ಕಾಯಕವೇ ಕೈಲಾಸ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು
ನಮ್ಮ ಭಾರತವು ಧರ್ಮಗಳ ನಾಡಾಗಿದೆ. ಈಶ್ವರನ ಬಗ್ಗೆ ಮೊದಲು ಸಂಶೋಧನೆಯನ್ನು ಮಾಡಿದವರು ನಮ್ಮವರೇ. ಅವನೇ ಈ ಜಗತ್ತಿನ ಸೃಷ್ಟಿಕರ್ತನಾಗಿದ್ದಾನೆ. ಈ ಸೃಷ್ಟಿಯು ಆದಿ ಅಂತ್ಯಗಳಿಲ್ಲದ್ದು. ಆ ಪರಮೇಶ್ವರನನ್ನು ಭಜಿಸಲು ಅನೇಕ ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಯಾರಿಗೆ ಯಾವುದು ಹಿತವೋ ರುಚಿಕರವೋ ಅವರು ಆ ಮಾರ್ಗವನ್ನು ಅನುಸರಿಸಲು ಸ್ವತಂತ್ರರಿದ್ದಾರೆ. ಇಂತಹ ಮಾರ್ಗದಲ್ಲಿ ದ್ವೈತ, ಅದ್ವೈತ ಮತಗಳು ಪ್ರಸಿದ್ಧವಾಗಿವೆ. ದ್ವೈತ ಮತವು ಭಕ್ತಿ ಮಾರ್ಗದಿಂದ ಪರಮೇಶ್ವರನನ್ನು ಭಜಿಸಿ ಅವನ ಸಾನ್ನಿಧ್ಯವನ್ನು ಸೇರಲು ಬೋಧಿಸುತ್ತದೆ. ಇದೆ ಅವರ ಮತದಲ್ಲಿ ಮೋಕ್ಷವೆಂಬುದು. ಅದ್ವೈತ ಮತದಲ್ಲಿ ಜ್ಞಾನಕ್ಕೆ ಹೆಚ್ಚಿನ ಮನ್ನಣೆ ಇದೆ. “ಜ್ಞಾನಾದೇವ ಹಿ ಕೈವಲ್ಯಂ” ಎಂದರೆ ಜ್ಞಾನದಿಂದಲೇ ಕೈವಲ್ಯವೆಂದು ಹೇಳುತ್ತಾರೆ. ಜೀವಾತ್ಮನು ಪರಮಾತ್ಮನಿಂದ ಬೇರೆಯಾದವನಲ್ಲವೆಂದು ಇವರ ಅಭಿಪ್ರಾಯ. ಆ ಜೀವಾತ್ಮ ಪರಮಾತ್ಮಗಳ ಐಕ್ಯ ಜ್ಞಾನವೇ ಮೋಕ್ಷವೆಂದು ತಿಳಿಯುತ್ತಾರೆ. ಆದರೆ ಈ ಎರಡು ಮತಗಳಿಗಿಂತ ನಮ್ಮ ವೀರಶೈವ ಮತವು ಭಿನ್ನವಾಗಿದೆ. ಇದಕ್ಕೆ ದ್ವೈತಾದ್ವೈತವೆನ್ನುತ್ತಾರೆ. ಇವರು ಪರಮೇಶ್ವರನನ್ನು ದ್ವೈತ ಭಾವನೆಯಿಂದಲೂ ಅದ್ವೈತ ಭಾವನೆಯಿಂದಲೂ ಭಜಿಸುತ್ತಾರೆ. ಭಕ್ತಿ ಜ್ಞಾನಗಳೊಂದಿಗೆ ಕ್ರಿಯೆಯು ಅತ್ಯವಶ್ಯಕವೆಂದು ಇವರು ತಿಳಿಯುತ್ತಾರೆ. ಕ್ರಿಯೆ ಎಂದರೆ ಆಚರಣೆ ಎಂದರ್ಥ. ಆಚರಣೆ ಇಲ್ಲದೆ ಭಕ್ತಿ ಜ್ಞಾನಗಳಿಂದ ಪ್ರಯೋಜನವಿಲ್ಲವೆಂದು ಭಾವಿಸಿದ್ದಾರೆ. ಈ ಮತವು ಯಾರಿಂದ ಸ್ಥಾಪಿಸಲ್ಪಟ್ಟಿತು ಎಂದು ಇನ್ನೂ ನಿರ್ಣಯವಾಗಿಲ್ಲ. ಕೆಲವರು ಬಸವೇಶ್ವರನಿಂದ ಸ್ಥಾಪಿತವಾಯಿತು ಎಂದೂ, ಮತ್ತೆ ಕೆಲವರು ರೇಣುಕಾದಿಗಳಿಂದ ಸ್ಥಾಪಿತವಾಯಿತು ಎಂದೂ ಹೇಳುತ್ತಾರೆ. ಈಗ ನಮ್ಮಲ್ಲಿ ಇದೊಂದು ದೊಡ್ಡ ಗೊಂದಲವೇ ಆಗಿದೆ. ಆ ಪ್ರಸಂಗದಲ್ಲಿ ಕೈ ಹಾಕಲು ನಾವು ಬಯಸುವುದಿಲ್ಲ. ಈ ಮತದ ಕೆಲವು ಮುಖ್ಯ ತತ್ತ್ವಗಳನ್ನು ತಿಳಿಸಲಿಚ್ಚಿಸುತ್ತೇವೆ.
ಪ್ರತಿ ವೀರಶೈವನಿಗೂ ಒಂದೊಂದು ಉದ್ಯೋಗವಿರಲೇಬೇಕು. ಇಲ್ಲಿ ನಿರುದ್ಯೋಗಿಗೆ ಪ್ರವೇಶವಿಲ್ಲ. ಇವರು ಉದ್ಯೋಗವನ್ನು ಕಾಯಕವೆನ್ನುತ್ತಾರೆ. ಕಾಯಕದಿಂದಲೇ ಕೈಲಾಸವೆಂಬ ನಂಬಿಕೆ ಉಳ್ಳವರಾಗಿದ್ದಾರೆ. ಇಲ್ಲಿ ಎಲ್ಲಾ ಕಾಯಕದವರಿಗೂ ಪ್ರವೇಶವಿದೆ. ಅದರಲ್ಲಿ ಮೇಲು ಕೀಳುತನಗಳನ್ನು ಕಲ್ಪಿಸುವುದು ಮಹಾ ದ್ರೋಹವೆಂದು ತಿಳಿದಿರುತ್ತಾರೆ. ಮಾನವನು ತನ್ನ ಜೀವನಕ್ಕೆ ಯಾವುದಾದರೂ ಒಂದು ಉದ್ಯೋಗವನ್ನು ಮಾಡಲೇಬೇಕಷ್ಟೆ. ಆದರೆ ಅದು ಸಾತ್ವಿಕವಾದುದಾಗಿರಬೇಕು. ಇಲ್ಲಿ ಇತರ ಮತಗಳಂತೆ ಈಶ್ವರ ಮೋಕ್ಷ. ಇವುಗಳು ಶ್ರೇಷ್ಠರೆಂದು ಹೇಳಿಕೊಳ್ಳುವವರ ಗುತ್ತಿಗೆಯ ಸ್ವತ್ತುಗಳಲ್ಲ. ಮಾನವ ಮಾತ್ರನಿಗೇ ಮೋಕ್ಷಾಧಿಕಾರವಿದೆ. ನುಡಿಗೆ ಬೆಲೆ ಇಲ್ಲ. ನಡೆದಂತೆ ನುಡಿಯಬೇಕೆಂದು ಕಟ್ಟಪ್ಪಣೆ ಇದೆ. “ಗುಣಾಃ ಪೂಜಾಸ್ಥಾನಂ ಗುಣೇಷು ನ ಚ ಲಿಂಗಂ ನ ಚ ವಯಃ” ಗುಣದಲ್ಲಿ ಸ್ರ್ತೀಯರು, ಶಿಶುಗಳು ಎಂಬ ಕಲ್ಪನೆ ಇಲ್ಲ. ನಮ್ಮ ಶರಣ ಮಾರ್ಗದಲ್ಲಿ ಅನೇಕ ಸ್ರ್ತೀಯರು ಪುರುಷರಿಗಿಂತಲೂ ಹೆಚ್ಚು ಆದರಣೀಯರಾಗಿದ್ದಾರೆ. ಮಹದೇವಿಯಕ್ಕನೇ ಇದಕ್ಕೆ ಉದಾಹರಣೆ. ಈ ರೀತಿಯಾಗಿ ಅನೇಕ ಆಕರ್ಷಣೀಯವಾದ ತತ್ತ್ವಗಳಿಗೆ ಈ ಮತವು ಆಧಾರವಾಗಿದ್ದರೂ ಪರಮತೀಯರೂ ಸಹ ಈ ಮತದ ತತ್ತ್ವಗಳನ್ನು ಮುಕ್ತ ಕಂಠದಿಂದ ಹೊಗಳಿರುತ್ತಾರಲ್ಲದೆ ಇದರ ವಿಷಯವಾಗಿ ಅನೇಕ ಪುಸ್ತಕಗಳನ್ನು ಬರೆದಿದ್ದರೂ ನಮ್ಮವರು ಕಣ್ಣೆತ್ತಿ ನೋಡುತ್ತಾ ಇಲ್ಲ. ಯಾವ ಧರ್ಮದವನೇ ಆಗಲಿ ತನ್ನ ಧರ್ಮವನ್ನು ತಾನು ತಿಳಿಯಲೇಬೇಕು. ನಮ್ಮ ಜನತೆಯು ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವುದು ಸಹ ಇದಕ್ಕೆ ಕಾರಣ ಮತ್ತು ನಮ್ಮ ಸಮಾಜದ ಈಗಿನ ಪರಿಸ್ಥಿತಿಯಲ್ಲಿ ಸಾಮೂಹಿಕವಾಗಿ ಕೆಲಸಗಳನ್ನು ಮಾಡಲು ಅವಕಾಶವಿಲ್ಲವಾಗಿದೆ. ನಾವು ಇಂತಹ ಶ್ರೇಷ್ಠ ಮತದ ಅನುಯಾಯಿಗಳಾಗಿದ್ದರೂ ಒಬ್ಬನನ್ನು ಕಂಡರೆ ಮತ್ತೊಬ್ಬರು ದ್ವೇಷ ಭಾವನೆಯನ್ನು ತೋರಿಸುತ್ತೇವೆ. ಯಾವ ಸದುದ್ದೇಶದಿಂದ ಕಾಯಕದ ಪದ್ಧತಿ ಬಂದಿತೋ ಅದನ್ನು ಮರೆತು ಉಚ್ಚ ಕಾಯಕದವರು ನೀಚ ಕಾಯಕದವರನ್ನು ಕೀಳು ದೃಷ್ಟಿಯಿಂದ ಕಾಣುತ್ತಿದ್ದಾರೆ. ಪ್ರತಿಯೊಂದು ಕಾಯಕಕ್ಕೂ ಈಗ ಒಂದೊಂದು ಪಂಗಡವಾಗಿದೆ. ಈಗಂತೂ ಉಚ್ಚ ನೀಚ ಕಲ್ಪನೆಗಳು ಮಿತಿಮೀರಿವೆ.
-ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು
ಸಿರಿಗೆರೆ.
ಆಕರ ಗ್ರಂಥ : ಸಂಕಲ್ಪ
ಪುಟ : ೭೬