ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾದ ಪಡೆದ ಬೀದರ್ ನೂತನ ಸಂಸದ ಸಾಗರ್ ಖಂಡ್ರೆ.
ದಿನಾಂಕ:05-07-2024
ಸ್ಥಳ: ಶಾಂತಿವನ, ಸಿರಿಗೆರೆ
ಚುನಾವಣೆಗಳಲ್ಲಿ ಎಲ್ಲೆ ಮೀರಿದ ಮಾತಿಗೆ ಕಡಿವಾಣ ಹಾಕುವ ಕಾಯಿದೆ ಜಾರಿಗೆ ಶ್ರೀ ಜಗದ್ಗುರುಗಳವರ ಸಲಹೆ.
-----------------------------------------
ಶ್ರೀ ಜಗದ್ಗುರುಗಳವರ ಸೇವಾಕಾರ್ಯ ಸ್ಮರಿಸಿದ ಶ್ರೀ ಸಾಗರ್ ಖಂಡ್ರೆ
-----------------------------------------ಬೀದರ್ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಶ್ರೀ ಸಾಗರ್ ಈಶ್ವರ ಖಂಡ್ರೆರವರು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಸಿರಿಗೆರೆ ಸಮೀಪದ ಶಾಂತಿವನದ ಜಲಾಶಯದ ಹೊರ ಮಂಟಪದಲ್ಲಿ ಶ್ರೀ ಜಗದ್ಗುರುಗಳವರಿಗೆ ಫಲಪುಷ್ಪ ಸಮರ್ಪಿಸಿ ಮಾರ್ಗದರ್ಶನ ಕೋರಿದ ಶ್ರೀ ಸಾಗರ್ ಈಶ್ವರ ಖಂಡ್ರೆರವರಿಗೆ ಶ್ರೀ ಜಗದ್ಗುರುಗಳವರು ಶಾಲು ಹಾರದೊಂದಿಗೆ ಅಭಿನಂಧಿಸಿದರು.
ನೂತನ ಸಂಸದರಿಗೆ ಶ್ರೀ ಜಗದ್ಗುರುಗಳವರು ಮಾರ್ಗದರ್ಶನ ಮಾಡಿ, ಕರ್ನಾಟಕದ ಕಿರಿಯ ಸಂಸದನಾಗಿ ನೀವು ಆಯ್ಕೆ ಗೊಂಡಿರುವುದು ನಿಜಕ್ಕೂ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ಚುನಾವಣೆಗಳಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ಎಲ್ಲೆ ಮೀರಿರುವುದು ಬೇಸರದ ಸಂಗತಿಯಾಗಿದೆ. ಬಾಯಿಂದ ಜಾರಿದ ತುಚ್ಛ ಮಾತು, ಕೈಯಿಂದ ಜಾರಿದ ಅವಕಾಶ, ಕಳೆದುಹೋದ ಸಮಯ ಎಂದಿಗೂ ಮರಳುವುದಿಲ್ಲ. ಮಾತೇ ಮುತ್ತು ಮಾತೇ ಮೃತ್ಯು. ಮಾತು ಸ್ವಚ್ಛವಾಗಿರಬೇಕು ಶಾಂತವಾಗಿರಬೇಕು ಎಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಮತ್ತು ಚುನಾವಣೆ ಆಯೋಗ ಎಲ್ಲೆ ಮೀರಿದ ಮಾತಿಗೆ ಕಡಿವಾಣ ಹಾಕುವ ಕಾಯಿದೆ ಜಾರಿಗೆ ತರುವಂತೆ ಆಗಬೇಕು ಎಂದು ಆಶಿಸಿದರು.
ಯಾರು ಏನು ಮಾಡಲಾಗದ ಸ್ಥಿತಿ:
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವು ಪ್ರಜಾಪ್ರಭುತ್ವವೆಂಬ ಸೌಧದ ಮೂರು ಬಲವಾದ ಸ್ತಂಭಗಳೆಂದು ಪರಿಭಾವಿಸಲಾಗಿದೆ. ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿ ಹೇಳುವುದಾದರೆ ಈ ಕಂಬಗಳು ದುರ್ಬಲವಾಗಿ ಒಂದೊಂದೇ ಕಳಚಿ ಬೀಳತೊಡಗಿವೆ. ನಿತ್ಯವೂ ಹಿಂಸೆ, ಕ್ರೌರ್ಯ, ಆತಂಕ ಮತ್ತು ಭಯದ ವಾತಾವರಣದಲ್ಲಿ ನಾಡಿನ ಜನತೆ ಬದುಕುತ್ತಿದ್ದು ಯಾರೂ ಏನೂ ಮಾಡಲು ಸಾಧ್ಯವಿಲ್ಲವೆಂಬಂತಾಗಿರುವುದು ವಿಷಾದನೀಯ ಸಂಗತಿವಾಗಿದೆ ವಿಶೇಷವಾಗಿ ನಿಮ್ಮ ತಂದೆ ಮತ್ತು ಅಜ್ಜ ಭೀಮಣ್ಣ ಖಂಡ್ರೆರವರು ನಮ್ಮ ಮಠದ ಬಗ್ಗೆ ಅಪಾರ ಭಕ್ತಿ ಗೌರವ ಹೊಂದಿದವರು. ಇತ್ತೀಚೆಗೆ ತಮ್ಮ ಅಜ್ಜನವರಾದ ಭೀಮಣ್ಣ ಖಂಡ್ರೆರವರ ಶತಮಾನೋತ್ಸವ ಸಂಭ್ರಮದಲ್ಲಿ ಭಾಗವಹಿಸಿದ್ದನ್ನು ಹಂಚಿಕೊಂಡರು. ನಿಮ್ಮ ಅಜ್ಜ ಮತ್ತು ತಂದೆ ಸಚಿವರಾದ ಶ್ರೀ ಈಶ್ವರ ಖಂಡ್ರೆರವರಂತೆ ಬೀದರ್ ಜಿಲ್ಲೆಯ ಜನರ ಕಾರ್ಪಣ್ಯಗಳಿಗೆ ಪ್ರಾಮಾಣಿಕವಾಗಿ ಆಸರೆಯಾಗಬೇಕೆಂದು ತಿಳಿಸಿದರು.
ನಿಮ್ಮ ಕ್ಷೇತ್ರದ ರೈತರುಗಳ ಹಿತ ಕಾಯುವ ವಿಶೇಷವಾಗಿ ಏತ ನೀರಾವರಿ ಯೋಜನೆ, ಬೆಳೆದ ಬೆಲೆಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾಳಜಿ ವಹಿಸುವಂತೆ ಸೂಚಿಸಿದರು. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯು ಪರ ಮತ್ತು ವಿರೋಧವಾಗಿ ಮತ ಚಲಾಯಿಸಿದವರೆಲ್ಲರನ್ನು ಪ್ರೀತಿ ವಿಶ್ವಾಸದಿಂದ ಜೊತೆ ಕರೆದೊಯ್ದು ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಕಾರಣಗಳಿಂದ ಉಂಟಾಗಿರುವ ದ್ವೇಷ ಮತ್ಸರವನ್ನು ತೊಡೆದುಹಾಕಿ ಸೌಹಾರ್ದತೆ ಕಾಪಾಡುವ ಹೊಣೆಗಾರಿಕೆ ನಿಭಾಯಿಸುವಂತೆ ಸೂಚಿಸಿದರು.
ಪೂಜ್ಯರ ಸೇವಾಕಾರ್ಯ ಸ್ಮರಣೆ:
ತರಳಬಾಳು ಬೃಹನ್ಮಠದ ಬಗ್ಗೆ ಅಪಾರ ಭಕ್ತಿ ಗೌರವ ಹೊಂದಿರುವ ಖಂಡ್ರೆ ಕುಟುಂಬದ ಮೂರನೇ ಕುಡಿಯಾಗಿ ತಮ್ಮ ಮಾರ್ಗದರ್ಶನ ಸದಾ ಬಯಸುವುದಾಗಿ ಕೋರಿದ ಸಾಗರ್ ಖಂಡ್ರೆ ರವರು ತಮ್ಮ ನೇತೃತ್ವದ ದಾವಣಗೆರೆ, ಚಿತ್ರದುರ್ಗ ಇತರೆಡೆ ನೂರಾರು ಕೆರೆಗಳಿಗೆ ನೀರು ತುಂಬಿಸುವ ಕಾರ್ಯವು ಹೆಚ್ಚು ಯಶಸ್ಸು ಸಾಧಿಸಿದ್ದು ನಿಜಕ್ಕೂ ಅತ್ಯಂತ ಪರಮ ಪವಿತ್ರವಾದುದು ಎಂದರು.
ಶ್ರೀ ಜಗದ್ಗುರುಗಳವರ ಸಮಾಜಮುಖಿ, ರೈತ ಮುಖಿ, ಕಾರ್ಯಗಳ ಯಶೋಗಾಥೆಯ ಬಗ್ಗೆ ಪೂಜ್ಯರೊಂದಿಗೆ ಮಾತನಾಡಿದ ಸಾಗರ್ ಖಂಡ್ರೆ 2011ರ ಕೆ.ಎ.ಎಸ್ 362 ಅಭ್ಯರ್ಥಿಗಳ ಭವಿಷ್ಯವು ಅಧೋಗತಿ ತಲುಪಿದಾಗ, ತಮ್ಮ ನಿರಂತರ ಶ್ರಮ, ಸೂಕ್ತ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಅದರಲ್ಲಿಯೂ ಆಡಳಿತ ಮತ್ತು ಪ್ರತಿ ಪಕ್ಷಗಳು ಬೆಂಬಲಿಸಿ ವಿಶೇಷ ವಿಧೇಯಕದೊಂದಿಗೆ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿದ ಸ್ತುತ್ಯಾರ್ಹ ಕಾರ್ಯವು ಈ ವರ್ಷದ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದೆ ಎಂದು ಸ್ಮರಿಸಿದರು.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ವಚನ ಸಾಹಿತ್ಯ ಪ್ರಚಾರಕ್ಕೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಹತ್ಕಾರ್ಯ ನಡೆಯುತ್ತಿರುವುದು ನನಗೆ ಗೊತ್ತಿರುವ ಸಂಗತಿಯಾಗಿದೆ.ತಾವು ಬಸವಾದಿ ಶರಣರ 22000 ಕ್ಕೂ ಅಧಿಕ ವಚನಗಳ ಮೊಬೈಲ್ ಆಫ್, ಈ ವಚನಗಳು ಇತರೆ ಭಾಷೆಗಳಲ್ಲಿ ತರ್ಜುಮೆಗೊಂಡು ಜಗದಾದ್ಯಂತ ಬಳಕೆಯಾಗುತ್ತಿರುವ ಬಗ್ಗೆ ಅತೀವ ಆಸಕ್ತಿಯಿಂದ ಸಾಗರ್ ಖಂಡ್ರೆ ತಿಳಿದುಕೊಂಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಸಂಸದರ ಆಪ್ತ ಬಳಗದವರು ಉಪಸ್ಥಿತರಿದ್ದರು.