ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು
ಭಗೀರಥನು ಬಹುದೊಡ್ಡ ಮಹಾರಾಜ. ಅವನಿಗೆ ಸಕಲ ವೈಭವಗಳಿದ್ದರೂ ಒಂದು ಕೊರಗಿತ್ತು. ಅವನ ತಂದೆ ಮತ್ತು ತಾಯಂದರಿಗೆ “ದೇವಗಂಗೆಯನ್ನು ಪಡೆಯಬೇಕು” ಎಂದು ಆಸೆ ಪಡುತ್ತ ಇದ್ದರು. ಅದು ಈಡೇರದೆ ಸಾವನ್ನು ಅಪ್ಪಿದ್ದರು. ಹಿರಿಯರ ಆಸೆಯನ್ನು ಈಡೇರಿಸಲು ಛಲ ಬಿಡದ ಭಗೀರಥ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡ. ಭಗೀರಥ ಛಲಗಾರ ದೇವಗಂಗೆಯನ್ನು ಕುರಿತು ಘೋರವಾದ ತಪಸ್ಸು ಕೂಡ ಮಾಡಿದ. ಅವನ ತಪಸ್ಸಿಗೆ ಮೆಚ್ಚಿ ಗಂಗೆ ಆಕಾಶದಿಂದ ಧುಮ್ಮಿಕ್ಕಿದಳು. ಶಿವನು ಅವಳನ್ನು ಜಟೆಯಲ್ಲಿ ಧರಿಸಿದ. ಅಲ್ಲಿಂದ ಅವಳು ಭೂಮಿಗಿಳಿದು ಭಗೀರಥನ ರಥದ ಹಿಂದೆ ಹರಿಯುತ್ತಾ ಹೊರಟಳು. ಮುಟ್ಟಿದ ಜಾಗವನ್ನೆಲ್ಲಾ ಪವಿತ್ರಗೊಳಿಸುತ್ತಾ ಭಗೀರಥನ ತಂದೆ ತಾಯಂದರಿಗೆ ಸ್ವರ್ಗ ಪ್ರಾಪ್ತಿಯಾಗುವ ಹಾಗೆ ಮಾಡಿದಳು. ಭಗೀರಥ ತನ್ನ ಹಠದಿಂದ ಅಸಾಧ್ಯವಾದುದನ್ನೂ ಸಾಧಿಸಿದ. (ಭಗೀರಥ ಮಹಾರಾಜರ ಬಗ್ಗೆ ಮುಖ್ಯವಾದದ್ದು ಮಾತ್ರ ತೆಗೆದುಕೊಂಡಿರುವೆ.)
ಕಠಿಣ ಪ್ರಯತ್ನದಿಂದ ಸಾಧನೆ ಮಾಡುವುದಕ್ಕೆ ಭಗೀರಥ ಪ್ರಯತ್ನವೆಂಬ ಹೆಸರಾದುದು ಈ ಕಾರಣದಿಂದಲೇ... ಈಗ ಮತ್ತೊಮ್ಮೆ ಭಗೀರಥ ಮಹರ್ಷಿಯನ್ನು ಸಿರಿಗೆರೆ ಗುರುವರ್ಯರಲ್ಲಿ ಕಾಣುತ್ತಾ ಇದ್ದೇವೆ. ಅದೇ ಛಲ, ಹಠ ಬಿಡದೆ ಗಂಗೆಯನ್ನು ಹಳ್ಳಿ, ಹಳ್ಳಿಗೂ ಕರೆತಂದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿರುವ ತ್ರಿವಿಕ್ರಮರು ನಮ್ಮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು.
ಇಂಥ ಕಠಿಣವಾದ ಪ್ರಯತ್ನವನ್ನು ಸರಕಾರದ ಬೆನ್ನು ಹತ್ತಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸಂಸದರನ್ನು ಬಿಡದೇ ಒತ್ತಡ ಹೇರುವ ಮೂಲಕ ಹಿಡಿದಿದ್ದು ಸಾಧಿಸಿದ ಹಠವಾದಿಗಳು ನಮ್ಮ ಸಿರಿಗೆರೆ ಮಹಾಸ್ವಾಮಿಗಳವರು. ಕೆರೆ ಎನ್ನುವುದು ಕೃಷಿಕನ ಜೀವನಾಡಿ, ರೈತರ ಕೃಷಿ ಭೂಮಿಗೆ ಮೂಲಭೂತ ವ್ಯವಸ್ಥೆಯಾಗಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿದರೆ ರೈತರ ಬದುಕು ಹಸನಾಗುವುದು ಎನ್ನುವ ಮುಂದಾಲೋಚನೆ ಶ್ರೀಗಳದು.
ಬಯಲು ಸೀಮೆಗಳಲ್ಲಿ ಮಳೆಯಾಧಾರಿತ ಕೃಷಿಯನ್ನೇ ನಂಬಿ ರೈತರು ಏಳು ಬಿಳುಗಳನ್ನು ಕಾಣುತ್ತಿದ್ದಾರೆ. ಅಂಥಹ ಭಾಗಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಮಳೆಯಿಲ್ಲದೆ ಬರಿದಾದ ಕರೆಗಳು ಇವೆ. ಅವುಗಳನ್ನು ಏತನಿರಾವರಿಯಿಂದ ಅಭಿವೃದ್ಧಿಪಡಿಸಿದರೆ, ಮಳೆಯನ್ನೇ ನಂಬಿ ಕೃಷಿ ಮಾಡುವ ರೈತರು ನಮಗೆ ಬರಗಾಲ ಎಂದು ಕೊರಗಿ ಕಣ್ಣೀರು ಹಾಕುವುದು ಕಡಿಮೆಯಾಗುತ್ತದೆ, ಇದಕ್ಕೆ ಪರ್ಯಾಯವಾಗಿ ಕೆರೆಗಳನ್ನು ಅಭಿವೃದ್ಧಿಯೊಂದಿಗೆ ಜಲಮರುಪೂರಣ ಮಾಡಲೇಬೇಕು ಎನ್ನುವ ಛಲ ಶ್ರೀಗಳವರದು.
ನಮ್ಮಲ್ಲಿ ಹಿರಿಯರು ಕೆರೆಗಳಿಂದಲೇ, ಭತ್ತ ಕೃಷಿ ಸೇರಿದಂತೆ ಅದರೊಂದಿಗೆ ಉಪಕೃಷಿಗಳನ್ನು ಕೂಡ ಮಾಡುತ್ತಿದ್ದರು. ಜೊತೆಗೆ ಕೆರೆ ಹೂಳೆತ್ತುವ ಕಾರ್ಯವನ್ನ ಕೂಡ ಫಲಾನುಭವಿಗಳೇ ಮಾಡುತ್ತಿದ್ದರು. ಇದಕ್ಕಾಗಿ ಸರಕಾರದ ಕಡೆ ಮುಖ ತಿರುಗಿಸುತ್ತಾ ಇರಲಿಲ್ಲ. ಈಗ ಮನುಷ್ಯನ ಸ್ವಾರ್ಥಕ್ಕೆ ಕರೆಗೆಳು ಯಾರದ್ದೋ ಸ್ವಂತದ್ದಾಗಿವೆ. ಕೆರೆ ಅಭಿವೃದ್ಧಿ ಹೆಸರಲ್ಲಿ ಕೋಟಿಗಟ್ಟಲೆ ಹಣ ಯಾರದ್ದೋ ಹುಂಡಿ ಸೇರುತ್ತಿದೆ. ಬರಗಾಲ ಮಾತ್ರ ತಪ್ಪುತ್ತಿಲ್ಲ. ಮನುಷ್ಯ, ಪ್ರಾಣಿಗಳಿಗೂ, ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೇ ಎಂದು ಶ್ರೀಗಳು ಆಲೋಚಿಸಿ ಕೆರೆ ತುಂಬಿಸಿದರೆ ಅಂತರ್ಜಲ ಅಭಿವೃದ್ಧಿ ಆಗುತ್ತದೆ. ಫಲಾನುಭವಿಗಳು ಕೆರೆಯ ನಿರ್ವಹಣೆಯಲ್ಲಿ ಎದುರಿಸಿದ ಸಮಸ್ಯೆಗಳು ಹಾಗೂ ಸವಾಲುಗಳ ಅರಿತು, ಕೆರೆ ನೀರಿನ ಫಲಾನುಭವಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬದಲಾವಣೆ ಆಗುತ್ತದೆ ಎಂದು ತಿಳಿದು ಕೆರೆ ನೀರಿನಿಂದ ಕುಡಿಯಲು, ನೀರಾವರಿ, ಮೀನುಗಾರಿಕೆ, ದನಕರುಗಳ ಬಳಕೆ ಹಾಗೂ ಕೆರೆಜೋಡಣೆ ಬಗ್ಗೆ ಮಾಹಿತಿಯ ವಿಶ್ಲೇಷಣೆ ಮಾಡಿದವರು.
ಕೆರೆಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳ ಬದಲಾವಣೆಯ ಪರಿಣಾಮ ಉದ್ಯೋಗ ಹಾಗೂ ಕೃಷಿ ಸಂಬಂಧಿಸಿದ ಚಟುವಟಿಕೆಗಳ ಆದಾಯದಲ್ಲಿನ ಹೆಚ್ಚಳ ಇವುಗಳನ್ನು ಶ್ರೀಗಳು ಮನಗಂಡರು. ಶ್ರೀಗಳು ಎಲ್ಲೆಲ್ಲಿ ತರಳಬಾಳು ಹುಣ್ಣಿಮೆಯ ಕಾರ್ಯಕ್ರಮ ಮಾಡುತ್ತಾರೋ ಅಲ್ಲಿನ ಜನಗಳಿಗೆ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.
ಶ್ರೀಗಳು ತರಳಬಾಳು ಹುಣ್ಣಿಮೆ ನಡೆದ ಸ್ಥಳಗಳಲ್ಲಿ ಆ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಸಲುವಾಗಿ ಅದರಲ್ಲೂ ವಿಶೇಷವಾಗಿ ರೈತರಿಗೆ ಕಾಣಿಕೆ ನೀಡುವ ಕೆಲಸವನ್ನು ಮಾಡಿದ್ದಾರೆ. ಚನ್ನಗಿರಿ ತಾಲ್ಲೂಕಿನ ಉಬ್ರಾಣಿ, ಭರಮಸಾಗರ ಹಾಗೂ ಜಗಳೂರು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಶ್ರೀಗಳು ನಿರಂತರವಾಗಿ ವಿಶ್ರಾಂತಿಯಿಲ್ಲದೆ ರೈತರ ಪರವಾಗಿ ಶ್ರಮಿಸಿದ್ದಾರೆ. ರೈತರ ಸಮಸ್ಯೆಗಳನ್ನು ಕಂಡು ಶ್ರೀಗಳ ಮನಮಿಡಿದಿದೆ. ರೈತರಿಗಾಗಿ "ನಾನೇನು ಮಾಡಬಲ್ಲೆ ನಾನೇನಾದ್ರು ಮಾಡಲೇಬೇಕೆಂದು ಎದೆಗುಂದದೇ, ನಾನು ಮಾಡಬಲ್ಲೆ, ಮಾಡುತ್ತೇನೆ ಎಂಬ ದೃಢ ವಿಶ್ವಾಸ, ನಂಬಿಕೆಯಿಂದ ಪ್ರಯತ್ನಿಸಿ ಇಂದು ಸಾಧಿಸಿದ್ದಾರೆ ಮಹಾಗುರುಗಳು”.
ರೈತರ ಸಂಕಟಕ್ಕೆ ಹೆಚ್ಚು ಒತ್ತು ಕೊಟ್ಟು ಅವರ ಕಣ್ಣೀರಿಗೆ ಹೆಚ್ಚು ಮಹತ್ವ ನೀಡಿ, ಸಮಾಜ ಉದ್ಧಾರ ಮಾಡಿದ ಶ್ರೇಷ್ಠ ಗುರುಗಳು ನಮ್ಮ ತರಳಬಾಳು ಶ್ರೀಗಳು. ಇನ್ನೇನು ನಮಗೆಲ್ಲಾ ಬದುಕೇ ಇಲ್ಲವೆಂದು ರೈತರು ಕೈಚೆಲ್ಲಿ ಕುಳಿತಾಗ, ರೈತರಿಗೆ ಮಾರ್ಗದರ್ಶನ ನೀಡಿ, ಎಂತಹ ಸಮಯದಲ್ಲೂ ಧೃತಿಗೆಡದೆ ದೃಢ ಹೆಜ್ಜೆಯಿಟ್ಟಿದ್ದಾರೆ. ಹಿಂದಿನಿಂದಲೂ ಸರಕಾರಕ್ಕೂ, ಮಠಗಳಿಗೂ ಅವಿನಾಭಾವ ಸಂಬಂಧವಿದೆ. ಗುರುಗಳ ಮಾರ್ಗದರ್ಶನ ಭಕ್ತರು ಹಾಗೂ ಸರ್ಕಾರಕ್ಕೆ ಬೇಕು. ಗುರುಗಳ ಪ್ರತಿ ಮಾತುಗಳು ಸಮಾಜದ ಮೇಲೆ ಪ್ರಭಾವ ಬೀರುತ್ತಲೇ ಇದೆ. ಸಮಾಜದ ಧ್ವನಿ ಸರ್ಕಾರ ಕೇಳಿಸಿಕೊಳ್ಳಲೇ ಬೇಕು. ಭಕ್ತರ, ರೈತರ ಪರವಾದ ಗಟ್ಟಿ ಧ್ವನಿ ಜಗದ್ಗುರುಗಳದ್ದು. ಅವರೇ ಗುರುತರವಾದ ಜವಾಬ್ದಾರಿ ತೆಗೆದುಕೊಂಡು ಭಕ್ತರು, ರೈತಾಪಿ ವರ್ಗದವರ ಪರವಾಗಿ ನಿಂತವರು.
40 ವರ್ಷದಿಂದ ಸರಕಾರಕ್ಕೆ ನಿರ್ಮಿಸಲು ಆಗದೇ ಇದ್ದ ಯೋಜನೆಗಳನ್ನು ಸ್ವತಃ ತಾವುಗಳೇ ಸವಾಲಾಗಿ ಸ್ವೀಕರಿಸಿ, ಶ್ರೀಗಳು ಬೇರೆ ಬೇರೆ ಗ್ರಾಮಗಳಲ್ಲಿ ಭಕ್ತರು ತಮಗೆ ನೀಡಿದ ಕಾಣಿಕೆಯಿಂದಲೇ ಹಲವಾರು ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಾರ್ಯವನ್ನು ಕೈಗೊಂಡರು. ಶ್ರೀಗಳು ಯಾವುದೇ ಊರಲ್ಲಿ ಭಕ್ತರಿಗೆ ಒಳಿತಾದ ಕಾರ್ಯ ಮಾಡಬೇಕಾದರೂ ಆ ಊರಿನ ಭಕ್ತರುಗಳ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ. ಬೇರೆ ಊರುಗಳ ಭಕ್ತರು ನೀಡಿದ ಕಾಣಿಕೆಯಿಂದಲೇ ಈ ಕಾರ್ಯ ಮಾಡುತ್ತಾ ಬಂದಿದ್ದಾರೆ. ಬರಗಾಲಾಗದ ಪರಾಕಾಷ್ಠೆ, ಪಶು-ಪಕ್ಷಿಗಳ ಮುಖರೋಧನ, ರೈತರ ಅಸಹಾಯಕತೆ ಜೊತೆಗೆ ಬತ್ತಿ ಬಾಡಿಹೋದ ಗಿಡ-ಮರಗಳ ವೇದನೆಗಳನ್ನು ಕಣ್ಣಾರೆ ಕಂಡು ತಲ್ಲಣಿಸಿದ ಶ್ರೀಗಳು, ಮಳೆ ಬಂದರೆ ಬೆಳೆ, ಮಳೆ ಬಂದರೆ ಕೆರೆ ತುಂಬೋದು. ಕೆರೆ ತುಂಬಿದರೆ ಪಶು, ಪಕ್ಷಿ, ಬೆಳೆ ಅಲ್ಲವೇ..
ಭರಮಸಾಗರದಲ್ಲಿ 300 ವರ್ಷಗಳ ಹಿಂದೆ ಚಿತ್ರದುರ್ಗದ ಪಾಳೇಗಾರ ಭರಮಣ್ಣ ನಾಯಕರು ಕಟ್ಟಿದ ಕೆರೆಯೂ ಒಂದು.
ಈ ಕೆರೆಯ ಆಶ್ರಯದಲ್ಲಿ ಸುತ್ತ ಎಡಬಲ ಕನಿಷ್ಠ ಐವತ್ತು ಹಳ್ಳಿಗೆ ಕುಡಿಯುವ ನೀರು ಸಹಿತ ಕೆರೆ-ತೋಟಗಳಿಗೆ ಪರೋಕ್ಷವಾಗಿ ಆಸರೆ ಆಗುತ್ತಿತ್ತು ಆಗ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಗಳಿದ್ದವು. ಸ್ವಾಮೀಜಿಯವರು ಈ ಎರಡೂ ಸರ್ಕಾರಗಳ ಮುಖ್ಯಮಂತ್ರಿಗಳನ್ನು, ನೀರಾವರಿ ಮಂತ್ರಿಗಳನ್ನು ಹಾಗೂ ಹಣಕಾಸು ಇಲಾಖೆ ಮುಖ್ಯಸ್ಥರನ್ನು ಎಡಬಿಡದೆ ಬೆಂಬತ್ತಿ ಭರಮಸಾಗರ ಕೆರೆ ಯೋಜನೆಯ 543 ಕೋಟಿ ಅಲ್ಲದೆ ಬರದ ತಾಲ್ಲೂಕು ಜಗಳೂರಿನ 53 ಕೆರೆಗಳ ಯೋಜನೆಗೆ ಬೇಕಾದ ಒಟ್ಟು 1200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿಸಿದ ರೋಚಕ ಕ್ಷಣಗಳನ್ನು ನಾವೆಲ್ಲಾರೂ ನೆನಪಿಸಿಕೊಳ್ಳಲೇ ಬೇಕಾಗುತ್ತದೆ.
ಈಗ್ಗೆ ಮೂರು ನೂರು ವರ್ಷಗಳ ಹಿಂದೆ ಭರಮಣ್ಣ ನಾಯಕ ತನ್ನ ರೈತಾಪಿ ಜನರಿಗಾಗಿ ಕಟ್ಟಿಸಿದ ಕೆರೆ ನೀರಿಲ್ಲದೆ ಮೈದಾನವಾಗಿತ್ತು. ಈಗ 300 ವರ್ಷಗಳ ಕೆರೆ ಮೈದುಂಬಿ ಭರಮಣ್ಣ “ಸಾಗರ” ಆಗಿ ತುಂಬಿ ಸುತ್ತಲೂ ನಲವತ್ಮೂರು ಕೆರೆಗಳಿಗೂ ಜೀವಧಾನ ಮಾಡಿದ ಕೆರೆಯಾಗಿ ಈ ಭಾಗದ ಜನರ ಉಸಿರಾಗಿದೆ, ಬರದ ನಾಡು ಸಿರಿನಾಡಾಗಿದೆ.
ಭೂತಾಯಿಯ ಒಡಲನ್ನು ತಂಪಾಗಿಸದೇ ಬಿಸಿಲಿನ ತಾಪದ ಬೇಸಿಗೆಯ ಬರಗಾಲದಿಂದ ತತ್ತರಿಸಿ ಮಳೆಯ ಕೊರತೆಯಿಂದ ಬಳಲುತ್ತಿದ್ದವರ, ಕನಸಿನ ಅಡಕೆ ತೋಟಗಳು ಮುಗಿಲೆತ್ತರಕ್ಕೆ ಬೆಳೆದು ನಿಂತು ನೀರಲ್ಲದೆ ಒಣಗಿ ಕಂಗಾಲಾಗುತ್ತಿದ್ದ, ರೈತರು ತೋಟ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ರೀತಿಯನ್ನು ಕಂಡು ಶ್ರೀಗಳು ರೈತರ ಕೊಳವೆ ಬಾವಿಗಳಲ್ಲಿ ಗಂಗೆಯ ಸೆಲೆಯೊಡೆಯಲೇ ಬೇಕೆಂದು ಸಾಧಿಸಿ ತೋರಿಸಿದ್ದಾರೆ ಇದು ಸಿರಿಗೆರೆ ಶ್ರೀಗಳ ಜಲಕ್ರಾಂತಿ.
ಅಷ್ಟೇ ಶರವೇಗದಿಂದ ಜಗಳೂರಿನ ಏತ ನೀರಾವರಿಯ ಕಾಮಗಾರಿ ಕೂಡ ಮುಗಿದಿದೆ. ಜಗಳೂರು ತಾಲ್ಲೂಕಿನ 53 ಕೆರೆಗಳ ಒಡಲು ತುಂಬಿಕೊಳ್ಳುತ್ತಿದೆ. ರಾಜಕಾರಣ ಎಂದೂ ಶಾಶ್ವತವಲ್ಲ, ಆದರೆ ಶ್ರೀಜಗದ್ಗುರುಗಳ ರೈತ ಪರ ಕಾಳಜಿಯಿಂದ ನೀರಾವರಿ ಯೋಜನೆಗಳು ಇಂದು ಶಾಶ್ವತವಾದ ಹೆಜ್ಜೆಯಾಗಿ ಮನೆ, ಮನೆ ಮಾತಾಗಿದೆ. ತರಳಬಾಳು ಗುರುಗಳು ಒಮ್ಮೆ ಗುಡುಗಿದರೆ ಸಾಕು ಆಕಾಶವೇ ನಡುಗುತ್ತದೆ. ಹಾಗಿರುವಾಗ ವಿಧಾನಸೌದ ನಡುಗುದೇ ಇರುತ್ತದೆಯೇ?, ಪಕ್ಷ, ಒಳಜಗಳ ಮರೆತು ಪಕ್ಷಾತೀತವಾಗಿ ಮುಖ್ಯಮಂತ್ರಿಗಳು, ಗುರುಗಳ ಮೇಲಿನ ಭಕ್ತಿಯಿಂದ ನೀರಾವರಿ ಯೋಜನೆಗಳು ಪ್ರಸ್ತುತ ದಿನಗಳಲ್ಲಿ ಸಾಕಾರಗೊಂಡಿವೆ.
ಈ ಜಗತ್ತಿನಲ್ಲಿ ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ, ಆದರೆ ಬಸವಣ್ಣನವರ ತತ್ವಗಳನ್ನೇ ಅಳವಡಿಸಿಕೊಂಡಿರುವಂತಹ ಸಿರಿಗೆರೆ ಶ್ರೀಗಳು ರೈತರ ಪಾಲಿಗೆ ಜೀವಂತ ಕಣ್ಣಿಗೆ ಕಾಣುವ ದೇವರು. ಈ ಯೋಜನೆಗಳ ಸಂಪೂರ್ಣ ಯಶಸ್ಸು ಪರಮ ಪೂಜ್ಯರ ಪಾದಕಮಲಗಳಿಗೆ ಅರ್ಪಿಸಲೇ ಬೇಕು.
ನಾಡಿನ ಹಸಿವು ನೀಗುವ ರೈತರು, ಗಿಡಮರಗಳ ನಳನಳಿಸುವಿಕೆ, ಪ್ರಾಣಿ ಪಕ್ಷಿಗಳ ಚಿಲಿಪಿಲಿಗಳು ಇಂದು ಉಬ್ರಾಣಿ, ಭರಮಸಾಗರ, ಜಗಳೂರು ಏತ ನೀರಾವರಿ ಯೋಜನೆಗಳಿಂದ ಕೆರೆಕಟ್ಟೆಗಳ ಉಪಯೋಗದ ಮರುಕಲ್ಪನೆಯ ಯೋಜನೆಗಳ ಅನುಷ್ಠಾನವನ್ನು ಎಲ್ಲರಿಗೂ ತೋರಿಸಿಕೊಟ್ಟವರು ಶ್ರೀ ತರಳಬಾಳು ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು.
ಕೆ.ಜಿ ಸರೋಜಾ ನಾಗರಾಜ್
ಪಾಂಡೋಮಟ್ಟಿ.