‘ಖೂನಿ’ ಮಾಡಿಸಿದ್ದಾರೆಂದು ದೊಡ್ಡ ಗುರುಗಳ ಮೇಲೆ ಆಗಿನ ರಾಜಕಾರಣಿಗಳು ಮಾಡಿದ್ದ ಸುಳ್ಳು ಆರೋಪ!
(ದೊಡ್ಡ ಗುರುಗಳ ಆತ್ಮಕಥನ “ದಿಟ್ಟ ಹೆಜ್ಜೆ ಧೀರ ಕ್ರಮ” ಪುಸ್ತಕದಿಂದ ಆಯ್ದ ಭಾಗ)
ಈ ಎಲ್ಲಾ ಪ್ರಸಂಗಗಳಿಂದ ಅನೇಕ ಜನ ಸ್ವಾಮಿಗಳಾದರೆ ಪರಿಸ್ಥಿತಿ ಹದಗೆಡುತ್ತದೆಂದು ತಿಳಿದು ಎಲ್ಲಾ ಮಠಗಳಿಂದಲೂ ಒಬ್ಬರೇ ಸ್ವಾಮಿಗಳು ಸಾಕು ಎಂಬ ನಿರ್ಣಯಕ್ಕೆ ಸಮಾಜ ಬಂದಿತ್ತು. 1946ರಲ್ಲಿ ಸಿರಿಗೆರೆಯಲ್ಲಿ ಹೈಸ್ಕೂಲನ್ನು ಪ್ರಾರಂಭಿಸಿದ ಮೇಲೆ ಅದರ ಜೊತೆಗೆ ಹಾಸ್ಟೆಲ್ ಅನ್ನು ಪ್ರಾರಂಭಿಸಬೇಕಾಯಿತು. ನಾವೊಬ್ಬರೇ ಮಠದ ವ್ಯವಹಾರ, ಆಸ್ತಿ ವ್ಯವಹಾರ ಎಲ್ಲವನ್ನು ನೋಡಿಕೊಂಡು ಹೋಗುವುದು ಕಷ್ಟವಾಯಿತು. ಆದ್ದರಿಂದ ಇಬ್ಬರು ಸ್ವಾಮಿಗಳನ್ನು ಮಾಡಿಕೊಳ್ಳಬೇಕೆಂಬ ಅಭಿಪ್ರಾಯವನ್ನು ಸಮಾಜದ ಮುಂದೆ ಇಟ್ಟೆವು. ಒಬ್ಬರು ವಿದ್ಯಾಸಂಸ್ಥೆ ನೋಡಿಕೊಳ್ಳಲು, ಇನ್ನೊಬ್ಬರು ಮಠದ ವ್ಯವಹಾರ ನೋಡಿಕೊಳ್ಳಲು. ಎಲ್ ಸಿದ್ದಪ್ಪನವರು “ಯಾವ ವ್ಯವಹಾರ ಇದ್ದರೇನು? ಹೈಸ್ಕೂಲು ಇದ್ದರೇನು? ಬಿದ್ದರೇನು? ಮಠ ಬೇಕು. ನಮ್ಮ ಜನರ ಮನೋಭಾವವನ್ನು ಗಮನಿಸಿ ಹೇಳುವುದಾದರೆ 2ನೆಯ ಸ್ವಾಮಿಗಳು ಇರಲೇ ಕೂಡದು” ಎಂದು ಖಡಾಖಂಡಿತವಾಗಿ ಹೇಳಿದರು. ಜಿ ಚನ್ನಪ್ಪನವರು ಇದೇ ಅಭಿಪ್ರಾಯದವರಾದರೂ ನಮ್ಮ ವಾದವನ್ನು ಒಪ್ಪಿಕೊಂಡರು. ಮಾಡಿಕೊಳ್ಳಬಹುದೆಂದು ತೀರ್ಮಾನವಾಯಿತು. ಅದಕ್ಕಾಗಿ ನಾವೇ ಓದಿಸುತ್ತಿದ್ದ ಇಬ್ಬರನ್ನು ಚುನಾಯಿಸಿದೆವು. ಒಬ್ಬರು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರು, ಇನ್ನೊಬ್ಬರು ಚಿತ್ರದುರ್ಗ ತಾಲ್ಲೂಕ್ ನೆಲ್ಲಿಕಟ್ಟೆ ಗ್ರಾಮದ ಎನ್ ಎಂ ಚನ್ನಬಸಯ್ಯ ಎಂಬುವವರು.
ಎನ್ ಎಂ ಚನ್ನಬಸಯ್ಯನವರು ಮೈಸೂರಲ್ಲಿ ಓದುತ್ತಿದ್ದರು. ನಮ್ಮ ಯಲಹಂಕ ಮಠದಲ್ಲಿ ಏಜಂಟರಾಗಿದ್ದ ಪ್ರಭುವಯ್ಯನವರನ್ನು ಅವರಲ್ಲಿ ಸಮಾಲೋಚಿಸಲು ಕಳುಹಿಸಿದೆವು. ಪ್ರಭುವಯ್ಯನವರು ಅಲ್ಲಿಂದ ಬಂದು ಏನೂ ಹೇಳದೆ ‘ಆತ ಸ್ಪಷ್ಟವಾಗಿ ಹೇಳಿದ್ದಾನೆ. ಆದ್ದರಿಂದ ಮಾಡಿಕೊಳ್ಳುವುದು ಬೇಡ’ ಎಂದು ಹೇಳಿದರು. ರಜಾ ಕಾಲದಲ್ಲಿ ಸಿರಿಗೆರೆಗೆ ಬಂದಾಗ ಖಾಯಿಲೆಯಿಂದ ಮಠದಲ್ಲಿ ಮಲಗಿದ್ದನು.
ಇಡೇಹಳ್ಳಿಯ ಪಾರುಪತ್ತೆಗಾರ್ ಶಿವಲಿಂಗಪ್ಪನು ಎಷ್ಟು ಹೇಳಿದರೂ ಕೇಳದೆ, ಮಠವನ್ನು ಬಿಟ್ಟ ಮೇಲೆ ರುದ್ರಪ್ಪಯ್ಯನನ್ನು ಪಾರುಪತ್ತೆಗಾರನನ್ನಾಗಿ ಮಾಡಿಕೊಂಡೆವು. ಶಿವಲಿಂಗಪ್ಪನಂತಹ ನಿಷ್ಠಾವಂತನನ್ನು ನಾವು ಮತ್ತಾರಲ್ಲೂ ಕಾಣಲಿಲ್ಲ. ರುದ್ರಪ್ಪಯ್ಯನು ಸಿರಿಗೆರೆಯಲ್ಲಿ ತನ್ನದೇ ಆದ ಒಂದು ಗುಂಪಿಗೆ ನಮ್ಮನ್ನೂ, ಮಠವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದ್ದನು. ನಾವು ಗದರಿಸುತ್ತಿದ್ದೆವು. ನಮ್ಮ ಎದುರಿನಲ್ಲಿ ತಿದ್ದಿಕೊಂಡಂತೆ ತೋರಿಸಿಕೊಂಡು ಆ ಗುಂಪಿನಲ್ಲಿ ಮಸಲತ್ತು ಮಾಡುತ್ತಿದ್ದನು. ಇದು ನಮಗೆ ಇತ್ತೀಚೆಗೆ ತಿಳಿಯಿತು. ಆಗ ತಿಳಿದಿರಲಿಲ್ಲ. ಈ ರುದ್ರಪ್ಪಯ್ಯನ ಸಲಹೆ ಪ್ರಕಾರ ಎನ್ ಎಂ ಚನ್ನಬಸಯ್ಯನನ್ನು ಚಂದ್ರಶೇಖರ ಸ್ವಾಮಿ ಎಂಬ ಹೆಸರಿನಿಂದ ಸ್ವಾಮಿಯನ್ನಾಗಿ ಮಾಡಿಕೊಂಡೆವು. ಮುಂದೆ ಚಂದ್ರಶೇಖರ ಸ್ವಾಮಿಯು ಈಗ ಇಲ್ಲೇನೂ ಕೆಲಸವಿಲ್ಲ, ಒಂದು ತಿಂಗಳು ಮೈಸೂರಿನಲ್ಲಿದ್ದು ಬರುತ್ತೇನೆ ಎಂದು ಕೇಳಿಕೊಂಡನು. ಆಗಬಹುದೆಂದೆವು. ಅದರಂತೆ ಮೈಸೂರಿನಲ್ಲಿ ಹೋಗಿ ಇದ್ದನು . ನಾವು ಬೀರೂರಿನಲ್ಲಿ ಇದ್ದೆವು.
ಮೈಸೂರಿಗೆ ಹೋಗಿ 15 ದಿವಸಗಳಾದ ಮೇಲೆ ಗರ್ಜೆ ಮರುಳಪ್ಪನವರು ‘ಮೈಸೂರಿನಿಂದ ಬಂದೆ’ ಎಂದು ಕಾವಿ ಬಟ್ಟೆಗಳನ್ನು ತೆಗೆದು ನಮ್ಮ ಮುಂದಿಟ್ಟರು. ‘ಇದೇನಿದು?’ ಎಂದೆವು. ಚಂದ್ರಶೇಖರ ಸ್ವಾಮಿ ತಾನು ಸ್ವಾಮಿಯಾಗಿರಲು ಬಯಸುವುದಿಲ್ಲ ಎಂದು ಹೇಳಿ ಗುರುಗಳ ಸ್ವತ್ತನ್ನು ಗುರುಗಳಿಗೆ ಬಿಚ್ಚಿಕೊಟ್ಟರು. ‘ನನಗೆ ಎಲ್ಲಾದರೂ ಕೆಲಸ ಕೊಡಿಸಿ, ನಾನು ಜೀವನ ಮಾಡಿಕೊಂಡು ಹೋಗುತ್ತೇನೆ’ ಎಂದು ಹೇಳಿದರು. ನಾವು ಪೆಚ್ಚಾದೆವು. ‘ಆತನ ಕೈಲಿ ಸನ್ಯಾಸ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ತಾವು ಒಪ್ಪಿಕೊಳ್ಳಿ’ ಎಂದು ಮರುಳಪ್ಪನವರು ಹೇಳಿದರು. ಈ ವಿಷಯವನ್ನು ಸಿದ್ಧವೀರಪ್ಪನವರೊಂದಿಗೆ ಹೇಳಿ ಯಾರಿಂದಲೋ ಕೆಲಸ ಕೊಡಿಸುತ್ತೇನೆ ಎಂದರು. “ಸನ್ಯಾಸಿಯಾಗಿರುವುದು ಆತನ ಕೈಲಿ ಆಗುವುದಿಲ್ಲ. ನಾಳೆ ಅದು ಗಂಡಾಂತರವಾಗಬಹುದು. ನಮ್ಮ ಜನರು ಸಾಮಂತರೇ ಆಗಲಿ, ಧೀಮಂತರೇ ಆಗಲಿ, ಶ್ರೀಮಂತರೇ ಆಗಲಿ ಒಬ್ಬೊಬ್ಬರನ್ನು ಕಟ್ಟಿಕೊಂಡು ಕುಣಿಯುತ್ತಾರೆಂಬುದಕ್ಕೆ ಹಿಂದಿನ ಇತಿಹಾಸವೇ ಸಾಕ್ಷಿಯಾಗಿದೆ. ತಾನಾಗಿಯೇ ಹೋಗುತ್ತೇನೆ ಎನ್ನುವಾಗ ಶನಿ ತೊಲಗಿತೆಂದು ತಾವು ತಿಳಿದುಕೊಳ್ಳಿ” ಎಂದು ಹೇಳಿದರು. ನಾವು ನಂತರ ರುದ್ರಯ್ಯನನ್ನು ಸಿರಿಗೆರೆಯಿಂದ ಬೀರೂರಿಗೆ ಕರೆಸಿ ಮರುಳಪ್ಪನವರು ಹೇಳಿದ ಎಲ್ಲಾ ವಿಚಾರಗಳನ್ನು ಹೇಳಿ ಅವನ ಕೈಲಿ ಕಾವಿ ಬಟ್ಟೆಯನ್ನು ಸಿರಿಗೆರೆಗೆ ಕಳುಹಿಸಿದವು. ರುದ್ರಯ್ಯನು ಮರುಳಪ್ಪ ಮತ್ತು ಗುರುಗಳು ಸೇರಿ ಚಂದ್ರಶೇಖರ ಸ್ವಾಮಿಗಳನ್ನು ಕೊಲೆ ಮಾಡಿಸಿ ಬಟ್ಟೆ ತಂದಿದ್ದಾರೆ ಎಂದು ತನ್ನ ಆಪ್ತ ವರ್ಗಕ್ಕೆ ಗುಟ್ಟಾಗಿ ತಿಳಿಸಿದನೆಂಬ ಸುದ್ದಿಯಾಯಿತು
ಸ್ವಾಮಿಗಳನ್ನು ಜೀವಂತ ತಂದು ತೋರಿಸಲಿ
ರಾಜಕೀಯ ಕಾರಣದಿಂದ ನಾವು ಸಿದ್ಧವೀರಪ್ಪನವರ ಪರ ಇದ್ದೇವೆಂದು ತಿಳಿದುಕೊಂಡಿದ್ದ ಕೊಂಡಜ್ಜಿ ಬಸಪ್ಪ, ಎಂ.ಕೆ ತಿಮ್ಮಪ್ಪ, ಹೆಬ್ಬಾಳು ಬಸವರಾಜಪ್ಪ ಇನ್ನೂ ಕೆಲವರು “ಚಂದ್ರಶೇಖರ ಸ್ವಾಮಿಗಳನ್ನು ಜಗದ್ಗುರುಗಳು ಖೂನಿ ಮಾಡಿಸಿದ್ದಾರೆ. ಚಂದ್ರಶೇಖರ ಸ್ವಾಮಿಗಳನ್ನು ಜೀವಂತ ತಂದು ತೋರಿಸಲಿ. ಇಲ್ಲವೇ ಜಗದ್ಗುರುಗಳು ಮಠವನ್ನು ಬಿಡಲಿ” ಎಂದರು. ಇವರು ಆಗ ಮಠದ ಹಿತೈಷಿಗಳೂ ಅಲ್ಲ. ಇದೇ ಸಮಯದಲ್ಲಿ ಸ್ವಾಮಿಗಳನ್ನು ತುಳಿದರೆ ಸಿದ್ಧವೀರಪ್ಪ ತಣ್ಣಗಾಗುತ್ತಾನೆ ಎಂದು ತಿಳಿದರು. ಆಗ ಸಿದ್ದವೀರಪ್ಪ ಹೋಂ ಮಿನಿಸ್ಟರ್ ಆಗಿದ್ದರು. ನಮ್ಮ ಜನರಲ್ಲಿ ಒಂದು ದೌರ್ಬಲ್ಯವಿದೆ. ಯಾರು ಏನೇ ಹೇಳಲಿ, ಏಕ ಪಕ್ಷದ ಮಾತಿಗೆ ಬೆಲೆ ಕೊಡಬಾರದು, ಉಭಯ ಪಕ್ಷಗಳ ಮಾತು ಕೇಳಿ ನಿರ್ಣಯ ಮಾಡಬೇಕೆಂಬ ಮನೋಭಾವವಿರುವವರು ತೀರಾ ವಿರಳ. ಯಾರಾದರೂ ಸುಳ್ಳ, ಕಳ್ಳ, ಪಟಿಂಗರು ಏನಾದರೂ ಹಚ್ಚಿದರೆ ಹಿಂದೆ ಮುಂದೆ ನೋಡದೆ ಕುಣಿದುಬಿಡುತ್ತಾರೆ. ಹೀಗಾಗಿ ಎಲ್ಲಾ ಕಡೆಯೂ ನಾವೇ ಕೊಲೆಪಾತಕಿಗಳೆಂಬ ಬಿರುದು ಪಡೆದೆವು. ನಂತರ ಬೀರೂರಲ್ಲಿ ಒಂದು ಮೀಟಿಂಗ್ ಕರೆದೆವು. ಹೆಬ್ಬಾಳು ಬಸವರಾಜಪ್ಪ, ಎಂ.ಕೆ ತಿಮ್ಮಪ್ಪ ಇವರ ಮುಂದಾಳುತನದಲ್ಲಿ 100-200 ಜನರು ಬಂದರು. ಅವರಲ್ಲಿ ನಮ್ಮ ರುದ್ರಯ್ಯನ ಬಳಗವೂ ಇತ್ತು. ಹೇಳಿದ್ದ ಗಂಟೆಗೆ ಸರಿಯಾಗಿ ಚಂದ್ರಶೇಖರಯ್ಯ ಬಂದು “ನಾವೇ ಈ ಹಿಂದೆ ಚಂದ್ರಶೇಖರ ಸ್ವಾಮಿ ಎನಿಸಿಕೊಂಡಿದ್ದವರು. ಸನ್ಯಾಸಿ ಜೀವನ ನನಗೆ ಒಗ್ಗುವುದಿಲ್ಲವಾಗಿ ಪ್ರಾಮಾಣಿಕವಾಗಿ ನಡೆದುಕೊಳ್ಳುವುದು ನನ್ನ ಕರ್ತವ್ಯವೆಂದು ತಿಳಿದು, ಇದ್ದ ಅಂಶವನ್ನು ಶ್ರೀ ಜಗದ್ಗುರುಗಳವರ ಗಮನಕ್ಕೆ ತಂದು ಕಾವಿ ಬಟ್ಟೆಯನ್ನು ತ್ಯಜಿಸಿದೆನು. ಈಗ ಗೊಂದಲ ಎಬ್ಬಿಸಿರುವ ನೀವು ಎಂದೂ ನಮ್ಮ ಮಠದ ಹಿತೈಷಿಗಳಲ್ಲ. ನಿಮ್ಮ ಅಪ್ಪ, ಅಜ್ಜ, ಮುತ್ತಜ್ಜನ ಕಾಲದಿಂದಲೂ ಮಠಕ್ಕೆ ಎದುರಾಗಿ ನಿಂತು ಕೇಡು ಹಾರೈಸಿಕೊಂಡೇ ಬಂದಿರುವವರು” ಎಂದು ಇನ್ನೂ ಹೇಳುತ್ತಿದ್ದಂತೆಯೇ ಕೆಲವರು ಜನರು, ಅದರಲ್ಲಿ ನಮ್ಮ ಏಜೆಂಟ್ ರುದ್ರಯ್ಯನ ಗುಂಪಿನವರು, ಸದ್ಭಕ್ತರೆನಿಸಿಕೊಳ್ಳುವ ವೇಷವನ್ನು ತೊಟ್ಟು, ಹಿಡಿಯಿರಿ ಬಸವರಾಜಪ್ಪನನ್ನು, ಹಿಡಿಯಿರಿ ಕುಂಟ ತಿಮ್ಮಪ್ಪನನ್ನು, ಹುಡುಕಿರಿ ಕೊಂಡಜ್ಜಿ ಬಸಪ್ಪನನ್ನು ಎಂದು ಹಿಡಿ ಬಡಿ ಶುರು ಮಾಡಿದರು. ಮೊದಲೇ ಮೂಲೆಗೆ ಕುಳಿತಿದ್ದ ಇವರೆಲ್ಲ ಹಾಗೆಯೇ ಕಾಲು ಹಚ್ಚಿದರು. ಮುಂದೆ ಸಿದ್ದವೀರಪ್ಪನವರು ಬೊಂಬಾಯಿ ಆಟೋಮೊಬೈಲ್ಸ್ ಕಂಪನಿಯೊಂದರಲ್ಲಿ ಚಂದ್ರಶೇಖರಯ್ಯನಿಗೆ ಒಂದು ಕೆಲಸ ಕೊಡಿಸಿಕೊಟ್ಟರು.
ಸ್ವಾಮಿಯಾದವನು ತನ್ನನ್ನು ತಾನು ಆಳಿಕೊಳ್ಳಬೇಕು. ಇದು ಸ್ವಾಮಿತನದ ಅರ್ಥ. ಅಂದರೆ, ತನ್ನಲ್ಲಿರುವ ದೌರ್ಬಲ್ಯಗಳನ್ನೂ ನ್ಯೂನತೆಗಳನ್ನೂ ತನ್ನ ಆತ್ಮಕ್ಕೆ ಸಾಕ್ಷಿಯಾಗಿಟ್ಟುಕೊಂಡು ಅವನ್ನು ನಿರ್ಮೂಲನೆ ಮಾಡಿದರೆ ಮಾತ್ರ ‘ಸ್ವಾಮಿ’ ಪದಕ್ಕೆ ಅರ್ಥ ಉಂಟು. ಈಗಲೀಗ ಸ್ವಾಮಿತನವೂ, ಕಾವಿ ಬಣ್ಣವೂ ತನ್ನತನವನ್ನು ಬಿಟ್ಟು ದೂರ ಸರಿದಿದೆ. ರಾಜಕಾರಣಿಗಳ ಆರ್ಭಟದಲ್ಲಿ ಸ್ವಾಮಿತ್ವವು ತನ್ನನ್ನು ತಾನು ಅರಿತುಕೊಳ್ಳುವುದನ್ನು ಮರೆತೇ ಬಿಟ್ಟಿದೆ. ರಾಜಕಾರಣಿಗಳ ನಡೆನುಡಿಗಳೇ ತಮಗೆ ಆದರ್ಶವೆಂಬ ಭಾವನೆ ಬೆಳೆಯುತ್ತಿದೆ. ಇದರ ಪರಿಣಾಮವಾಗಿ ರಾಜಕಾರಣಿಗಳ ಆಶ್ರಯದಲ್ಲಿ ಅನೇಕ ಕಳ್ಳ ಸ್ವಾಮಿಗಳು ಹುಟ್ಟಿಕೊಂಡಿದ್ದಾರೆ.
- ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು
“ದಿಟ್ಟ ಹೆಜ್ಜೆ ಧೀರ ಕ್ರಮ”, 1988