ಪರಿಶ್ರಮದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ಹೊರತು ಆಸೆಗಳಿಂದಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು
ಜುಲೈ.21
ಸಿರಿಗೆರೆ.
ಪರಿಶ್ರಮದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ಹೊರೆತು ಆಸೆ ಆಕಾಂಕ್ಷೆಗಳಿಂದಲ್ಲ. ಗುರುಗಳೆಂದರೆ ಕೇವಲ ಕಾವಿಧಾರಿಗಳಲ್ಲ. ಬದುಕಿನಲ್ಲಿ ಮಾರ್ಗದರ್ಶನ ಮಾಡುವ ಎಲ್ಲರೂ ಗುರುಗಳೇ. ಎಂದು ಶ್ರೀ ತರಳಬಾಳು ಜಗದ್ಗುರು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಭಾನುವಾರ ಜರುಗಿದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ದಯಪಾಲಿಸಿದರು.
ನಿಮ್ಮ ತಂದೆತಾಯಿಗಳು, ಶಿಕ್ಷಕರು, ಸ್ನೇಹಿತರೆಲ್ಲರೂ ಭವಿಷ್ಯದ ಜೀವನವನ್ನು ರೂಪಿಸುವಲ್ಲಿ ಇವರೆಲ್ಲರೂ ಅಂತರಂಗದಿಂದ ಹಾರೈಸುತ್ತಾರೆ. ಬಾಲ್ಯದಲ್ಲಿ ಮಕ್ಕಳ ಮನಸ್ಸು ತಂದೆ ತಾಯಿಗಳಿಂದ ಪ್ರಭಾವಿತಕ್ಕೆ ಒಳಗಾಗುತ್ತದೆ. ಆಲೋಚನೆಗಳು ಬದಲಾಗುತ್ತಾ ವಿಕಾಸಗೊಳ್ಳುತ್ತ ಹೋಗುತ್ತವೆ. ಬದುಕಿನಲ್ಲಿ ಬರುವ ತಿರುವುಗಳಿಗೆ ನೀವು ಪ್ರಭಾವಿತರಾಗುತ್ತೀರಿ. ನೀವೆಲ್ಲರೂ ಆಕಾಂಕ್ಷೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತೀರೋ ಅದನ್ನು ಸಾಧನೆ ಮಾಡಲಿಕ್ಕೆ ಗುರುವಿನ ಅನುಗ್ರಹ ಮುಖ್ಯ.
ಉತ್ತಮ ದಾರಿಯಲ್ಲಿ ನಡೆಯಬೇಕಾದದ್ದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಬಾಲ್ಯದಲ್ಲಿ ಇಂತಹ ಸಂಸ್ಕಾರವನ್ನ ತುಂಬಾಲಿಕ್ಕೋಸ್ಕರ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ.
ನಿಮ್ಮ ಬದುಕಿಗೆ ಕೆಲವೊಂದು ಘಟನೆಗಳು ತಿರುವು ನೀಡುತ್ತವೆ. ಬದುಕಿನಲ್ಲಿ ಸಾಧನೆ ಮಾಡಲು ನಿರ್ಧಾರ ಬಹುಮುಖ್ಯ. ನಿರ್ಧಾರ ಕೈಗೂಡಲಿಕ್ಕೆ ಶ್ರದ್ಧೆ ಬೇಕು. ಆ ಶ್ರದ್ದೆಯಿಂದ ನೀವು ಕಾರ್ಯವನ್ನು ಆರಂಭಿಸಿದರೆ ಅದು ಸಫಲಗೊಳ್ಳುತ್ತದೆ. ತಂದೆತಾಯಿಗಳ ನಿರೀಕ್ಷೆ ಹುಸಿಯಾಗದಂತೆ ನಡೆದುಕೊಳ್ಳುವ ಕರ್ತವ್ಯ ವಿದ್ಯಾರ್ಥಿಗಳಾದ ನಿಮ್ಮದಾಗಿರಬೇಕು.
ಶಿಕ್ಷಕರು ಗುರುಪೂರ್ಣಿಮೆ ನಿಮಿತ್ತ ಶ್ರೀಗಳಿಗೆ ಪಾದ ಪೂಜೆ ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಪೋಷಕರಿಗೆ ಪಾದಪೂಜೆ ಸಲ್ಲಿಸಿದರು. ಗಣೇಶ, ಸರಸ್ವತಿ ಪೂಜೆಯೊಂದಿಗೆ ಅಕ್ಷರಭ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಶಾಲೆಯಲ್ಲಿ ಮಕ್ಕಳೊಟ್ಟಿಗೆ ಪಾಲಕರೇ ಮುದ್ದಿನಿಂದ ಮಕ್ಕಳನ್ನು ಮಡಿಲಲ್ಲಿ ಕೂರಿಸಿಕೊಂಡು ತಟ್ಟೆ ಮೇಲೆ ಅಕ್ಕಿ ಹರಡಿ ಅರಿಶಿಣ ಕೊಂಬಿನಿಂದ ಮಕ್ಕಳ ಕೈ ಹಿಡಿದು ಓಂಕಾರ, ಗಣೇಶ ನಾಮ, ಮಾತೃಭಾಷೆ ಅ, ಆ, ಇ, ಈ ಮತ್ತು ಶಿವ ಪದಗಳನ್ನು ಬರೆಸುವ ಮೂಲಕ ಅಕ್ಷರ ಅಭ್ಯಾಸ ಮಾಡಿಸಿದರು.
ಮಕ್ಕಳು ನಗುನಗುತ್ತಲೆ ಶಿಕ್ಷಣ ಅಭ್ಯಾಸಕ್ಕೆ ತಮ್ಮ ಪುಟ್ಟ ಕೈಗಳಲ್ಲಿ ಮುನ್ನುಡಿ ಬರೆದರು. ಮಕ್ಕಳ ಜೊತೆಗೆ ಪಾಲಕರು ಶಾಲೆಯ ಈ ನೂತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಎಂ.ಎನ್.ಶಾಂತ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಇದ್ದರು.