ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಸತ್ಯದ ಮೂಲವನ್ನು ಅರಿತು ಮಾತನಾಡಿ : ವಿರೋಧಿಗಳಿಗೆ ಸಿರಿಗೆರೆಶ್ರೀ ಸ್ಪಷ್ಟನೆ

  •  
  •  
  •  
  •  
  •    Views  

ದಿನಾಂಕ ಆ.8:
ಕೊಳಹಾಳು

ಶ್ರೀಗಳು ತಮ್ಮ ಪೂರ್ವಾಶ್ರಮದ ಸಂಬಂಧಿಗಳಿಗೆ ಮಠದಿಂದ ಹಣ ನೀಡಿದ್ದಾರೆಂದು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ''ತಾವು ಸಂಬಂಧಿಗಳಿಗೆ ಮಠದ ಹಣ ಯಾವತ್ತೂ ನೀಡಿಲ್ಲ ಎಂದು ಸಷ್ಟಪಡಿಸಿದ್ದಾರೆ. ಸುಳ್ಳು ಆರೋಪಗಳನ್ನು ಬಿಟ್ಟು ಸತ್ಯದ ಮೂಲವನ್ನು ಅರಿತು ಮಾತನಾಡಿ '' ಎಂದು ವಿರೋಧಿಗಳಿಗೆ ಎಚ್ಚರಿಸಿದರು.

ಭರಮಸಾಗರ ಸಮೀಪದ ಕೊಳಹಾಳು ಗ್ರಾಮದಲ್ಲಿ ಗುರುವಾರ ಜರುಗಿದ ಶ್ರೀ ಬಸವೇಶ್ವರಸ್ವಾಮಿ ನೂತನ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾವು ಮತ್ತು ತಮ್ಮ ಪೂರ್ವಾಶ್ರಮದ ಆಸ್ತಿಯ ವಿಚಾರದ ಬಗ್ಗೆ ವಿವರವಾಗಿ ಹೇಳಿದರು. “ನಮ್ಮ ಪೂರ್ವಾಶ್ರಮದ ತಾಯಿ ಗಂಗಮ್ಮ ಪತಿಯ ನಿಧನದ ನಂತರ 3 ಜನ ಹೆಣ್ಣುಮಕ್ಕಳ ಜತೆ ಎಲ್ಲ ಶಿಷ್ಯರಂತೆ ಸದ್ಧರ್ಮ ನ್ಯಾಯಪೀಠಕ್ಕೆ ಬಂದು ಆಸ್ತಿವಿಭಾಗ ಮಾಡಿಕೊಡಲು ಕೇಳಿಕೊಂಡರು. ನಾವು ಎಲ್ಲಾ ಆಸ್ತಿಯನ್ನು 3 ಜನ ಸಹೋದರಿಯರಿಗೆ ಹಂಚಿದೆವು. ನಾವಂತೂ ಸಂಬಂಧದಿಂದ ದೂರವಾಗಿ ಮಠಕ್ಕೆ ನಮ್ಮನ್ನು ಅರ್ಪಿಸಿಕೊಂಡಿದ್ದೇವೆ. ಅವರಿಗೆ ನಾವೊಬ್ಬರೇ ಮಗ. ತಾಯಿಯ ಜೀವನಾಂಶಕ್ಕಾಗಿ 3 ಜನ ಸಹೋದರಿಯರಿಗೆ ತಲಾ 1 ಲಕ್ಷವನ್ನು ತಾಯಿಯ ಹೆಸರಿನಲ್ಲಿ ಶಿವಮೊಗ್ಗದ ಬ್ಯಾಂಕ್ ನಲ್ಲಿಡಬೇಕೆಂದು ಆಜ್ಞಾಪಿಸಿದವು'' ಎಂದರು.

ತಾಯಿ ಮರಣದ ನಂತರ 3 ಜನ ಸಹೋದರಿಯರು ಬ್ಯಾಂಕ್ ನಲ್ಲಿರುವ  ಹಣಕ್ಕೆ ತಾಯಿ ತಮ್ಮನ್ನು ನಾಮಿನಿ ಆಗಿ ಮಾಡಿದ್ದಾರೆ. ಆದ ಕಾರಣ ಈ ಹಣ ತಮಗೆ ಸೇರಬೇಕೆಂದು ದಾಖಲೆ ನೀಡಿದರು. ಆ 3 ಲಕ್ಷ ರೂ. ಹಣ ಈಗ 8 ಲಕ್ಷ ರೂ. ಆಗಿದ್ದು ನಮ್ಮ ನ್ಯಾಯಪೀಠದಲ್ಲಿದೆ. ಅದು ಮಠಕ್ಕೆ ಸಲ್ಲುತ್ತದೆ ಎಂದರು.

''ನಮ್ಮ ಪೂರ್ವಾಶ್ರಮದ ತಾಯಿ ಗಂಗಮ್ಮ ವೃದ್ಧಾಪ್ಯದಲ್ಲಿ ಬೆಂಗಳೂರು ಕೇಂದ್ರದಲ್ಲಿ ನಮ್ಮ ದರ್ಶನಕ್ಕಾಗಿ ಬಂದು ಕಾಣಿಕೆ ನೀಡಿದ್ದಲ್ಲದೆ ನಮಗೆ 25 ಸಾವಿರ ರೂ. ಕೊಟ್ಟರು. ನಾವು ಏಕೆ ಅಂತ ಕಾರಣ ಕೇಳಿದಾಗ ಚಿಕಿತ್ಸೆಗೆಂದು ಮಣಿಪಾಲ್ ಆಸ್ಪತ್ರೆಗೆ ಸೇರಿದಾಗ ನನ್ನ ಅಳಿಯ ತರಳಬಾಳು ಕೇಂದ್ರದಿಂದ ಕೈಗಡವಾಗಿ ಹಣವನ್ನು ಪಡೆದ ವಿಷಯ ನನಗೆ ತಿಳಿಯಿತು. ನಾನು ಮಠದ ಋಣದಲ್ಲಿ ಸಾಯಬಾರದೆಂದು ಮರುಪಾವತಿ ಮಾಡಲು ಬಂದಿದ್ದೇನೆ” ಎಂದು ಹೇಳಿ ಮಠದ ಹಣವನ್ನು ಹಿಂತಿರುಗಿಸಿದರು ಎಂದರು.

ತಮಗೆ ಆಸ್ತಿ ಮಠ ಹಾಗೂ ಭಕ್ತರೇ ವಿನಃ ಸಂಬಂಧಿಗಳಲ್ಲ, ಯಾರಿಗೂ ಸಹ ಮಠದ ಆಸ್ತಿಯನ್ನು ನೀಡಿಲ್ಲ. ಎಷ್ಟೋ ಜನರಿಗೆ ಮಠದಿಂದ ಸಹಾಯ ಮಾಡಿದ್ದೇವೆ. ಆದರೆ ನಮ್ಮನ್ನು ಹೆತ್ತುಹೊತ್ತು ಸಾಕಿದ ತಾಯಿಗೆ ಸಹಾಯ ಮಾಡಲಾಗಲಿಲ್ಲ. ಅವರೂ ಸಹ ನಿರೀಕ್ಷೆ ಮಾಡಿರಲಿಲ್ಲ ಎಂದರು.

''ನೂರಾರು ವರ್ಷಗಳಿಂದ ಬಂದ ಮಠದ ಪರಂಪರೆಯನ್ನ ಕೆಲವು ಅಯೋಗ್ಯರು ಸೇರಿಕೊಂಡು ಹಾಳು ಮಾಡುತ್ತಿದ್ದಾರೆ. ಇನ್ನು ಕೆಲವರು ಜಾಲತಾಣಗಳಲ್ಲಿ ಮಠದ ವಿರುದ್ಧ ಅವಹೇಳನವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾ ಕೆಸರು ಸಿಡಿಸುವ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರೂ ರಿಯಲ್ ಎಸ್ಟೇಟ್ ಬಿಸಿನೆಸ್ ಖದೀಮರು ಇವರು" ಎಂದರು.

“ಹಿಂದೆ ಬಿ.ಸಿ.ಪಾಟೀಲ್ ತಾನು ಸಿರಿಗೆರೆ ಮಠಕ್ಕೆ ಹೋಗಿ ಬಂದ ಮೇಲೆ ಮಂತ್ರಿ ಆದೆ ಎಂದು ಹೇಳಿದ್ದ. ಇಂದು ಮಠದ ವಿರುದ್ಧವೇ ಧ್ವನಿಯಾಗಿದ್ದಾನೆ. ಗುರುಗಳಿಂದಲೇ ಎಲ್ಲ ಉಪಕಾರಗಳನ್ನ ಪಡೆದುಕೊಂಡು ಈಗ ಗುರುಗಳ ಮೇಲೆಯೇ ಕತ್ತಿಮಸೆಯಲು ಹೊರಟಿದ್ದಾರೆ'' ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹೆಚ್.ಆರ್.ಬಸವರಾಜಪ್ಪ, ಗೌರವಾಧ್ಯಕ್ಷರಾದ ಹಾಲವರ್ತಿ ಸಿದ್ದಪ್ಪ, ಗ್ರಾ.ಪಂ. ಅಧ್ಯಕ್ಷ ಉಚ್ಚಂಗಮ್ಮ ರಂಗಪ್ಪ, ಸಮಿತಿ ಅಧ್ಯಕ್ಷ ಕೆ.ಈ.ರಾಜಣ್ಣ ಹಾಗೂ ಸದಸ್ಯರು, ಗ್ರಾಮಸ್ಥರು ಇದ್ದರು.

Powered by Froala Editor