ಕಣ್ಮರೆಯಾಗುತ್ತಿರುವ ಜಾನಪದ ಕಲೆಗಳನ್ನು ಪೋಷಿಸುವ ಕೆಲಸ ಸಿರಿಗೆರೆ ಶ್ರೀಮಠ ಮಾಡುತ್ತಿದೆ : ಎಂ.ಹೆಚ್.ಲಿಂಗದಳ್ಳಿ
ದಿನಾಂಕ ಆ.10:
ಸಿರಿಗೆರೆ
ಆಧುನಿಕ ಕಾಲದಲ್ಲಿ ಜಾನಪದ ಕಲೆಗಳು ಕಣ್ಮರೆಯಾಗುತ್ತಿರುವ ಕಾಲದಲ್ಲಿ ಜನಪದ ಕಲೆಗಳನ್ನು ಪೋಷಿಸುವ ಕೆಲಸವನ್ನು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮಾಡುತ್ತಿದೆ ಎಂದು 2022-23ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ವೀರಗಾಸೆ ಕಲಾವಿದ ಮಹೇಶ್ವರಗೌಡ ಹನುಮಂತಗೌಡ ಲಿಂಗದಹಳ್ಳಿಯವರು ಹೇಳಿದರು.
ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದ ಆವರಣದಲ್ಲಿ ಅಣ್ಣನ ಬಳಗದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆ ಹಾಗೂ ಶ್ರೀ ಗುರುಶಾಂತರಾಜ ದೇಶೀಕೇಂದ್ರ ಮಹಾಸ್ವಾಮಿಗಳವರ 86ನೆಯ ಶ್ರದ್ಧಾಂಜಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರಗಾಸೆಯು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುವ, ಸಾಂಸ್ಕೃತಿಕವಾಗಿ ಪ್ರಭಾವ ಬೀರುವ ಸಮ್ಮೋಹನಗೊಳಿಸುವ ಸಾಂಪ್ರದಾಯಿಕ ಜಾನಪದ ನೃತ್ಯ ರೂಪವಾಗಿದೆ. ಇದು ಸಮರ ಕಲೆಗಳು, ಕಥೆ ಹೇಳುವಿಕೆ ಮತ್ತು ಧಾರ್ಮಿಕ ಆಚರಣೆಗಳ ಅಂಶಗಳನ್ನು ಸಂಯೋಜಿಸುವ ಆಕರ್ಷಕ ಮತ್ತು ಶಕ್ತಿಯುತ ಪ್ರದರ್ಶನವಾಗಿದ್ದು, ವೀರಗಾಸೆಯನ್ನು ಹೆಚ್ಚಾಗಿ ಹಬ್ಬಗಳು ಮತ್ತು ಮಂಗಳಕರ ಸಂದರ್ಭಗಳಲ್ಲಿ ನಡೆಸಲಾಗುತ್ತದೆ. ಇದು ಚಮಾಳ, ಓಲಗ ಅಥವಾ ಮೌರಿ, ಕರಡೆವಾದ್ಯ ಮತ್ತು ತಾಳಗಳಂತಹ ಸಂಗೀತ ವಾದ್ಯಗಳ ಜೊತೆಗೂಡಿ ಮಾಡುವ ನೃತ್ಯವೂ ಸಹ ಹೌದು. ಹಾಗಾಗಿ ಜಾನಪದ ಕಲೆಗಳು ನಶಿಸಿಹೋಗದಂತೆ ನಾವೆಲ್ಲರೂ ಕೈಜೋಡಿಸಬೇಕಿದೆ. ಜಾನಪದದ ಆಚಾರ-ವಿಚಾರ, ನಡೆ-ನುಡಿ ಹಾಗೂ ಕಲಾವಿದರನ್ನು ಎಲ್ಲರೂ ಗೌರವಿಸಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕರಾದ ರವೀಂದ್ರ ಮಾತನಾಡಿ ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡ್ಯೂಯ್ಯುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಿರಿಗೆರೆಯಲ್ಲಿ ವೀರಗಾಸೆ ಸಂಬಂಧದ ಕಾರ್ಯಕ್ರಮವನ್ನು ಮಾಡುತ್ತೇವೆ. ಜಾನಪದ ಕಲೆಗಳನ್ನು ಕಲಿಯುವುದರಿಂದ ಮನಸ್ಸು ಏಕಾಗ್ರತೆಯೆಡೆಗೆ ಸಾಗುತ್ತದೆ. ಜಾನಪದ ಕಲೆಗಳನ್ನು ನೋಡುವುದು ಸುಲಭ ಆದರೆ ಕಲಾವಿದರಾಗುವುದು ತುಂಬಾ ಕಷ್ಟ. ತಮ್ಮ ಪ್ರದರ್ಶನಗಳ ಮೂಲಕ ವೀರಗಾಸೆ ಕಲಾವಿದರು ಶೌರ್ಯ, ಮತ್ತು ವಿಜಯದ ಕಥೆಗಳನ್ನು ಚಿತ್ರಿಸುತ್ತಾರೆ. ತಮ್ಮ ಕೌಶಲ್ಯಪೂರ್ಣ ಅಭಿವ್ಯಕ್ತಿಗಳು ಮತ್ತು ಕ್ರಿಯಾತ್ಮಕ ನೃತ್ಯ ಸಂಯೋಜನೆಯಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ.
ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ 1986 ರಿಂದ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ವೀರಗಾಸೆ ಸ್ಪರ್ಧೆ ನಡೆಯುತ್ತಿದೆ. ಅದಕ್ಕಾಗಿ ಶ್ರೀಮಠದಿಂದ ನಿರಂತರ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ಜಾನಪದ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುವುದು ಶ್ರೀಗಳ ಆಶಯವಾಗಿದೆ. ಕಲೆ ಕಲಿಯುವುದು ಹಣಕ್ಕಾಗಿ ಅಲ್ಲ, ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದಕ್ಕೆ ಪ್ರೇರೇಪಿಸಬೇಕಾಗಿದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ವೀರಗಾಸೆಯ ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಹಾ.ಮಾ.ನಾಗಾರ್ಜುನ, ಜಾನಪದ ತಜ್ಞರಾದ ಡಾ.ಗುರುನಾಥ್, ಸಿ.ಬಿ.ಎಸ್.ಸಿ ಶಾಲೆಯ ಶಿಕ್ಷಕ ಶಿವಾಚಾರಿ ಹಾಗೂ ಕಾರ್ಯಕ್ರಮಲ್ಲಿ ಪ್ರಾದೇಶಿಕ ಅಧಿಕಾರಿ ಕೆ.ಈ.ಬಸವರಾಜಪ್ಪ, ಬಸಪ್ಪ ಬಾಗೇನಹಳ್ಳಿ, ಅಣ್ಣದ ಬಳಗದ ವಿಜಯಚಾರಿ, ಯು.ಚಂದ್ರಪ್ಪ, ಸುಮಾ, ತಿಪ್ಪೇಸ್ವಾಮಿ, ಎಸ್.ಜೆ.ಮಧು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಸಿರಿಗೆರೆಯಲ್ಲಿ ಜರುಗಿದ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಯಲ್ಲಿ ವೀರಗಾಸೆ ತಂಡದವರು ಪ್ರದರ್ಶನ ನೀಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.