ಪೂಜ್ಯನೀಯ ಸ್ಥಾನದಲ್ಲಿ ಇರುವವರನ್ನೇ ಬಿಡದವರು ಸಾಮಾನ್ಯರನ್ನು ಬಿಡುತ್ತಾರೆಯೇ..

  •  
  •  
  •  
  •  
  •    Views  

ಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂಬಂತೆ ಒಳ್ಳೆಯದರಲ್ಲೂ ತಪ್ಪು ಹುಡುಕುವುದೇ ಕೆಲವರ ಕೆಟ್ಟ ಸ್ವಭಾವ. ಅದಕ್ಕಾಗಿ ದುಷ್ಟ ಜನರನ್ನು ಸಾಕಿಕೊಂಡು ದೂಷಣೆ ಮಾಡಲು ಯತ್ನಿಸುತ್ತಾರೆ. ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಕೊನೆಗೆ ಸೃಷ್ಟಿಸಿದ ಸಮಸ್ಯೆಗಳಲ್ಲಿ ಅವರೇ ಸಿಕ್ಕಿಕೊಂಡು ಒದ್ದಾಡುತ್ತಾರೆ. ಗುರುವು ಬರಿಯ ದೇಹವಲ್ಲ, ಗುರುವು ಬೆಳಕು, ಗುರುವು ಬುದ್ಧಿವಂತಿಕೆ, ಮತ್ತು ಮಾನವನ ಜೀವನದಲ್ಲಿ ಬೆಳಕು ಮತ್ತು ಬುದ್ಧಿವಂತಿಕೆ ಅತ್ಯಗತ್ಯ. ಒಬ್ಬರ ಜೀವನ ಮತ್ತು ಬುದ್ಧಿವಂತಿಕೆಯು ಬೇರ್ಪಡಿಸಲಾಗದಿದ್ದಾಗ, ನಾವು ಅವರನ್ನು  ಗುರು ಎಂದು ಕರೆಯುತ್ತೇವೆ..

"ಹುಡುಕುತ್ತಾ ಹೋದ ಧರ್ಮರಾಯನಿಗೆ ಕೆಟ್ಟವರು ಸಿಗಲಿಲ್ಲ. ಎಷ್ಟು ಹುಡುಕಿದರೂ, ಕೌರವನಿಗೆ ಒಳ್ಳೆಯವರ ದರ್ಶನವಾಗಲಿಲ್ಲ. ನೋಡುವ ದೃಷ್ಟಿ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ". 

ನಮ್ಮ ಸಮಾಜದ  ಆಧಾರ ಸ್ತಂಭವೇ ಡಾ: ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅವರ ಶ್ರಮದ ಪರಿಣಾಮವೇ ಸಾಧು ಸದ್ದರ್ಮ ಪೀಠವಾಗಿದೆ. ದೇಶವಷ್ಟೇ ಅಲ್ಲದೇ ವಿಶ್ವ ಮಟ್ಟದಲ್ಲಿಯೂ, ಪ್ರಮುಖ ಹಾಗೂ ಪ್ರಭಾವಿ ಮಠವಾಗಿದೆ. ಈ ಪ್ರಗತಿಗೆ ಕಾರಣರಾದ ಗುರುಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲವೇ..?

ಸಿರಿಗೆರೆ ತರಳಬಾಳು ಮಠವೆಂದರೆ ಅದೆಷ್ಟು ಗೌರವವಿದೆ. ಇಂಥ ಸ್ವಾಮಿಗಳು ನಮ್ಮೊಂದಿಗೆ ಇರುವುದೇ ಅದೃಷ್ಟ. ಹುಟ್ಟಿದ ಹುಟ್ಟಿಗೆ ಈ ಸಮಾಜಕ್ಕೆ  ಒಂದು ಸಾರ್ಥಕತೆ ಎನ್ನುವಂತ ಭಾವನೆಯಿದೆ. ಸಿರಿಗೆರೆ ಮಠದ ಭಕ್ತರ ಒಗ್ಗಟ್ಟು ,ನಿಷ್ಠೆ ಬಹುಶಃ ಕರ್ನಾಟಕದ ಯಾವ ವೀರಶೈವ ಮಠಗಳಿಗೂ ಇಲ್ಲವೆಂದು ತೋರುತ್ತದೆ. ಗುರುಗಳ ವ್ಯಕ್ತಿತ್ವ, ವಿದ್ವತ್ತಿಗೂ ಗೌರವವಿಲ್ಲವೇ..?  ತಮ್ಮ ಶಿಷ್ಟರ ಮೇಲೆ ಇಟ್ಟಿರುವ ವಾತ್ಸಲ್ಯ, ಅಭಿಮಾನ ಕಣ್ಣಿಗೆ ಕಾಣುವುದಿಲ್ಲವೇ.? ಅದರೊಂದಿಗೆ ಬಿಸಿಲು ಬೆಳದಿಂಗಳು ಅಂಕಣಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸತ್ಯಕ್ಕೆ ಎಂದಿದ್ದರೂ ವಿಜಯ ಇದ್ದೆ ಇರುತ್ತದೆ.

ಒಳ್ಳೆಯದು ಇದ್ದ ಕಡೆ ದುಷ್ಟಕುಟವೂ ಇದ್ದೆ ಇರುತ್ತದೆ. ಇಂಥ ಅದೆಷ್ಟೋ ಮಗ್ಗಲು ಮುಳ್ಳುಗಳಿಂದ ಕರ್ನಾಟಕದ ಪ್ರತಿಷ್ಠಿತ ವೀರಶೈವ ಮಠಗಳು ಹಾಳಾಗಿವೆ. ಅಂತ ಪರಿಸ್ಥಿತಿ ಸಿರಿಗೆರೆ ಮಠಕ್ಕೆ ಎಂದಿಗೂ ಬರಬಾರದು. ನಿಷ್ಠಾವಂತ ಮುಖಂಡರು, ಮಠದ ಭಕ್ತರು ಅವಕಾಶವನ್ನು ಮಾಡಿಕೊಡದೆ ಗುರುವಿಗೇ ಬೆಂಬಲವಾಗಿ ನಿಲ್ಲಬೇಕು. ಪ್ರತಿ ಸಾರಿಯೂ ಇತಿಹಾಸವೂ ಒಂದಲ್ಲ ಒಂದು ಪಾಠವನ್ನು ಕಲಿಸುತ್ತಲೇ ಬಂದಿದೆ. ಅಂತಹ ಇತಿಹಾಸದ ಪಾಠವನ್ನು ಗುರುಗಳು ಕಲಿಯದಿದ್ದಿದರೆ, ಬಹುಶಃ ಸಿರಿಗೆರೆ ಮಠದ ಪ್ರತಿಷ್ಠೆಯನ್ನು ವ್ಯವಹಾರಿಕ ಭಕ್ತರು ಖಂಡಿತಾ ಮಣ್ಣುಪಾಲು ಮಾಡುತ್ತಾ ಇದ್ದರು. ಸಿರಿಗೆರೆ ಮಠದಲ್ಲಿ ಪೂರ್ವದ ಜಗದ್ಗುರುಗಳು ಪಟ್ಟಂತ ಕಷ್ಟ ಮಠದ ಹೊರಗಿನವರಿಂದ ಅಲ್ಲ, ಒಳ  ಶತ್ರುಗಳಿಂದಲೇ ಹೊರತು ಬೇರೆ ಶಕ್ತಿಗಳಿಂದಲ್ಲವೆಂದು ಕೇಳಿದ್ದೇನೆ.

ಚಿತ್ರದುರ್ಗದ ತರಳಬಾಳು ಬೃಹನ್ಮಠಕ್ಕೆ ತನ್ನದೇ ಆದ ಅತಿದೊಡ್ಡ ಇತಿಹಾಸವಿದೆ. ಅದರದ್ದೇ ಆದ ದೊಡ್ಡ ಪರಂಪರೆ ಇದೆ.  ಮಠದ ಗುರುಗಳು ಹಾಗೂ ಭಕ್ತರ ನಡುವಿನ ಭಿನ್ನಾಭಿಪ್ರಾಯ ಎಲ್ಲಾ ಮಠಗಳಲ್ಲಿಯೂ ಇದ್ದೆ ಇದೆ. ಆದರೂ ಪಾದ ಪೂಜೆ ಮಾಡಿ ಪಾದಗಳ ಮೇಲೆ ತಲೆ ಇಟ್ಟು ಆಶೀರ್ವಾದ ಬೇಡಿದವರು ಇಂದು ಅದೇ ಪಾದಗಳನ್ನು ಹಿಡಿದು ಎಳೆಯುವುದು ಸಮಂಜಸವಲ್ಲ. ಅದು ಒಳ್ಳೆಯ ಲಕ್ಷಣಗಳು ಖಂಡಿತಾ ಅಲ್ಲ. ಗು-ಅಂದರೆ ಅಂಧಃಕಾರ ರು-ಅಂದರೆ ದೂರವಾಗಿಸುವುದು. ಗುರುಗಳು ನಮ್ಮ ಜೀವನದಲ್ಲಿನ ವಿಕಾರಗಳ ಅಜ್ಞಾನವನ್ನು ದೂರ ಮಾಡಿ, ಜೀವನವನ್ನು ಆನಂದದಿಂದ ಹೇಗೆ ಬದುಕಬೇಕು ಎಂದು ನಮಗೆ ಕಲಿಸಿರುತ್ತಾರೆ ಎನ್ನುವ ಜ್ಞಾನವಿರಬೇಕು.

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”, “ಗುರು ದೇವೋಭವ” ಇವುಗಳು ಬರೀ ಪದಗಳ ಸಾಲಲ್ಲ... ಜೀವನದ ಸತ್ಯ, ಬದುಕಿನ ಹಾದಿ. ನಮ್ಮಲ್ಲಿ ಗುರುಗಳಿಗೆ ಪರಮ ಪವಿತ್ರ ದೇವರ ಸ್ಥಾನವಿದೆ. ಭಕ್ತರ ಬದುಕನ್ನು ರೂಪಿಸುವ ಪ್ರಮುಖ ಶಕ್ತಿಯಿದೆ ಗುರುವಿಗೆ. ಜ್ಞಾನದ ದೀವಿಗೆ ಗುರುವು. ನೀರಾವರಿ, ಶಿಕ್ಷಣ, ಸಮಾಜದ ಸಂಘಟನೆಗಳು ಸೇರಿದಂತೆ ಸಾವಿರಾರು ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಆದರೂ ಕೆಲವರು ಶ್ರೀಗಳ ವಿರುದ್ಧ ಮಾಡಿರುವ ಆಪಾದನೆ ಗುರುಗಳ ಹಾಗೂ ಭಕ್ತರ ಮನಸ್ಸಿಗೆ ಘಾಸಿಯನ್ನು ತಂದಿದೆ. ಇಂಥ ಬೆಳವಣಿಗೆಗಳು ನಡೆಯಬಾರದಿತ್ತು.

ನೀವೇ ನಮ್ಮ ದೇವರು ಎಂದು ಗುರುವಿನ ಫೋಟೋವನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಿರುವಂತವರು ಅದೆಷ್ಟೋ ಮಂದಿಗಳು ಇದ್ದಾರೆ. ಹೀಗಿರುವಾಗ ಇದೇನು ಸರ್ಕಾರಿ ಕೆಲಸವೇ 60ರ ವಯಸ್ಸಿನಲ್ಲಿ ನಿವೃತ್ತಿಯಾಗಲು..! ಹಾಗಾದರೆ ಇಲ್ಲಿಯವರೆಗೆ ಅವರಿಗೆ ಕೊಟ್ಟ ಗೌರವ , ಭಕ್ತಿ ಎಲ್ಲವೂ ನಾಟಕಿಯವೇ..? ಅದೆಲ್ಲಾ ವಯಸ್ಸು ಆದ ಮೇಲೆ ಇರುವುದಿಲ್ಲವೇ..? ಒಬ್ಬರು ಪೂಜ್ಯ ಸ್ಥಾನದಲ್ಲಿ ಇರುವಂತ ಗುರುಗಳನ್ನು ಈ ರೀತಿಯಾಗಿ ಅವಹೇಳನ ಮಾಡುವುದು ಅದೆಷ್ಟು ಸರಿ ..?

ಮಠದ ಮುಂದಿನ ಉತ್ತರಾಧಿಕಾರಿ ಯಾರು ಮುಂದೆ ಮಠವನ್ನು ಹೇಗೆ ನಡೆಸಬೇಕು ಎಂದು ಆಷ್ಟೊಂದು ತಿಳುವಳಿಕೆ, ಜ್ಞಾನ ಇರುವಂತಹ ಗುರುಗಳಿಗೆ ತಿಳಿದಿರುವುದಿಲ್ಲವೇ..! ಯಾಕೆ ಇವರಿಗೆಲ್ಲ ಈ ಸಂಕಟಗಳು..? ನಮ್ಮಲ್ಲಿ ಒಗ್ಗಟ್ಟು ಇಲ್ಲವೇ..? ಒಬ್ಬರನ್ನೊಬ್ಬರು ಕಾಲು ಎಳೆಯುವುದೇ ಬದುಕೇ. ಪೂಜ್ಯನಿಯ ಸ್ಥಾನದಲ್ಲಿ ಇರುವಂತ ಗುರುಗಳನ್ನೇ ಬಿಡದೇ ಇದ್ದವರು ಇನ್ನು ಯಾರನ್ನು ಬಿಡುತ್ತಾರೆ..? ಇದೆಂಥ ರಾಜಕೀಯ..? ಇವರೆಲ್ಲ  ಲಿಂಗಾಯಿತರ..? ಇಲ್ಲಿ ವಯಸ್ಸು ಒಂದು ಲೆಕ್ಕವಷ್ಟೇ, ವಯಸ್ಸು ದೇಹಕ್ಕೆ ಅಷ್ಟೇ ಮನಸ್ಸಿಗೆ ಅಂತೂ ಅಲ್ಲ.

ಆಪಾದನೆ ಮಾಡುವಾಗ ಸ್ಥಾನ, ಮಾನವನ್ನು ನೋಡಬೇಕು. ಇದೇನು ರಾಜಕಾರಣವಂತೂ ಖಂಡಿತಾವಲ್ಲ, ಇದು ಮಠ ಮತ್ತು ಸಮಾಜದ ಘನತೆ, ಗೌರವದ ಪ್ರಶ್ನೆಯಾಗಿದೆ. ಮಠ ಹಾಗೂ ಗುರುಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಅನ್ನೋ ಕಿಂಚಿತ್ತೂ ಪ್ರಜ್ಞೆ ಇದ್ದಿದ್ದರೆ ಆಲೋಚನೆ ಮಾಡುತ್ತಾ ಇದ್ದರು. ಮಠ ಮತ್ತು ಗುರುಗಳ ಬಗ್ಗೆ ಆಪಾದನೆ ಮಾಡುವುದು ಶುದ್ಧ ತಪ್ಪು. "ಮೊದಲು ಆಲೋಚನೆ ಸರಿಯಾಗಿ ಇರಬೇಕು, ನಂತರ ಆಪಾದನೆ ಮಾಡಬೇಕು.."

ಪ್ರತಿಯೊಬ್ಬರಿಗೂ ಅವರವರ ವೈಯಕ್ತಿಕ ಜೀವನದಲ್ಲಿ ಅವರದೇ ಆದಂತಹ ನೂರು ನೋವು, ಕಷ್ಟಗಳಿರುತ್ತವೆ. ಯಾರ ಬಗ್ಗೆಯೂ ತಿಳಿಯದೆ ಮತ್ತೊಬ್ಬರ ಬಳಿ ಹೀಯಾಳಿಸಿ ಮಾತನಾಡುವುದು, ಮಾತನಾಡುವವರ ಯೋಗ್ಯತೆಯನ್ನು ತೋರ್ಪಡಿಸುತ್ತದೆ. ಈಗ ಆಗಿರುವ ಬೆಳವಣಿಗೆ ಭಕ್ತರ ಮನಸ್ಸಿಗೆ ಅತ್ಯಂತ ಬೇಸರವನ್ನು ತರಿಸಿದೆ. ಮಠದಿಂದಲೇ ಪ್ರಯೋಜನವನ್ನು ಪಡೆದವರೇ ಗುರುವಿಗೆ ತಿರುಗಿ ಬಿದ್ದಿರುವುದು. ಅದೇನೇ ಸಮಸ್ಯೆಗಳಿದ್ದರೂ ಗುರುವಿನ ಮುಂದೆ ಕುಳಿತು ಚರ್ಚೆ ನಡೆಸಬಹುದಿತ್ತು. ಇಷ್ಟೆಲ್ಲಾ ಬಹಿರಂಗವಾಗಿ ಚರ್ಚೆ ಮಾಡುವ ಅವಶ್ಯಕತೆ ಇತ್ತೆ..?

ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಶ್ರೀಮಠದ ಭಕ್ತರಿದ್ದಾರೆ. ಹಿರಿಯರಿದ್ದಾರೆ, ಮುಖಂಡರಿದ್ದಾರೆ, ಸಮಾಜದ ಮುತ್ಸದ್ಧಿಗಳಿದ್ದಾರೆ. ಅವರೆಲ್ಲರನ್ನೂ ಆಹ್ವಾನಿಸಿ ಚರ್ಚೆ ಮಾಡುವ ತಾಳ್ಮೆ ಇರಲಿಲ್ಲವೇ..? ಮಠದಲ್ಲಿನ ಎಲ್ಲಾ ಕಾರ್ಯಗಳು ಪಾರದರ್ಶಕವಾಗಿವೆ. ಮಠದಿಂದ ಉಚ್ಚಾಟನೆಗೊಂಡವರು, ಮಠದ ಉಪಕಾರ ಪಡೆದುಕೊಂಡವರು ಅಪಕಾರ ಮಾಡಲು ಹೊರಟಿದ್ದಾರೆ. ಇದಕ್ಕೆಲ್ಲಾ ಗುರುಗಳು ಹಾಗೂ ಗುರುವಿನ ಭಕ್ತರು ಜಗ್ಗುವುದೂ ಇಲ್ಲ, ಬಗ್ಗುವುದೂ ಇಲ್ಲ. ಏನೇ ಇದ್ದರೂ ಸಾಕ್ಷಿ ಸಮೇತ ಬರಬೇಕು. ಸಮಾಜದ ಪ್ರಮುಖರು, ಭಕ್ತರು ಸೇರಿ ಒಟ್ಟಾಗಿ ಕುಳಿತು ಚರ್ಚಿಸಬಹುದಿತ್ತು. ಅದನ್ನು ಬಿಟ್ಟು ಸಭೆ ನಡೆಸಿ, ಆರೋಪಗಳ ಮೇಲೆ ಆರೋಪ ಮಾಡಿದರೆ ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಆರೋಪದಲ್ಲಿ ಸತ್ಯವಿರಬೇಕು, ಸತ್ಯವಿದ್ದರೆ ಆರೋಪವನ್ನು ಮಾಡಬೇಕು. ಯಾರನ್ನೋ ಮೆಚ್ಚಿಸಲು ಈ ರೀತಿಯ ವರ್ತನೆಯು ಯಾರಿಗೂ ಸರಿಯಾದದ್ದಲ್ಲ ಎಂಬುದು ಎಲ್ಲರ ತಿಳುವಳಿಕೆ ಯಾಗಿದೆ. ಇಂದಿನ ಅವಶ್ಯಕತೆ ಸಮಕಾಲೀನ ಚಿಂತನೆ ಹಾಗೂ ಸವಾಲುಗಳಿಗೆ ಇಂಥ ಇಳಿವಯಸ್ಸಿನಲ್ಲಿಯೂ ದಿಟ್ಟತನದ ಉತ್ತರ, ಸಮಾಜಪರವಾದ ನಿಷ್ಠೆ, ರೈತರ ಕಾಳಜಿ, ಸಾಹಿತಿಗಳು ಹಾಗೂ ಸಾಹಿತ್ಯದ ಅಭಿಮಾನ ಪ್ರೀತಿ ಹೀಗೆ ಇದೆ, ಎಂದರೆ ಅದೊಂದು ಮಾತೃ ಹೃದಯ  ಎಂಬ  ಕಾರಣದಿಂದ ತರಳಬಾಳು ಮಠಕ್ಕೆ ಹಾಗೂ ಗುರುವಿಗೆ ಸದ್ಭಕ್ತರ ದಂಡೇ ಇರುವುದು.

ನಮ್ಮಂತ ಸಣ್ಣ ಹಳ್ಳಿಯಲ್ಲಿ ಇರುವಂತ ಅದೆಷ್ಟೋ ಚಿಕ್ಕ ಪುಟ್ಟ ಸಾಹಿತಿಗಳನ್ನು ಗುರುತಿಸಿ ಗೌರವಿಸುವುದು ಕೂಡ ಶ್ರೀಗಳ ಅತೀ ದೊಡ್ಡ ಗುಣ. ನನ್ನದೊಂದು ಮನವಿ ಈ ಸದ್ಧರ್ಮ ಸಿಂಹಾನಕ್ಕೆ ಕೊನೆ ಉಸಿರು ಇರುವವರೆಗೂ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳೇ ಪೀಠಾಧಿಕಾರಿಗಳು ಆಗಿರಲೆಂದು ಆಶಿಸುತ್ತೇನೆ ಮತ್ತು ಉತ್ತರಾಧಿಕಾರಿ ನೇಮಕ ಆಗಬೇಕೆಂಬ  ದೃಷ್ಟಿ ಗುರುಗಳಿಗೂ ಇದ್ದೆ  ಇರುವುದು. ಈ ಆಯ್ಕೆಯ ಹಕ್ಕು ಮತ್ತು ಜವಾಬ್ದಾರಿಯನ್ನು ಸಾಧು ಸದ್ಧರ್ಮ ಸಮಾಜವೂ ಪೂಜ್ಯ ಶ್ರೀಗಳಿಗೆ ನೀಡಬೇಕು.

ಇವತ್ತಿನ ಬುದ್ದಿವಂತಿಕೆ ಅದೇ, ಶಿಸ್ತು ಹಾಗೂ ಒಗ್ಗಟ್ಟಿನ ಸಮಾಜವನ್ನು ಕಟ್ಟಿದವರ ಕಣ್ಣೆದುರೇ ಒಡೆದು ಪುಡಿ ಆಗದಂತೆ ಎಲ್ಲರೂ ಜಾಗ್ರತೆ ವಹಿಸಬೇಕು. ಅಖಂಡ ಸಾಧು ಸದ್ಧರ್ಮ ಸಮಾಜದ ಗೌರವವೂ ಸಿರಿಗೆರೆ ತರಳಬಾಳು ಮಠದ ಕಾರಣದಿಂದಲೇ ಇಂದು ಹೆಚ್ಚಾಗಿದೆ ಎಂದು ಮಠದ ಬಗ್ಗೆ ತಿಳಿದವರು ಎಲ್ಲಿ ಬೇಕಿದ್ದರೂ ನಿಂತು ಹೇಳುತ್ತಾರೆ. ಯಾರನ್ನೂ ಅತಿಯಾಗಿ ಮನನೋಯಿಸಬಾರದು ಅದರಲ್ಲೂ ಸಾಧು ಸನ್ಯಾಸಿಗಳು, ಗುರುಗಳನ್ನು ಯಾಕೆಂದರೆ ನೊಂದ ಮನಸ್ಸಿನ ಕೂಗು, ಕಣ್ಣೀರು ನಮ್ಮನ್ನು ಸರ್ವನಾಶ ಮಾಡುವಷ್ಟು ತೀವ್ರತೆ ಹೊಂದಿರುತ್ತದೆ. 

ಮುಂದಿನ ದಿನಮಾನಗಳಲ್ಲಿ ಎಲ್ಲರ ಮನಸ್ಸುಗಳು ಒಂದಾಗಿ ಎಲ್ಲರಿಗೂ ಒಳಿತಾಗಲಿ. ಮಠದ ಭಕ್ತರ ಬುದ್ಧಿ ಅಲ್ಲಿ ಇಲ್ಲಿ ಛಿದ್ರವಾಗದೇ ಒಗ್ಗಟ್ಟು ಆಗಲಿ. ಉಳಿದ ವೀರಶೈವ ಹಾಗೂ ಸಾಧು ಸದ್ಧರ್ಮ ಮಠಗಳಿಗೂ ಶ್ರೀಗಳ ಮಾರ್ಗದರ್ಶನವಿರಲಿ ಎಂದು ಆಶಿಸುತ್ತೇನೆ.

-ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ.