ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!
ಎರಡು ವಾರಗಳ ಹಿಂದೆ ಕೇಂದ್ರ ಸರಕಾರದ ಬಜೆಟ್ ಮಂಡನೆಯಾಗಿದೆ. ಕೇಂದ್ರದ/ರಾಜ್ಯದ ಬಜೆಟ್ ಅಧಿವೇಶನ ಬಂತೆಂದರೆ ವೇತನದಾರರು, ವಾಣಿಜ್ಯೋದ್ಯಮಿಗಳು, ಕಾರ್ಮಿಕರು, ಕುಶಲಕರ್ಮಿಗಳು, ರೈತರು ಹೀಗೆ ಎಲ್ಲ ವರ್ಗದ ಜನರ ಚಿತ್ತ ಬಜೆಟ್ ನತ್ತ ನೆಟ್ಟಿರುತ್ತದೆ. ಷೇರು ಮಾರುಕಟ್ಟೆಯಂತೂ ತುದಿಗಾಲ ಮೇಲೆ ನಿಂತಿರುತ್ತದೆ. ಸಂಗೀತ ಕಾರಂಜಿಯಂತೆ ಮೇಲೆ ಕೆಳಗೆ ಏರಿಳಿತವಾಗುತ್ತಿರುತ್ತದೆ. ಎಲ್ಲ ವರ್ಗದವರಿಂದಲೂ ಈ ಬಜೆಟ್ ನಿಂದ ತಮಗೇನು ಲಾಭ ಎಂಬ ಲೆಕ್ಕಾಚಾರ! ಯಾವುದೇ ಸರಕಾರ ಸೀಮಿತ ಸಂಪನ್ಮೂಲಗಳಿಂದ ಎಲ್ಲರನ್ನೂ ತೃಪ್ತಿಗೊಳಿಸುವ “ಜನಪ್ರಿಯ ಪ್ರಗತಿಪರ ಬಜೆಟ್” ಮಂಡಿಸುವುದು ಹಗ್ಗದ ಮೇಲೆ ನಡೆದಂತೆ! ಇದರಲ್ಲಿ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯೂ ಸಹ ಸರಕಾರಗಳಿಗೆ ಇರುತ್ತದೆ. ತಮ್ಮ ಸರಕಾರ ಮಂಡಿಸಿದ ಬಜೆಟ್ ದೇಶದ ಸರ್ವಾಂಗೀಣ ಅಭಿವೃದ್ಧಿಗೆ “ಅಕ್ಷಯಪಾತ್ರೆ” ಇದ್ದಂತೆ ಇದೆ ಎಂದು ಆಡಳಿತಾರೂಢ ಪಕ್ಷದವರು ಬಣ್ಣಿಸಿದರೆ “ಹೂರಣವಿಲ್ಲದ ಹೋಳಿಗೆ” ಎಂದು ವಿಪಕ್ಷದವರು ಹೀಗಳೆಯುತ್ತಾರೆ. ವೇತನ ಪಡೆಯುವ ನೌಕರರು ಏಳನೇ ವೇತನ ಆಯೋಗದ ವರದಿ ಜಾರಿಯಾಗುವ ಸಂಭ್ರಮದಲ್ಲಿದ್ದಾರೆ.
ವೇತನದಾರರು, ಉದ್ಯಮಿಗಳು, ಸಂಘಟಿತ ಕಾರ್ಮಿಕರು ತಮಗೆ ನ್ಯಾಯವಾಗಿ ಸಲ್ಲಬೇಕಾದ ಸವಲತ್ತುಗಳನ್ನು ಪಡೆಯಲು ಸರಕಾರಗಳನ್ನು ಜುಟ್ಟು ಹಿಡಿದು ಬಗ್ಗಿಸಿಯಾದರೂ ಪಡೆದುಕೊಳ್ಳಲು ಶಕ್ತರು. ಆದರೆ ಈ ದೇಶದಲ್ಲಿ ಅತ್ಯಂತ ನತದೃಷ್ಟರೆಂದರೆ ಅನಕ್ಷರಸ್ಥ ಅನ್ನದಾತರು. “ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ. ಒಡೆಯ ಮಹಾದಾನಿ ಕೂಡಲ ಸಂಗಮದೇವಂಗೆ ಸೆರಗೊಡ್ಡಿ ಬೇಡುವೆ” ಎನ್ನುವ ಬಸವಣ್ಣನವರ ವಚನದಲ್ಲಿರುವ ದೈನ್ಯತೆ ಈ ನಾಡಿನ ರೈತರಿಗೆ ಅಕ್ಷರಶಃ ಅನ್ವಯಿಸುತ್ತದೆ. ಪಾಪ, ರೈತರಿಗೆ ಸರಕಾರಿ ನೌಕರರಂತೆ ನಿಶ್ಚಿತವಾದ ವಾರ್ಷಿಕ ಆದಾಯದ ಖಾತ್ರಿಯೇ ಇಲ್ಲ.
ಕಣ್ಣಾಮುಚ್ಚಾಲೆಯಾಡುವ ಮಳೆಯೊಂದಿಗಿನ ಅವರ ಬದುಕು ತೂಗುಯ್ಯಾಲೆಯಾಗಿದೆ. ಅತಿವೃಷ್ಟಿಯಾದರೂ ಕಷ್ಟ, ಅನಾವೃಷ್ಟಿಯಾದರೂ ಕಷ್ಟ. “ಮಂಗಳಾರತಿ ತಗೊಂಡರೆ ಉಷ್ಣ, ತೀರ್ಥ ತಗೊಂಡರೆ ಶೀತ” ಎಂಬಂತಾಗಿದೆ. ಮಳೆಯು ವರ್ಷದುದ್ದಕ್ಕೂ ಚೆನ್ನಾಗಿಯೇ ನಡೆಸಿತು ಎಂಬ ಹಿಗ್ಗಿನಲ್ಲಿದ್ದರೆ ಇದ್ದಕ್ಕಿದ್ದಂತೆಯೇ ಕೊಯ್ಲಿನ ಸಮಯದಲ್ಲಿ ಯದ್ವಾತದ್ವಾ ಮಳೆ ಸುರಿದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ.
ರೈತರಿಗೆ ನೆರವಾಗಲೆಂದು ತಂದಿರುವ ಬೆಳೆ ವಿಮೆ ಯೋಜನೆಯು ರೈತರಿಗಿಂತ ವಿಮಾಕಂಪನಿಗಳಿಗೆ ಹೆಚ್ಚು ಲಾಭದಾಯಕವಾಗಿದೆ. ವಿಮೆಯ ನಿಯಮಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡುಬಂದರೂ ರೈತರಿಗೆ ಇದರಿಂದ ಯಾವ ಪ್ರಯೋಜನವೂ ಆಗಿಲ್ಲ. ಬೆಳೆ ಪರಿಹಾರ ನೀಡಲು "Threshold Yield” (ಹೊಸ್ತಿಲ ಇಳುವರಿ) ಎಂಬ ಮಾನದಂಡ “ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ”ಯಲ್ಲಿದೆ. ಈ ನಿಯಮವನ್ನು ಯಾವ ಜಾಣ ಅಧಿಕಾರಿಯು ಸೇರ್ಪಡೆ ಮಾಡಿದನೋ ಏನೋ ಇದು ಹೆಬ್ಬಟ್ಟಿನ ರೈತರಿಗೆ ಮಾಡಿರುವ ನಯವಂಚನೆ: “The Threshold Yield (TY) shall be the benchmark yield level at which Insurance protection shall be given... Threshold of the notified crop will be moving average of yield of last seven years excluding yield upto two notified calamity years multiplied by indemnity level”. ಕಳೆದ ಏಳು ವರ್ಷಗಳ ಕಾಲಾವಧಿಯ ಸರಾಸರಿ ಬೆಳೆಯ ಆಧಾರದ ಮೇಲೆ ಬೆಳೆ ಪರಿಹಾರ ನೀಡುವುದಾಗಿ ರೂಪಿಸಿರುವ ಈ ನಿಯಮ ಕೋಟಿವಿದ್ಯಾ ಕೋವಿದರು ಮೇಟಿವಿದ್ಯಾ ಸಂಪನ್ನರಿಗೆ ಮಾಡಿರುವ ಮರೆಮೋಸ. ಏಳು ವರ್ಷಗಳ ಈ ಕಾಲಾವಧಿಯಲ್ಲಿ “ಪ್ರಕೃತಿ ವಿಕೋಪ ವರ್ಷ”ವೆಂದು ಸರಕಾರ ಘೋಷಿಸಿದ್ದರೆ ಗರಿಷ್ಠ 2 ವರ್ಷಗಳನ್ನು ಮಾತ್ರ ಕಳೆದು ಉಳಿದ 5 ವರ್ಷಗಳ ಬೆಳೆಯ ಸರಾಸರಿ ಲೆಕ್ಕ ಹಾಕಬೇಕೆಂಬ ಉಪನಿಯಮವಿದೆ. ಈ “ಧಾರಾಳತನ”ದ ಹಿಂದೆ ಇರುವ ಜಾಣ್ಮೆ“ನೀನು ಸತ್ತಂಗೆ ಮಾಡು ನಾನು ಅತ್ತಂಗೆ ಮಾಡ್ತೀನಿ” ಎಂಬ ಗಾದೆ ಮಾತನ್ನು ನೆನಪಿಗೆ ತಂದುಕೊಡುತ್ತದೆ. ಬಡ ರೈತನ ಒಂದೋ ಎರಡೋ ಎಕರೆ ಭೂಮಿಯಲ್ಲಿ ಬರುವ ಬೆಳೆಯ ಆದಾಯವನ್ನು ಅಂದಾಜು ಮಾಡಲು 7 ವರ್ಷಗಳ ಬೆಳೆಯ ಅಂಕಿಸಂಖ್ಯೆಯಾದರೂ ಏಕೆ ಬೇಕು? ಸತತವಾಗಿ ಹೆಚ್ಚು ವರ್ಷಗಳ ಕಾಲ ಅತಿವೃಷ್ಟಿ ಅನಾವೃಷ್ಟಿಯಾದರೆ ವಿಮಾ ಕಂಪನಿಯು ಕೊಡಬೇಕಾದ ಪರಿಹಾರ ಧನದ ಲೆಕ್ಕಾಚಾರ ರೈತನ ಸಂಕಷ್ಟವನ್ನು ಹೇಗೆ ನಿವಾರಿಸಲು ಸಾಧ್ಯ?
ರೈತರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿ ಅಧಿಕಾರದ ಗದ್ದುಗೆಯನ್ನೇರುವ ರಾಜಕೀಯ ಧುರೀಣರು ಇದನ್ನು ಗಮನಿಸಬೇಕು. ಇಂತಹ ಮೊಸಳೆ ಕಣ್ಣೀರು ಸುರಿಸುವ ನಿಯಮಗಳನ್ನು ರದ್ದುಪಡಿಸಬೇಕು. ಕೃಷಿ ಪಂಡಿತರು ಮಾಡುವ ಈ ಹೊಸ್ತಿಲ ಇಳುವರಿಯ (Threshold Yield) ಕಸರತ್ತಿನ ಲೆಕ್ಕಾಚಾರ ಏಕೆ ಬೇಕು? “ಈ ವರ್ಷ ನಿನ್ನ ಜಮೀನಿನಲ್ಲಿ ಎಷ್ಟು ಬೆಳೆಯಾಗಬಹುದು?” ಎಂದು ಕೇಳಿದರೆ ಹಳ್ಳಿಯ ಎಂತಹ ದಡ್ಡ ರೈತನೂ ಸಹ ಸಪ್ಪೆ ಮೋರೆ ಮಾಡಿಕೊಂಡು ತಡಮಾಡದೆ ಕೊಡುವ ಉತ್ತರ: “ನಾಲ್ಕಾಣೆಯಾಗಬಹುದು, ಎಂಟಾಣೆಯಾಗಬಹುದು”. “ಬೀಜ ಗೊಬ್ಬರಕ್ಕೆ ಮಾಡಿದ ಖರ್ಚು ಹುಟ್ಟುವುದಿಲ್ಲ, ಸ್ವಾಮಿ”ಎಂದು ಹಲುಬುತ್ತಾನೆ. ರೈತನಿಗೆ ನಿಜವಾಗಿಯೂ ನೆರವಾಗಬೇಕೆಂಬ ಸದುದ್ದೇಶ ಸರಕಾರಗಳಿಗೆ ಇದ್ದರೆ ಆಯಾಯ ವರ್ಷದಲ್ಲಿ ಉಂಟಾಗುವ ನಷ್ಟವನ್ನು ಆಯಾಯ ವರ್ಷವೇ ಲೆಕ್ಕ ಹಾಕಿ ಸಕಾಲದಲ್ಲಿ ವಿಮಾ ಹಣವನ್ನು ಪಾವತಿಸುವಂತಾಗಬೇಕು. ಪ್ರಧಾನಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ “ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ”ಯಲ್ಲಿರುವ ರೈತರ ಜೀವ ಹಿಂಡುವ ಈ Threshold Yield ಮತ್ತು Crop Cutting Experiment ನಿಯಮಗಳನ್ನು ಕೈಬಿಡಲು ನಿರ್ದೇಶಿಸಬೇಕು. ಆಧುನಿಕ ತಂತ್ರಜ್ಞಾನವನ್ನು (GPS) ಬಳಸಿಕೊಂಡು ಪ್ರತಿಯೊಬ್ಬ ರೈತನ ಜಮೀನಿನಲ್ಲಿ ಆಯಾಯ ವರ್ಷದಲ್ಲಿ ಆಗಿರುವ ನಷ್ಟವನ್ನು ಆಯಾಯ ವರ್ಷವೇ ಅಂದಾಜು ಮಾಡಿ ಅವನಿಗೆ ಸೂಕ್ತ ಪರಿಹಾರ ನೀಡುವಂತಾಗಬೇಕು. ರೈತರ ಅಕೌಂಟಿಗೆ ಇಂತಿಷ್ಟು ಹಣವನ್ನು ಹಾಕುವುದಾಗಿ ಚುನಾವಣಾ ಗಿಮಿಕ್ಸ್ ಮಾಡುವ ಬದಲು ಕಡಿಮೆ ದರದಲ್ಲಿ ಗೊಬ್ಬರ ಬೀಜ ಕೊಡಲು ಏಕೆ ಬರುವುದಿಲ್ಲ?
ಯಾವ ರೈತನೂ ತನ್ನ ಬೆಳೆಯ ಉತ್ಪನ್ನಕ್ಕೆ ತಕ್ಕಂತೆ “ಎಂ.ಆರ್.ಪಿ” ನಿಗದಿಪಡಿಸಲು ಸಾಧ್ಯವಿಲ್ಲ. ಆದರೆ ಅವನು ರೈತಾಪಿ ಕೆಲಸಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಮಾತ್ರ ಉತ್ಪಾದಕರು ವಿಧಿಸುವ “ಎಂ.ಆರ್.ಪಿ” ದರದಲ್ಲಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ತನ್ನ ಉತ್ಪನ್ನವನ್ನು ಕೈಗೆ ಸಿಕ್ಕ ಬೆಲೆಗೆ ಮಾರಿ ಹಾಕಿದ ಹಣವೂ ಹುಟ್ಟದೆ “ಬೇಸಾಯವೆಂದರೆ ನೀನು ಸಾಯ, ಮನೆಮಂದಿಯೆಲ್ಲ ಸಾಯ!” ಎನ್ನುವಂತಾಗಿ ಮಾಡಿದ ಸಾಲ ತೀರಿಸಲಾಗದೆ ಮರ್ಯಾದೆಗೆ ಅಂಜಿ ಕೆಲ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈಗೀಗಲಂತೂ ಬೇಸಾಯ ಮಾಡುವ ಯುವಕರಿಗೆ ಕನ್ಯೆಯರೇ ಸಿಗುತ್ತಿಲ್ಲ. ಮಗಳನ್ನು ಕೊಡಲು ಜವಾನಿಕೆ ಮಾಡುವವನಾದರೂ ಪರವಾಯಿಲ್ಲ, ವೇತನದಾರನಾಗಿದ್ದರೆ ಸಾಕು; ರೈತಾಪಿ ಕೆಲಸ ಮಾಡುವ ಗಂಡು ಬೇಡ ಎಂದು ಕನ್ಯಾಪಿತೃಗಳು ನಿರಾಕರಿಸುವಂತಾಗಿದೆ.
ಕಳೆದ ತಿಂಗಳು ಜಗಳೂರು ತಾಲ್ಲೂಕಿನ ಸುಮಾರು ಎರಡು ಸಾವಿರ ಜನ ರೈತರು ನಮ್ಮ ಸದ್ಧರ್ಮ ನ್ಯಾಯಪೀಠಕ್ಕೆ ಹಾಜರಾಗಿ ತಮಗೆ ಬೆಳೆವಿಮೆ ಬಂದಿಲ್ಲವೆಂದು ನಿವೇದಿಸಿಕೊಂಡರು. ಅವರಿಂದ ಹೆಚ್ಚಿನ ಮಾಹಿತಿಯನ್ನು ಪಡೆದು ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಂತೆಯೇ ಪವಾಡ ಸದೃಶವೆಂಬಂತೆ ನೊಂದ ರೈತರು ತಮ್ಮಊರುಗಳಿಗೆ ಸಂಜೆ ಹಿಂತಿರುಗುವ ವೇಳೆಗೆ ಅವರ ಖಾತೆಗಳಿಗೆ ಸುಮಾರು 70 ಕೋಟಿ ಬೆಳೆವಿಮೆಯ ಹಣ ಜಮಾ ಆಗಿತ್ತು! ಹೀಗೆ ರೈತರನ್ನು ಗೋಳಾಡಿಸಿ ಕೊಡುವುದನ್ನು ನೋಡಿದರೆ ಸ್ವಾತಂತ್ರ್ಯಪೂರ್ವದಲ್ಲಿ ಜನರು ಪರಕೀಯರ ದಾಸ್ಯದಲ್ಲಿದ್ದರು; ಸ್ವಾತಂತ್ರ್ಯಾ ನಂತರ ಸ್ವಕೀಯರ ದಾಸ್ಯಕ್ಕೆ ಒಳಗಾಗಿದ್ದಾರೆ. ಸಾಮಾನ್ಯ ಜನರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ. 8-8-2024.