ಪ್ರಧಾನ ಕಾರ್ಯದರ್ಶಿ ದಿವಂಗತ ಎಸ್.ಬಿ ರಂಗನಾಥ್ ರವರು ಮರಣದ ಮುನ್ನಾ ದಿನ ಸ್ವಹಸ್ತಾಕ್ಷರಗಳಲ್ಲಿ ಬರೆದಿಟ್ಟ ಭಕ್ತಿಯ ಉಯಿಲು ಪತ್ರ!

  •  
  •  
  •  
  •  
  •    Views  

 

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಎಸ್ ಬಿ ರಂಗನಾಥ್ ರವರು ಇದೇ ಆಗಸ್ಟ್ 14ರಂದು ಮಧ್ಯರಾತ್ರಿ ವಿಧಿವಶರಾದರು. ಪರಮಪೂಜ್ಯ ಶ್ರೀ ಜಗದ್ಗುರುಗಳವರ ಬಗ್ಗೆ ಅಪಾರ ಗೌರವಾದರಗಳನ್ನು ಹೊಂದಿದ್ದ ಅವರು ಕೆಲವೇ ದಿನಗಳ ಹಿಂದೆ ಪ್ರಜಾವಾಣಿ ಪತ್ರಿಕೆಗೆಂದು ಸ್ವಸ್ತಾಕ್ಷರಗಳಲ್ಲಿ ಬರೆದಿಟ್ಟಿದ್ದ ಅಪ್ರಕಟಿತ ಪತ್ರ ಅವರ ಹಿರಿಯ ಮಗಳಾದ ಶ್ರೀಮತಿ ಗೀತಾಳ ಕೈಗೆ ದೊರೆತಿದ್ದು ಮಠಕ್ಕೆ ನಿನ್ನೆ ಕಳುಹಿಸಿರುತ್ತಾರೆ. ಅದನ್ನು ಈ ಕೆಳಗೆ ಕೊಡಲಾಗಿದೆ. 

ತರಳಬಾಳು ಶ್ರೀಗಳ ಬಗ್ಗೆ ಮಾಜಿ ಸಚಿವರ ಹೇಳಿಕೆ ತೀರಾ ಹಾಸ್ಯಾಸ್ಪದ ಹಾಗೂ ದುರದೃಷ್ಟಕರ

ಇಂದಿನ (ದಿ. 9.8.24) ರ  ಪ್ರಜಾವಾಣಿಯಲ್ಲಿ ಮಾಜಿ ಸಚಿವ ಬಿ ಸಿ ಪಾಟೀಲ್ ಸಿರಿಗೆರೆ ಸ್ವಾಮೀಜಿಯವರ ವಿರುದ್ಧ ಮಾನ ನಷ್ಟ ಮೊಕದ್ದಮೆ  ಹೂಡುವುದಾಗಿ (ಬೆಂಗಳೂರು) ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದಾಗಿ ವರದಿಯಾಗಿದೆ. ಅವರ ಈ ಹೇಳಿಕೆ ತೀರಾ   ಹಾಸ್ಯಾಸ್ಪದ ಹಾಗೂ ದುರದೃಷ್ಟಕರ.

ನಾಡಿನ ಧಾರ್ಮಿಕ ಶೈಕ್ಷಣಿಕ ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ವಚನ ಸಾಹಿತ್ಯ ಪ್ರಸಾರ ಕ್ಷೇತ್ರಗಳಲ್ಲಿ  ಗಣನೀಯ ಸೇವೆ ಸಲ್ಲಿಸುತ್ತಿರುವ 800 ವರ್ಷಗಳ ದೀರ್ಘ ಇತಿಹಾಸ ಉಳ್ಳ ತರಳಬಾಳು ಜಗದ್ಗುರು ಬೃಹನ್ಮಠದ ಬಗ್ಗೆ ಇತ್ತೀಚೆಗೆ ಇಂತಹವರಿಂದ ದುರುದ್ದೇಶ ಪೂರಿತ ಹೇಳಿಕೆಗಳು ಬರುತ್ತಿರುವುದು ಕಳವಳಕಾರಿ . 

ಇವರಲ್ಲಿ ಬಹುತೇಕರು ಶ್ರೀ ಮಠದ ಉಪ್ಪು ತಿಂದವರು, ಶ್ರೀ ಮಠದ ಬೆಂಗಳೂರು ಕೇಂದ್ರದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದವರು, ರಾಜಕೀಯ ಕ್ಷೇತ್ರದಲ್ಲಿ ಸ್ಥಾನ ಗಳಿಸಲು ಸ್ವಾಮೀಜಿಯವರ ಶಿಫಾರಸು ಗಳಿಸಲು  ಯತ್ನಿಸಿ ವಿಫಲರಾದವರು, ಉತ್ತರಾಧಿಕಾರದ ಮೇಲೆ ಕಣ್ಣಿಟ್ಟವರು ಸೇರಿದ್ದಾರೆ. ಇಂಥ ಕೆಲವರು ಈಚೆಗೆ ದಾವಣಗೆರೆ ರೆಸಾರ್ಟ್ ನಲ್ಲಿ ಮಠದ ವಿರುದ್ಧ  ಷಡ್ಯಂತ್ರ ರೂಪಿಸಲು ವಿಫಲ  ಯತ್ನ ನಡೆಸಿ ಮಠದ ಬಹುಸಂಖ್ಯಾತ ಶಿಷ್ಯ ಸಮುದಾಯದ ಕೆಂಗಣ್ಣಿಗೆ ಗುರಿಯಾದರು. ಅವರಲ್ಲಿ  ಬಿ ಸಿ ಪಾಟೀಲ್ ಅವರೂ  ಇದ್ದದ್ದು ಗಮನಾರ್ಹ.

ಚಿತ್ರದುರ್ಗ ದಾವಣಗೆರೆ ಶಿವಮೊಗ್ಗ ಚಿಕ್ಕಮಗಳೂರು ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ನೂರಾರು ಕೆರೆಗಳನ್ನು ತುಂಬಿಸಲು  ಹಗಲಿರುಳು ಶ್ರಮಿಸುತ್ತಿರುವ ಶ್ರೀ ತರಳಬಾಳು ಜಗದ್ಗುರುಗಳು ರೈತರ ಆಶಾಕಿರಣ ಆಗಿದ್ದಾರೆ. ಅವರು ರೂಪಿಸಿರುವ ತಂತ್ರಾಂಶ ದಿಂದ ಕೃಷಿಕರಿಗೆ ಬೆಳೆ ಪರಿಹಾರ ಶೀಘ್ರವಾಗಿ ದೊರೆಯುವಂತಾಗಿದೆ. ಬಹುಶೃತ ವಿದ್ವಾಂಸರಾಗಿರುವ ಶ್ರೀಗಳು ರೂಪಿಸಿದ ಪಾಣಿನಿಯ ಗಣಕಾಷ್ಠಾಧ್ಕಾಯಿ,  22 ಸಾವಿರ ವಚನಗಳನ್ನು ಮೊಬೈಲ್ ಆಪ್ ಗೆ ಅಳವಡಿಸಿದ್ದು ವಿದ್ವಜ್ಜನರ ಗಮನ ಸೆಳೆದಿದೆ. ಗ್ರಾಮೀಣರಿಗೆ ಸಾಪ್ತಾಹಿಕವಾಗಿ ಉಚಿತ ನ್ಯಾಯ ಒದಗಿಸುವ ಶ್ರೀಗಳವರು ವಿಶ್ವಾದ್ಯಂತ ಸುಪರಿಚಿತರು .

ಶ್ರೀ ಶ್ರೀ ಗಳವರ  ವಯೋನಿವೃತ್ತಿ ಬಗ್ಗೆ ಬೈಲಾದಲ್ಲಿ ಉಲ್ಲೇಖವಿಲ್ಲ. 1990ರಲ್ಲಿ  ಹಿರಿಯ ಶ್ರೀಗಳವರು, ಎಸ್ಎಸ್.ವಿ ಸಂಘದ ಮತ್ತು ಸಮಾಜದ  ಮುಖಂಡರು ಪರಿಶೀಲಿಸಿ ಸಹಿ ಮಾಡಿದ ಟ್ರಸ್ಟ್ ಡೀಡ್ ಕೂಡ ಪಾರದರ್ಶಕವಾಗಿದೆ. ಇದರಲ್ಲಿ ಶ್ರೀಮಠದ ನಿಯಂತ್ರಣಾಧಿಕಾರ ಇರುವುದು ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘಕ್ಕೆ ಮಾತ್ರ ಎಂದೂ ಸ್ವಾಮೀಜಿ ಅವರಿಗೆ  ಪಾಟೀಲರು ಆಪಾದಿಸಿರುವಂತೆ ಪರಮಾಧಿಕಾರ ಇಲ್ಲವೆಂದೂ ಸ್ಪಷ್ಟವಾಗಿದೆ ಎಂದು ಸ್ವಾಮೀಜಿಯವರೇ ವಿಶದಪಡಿಸಿದ್ದಾರೆ. 

ಅಲ್ಲದೆ ಪಾಟೀಲರ ಗುಂಪಿನವರೇ  ನ್ಯಾಯಾಲಯಕ್ಕೆ ಉತ್ತರಾಧಿಕಾರಿ ನೇಮಿಸದಂತೆ ದೂರು ದಾಖಲಿಸುತ್ತಾರೆ. ಹೀಗಿದ್ದೂ ಸ್ವಾಮೀಜಿಯವರು ಉತ್ತರಾಧಿಕಾರಿ ನೇಮಿಸಿಲ್ಲವೆಂದು ಆಕ್ಷೇಪಿಸುತ್ತಿರುವುದು ಎಷ್ಟು ಸರಿ ?

ಎಸ್ ಎಸ್ ವಿ ಸಂಘದ  ಬೈಲಾ, ಆದಾಯ ತೆರಿಗೆ ವಿನಾಯಿತಿ ಪಡೆಯಲು ರಚಿಸಿದ ಶ್ರೀಮಠದ ಟ್ರಸ್ಟ್ ಡೀಡ್ ಎಲ್ಲವನ್ನೂ ಮಠದ ವೆಬ್ ಸೈಟಿನಲ್ಲಿ   ನೋಡಿ ಖಚಿತ ಪಡಿಸಿಕೊಳ್ಳಬಹುದು.

- ಎಸ್ ಬಿ ರಂಗನಾಥ್,   ಸಿದ್ಧನಮಠ