ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

  •  
  •  
  •  
  •  
  •    Views  

15-8-2024

ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಮಠಕ್ಕೆ  ಸಂಬಂಧಿಸಿದಂತೆ ನಡೆಯುತ್ತಿರುವುದು ವಾಸ್ತವವಾಗಿ ಗುರುಗಳು ಮತ್ತು ಶಿಷ್ಯರ ನಡುವಿನ ಸಂಘರ್ಷವಲ್ಲ. ನಗರ ಪ್ರದೇಶದ ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ. ಈ ಬಂಡವಾಳ ಶಾಹಿಗಳು ಈ ದಿನದ ವಿಜಯವಾಣಿ ಪತ್ರಿಕೆ ಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಾಜ್ಯಾದ್ಯಂತ ಪತ್ರಿಕೆಯ ಎಲ್ಲಾ ಆವೃತ್ತಿಗಳಲ್ಲಿ ಇಡೀ ಒಂದು ಪುಟದ ಜಾಹೀರಾತು ನೀಡಿರುತ್ತಾರೆ.  ಆಗಸ್ಟ್ 15ರಂದು ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವಾಗ ಈ ಬಂಡವಾಳ ಶಾಹಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪತ್ರಿಕೆಯಲ್ಲಿ ಮಠದ ವಿರುದ್ಧ ಮಿಥ್ಯಾರೋಪಗಳ ಜಾಹೀರಾತು ಕೊಟ್ಟು ವಿಕಟ ಅಟ್ಟಹಾಸ ಮೆರೆಯುವುದನ್ನು ನೋಡಿದರೆ “ಊರೆಲ್ಲಾ ಉಗಾದಿ ಮಾಡಿದರೆ ಅಡ್ನಾಡಿ ಅಮಾವಾಸ್ಯೆ ಮಾಡಿದನಂತೆ” ಎಂಬ ಗಾದೆ ಮಾತು ನೆನಪಾಗುತ್ತದೆ.

ಈ ಜಾಹಿರಾತಿನಲ್ಲಿ ನಮ್ಮ ಮಠದ ಶಿಷ್ಯರ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಬೈಲಾ ಮತ್ತು ನಮ್ಮ ಬೃಹನ್ಮಠದ ಟ್ರಸ್ಟ್ ಡೀಡ್ ಬಗ್ಗೆ ಅನೇಕ ಊಹಾಪೋಹಗಳು ಮತ್ತು ಸುಳ್ಳು ಆಪಾದನೆಗಳನ್ನು ಮಾಡಿ ಶಿಷ್ಯರ ಮತ್ತು ಸಾರ್ವಜನಿಕರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿರುತ್ತಾರೆ. ಸಂಘದ ಬೈಲಾ ಮತ್ತು ಮಠದ ಟ್ರಸ್ಟ್ ಡೀಡ್ ಬಗ್ಗೆ ಈ ಹಿಂದೆ ಅನೇಕ ಬಾರಿ ಸ್ಪಷ್ಟೀಕರಣ ನೀಡಿದ್ದರೂ ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಅವ್ಯಾಹತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ.  ಸಂಘದ ಬೈಲಾಕ್ಕೆ ವಿರುದ್ಧವಾದ ಯಾವ ನಿಯಮವೂ ಟ್ರಸ್ಟ್ ಡೀಡ್ ನಲ್ಲಿ ಇರುವುದಿಲ್ಲ. ಪೂರಕವಾದ ನಿಯಮಗಳೇ ಇವೆ.

ನಗರದ ಬಂಡವಾಳ ಶಾಹಿಗಳು ಮಾಧ್ಯಮಗಳಲ್ಲಿ ಕೂಗೆಬ್ಬಿಸಿರುವ ಹಿನ್ನೆಲೆಯಲ್ಲಿ ನಮ್ಮ ಸಮಾಜ ಮತ್ತು ತರಳಬಾಳು ಯುವಕರಿಗೆ ನಮ್ಮ ಸಂಘದ ಮತ್ತು ಮಠದ ಬಗ್ಗೆ ನಿಜವಾದ ಇತಿಹಾಸ ಮತ್ತು ನೈಜ ಸಂಗತಿಗಳನ್ನು ತಿಳಿಸುವ ಸಲುವಾಗಿ ಪರಮಪೂಜ್ಯ ಶ್ರೀ ಜಗದ್ಗುರುಗಳವರ ಆದೇಶದ ಮೇರೆಗೆ ಮತ್ತೊಮ್ಮೆ ವಿವರವಾಗಿ ಈ ಕೆಳಕಂಡ ಮಾಹಿತಿಯನ್ನು ನೀಡಲಾಗಿದೆ: 

1. ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘವು 1923 ರಲ್ಲಿ ಪ್ರಾತಃಸ್ಮರಣೀಯರೂ ಈಗಿನ ಗುರುಗಳವರ ಗುರುಪಿತಾಮಹರೂ ಆದ ಶ್ರೀಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಕಾಲದಲ್ಲಿ ರಿಜಿಸ್ಟರ್ ಆಗಿದ್ದು ಇಲ್ಲಿಗೆ 101 ವರ್ಷಗಳಾಗಿರುತ್ತವೆ.  1923ರಲ್ಲಿ  ಸ್ಥಾಪನೆಯಾದಾಗ ಇದ್ದ ಸಂಘದ ಬೈಲಾ 54 ವರ್ಷಗಳ ನಂತರ 1977 ರಲ್ಲಿ ದೊಡ್ಡ ಗುರುಗಳ ಕಾಲದಲ್ಲಿ ತಿದ್ದುಪಡಿ ಆಗಿರುತ್ತದೆ.  ಈಗಿನ ಶ್ರೀ ಜಗದ್ಗುರುಗಳವರ ಕಾಲದಲ್ಲಿ ಈ ಸಂಘದ ಬೈಲಾದಲ್ಲಿ ಒಂದಕ್ಷರವೂ ತಿದ್ದುಪಡಿ ಆಗಿರುವುದಿಲ್ಲ. ದೊಡ್ಡ ಗುರುಗಳ ಕಾಲದಲ್ಲಿ ಹೇಗಿತ್ತೋ ಹಾಗೆಯೇ ಈಗಲೂ ಇದೆ.  

2. ಇದೇ ಬೈಲಾದ ಆಧಾರದ ಮೇಲೆ ದೊಡ್ಡ  ಗುರುಗಳು ಮಠಕ್ಕೆ ಆದಾಯ ತೆರಿಗೆ ವಿನಾಯಿತಿ ಪಡೆಯಲು ಪ್ರಯತ್ನಿಸಿದ್ದರು. ಆದರೆ ವಿನಾಯಿತಿ ಸಿಕ್ಕಿರಲಿಲ್ಲ.  ಈಗಿನ ಶ್ರೀ ಜಗದ್ಗುರುಗಳವರು 1979 ರಲ್ಲಿ ಪಟ್ಟಕ್ಕೆ ಬಂದ ಮೇಲೆ ಆ ಪ್ರಯತ್ನವನ್ನು ಮುಂದುವರೆಸಿದರು. ಕೇಂದ್ರ ಸರಕಾರದ ಆರ್ಥಿಕ ಇಲಾಖೆಯೊಂದಿಗೆ ಸುದೀರ್ಘ ಕಾಲ ಪತ್ರ ವ್ಯವಹಾರ ಮಾಡಿ ಮಠಕ್ಕೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಪಡೆಯುವಲ್ಲಿ ಯಶಸ್ವಿಯಾದರು.  ನಮ್ಮ ಮಠಕ್ಕೆ ತೆರಿಗೆ ವಿನಾಯಿತಿ ನೀಡಿದ ಆದೇಶವು  ಭಾರತದ ಗೆಜೆಟ್ (The Gazette of India)  ನಲ್ಲಿ  ಪ್ರಕಟವಾಗಿರುತ್ತದೆ.  

3. ಈ ತೆರಿಗೆ ವಿನಾಯಿತಿಯು 10 ವರ್ಷಗಳ ಕಾಲ ನಿರಾತಂಕವಾಗಿ ಮುಂದುವರಿಯಿತು. ಆದರೆ ನಂತರ ತೆರಿಗೆ ನಿಯಮಾವಳಿಗಳಲ್ಲಿ ಅನೇಕ ಬದಲಾವಣೆಗಳಾದವು. ಪ್ರತಿ ಐದು ವರ್ಷಕ್ಕೊಮ್ಮೆ ವಿನಾಯಿತಿಯನ್ನು ನವೀಕರಿಸಿಕೊಳ್ಳಬೇಕೆಂಬ ಹೊಸ ನಿಯಮ ಜಾರಿಗೆ ಬಂದಿತು. 

4. ಅದರಂತೆ ಹೊಸ ನಿಯಮದ ಪ್ರಕಾರ 1990 ರಲ್ಲಿ ಮಠದ ಆದಾಯ ತೆರಿಗೆ ವಿನಾಯಿತಿ ನವೀಕರಣಕ್ಕಾಗಿ ಕೇಂದ್ರ ಸರಕಾರದ ಆರ್ಥಿಕ ಇಲಾಖೆಗೆ ಹಿಂದಿನಂತೆ ಸಂಘದ ಬೈಲಾದೊಂದಿಗೆ ಅರ್ಜಿ ಸಲ್ಲಿಸಲಾಯಿತು. ಆದರೆ ಆದಾಯ ತೆರಿಗೆ ಇಲಾಖೆಯು ತೆರಿಗೆ ವಿನಾಯಿತಿ ಕೊಟ್ಟಿರುವುದು ಮಠಕ್ಕೆ ಹೊರತು ಸಂಘಕ್ಕಲ್ಲ.  ನೀವು ಸಂಘದ ಬೈಲಾ ಸಲ್ಲಿಸಿ ಮಠಕ್ಕೆ ವಿನಾಯಿತಿ ಪಡೆದಿರುತ್ತೀರಿ ಎಂದು ಆಕ್ಷೇಪಿಸಿ ಮಠದ ಬೈಲಾ ಸಲ್ಲಿಸಿರಿ ಎಂದು   ದಿನಾಂಕ 11-5-1990 ರ ಪತ್ರದಲ್ಲಿ (ಪ್ಯಾರಾ 5) ನಿರ್ದೇಶನ ಮಾಡಿತು.  ಈ ಆಕ್ಷೇಪಣಾ ಪತ್ರವು ಕೆಳಗಿನಂತೆ ಇದೆ.  

5. ಬಸವಣ್ಣನವರ ಹಿರಿಯ ಸಮಕಾಲೀನರೂ ಮತ್ತು ಪೀಠದ ಸಂಸ್ಥಾಪಕರಾದ ವಿಶ್ವಬಂಧು ಮರುಳಸಿದ್ಧರ ‘ತರಳ, ಬಾಳು’ ಎಂಬ ಆಶೀರ್ವಾಣಿಯ ಹಿನ್ನೆಲೆಯಲ್ಲಿ ನಮ್ಮ ಮಠದ ಗುರುಪರಂಪರೆಯು 12 ನೆಯ ಶತಮಾನದಿಂದಲೂ ಶಿಷ್ಯರ ಧಾರ್ಮಿಕ ಮತ್ತು ಸಾಮಾಜಿಕ ಸೇವಾಕಾರ್ಯಗಳನ್ನು ಮಾಡುತ್ತಾ ಬಂದಿದೆ.  ಮಠವು ದೇಶಕ್ಕೆ ಸ್ವಾತಂತ್ರ್ಯ ಬರುವ ನೂರಾರು ವರ್ಷಗಳ ಹಿಂದೆಯೇ ಸ್ಥಾಪನೆಯಾಗಿದ್ದರಿಂದ ಮಠಕ್ಕೆ ಯಾವುದೇ ಬೈಲಾ ಇಲ್ಲ; ನಮ್ಮ ಮಠದ ಸಂಸ್ಥಾಪಕರಾದ ವಿಶ್ವಬಂಧು ಮರುಳಸಿದ್ಧರು ಆಶೀರ್ವದಿಸಿದ ‘ತರಳ, ಬಾಳು’ ಎಂಬ ದಿವ್ಯಪಂಚಾಕ್ಷರಿ ಮಂತ್ರವೇ ನಮ್ಮ ಮಠದ ಸಂವಿಧಾನ ಎಂದು ವಿವರಣೆ ನೀಡಿದರೂ ಆರ್ಥಿಕ ಇಲಾಖೆಯು ಒಪ್ಪಲಿಲ್ಲ. ನಿಯಮಾನುಸಾರ ಮಠದ ಬೈಲಾ ಸಲ್ಲಿಸದಿದ್ದರೆ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

6. ಆಗ ತೆರಿಗೆ ಪರಿಣತರೊಂದಿಗೆ ಸುದೀರ್ಘ ಸಮಾಲೋಚನೆಯನ್ನು ನಡೆಸಲಾಯಿತು.  ಮಠದ ಸಂಪ್ರದಾಯ ಮತ್ತು  ರೀತಿ ರಿವಾಜುಗಳಂತೆ ಒಂದು ಟ್ರಸ್ಟ್ ಡೀಡನ್ನು ರಚನೆ ಮಾಡಿ ರಿಜಿಸ್ಟರ್ ಮಾಡಿಸಿದರೆ ತೆರಿಗೆ ವಿನಾಯಿತಿ ನವೀಕರಣ ಪಡೆಯಬಹುದು ಎಂಬ ಸಲಹೆ ಬಂದಿತು.  ಅದರಂತೆ ತೆರಿಗೆ ವಿನಾಯಿತಿ ಪರಿಣಿತರ ಸಲಹೆ ಪಡೆದು ಮಠದ ಸಂಪ್ರದಾಯ, ಆಚರಣೆ ಮತ್ತು ಪದ್ಧತಿಗಳನ್ನು ಅನುಸರಿಸಿ ಸೋಲ್ ಟ್ರಸ್ಟ್ ಡೀಡಿನ ಕರಡುಪ್ರತಿಯನ್ನು ಸಿದ್ಧಪಡಿಸಲಾಯಿತು.  

7. ಈ ಸಂಬಂಧವಾಗಿ ಮಠದ ಆಗಿನ ಶಿಷ್ಯ ಪ್ರಮುಖರಿಗೆ ಶ್ರೀ ಜಗದ್ಗುರುಗಳವರು ದಿನಾಂಕ 23-7-1990 ರಂದು ಮೀಟಿಂಗ್ ನೋಟೀಸು ಕಳುಹಿಸಿ ಮಠದಲ್ಲಿ ಸಭೆಯನ್ನು ಕರೆದರು.  ಆ ಸಭೆಯಲ್ಲಿ ಟ್ರಸ್ಟ್ ಡೀಡ್ ಕರಡು ಪ್ರತಿಯನ್ನು ಪರಿಶೀಲಿಸಿ ಶಿಷ್ಯರ ಸಲಹೆಯ ಮೇರೆಗೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಅಂಗೀಕರಿಸಲಾಯಿತು.   ನಂತರ ಮಠದ ಟ್ರಸ್ಟ್ ಡೀಡನ್ನು ಅಂದೇ  ರಿಜಿಸ್ಟರ್ ಮಾಡಿಸಲಾಯಿತು.  ಇದರ ವಿವರಗಳನ್ನು ಹಿಂದಿನ ಮೆಸೇಜ್ ನಲ್ಲಿ ನೀಡಲಾಗಿದೆ.  ಇದು ಸಂಘದ ಬೈಲಾ ಅಲ್ಲ.  ಮಠದ ಟ್ರಸ್ಟ್ ಡೀಡ್.

8. ನಂತರ ಮಠದ ಈ ರಿಜಿಸ್ಟರ್ಡ್ ಟ್ರಸ್ಟ್ ಡೀಡನ್ನು ಕೇಂದ್ರ ಸರಕಾರದ ಆರ್ಥಿಕ ಇಲಾಖೆಗೆ ಸಲ್ಲಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪತ್ರ ವ್ಯವಹಾರ ನಡೆಸಲಾಯಿತು.  ಆರ್ಥಿಕ ಇಲಾಖೆಯು ಕೇಳಿದ ಪ್ರಶ್ನೆಗಳಿಗೆಲ್ಲಾ ಸಮರ್ಪವಾಗಿ ಉತ್ತರವನ್ನು ಕೊಟ್ಟನಂತರ ದಿನಾಂಕ  19-11-1991 ರಂದು ಭಾರತದ ಗೆಜೆಟ್ ನಲ್ಲಿ ನಮ್ಮ ಮಠಕ್ಕೆ ತೆರಿಗೆ ವಿನಾಯಿತಿ ನವೀಕರಣದ ಆದೇಶ ಪ್ರಕಟವಾಯಿತು.  ಈ ನವೀಕರಣದ ಆದೇಶ ಕೆಳಕಂಡಂತೆ ಇದೆ. 

9. ವಾಸ್ತವವಾಗಿ ಮಠದ ಟ್ರಸ್ಟ್ ಡೀಡಿನ 12 ನೆಯ ಕಲಂನಲ್ಲಿ ಯಾವುದೇ ಆಸ್ತಿ/ಹಣ ಶ್ರೀ ಜಗದ್ಗುರುಗಳವರ ಹೆಸರಿನಲ್ಲಾಗಲೀ , ಶಾಖಾಮಠದ ಸ್ವಾಮಿಗಳ ಹೆಸರಿನಲ್ಲಾಗಲೀ ಅಥವಾ ಮಠದಿಂದ ವ್ಯವಹರಿಸಿದ ಯಾವ ವ್ಯಕ್ತಿಯ ಹೆಸರಿನಲ್ಲಾಗಲೀ ಇದ್ದರೆ ಅದೆಲ್ಲವೂ ಮಠಕ್ಕೇ ಸೇರಿದ್ದೆಂದು ಸ್ಪಷ್ಟವಾಗಿ ಈ ಕೆಳಕಂಡಂತೆ ನಿಯಮ ರೂಪಿಸಲಾಗಿದೆ. 

(XII. Trust Funds and Properties*:  All funds or other monies or moveable and immoveable properties already held by the Brihanmath in its name or in the name of its branch Maths or its institutions and organizations or in the name of the Jagadguru or the Chara-pattadhyakshas or the Charamurthis of the branch Maths or in the name of the agents or in the name of any other person who has apparently dealt with on behalf of the Brihanmath or its branches shall continue to be the funds, properties and assets of this Trust.)

10. ಇನ್ನು ಉತ್ತರಾಧಿಕಾರಿಯ ವಿಚಾರವಾಗಿ ಪೀಠಾಧಿಪತಿಗಳು  ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದೊಂದಿಗೆ ಸಮಾಲೋಚನೆ ನಡೆಸಿಯೇ ಆಯ್ಕೆ ಮಾಡಬೇಕೆಂಬ ನಿಯಮವನ್ನು ರೂಪಿಸಿದೆ. 

11. ದುರದೃಷ್ಟವಶಾತ್  ಪೀಠಾಧಿಪತಿಗಳು ಜೀವಂತವಾಗಿ ಇಲ್ಲದೆ ಇದ್ದ ಪಕ್ಷದಲ್ಲಿ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘವು ಮಠದ ಉತ್ತರಾಧಿಕಾರಿಯನ್ನು ಹೇಗೆ ಆಯ್ಕೆ ಮಾಡಬೇಕೆಂಬ ನಿಯಮವಿದೆ.   ಇದು ಸಂಘದ ಬೈಲಾದಲ್ಲಿರುವ ನಿಯಮಕ್ಕೆ ಪೂರಕವಾಗಿಯೇ ಇದೆ.  ಅಲ್ಲಿಯವರೆಗೂ ಮಠದ ದೈನಂದಿನ ವ್ಯವಹಾರಗಳನ್ನು ಹೇಗೆ ನೋಡಿಕೊಳ್ಳಬೇಕೆಂಬ ನಿಯಮಗಳು ಸಂಘದ ಬೈಲಾದಲ್ಲಿ ಇಲ್ಲ. ಈ ಕೊರತೆಯನ್ನು ಮನಗಂಡು ಮಠದ ಟ್ರಸ್ಟ್ ಡೀಡ್ ನಲ್ಲಿ 15 ಜನ ಜವಾಬ್ದಾರಿ ವ್ಯಕ್ತಿಗಳ ಒಂದು ಉಸ್ತುವಾರಿ ಸಮಿತಿಯನ್ನು ನೇಮಿಸಬೇಕೆಂಬ ನಿಯಮವನ್ನು ರೂಪಿಸಿದೆ. ಈ ಸಮಿತಿಯು ಹೇಗೆ ಕಾರ್ಯ ನಿರ್ವಹಿಸಬೇಕೆಂಬ ನಿಯಮಗಳನ್ನೂ ಸಹ ರೂಪಿಸಿದೆ.   ಈ ಸಮಿತಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೋ ಇಲ್ಲವೋ ಎಂದು  ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಸಂಘಕ್ಕೆ   ನೀಡಲಾಗಿದೆ.

12. ನಿಜ ಸಂಗತಿ ಹೀಗಿದ್ದರೂ ಈಗಿನ ಶ್ರೀ ಜಗದ್ಗುರುಗಳವರು ಮಠದ ಎಲ್ಲಾ ಆಸ್ತಿಪಾಸ್ತಿಗಳನ್ನು ತಮ್ಮ ಸ್ವಂತ ಹೆಸರಿಗೆ ಮಾಡಿಕೊಂಡಿದ್ದಾರೆಂದೂ, ಕಳೆದ 35 ವರ್ಷಗಳಿಂದ ಯಾರ ಗಮನಕ್ಕೂ ತರದೆ ಟ್ರಸ್ಟ್ ಡೀಡನ್ನು ಮುಚ್ಚಿಟ್ಟುಕೊಂಡಿದ್ದಾರೆಂದೂ ಕೆಲವರು ಮಿಥ್ಯಾರೋಪ ಮಾಡಿ ಇದನ್ನು ರದ್ದುಪಡಿಸಬೇಕೆಂದು ಬಹಿರಂಗವಾಗಿ ಮತ್ತು ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಸಿ ಮಠದ ಮತ್ತು ಸಮಾಜದ ಗೌರವಾದರಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ.  ಅಲ್ಲದೆ ಚಿತ್ರದುರ್ಗದ ಕೋರ್ಟಿನಲ್ಲಿ ಎಸ್.ಎಸ್ ಪಾಟೀಲ್ ಮತ್ತಿತರರು ಮಠ, ಸಂಘ ಮತ್ತು ವಿದ್ಯಾಸಂಸ್ಥೆಯ ವಿರುದ್ಧ 2021 ರಲ್ಲಿ ಕೇಸು ದಾಖಲಿಸಿದ್ದು ಶ್ರೀ ಜಗದ್ಗುರುಗಳವರನ್ನು “Voluntary Supervisor/Manager/Care Taker” ಎಂದು ತುಂಬಾ ಅವಹೇಳನಕಾರಿಯಾಗಿ ಪಾರ್ಟಿ ಮಾಡಿದ್ದಾರೆ.  ಈ ಕೇಸು ಇನ್ನೂ ವಿಚಾರಣೆಯ ಹಂತದಲ್ಲಿದೆ.

13. ಮಠದ ಈ ಟ್ರಸ್ಟ್ ಡೀಡ್ ಗೆ ದೊಡ್ಡ ಗುರುಗಳವರೂ ಸಹಿ ಮಾಡಿದ್ದು ಆಗಿನ ಕಾಲದ ನಮ್ಮ ಸಂಘದ ಪದಾಧಿಕಾರಿಗಳು, ಸಮಾಜದ ಅನೇಕ ಶಿಷ್ಯಪ್ರಮುಖರು, ಹೆಸರಾಂತ ವಕೀಲರು, ವಾಣಿಜ್ಯೋದ್ಯಮಿಗಳು, ಮಾಜಿ ಸಚಿವರೂ, ರಾಜಕೀಯ ಧುರೀಣರೂ ಸಹಿಮಾಡಿರುತ್ತಾರೆ. ಅವರಲ್ಲಿ ಈಗ ಅನೇಕರು ಲಿಂಗೈಕ್ಯರಾಗಿರುತ್ತಾರೆ.  ಅವರು ಮಠಕ್ಕೆ ಮತ್ತು ಸಮಾಜಕ್ಕೆ ಮಾಡಿದ ಸೇವೆ ಅನುಪಮವಾದುದು.  ಟ್ರಸ್ಟ್ ಡೀಡ್ ಇಂಗ್ಲೀಷಿನಲ್ಲಿ ಇರುವುದರಿಂದ ಅವರು ಯಾರೂ ಓದದೇ ಸಹಿ ಮಾಡಿದ್ದಾರೆಂದು ಆರೋಪಿಸುವುದು ದೊಡ್ಡ ಗುರುಗಳಿಗೂ ಮೇಲ್ಕಂಡ ಆಗಿನ ಪ್ರತಿಷ್ಠಿತ ವಿದ್ಯಾವಂತ ಶಿಷ್ಯಪ್ರಮುಖರಿಗೆ ಮತ್ತು ಹಿರಿಯ ಜೀವಗಳಿಗೆ ತೋರುತ್ತಿರುವ ಅಗೌರವವೆಂದೇ ಭಾವಿಸಬೇಕಾಗುತ್ತದೆ.

14. ಇತ್ತೀಚೆಗೆ ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಪದೇ ಪದೇ ಈಗಿನ ಶ್ರೀ ಜಗದ್ಗುರುಗಳವರ ವಿರುದ್ಧ ಮಿಥ್ಯಾರೋಪ ಮಾಡಿ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ನಿಷ್ಠಾವಂತ ಭಕ್ತರ ಮನಸ್ಸಿಗೆ ತುಂಬಾ ನೋವನ್ನುಂಟುಮಾಡಿದೆ.  

15. ಈ ಬಂಡವಾಳ ಶಾಹಿಗಳು ಮಠದ ಮೇಲೆ ಹಿಡಿತವನ್ನು ಇಟ್ಟುಕೊಂಡು ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಮಾಡುತ್ತಿರುವ ಹುನ್ನಾರ ಮತ್ತು ದುಷ್ಕೃತ್ಯ ಎಂಬುದನ್ನು ಭಕ್ತಾದಿಗಳು ಮತ್ತು ಸಾರ್ವಜನಿಕರ ಗಮನಕ್ಕೆ ತರಲಾಗಿದೆ.


- ಕಾರ್ಯದರ್ಶಿ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ,  ಸಿರಿಗೆರೆ