ಸಮತೆಯ ತತ್ವದ.. ಸಮಾನತೆಯ ಸಂಕೇತದ... ದಿಟ್ಟ ಹೆಜ್ಜೆ! - ಶ್ರೀ ಶಿವಕುಮಾರ ಶ್ರೀ ಗಳವರದು

  •  
  •  
  •  
  •  
  •    Views  

ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #101
ಪ್ರಸಾದ ನಿಲಯದಲ್ಲಿ ಸರ್ವರಿಗೂ ಸಮಾನ ಅವಕಾಶ :

ರಾಣೇಬೆನ್ನೂರಲ್ಲಿ 1957-58ರಲ್ಲಿ ಒಂದು ಪ್ರಸಾದ ನಿಲಯ ಪ್ರಾರಂಭಿಸಿದೆವು. ಲಿಂಗಾಯಿತರಲ್ಲಿ ಅನೇಕ ಪಂಗಡಗಳುಂಟು. ಆಗ ಅಲ್ಲಿಯೂ "ಹಾರುವ ಮೊದಲಾಗಿ ಅಂತ್ಯಜ ಕಡೆಯಾಗಿ ಶಿವಭಕ್ತರಾದವರನ್ನೆಲ್ಲಾ ಒಂದೆ ಎಂಬೆ” ಎಂಬ ನಮ್ಮ ತತ್ವ್ತ ಜಾರಿಗೆ ಬಂದಿತು. ಇದು ಭಿನ್ನ ಪಂಗಡದ ಲಿಂಗಾಯಿತರಿಗೆ ಸರಿಬೀಳಲಿಲ್ಲ. “ಲಿಂಗಾಯಿತರೆಂದರೇನು, ಲಿಂಗಾಯಿತ ಜಂಗಮರೆಂದರೇನು, ಮಾದಿಗರೂ, ನಾಯಕರೂ, ಅಗಸರೂ ಇವೆಲ್ಲರೊಂದಿಗೆ ಗುರುಗಳ ನೇತೃತ್ವದಲ್ಲಿಯೇ ಕೂತು ಉಣ್ಣುವುದೆಂದರೇನು? ಕೇವಲ ಲಿಂಗಾಯಿತರಿಗಾಗಿ ಪ್ರಸಾದ ನಿಲಯ ನಡೆಸಲಿ, ಇಲ್ಲವಾದರೆ ನಿಲ್ಲಿಸಲಿ” ಆ ಪ್ರಾಂತ್ಯದ ನಮ್ಮ ಜನರಿಗೆ ಹಚ್ಚಿಕೊಟ್ಟರು. ಅವರೆಲ್ಲರು ಬಂದು ಲಿಂಗಾಯಿರ ವಿನಾ ಬೇರೆಯವರಿಗೆ ಬೇರೆ ಕೊಠಡಿಯಲ್ಲಿ ಊಟಕ್ಕೆ ಹಾಕಿಸಬೇಕು ಅಥವಾ ಅವರನ್ನು ಹಾಸ್ಟೆಲಿಗೆ ಸೇರಿಸಬಾರದು, ಇಲ್ಲವೇ ಕನಿಷ್ಟ ಪಕ್ಷ ಜಂಗಮರ ಹುಡುಗರಿಗಾದರೂ ಬೇರೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ನಾವು “ವ್ಯವಸ್ಥೆ ಮಾಡಬೇಕೆಂದು ನಿರೀಕ್ಷೆ ಮಾಡುವುದಕ್ಕಿಂತ ಜಂಗಮರ ವಿದ್ಯಾರ್ಥಿಗಳು ಇಲ್ಲಿಗೆ ಬರದಿರುವುದೇ ಲೇಸಲ್ಲವೇ?” ಎಂದು ಪ್ರತ್ಯುತ್ತರ ಕೊಟ್ಟೆವು: ಅದಕ್ಕೆ “ಮುಂಚೆ ಜಂಗಮರ ಪಂಕ್ತಿ, ನಂತರ ಲಿಂಗಾಯಿತರ ಪಂಕ್ತಿ, ನಂತರ ಇತರೆಯವರ ಪಂಕ್ತಿ, ಹೀಗಾದರೂ ಮಾಡಿ” ಎಂದು ಕೇಳಿಕೊಂಡರು. ಮತ್ತೆ ಎಲ್ಲವನ್ನೂ ಇವರಿಗೂ ಹೇಳಬೇಕಾಯಿತು.  ಯಾವ ವೀರಶೈವ ಧರ್ಮ ಜಾತಿಯತೆಯನ್ನಳಿಯಲು ಅವತರಿಸಿತೋ ಅದೇ ವೀರಶೈವ ಧರ್ಮದ ವೇದಿಕೆಯ ಮೇಲೆ ಕುಳಿತು ನಾವು ಜಾತಿಯತೆಯನ್ನು ಬೆಳೆಸುವುದಾಗಲಿ, ಮೇಲುಕೀಳುಗಳನ್ನು ಕಲ್ಪಿಸುವುದಾಗಲಿ ಎಂದಿಗೂ ಆಗುವುದಿಲ್ಲ. ಜಂಗಮ ಎಂದು ಇಂದಿನ ವಾಡಿಕೆಯ ಅರ್ಥದಲ್ಲಿ ಪುರೋಹಿತ, ಅದೊಂದು ಜಾತಿಯಲ್ಲ. ಮಾದಿಗನೂ ಪೌರೋಹಿತ್ಯ ಕಲಿತು ಪುರೋಹಿತನಾಗಬಹುದು.

ಉಂಬಲ್ಲಿ ಉಡುವಲ್ಲಿ ಕುಲವಳಿಯಿತ್ತೆಂಬರು, 
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು 
ಇವರೆಂತಹ ಭಕ್ತರೆಂಬೆ ಇವರೆಂತು ಯುಕ್ತರೆಂಬೆ
ಕುಲವನು ನೋಡದೆ ಆಚಾರವ ನೋಡಿ ಕೊಟ್ಟು ಕೊಂಬುದು ಲೇಸು 
ಕೂಡಲಸಂಗಮದೇವಾ

ಇದು ಬಸವಣ್ಣನವರ ಆದೇಶ. “ಉಣ್ಣುವಾಗ ಉಡುವಾಗ ಏಳುವಾಗ ಬೀಳುವಾಗ ಮಲಗುವಾಗ ಮುಗ್ಗರಿಸುವಾಗ “ಬಸವಾ ಬಸವಾ” ಎನ್ನುವ ನೀವು ಬಸವಣ್ಣನವರಿಗೆ ಬೆಲೆ ಕೊಡುವುದಿಲ್ಲವೆಂದರೆ ನಿಮ್ಮ ಭಕ್ತತನಕ್ಕಾದರೂ ಬೆಲೆಯೇನುಂಟು? ಸರ್ವ ಜೀವಾತ್ಮರುಗಳಿಗೆ ಲೇಸನೇ ಬಯಸುವುದೇ ಬಸವಣ್ಣನ ಧರ್ಮದ ಗುರಿ. ಇಂತಿರುವಾಗ ನಿಮ್ಮ ಅಂಧ ಸಂಪ್ರದಾಯಗಳನ್ನೂ ಅವಿಚಾರಿತನವನ್ನೂ ನಾವು ಎಂದಿಗೂ ಪುರಸ್ಕರಿಸುವವರಲ್ಲ. ನಾವು ಮಠದ ಬಲದ ಮೇಲೆ ಈ ಕಾರ್ಯ ಮಾಡುತ್ತಲೂ ಇಲ್ಲ, ಬಸವಣ್ಣನ ತತ್ವದ ಬಲದ ಮೇಲೆ ಮುನ್ನುಗ್ಗುತ್ತಿದ್ದೇವೆ. ಧರ್ಮವಿರುವುದು ಜನರನ್ನು ಜನರನ್ನಾಗಿ ಮಾಡುವುದಕ್ಕೇ ವಿನಾ ಜನರನ್ನು ದನವನ್ನಾಗಿ ಮಾಡಲು ಅಲ್ಲ”. ಇಷ್ಟೆಲ್ಲಾ ಹೇಳಿದ ಮೇಲೆ ಬಂದವರು “ಗುರುಗಳ ಅಭಿಪ್ರಾಯವೇ ಸರಿ” ಎಂದು ಎಲ್ಲಾ ವಿದ್ಯಾರ್ಥಿಗಳಿಗೂ ಹೇಳಿ ಕ್ಷಮೆ ಕೋರಿಕೊಂಡು ಹೋದರು.

ಈ ರಾಷ್ಟ್ರದಲ್ಲಿ ಜಾತಿಯತೆಯು ಒಂದು ಪೆಡಂಭೂತ, ಅದು ಅಳಿಯುತ್ತದೆಂದು ನಮಗೆ ನಂಬಿಕೆ ಇಲ್ಲ. ಈಗ ದೇವರ ಗುಡಿಗೂ, ವ್ಯಾಪಾರದ ಅಂಗಡಿಗೂ ರಾಜಕೀಯ ಸ್ಥಾನಮಾನಗಳಿಗೂ ಜಾತಿ ಬೇಕು. ಜಾತಿಗಾಗಿ ಗಿರಾಕಿಗಳ ಸಂಖ್ಯೆ ಕೋಟಿಕೋಟಿಯಾಗಿ ಬೆಳೆಯುತ್ತಿದೆ. ಗೌತಮಬುದ್ಧ ಹೇಳಿದ-ಹೋದ, ಬಸವಣ್ಣ ಹೇಳಿದ-ಹೋದ. ಮರುಳಸಿದ್ಧ ನಡೆದ-ಹೋದ. ಗಾಂಧೀಜಿ ನಡೆದರು-ಹೋದರು. ಇಂದು ಬಸವಣ್ಣನ ಅನುಯಾಯಿಗಳಿಗೂ, ಗಾಂಧೀಜಿಯ ಭಕ್ತರಿಗೂ ತಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಜಾತಿಯನ್ನು ಬಿಟ್ಟು ಬೇರೆ ಬಂಡವಾಳವೇ ಇಲ್ಲ.

-ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

ದಿಟ್ಟಹಜ್ಜೆ ಧೀರಕ್ರಮ  #187