ಅಧಿಕಾರ ಮತ್ತು ಸಂಪತ್ತಿನ ಹಪಾಹಪಿ!

  •  
  •  
  •  
  •  
  •    Views  

ಧಿಕಾರ ಮತ್ತು ಸಂಪತ್ತು ಎಲ್ಲೆಲ್ಲಿ ಇರುತ್ತವೆಯೋ ಅಲ್ಲೆಲ್ಲಾ ಅವುಗಳಿಗಾಗಿ ಹಪಹಪಿಸುವ ಜನರು ಇದ್ದೇ ಇರುತ್ತಾರೆ. ಅದು ರಾಜಕೀಯ ಕ್ಷೇತ್ರವಿರಬಹುದು, ಸಾಮಾಜಿಕ ಕ್ಷೇತ್ರವಿರಬಹುದು ಅಥವಾ ಧಾರ್ಮಿಕ ಕ್ಷೇತ್ರವೇ ಆಗಿರಬಹುದು.  ರಾಜ ಮಹಾರಾಜರುಗಳ ಕಾಲದಲ್ಲಿ ಅಧಿಕಾರ ಲಾಲಸೆಯಿಂದ ಅನೇಕ ಒಳಸಂಚುಗಳನ್ನು ಮಾಡಿರುವುದು ಇತಿಹಾಸದಲ್ಲಿ ಕಂಡುಬರುತ್ತದೆ.


ಟಿಪ್ಪುವಿಗೊಬ್ಬ ಮೀರ್ ಸಾದಿಕ್, 


ಸೀಜರಿನಿಗೊಬ್ಬ ಬ್ರೂಟಸ್, 


ಡಂಕನ್ ದೊರೆಗೊಬ್ಬಳು ಲೇಡಿ ಮ್ಯಾಕ್ ಬೆತ್... 

ಹೀಗೆ ಸಮಯ ಸಂದರ್ಭ ನೋಡಿಕೊಂಡು ಕೈಕೊಟ್ಟು ಬೆನ್ನಿಗೆ ಚೂರಿ ಹಾಕಿದ ನಿದರ್ಶನಗಳು ಇತಿಹಾಸದಲ್ಲಿ ಬೇಕಾದಷ್ಟು ಸಿಗುತ್ತವೆ. ಸ್ವಾರ್ಥ ಮತ್ತು ಕೃತಘ್ನತೆಯಲ್ಲಿ ಮನುಷ್ಯನನ್ನು ಮೀರಿಸುವ ಕ್ರೂರ ಪ್ರಾಣಿ ಮತ್ತೊಂದಿಲ್ಲ. ಜೀವದ ಗೆಳೆಯನಾಗಿದ್ದ ಬ್ರೂಟಸ್ ವಿದ್ರೋಹಿಗಳ ಜೊತೆ ಸೇರಿ ತನ್ನನ್ನು ಇರಿಯುತ್ತಿರುವುದನ್ನು ನೋಡಿ ಕತ್ತಿಯ ಇರಿತದ ನೋವಿಗಿಂತ ಹೆಚ್ಚಾಗಿ ಮಿತ್ರದ್ರೋಹದ ನೋವಿನಿಂದ ಆಘಾತಗೊಂಡ ಜೂಲಿಯಸ್ ಸೀಜರ್ “You too Brutus!” ಎಂದು ಹೃದಯವಿದ್ರಾವಕವಾದ ಮೂರೇ ಮೂರು ಶಬ್ದಗಳನ್ನಾಡಿ ಕೊನೆಯುಸಿರೆಳೆಯುತ್ತಾನೆ. ಔತಣ ಕೂಟದ ನೆಪದಲ್ಲಿ ಡಂಕನ್ ದೊರೆಯನ್ನು ಆಹ್ವಾನಿಸಿ ಅಮಾನವೀಯವಾಗಿ ಇರಿದು ಕೊಂದ ಲೇಡಿ ಮ್ಯಾಕ್ಬೆತ್ ತನ್ನ ರಕ್ತಸಿಕ್ತ ಹಸ್ತಗಳನ್ನು ನೋಡಿಕೊಳ್ಳುತ್ತಾ “All the perfumes of Arabia will not sweeten this little hand” (ನನ್ನ ಕೈಗಳಿಗೆ ಮೆತ್ತಿದ ಈ ರಕ್ತದ ವಾಸನೆ ಇಡೀ ಅರೇಬಿಯಾದ ಸುಗಂಧ ದ್ರವ್ಯಗಳನ್ನು ಒಟ್ಟುಗೂಡಿಸಿ ಹಚ್ಚಿದರೂ ಹೋಗುವುದಿಲ್ಲ) ಎಂದು ಪರಿತಪಿಸುತ್ತಾಳೆ. ಕೊನೆಯ ಪಕ್ಷ ಆಕೆಗೆ ತನ್ನ ಹೇಯಕೃತ್ಯದ ಅರಿವಾಗಿ ಪಶ್ಚಾತ್ತಾಪ ಪಟ್ಟುಕೊಂಡಂತೆ ಷೇಕ್ಸ್ ಪಿಯರ್ ಚಿತ್ರಿಸಿದ್ದಾನೆ. ಆದರೆ ನಿಜ ಜೀವನದಲ್ಲಿ ತಪ್ಪು ಮಾಡಿದ ದುಷ್ಟ ವ್ಯಕ್ತಿ ಹಾಗೆ ಪರಿತಪಿಸುವುದು ಬಹಳ ವಿರಳ. ತನ್ನದೇನೂ ತಪ್ಪಿಲ್ಲವೆಂದೇ ಅವನ ವರ್ತನೆ. ನಮ್ಮ ದೇಶದಲ್ಲಿಯೇ ಮೊಟ್ಟ ಮೊದಲಿಗೆ ಬ್ರಿಟೀಷರನ್ನು ಸೋಲಿಸಿದ ಕಿತ್ತೂರು ರಾಣಿ ಚೆನ್ನಮ್ಮ ಮೋಸ ಹೋಗಿದ್ದು ಯಾರಿಂದ? ಮೈಸೂರು ಹುಲಿ ಟಿಪ್ಪು ಸುಲ್ತಾನನು ಮೋಸ ಹೋಗಿದ್ದು ಯಾರಿಂದ? 

ನಮ್ಮ ಮಠದ ಇತಿಹಾಸದಲ್ಲಿಯೇ ನಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ 1938 ಆಗಸ್ಟ್ 11 ರಂದು ವಿಷ ಉಣಿಸಿ ಕೊಂದವರು ಯಾರು? ಮಠದಲ್ಲಿಯೇ ಇದ್ದು ಒಳಸಂಚು ಮಾಡಿ ಹಗೆತನವನ್ನು ಸಾಧಿಸಿದ ಕುಟಿಲ ಕಾವಿಧಾರಿಗಳು. “ಶಿವದಾನ”ವೆನಿಸಿದ ಮಜ್ಜಿಗೆಯಲ್ಲಿ ಶಿವದ್ರೋಹದ ಷಡ್ಯಂತ್ರ ನಡೆದಿದೆಯೆಂಬುದನ್ನು ಶಿವಭಾವದ ಹೃದಯವು ಅರಿಯದೇ ಹೋಯಿತು. ಇವನ್ನೆಲ್ಲಾ ನೋಡಿದಾಗ ಕಂಡು ಬರುವ ಸತ್ಯಸಂಗತಿಯೆಂದರೆ ಸ್ವಾರ್ಥ ಸಾಧನೆಗಾಗಿ ಮಾಡುವ ಹೇಯ ಕೃತ್ಯಗಳು ದೇಶಾತೀತ ಮತ್ತು ಕಾಲಾತೀತ.

ಈಗಲೂ ಸಹ ರಾಜಕೀಯ ರಂಗದಲ್ಲಿ ಅಧಿಕಾರ ಪಡೆಯಲು ಒಳಸಂಚುಗಳು ನಡೆಯುತ್ತಲೇ ಇವೆ. ಇದುವರೆಗೆ Breakfast/Dinner politics ಆಗಿ ತೆರೆಮರೆಯಲ್ಲಿ ನಡೆಯುತ್ತಿದ್ದ ಈ ಒಳಸಂಚುಗಳು ಕೆಲವು ವರ್ಷಗಳಿಂದ ಬಹಿರಂಗಗೊಂಡು ನಿರ್ಲಜ್ಜೆಯ ರೆಸಾರ್ಟ್ ರಾಜಕೀಯವಾಗಿ ಪರಿವರ್ತನೆಗೊಂಡಿರುವುದು ಸರ್ವವೇದ್ಯ. ಚುನಾಯಿತ ಪ್ರತಿನಿಧಿಗಳನ್ನು ರೆಸಾರ್ಟುಗಳಲ್ಲಿ ಹಿಡಿದಿಟ್ಟುಕೊಂಡು ಅವರಿಗೆ ನಾನಾ ಆಮಿಶಗಳನ್ನು ಒಡ್ಡಿ ಅಧಿಕಾರದಲ್ಲಿದ್ದವರನ್ನು ಕೆಡವಿ ಪದಗ್ರಹಣ ಮಾಡುವ ಕಸರತ್ತುಗಳಿಗೆ ಮೊದಲೂ ಇಲ್ಲ, ಕೊನೆಯೂ ಇಲ್ಲ. ಆದ್ದರಿಂದಲೇ ಇದಕ್ಕೆ ರೆಸಾರ್ಟ್ ರಾಜಕೀಯವೆಂಬ ಕುಖ್ಯಾತಿ ಬಂದಿದೆ. ಇತ್ತೀಚೆಗೆ ಧಾರ್ಮಿಕ ರಂಗದಲ್ಲಿಯೂ ಸಹ ಈ ರೆಸಾರ್ಟ್ ರಾಜಕೀಯ ಕುಸಂಸ್ಕೃತಿ ನುಸುಳಿರುವುದು ವಿಷಾದಕರ ಹಾಗೂ ಅಸಹ್ಯಕರ. ಆದರೆ ಒಂದು ವ್ಯತ್ಯಾಸ. ರಾಜಕೀಯ ರಂಗದಲ್ಲಿ ಅಧಿಕಾರದಲ್ಲಿರುವವರನ್ನು ಕೆಳಗಿಳಿಸುವ ಹುನ್ನಾರ ನಡೆಸಿ ಯಶಸ್ವಿಯಾದವರು ಸ್ವತಃ ಅಧಿಕಾರದ ಗದ್ದುಗೆಯನ್ನೇರಿ ಕುಳಿತುಕೊಳ್ಳುತ್ತಾರೆ. ಧಾರ್ಮಿಕ ರಂಗದಲ್ಲಿ ರಾಜಕೀಯ ಮಾಡುವವರು ಧರ್ಮದ ಕಟ್ಟೆಯ ಮೇಲೆ ಕುಳಿತುಕೊಳ್ಳಲು ಬರುವುದಿಲ್ಲ. 

ಅವರ ಉದ್ದೇಶ ಸ್ಪಷ್ಟ: ಧರ್ಮದ ಕಟ್ಟೆಯ ಮೇಲೆ ತಮಗೆ ಬೇಕಾದವರನ್ನು ಕೂರಿಸಿ ಅವರ ತಲೆ ಬೋಳಿಸಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವ ಹುನ್ನಾರ. ತಮ್ಮ ತೆವಲುಗಳಿಗೆ ಇಂಬುಗೊಡದೇ ಇದ್ದರೆ ಅಂತವರ ತಲೆ ತೆಗೆಯುವ ಒಳಸಂಚು. ಇದರ ಹಿಂದೆ ತೆರೆಮರೆಯಲ್ಲಿರುವ ಕಾಣದ ದುಷ್ಟಕೂಟ ಮತ್ತು  ಹಿಮ್ಮೇಳವೇ ಬೇರೆ. ಹುಡುಕುತ್ತಾ ಹೋದರೆ ನೀವು ನಂಬಲಾಗದ ಜಾಗಕ್ಕೆ ಕರೆದೊಯ್ಯುತ್ತದೆ.

ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ನಮಗೆ ಪಟ್ಟಕಟ್ಟುವ ಸಂದರ್ಭದಲ್ಲಿ ತಿಳಿಹೇಳಿದ ಹಿತನುಡಿ: “ಅಧಿಕಾರವಿದ್ದಲ್ಲಿ ಇಂದ್ರ, ಚಂದ್ರ ಎಂದು ಹೊಗಳಿಕೊಂಡು ಸುತ್ತು ಹಾಕುವವರು ಬಹಳ ಜನ. ಇವರೆಲ್ಲರೂ ತಮಗೆ ಸದಾ ಕಾಲದಲ್ಲೂ ಗಿಟ್ಟುತ್ತಲೇ ಇರಬೇಕೆನ್ನುವವರು. ತಮಗೇನಾದರೂ ಸ್ವಲ್ಪ ಕೊರತೆಯಾದರೆ ಭೂಮಿ ಆಕಾಶವನ್ನೆಲ್ಲಾ ಒಂದು ಮಾಡಿ ಕೂಗಾಡುತ್ತಾರೆ. ನಮ್ಮ ಶತ್ರುಗಳು ನಮ್ಮ ಸುತ್ತಲೂ ಆಪ್ತರೂ ಸ್ನೇಹಿತರೂ ಎನಿಸಿಕೊಂಡಿರುತ್ತಾರೆ. ಅಡವಿಯಲ್ಲಿರುವ ಹುಲಿಯು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಪಕ್ಕದಲ್ಲಿರುವ ಮಾನವನು ಸ್ನೇಹಿತನ ವೇಷದಲ್ಲಿದ್ದು ನಮ್ಮ ಪ್ರಾಣವನ್ನೇ ತಿನ್ನುತ್ತಾನೆ”. ಆಗ ದೇಶ-ವಿದೇಶಗಳಲ್ಲಿ ಓದಿಕೊಂಡು ಬಂದ ನಮಗೆ ಸಮಾಜದ ಒಡನಾಟವಿಲ್ಲದೆ ಇದಾವುದೂ ಅರ್ಥವಾಗಿರಲಿಲ್ಲ. ನಾಲ್ಕು ದಶಕಗಳಿಗೂ ಹೆಚ್ಚಿನ ನಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಕ್ರಮೇಣ ದೊಡ್ಡ ಗುರುಗಳ ಕಹಿ ಅನುಭವಗಳೆಲ್ಲವೂ ಒಂದೊಂದೇ ನಮ್ಮ ಸ್ವಾನುಭವಕ್ಕೆ ಬಂದಿವೆ. ಯೂರೋಪಿನ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ಮಠದ ಮುಂದಿನ ಸ್ವಾಮಿಗಳಾಗಲಿದ್ದೇವೆಂದು ತಿಳಿದ ನಮ್ಮ ಆತ್ಮೀಯ ಗೆಳೆಯರು ತುಂಬಾ ಗೌರವ ಕೊಟ್ಟು ನಮ್ಮನ್ನು ನೋಡಿ ಕನಿಕರಿಸಿ ಜರ್ಮನ್ ಭಾಷೆಯಲ್ಲಿ “Sie sind ein alter Mann in einem jungen Körper. Schicken Sie Ihr schönes lockiges Haar, nachdem Ihr Kopf rasiert wurde” (ನೀವೊಬ್ಬರು ಯುವ ಶರೀರದಲ್ಲಿರುವ ವೃದ್ಧರು. ತಲೆ ಬೋಳಾದ ಮೇಲೆ ನಿಮ್ಮ ಈ ಸುಂದರವಾದ ಗುಂಗುರು ತಲೆಗೂದಲನ್ನು ನಮಗೆ ಪಾರ್ಸಲ್ ಮಾಡಿರಿ) ಎಂದು ಹಾಸ್ಯಮಾಡುತ್ತಿದ್ದರು. ಈಗ ದೊಡ್ಡ ಗುರುಗಳ ಗುಣಗಾನ ಮಾಡುತ್ತಿರುವವರು  “ಓದಿಸುವ ನೆಪದಲ್ಲಿ ಉತ್ತರಾಧಿಕಾರಿಯನ್ನು ಸಾಗಹಾಕಿದ್ದಾರೆ. ಪರದೇಶಕ್ಕೆ ಓದಲು ಹೋದವರು ಯಾರಾದರೂ ವಾಪಾಸು ಬರುತ್ತಾರೆಯೇ? ತ್ಯಾಗಪತ್ರ ಕೊಟ್ಟಿರುವುದು ಒಂದು ಸೋಗು. ಅಧಿಕಾರವನ್ನು ಬಿಟ್ಟುಕೊಡಲು ಇವರಿಗೆ ಮನಸ್ಸಿಲ್ಲ” ಎಂದು ದೊಡ್ಡ ಗುರುಗಳ ಬಗ್ಗೆ ಇಲ್ಲಿ ಹಗುರವಾಗಿ ಶಿಷ್ಯರು ಕೆಲವರು ಕುಹಕದ ಮಾತುಗಳನ್ನು ಆಡುತ್ತಿದ್ದರೆಂದು ಬಂದ ಮೇಲೆ ತಿಳಿಯಿತು. ಈಗ ನಮ್ಮ ಮೇಲೆ ಆರೋಪ ಮಾಡುತ್ತಿರುವವರು ಅಂತಹ ಕುಹಕಿಗಳ ಶನಿಸಂತಾನವೇ ಇರಬೇಕು. 

ನಮ್ಮ ಗುರುವರ್ಯರನ್ನು ಖಾಸಗಿಯಾಗಿ ದರ್ಶನ ಮಾಡಿದಾಗಲೆಲ್ಲಾ ಅವರು ಹೇಳುತ್ತಿದ್ದ ಹಿತನುಡಿಗಳು. ಮಹಾಕವಿ ಬಾಣಭಟ್ಟನ “ಕಾದಂಬರೀ” ಎಂಬ ಸುಪ್ರಸಿದ್ಧ ಸಂಸ್ಕೃತ ಗ್ರಂಥದಲ್ಲಿ ಬರುವ “ಶುಕನಾಸೋಪದೇಶ”ದಲ್ಲಿ ಯುವರಾಜ ಚಂದ್ರಾಪೀಡನಿಗೆ ಪಟ್ಟ ಕಟ್ಟುವ ಸಂದರ್ಭದಲ್ಲಿ ಮಹಾಮಂತ್ರಿ ಶುಕನಾಸನು ಮಾಡಿದ ಉಪದೇಶದಂತಿವೆ. ನಮ್ಮ ಗುರುವರ್ಯರು ಹೇಳಿದ ಹಿತನುಡಿಗಳು:

“ಜನರ ಅಪವಾದಗಳಿಗೆ ಅಂಜಬೇಡ. ಪರರ ನಿಂದೆಗೆ ವೃಥಾ ವ್ಯಾಕುಲ ಪಡಬೇಡ. ನಿನ್ನಲ್ಲಿ ದೋಷವನ್ನು ಕಂಡು ಯಾರೂ ನಿಂದಿಸುವುದಿಲ್ಲ. ಸ್ವಾರ್ಥವು ಸಿಗದಿದ್ದರೆ ದೂಷಿಸುತ್ತಾರೆ. ಸಿಕ್ಕರೆ ಹೊಗಳುತ್ತಾರೆ. ಅವರ ಹೊಗಳಿಕೆಗೂ ಬೆಲೆಯಿಲ್ಲ, ಉಗುಳುವಿಕೆಗೂ ಬೆಲೆಯಿಲ್ಲ. ಮಠ ಮಂದಿರಗಳು ಇಂದು ರಾಜಕೀಯಕ್ಕೆ ದುರುಪಯೋಗವಾಗುತ್ತಿವೆ. ತಮಗೆ ಉಪಯೋಗವಾಗುವುದಿಲ್ಲವೆಂದು ತಿಳಿದು ರಾಜಕಾರಣಿಗಳು ಕೊಡಬಾರದ ಕಿರುಕುಳಗಳನ್ನು ಕೊಟ್ಟರೆ, ಮಾಡಬಾರದ ಅಪಪ್ರಚಾರಗಳನ್ನು ಮಾಡಿದರೆ ಕರ್ತವ್ಯ ನಿರ್ವಹಣೆಯ ದೃಷ್ಟಿಯಿಂದ ಅಂಥವರನ್ನು ಪ್ರತಿಭಟಿಸುವುದು ಅನಿವಾರ್ಯ. ನಾವು ಎಷ್ಟೇ ನಿಸ್ವಾರ್ಥಪರತೆಯಿಂದ, ನಿಷ್ಟುರತೆಯಿಂದ ಕೆಲಸ ಮಾಡಿದರೂ ಸ್ವಾರ್ಥಿ ಜನರು ಕಾಟ ಕೊಡುವುದನ್ನು ಬಿಡುವುದಿಲ್ಲ. ಉನ್ನತ ಸ್ಥಾನದಲ್ಲಿರುವವರನ್ನು ದುರ್ಬಳಕೆ ಮಾಡಿಕೊಳ್ಳುವ ದುರ್ಜನರು ಇದ್ದೇ ಇರುತ್ತಾರೆ. ಶಿವನ ಕೊರಳಿಗೆ ಸುತ್ತಿಕೊಂಡ ಹಾವಿನಂತೆ ಈ ಜನರು ಜೊತೆಯಲ್ಲಿಯೇ ಇರುತ್ತಾರೆ. ಸ್ವಾರ್ಥವು ಗಿಟ್ಟದೆ ಇದ್ದಾಗ ತಿರುಗಿ ಬೀಳುತ್ತಾರೆ, ಬುಸುಗುಡುತ್ತಾರೆ, ವಿಷಕಾರುತ್ತಾರೆ. ಮಠಗಳಿಗೆ ಮರಿಗಳಾಗಲು ನಮ್ಮ ಸಮಾಜದಲ್ಲಿ ಯಾರೂ ಮುಂದೆ ಬರುವುದಿಲ್ಲ. ಸಮಾಜದ ಒಳ ರಹಸ್ಯವನ್ನು ಬಲ್ಲವರಂತೂ ಇನ್ನೂ ದೂರವೇ ಉಳಿಯುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಇಂದು ಈ ಪೀಠವನ್ನೇರಿರುವುದು ನಮ್ಮಿಚ್ಛೆಯಂತೆಯೂ ಅಲ್ಲ, ನಿಮ್ಮಿಚ್ಛೆಯಂತೆಯೂ ಅಲ್ಲ. ಇದರಲ್ಲಿ ಶಿವಸಂಕಲ್ಪವಿದೆ. ಧೈರ್ಯದಿಂದ ಮುನ್ನುಗ್ಗಬೇಕು. ನೀವು ದುರ್ಬಲರಾದರೆ, ಅಂಜುಬುರುಕರಾದರೆ ಸ್ವಾರ್ಥಿಗಳು ನಿಮ್ಮ ತಲೆಯ ಮೇಲೆ ಕಾಲಿಡುತ್ತಾರೆ; ನೀವು ಪ್ರಬಲರಾದರೆ, ಗಂಡೆದೆಯುಳ್ಳವರಾದರೆ ನಿಮ್ಮ ಬೂಟುಕಾಲು ತಿಕ್ಕುತ್ತಾರೆ, ನೆನಪಿಟ್ಟುಕೊಳ್ಳಿ!”

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.22-8-2024.