠಾನ ಹಾಗೂ ಅನುಕೂಲದಿಂದ ಕಣ್ತೆರೆದು ನಮ್ಮ ಸರ್ಕಾರಗಳು "ಇಂತಹ ಯೋಜನೆಗಳಿಗೆ" ಕಣ್ಮುಚ್ಚಿ ಹಣ ನೀಡಬೇಕು...  ಈ ಲೇಖನದ ಆರಂಭದಲ್ಲಿ ನಮ್ಮ ಜನಪದರ ಎರಡು ಪದ್ಯಗಳನ್ನು ಉಲ್ಲೇಖಿಸಿದ್ದೆ. ಅದರಲ್ಲೊಂದು ಪದ್ಯವನ್ನು ಈ ಕಾಲಘಟ್ಟಕ್ಕೆ ತಕ್ಕಂತೆ ಮತ್ತೆ ಜ್ಞಾಪಿಸಿಕೊಂಡು, ನಮ್ಮ ಜನಪದರಿಗೆ ನಮೊ ಅನ್ನುವೆ. ಅಲ್ಲದೆ ಕೆರೆಕಟ್ಟೆಗಳ ಉಪಯೋಗದ ಮರುಕಲ್ಪನೆಯನ್ನು, ಯೋಜನೆಗಳ ಅನುಷ್ಠಾನ ಹೇಗೆ ಎಂಬುದನ್ನು ತೋರಿಸಿಕೊಟ್ಟ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೂ ನನ್ನ ಭಕ್ತಿಯ ನಮನಗಳು.

ಮಳೆರಾಯ ಉಯ್ಯಾಲಿ
ನದಿರಾಯ ಹರಿಯಾಲಿ
ಕೊಳವೆ ರಾಯ ಕೆರೆ ತುಂಬಾಲಿ...
ಎಳ್ಳಡಿಕೆ ಬಿಳಿಜೋಳ
ನೆಲ್ಲಕ್ಕಿ ನೆಲಗಡಲೆ ಬೆಳೆಯಾಲಿ...
ನೆಲ್ಲಕ್ಕಿ ಬೆಳೆದು ಹುಡಿತುಂಬಿ 
ನಾಡಿನ ಒಡಲು ತುಂಬಾಲಿ...
ಮಲ್ಲಿಗೆ ಸಂಪಿಗೆ
ಚೆಂಡುವ್ವ ಮಾಲೆ ಧರಿಸಿ
ನಮ್ಮೂರ ತೇರು ಹರಿಯಾಲಿ....

- ಬಾ.ಮ. ಬಸವರಾಜಯ್ಯ....

ಪತ್ರಕರ್ತರು, ವಿದ್ಯಾನಗರ , ದಾವಣಗೆರೆ 577 005