ವಿಶ‍್ವಗುರು ಬಸವಣ್ಣನವರ ವಚನಗಳನ್ನು ಇಂಗ್ಲೀಷ್, ತೆಲುಗು ಭಾಷೆಗೆ ಭಾಷಾಂತರ ಮಾಡಿಸಿದವರು : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

  •  
  •  
  •  
  •  
  •    Views  

ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #102

ಬಸವೇಶ್ವರ ವಚನಗಳ ಭಾಷಾಂತರ :

ಅರಸೀಕೆರೆಯಲ್ಲಿ 1964ರಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಸುಸಂದರ್ಭದಲ್ಲಿ ಶರಣ ಎಸ್.ಎಂ.ಅಂಗಡಿಯವರು ಅದರ ಕಾರ್ಯಕಲಾಪಗಳಲ್ಲಿ ಭಾಷಣಕಾರರಾಗಿದ್ದರು. ಅವರೇ ಬಸವೇಶ್ವರರ ವಚನಗಳನ್ನು ಇಂಗ್ಲೀಷ್ ಗೆ ಭಾಷಾಂತರ ಮಾಡಿಸಬೇಕೆಂಬ ಪ್ರೇರಣೆಯಿತ್ತವರು. ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಮೆನೇಜಸ್ ರವರ ನೆರವು ಪಡೆದು ಭಾಷಾಂತರಿಸಿದರು. ಒಟ್ಟು 35 ಸಾವಿರ ರೂ, ಖರ್ಚಾಯಿತು. ಈ ಕಾರ್ಯದಲ್ಲಿ ಕೆಲವು ಜನ ತಲಾ 10 ರೂ. ನಂತೆ ನೆರವು ನೀಡಿದರು. ಇದೂ ಸಹ 10ಸಾವಿರ ರೂ. ಸಂಗ್ರಹವಾಗಿರಬಹುದು. ಆದರೆ ಬಾಕಿ 25ಸಾವಿರ ರೂ. ಗಳನ್ನು ಶ್ರೀಮಠವೇ ಹಾಕಿ ಅದನ್ನು ಪೂರ್ಣಗೊಳಿಸಲಾಯಿತು. ಅದಕ್ಕೆ ಪ್ರಸ್ತಾವನೆ ಬರೆಯುವ ಹೊಣೆ ಎಸ್.ಎಂ.ಅಂಗಡಿಯವರಿಗಿತ್ತು. ಅಷ್ಟರಲ್ಲಾಗಲೇ ಅವರ ಮನಸ್ಸು ವಿಕೃತಗೊಂಡಂತೆ ಕಂಡಿತು. ಬರೆಯಲು ಮುಂದಾಗಲಿಲ್ಲ. ಆಗ ನಾವು ಈ ಸಮಸ್ಯೆಯನ್ನು ಶರಣ ಎಚ್.ದೇವೀರಪ್ಪ ಮತ್ತು ಶರಣ ಎಚ್.ತಿಪ್ಪೇರುದ್ರಸ್ವಾಮಿ ಇವರ ಮುಂದಿಟ್ಟೆವು. ಅವರು, “ನಾವಾರೂ ಬರೆಯುವುದು ಸರಿಯಲ್ಲ. ತಾವೇ ಬರೆಯಬೇಕು, ಅದರ ಇಂಗ್ಲೀಷ್ ಭಾಷಾಂತರವನ್ನು ನಾವು ನಮ್ಮ ಸ್ನೇಹಿತರ ಸಹಕಾರದಿಂದ ಮಾಡುತ್ತೇವೆ” ಎಂದು ನಮಗೆ ಹೇಳಿದರು. ಅದರಂತೆ ನಾವು ಕನ್ನಡದಲ್ಲಿ ಬಸವಣ್ಣನವರ ನಿಜ ಸ್ವರೂಪವನ್ನೂ, ಸಿದ್ದಾಂತವನ್ನೂ ಅವರ ವಚನ ಗಳ ಆಧಾರದ ಮೇಲೆ ಬರೆದೆವು. ದೇವೀರಪ್ಪನವರ ನೇತೃತ್ವದಲ್ಲಿ ಅವರ ಅನೇಕ ಸ್ನೇಹಿತರು ಸೇರಿ ಇಂಗ್ಲೀಷ್ ಗೆ ತರ್ಜುಮೆ ಮಾಡಿ ಅಚ್ಚು ಹಾಕಿಸಿದರು. ಅನಂತರ 1963 ರಲ್ಲಿ ಚಿತ್ರದುರ್ಗದಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಆಗಿನ ಮೈಸೂರು ಶ್ರೀ ಮನ್ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ರವರ ಅಮೃತ ಹಸ್ತದಿಂದ ಆ ಗ್ರಂಥದ ಕೆಲವು ಭಾಗ ಬಿಡುಗಡೆಯಾಯಿತು. 

ನಂತರ ಹಿಂದಿಗೂ ಭಾಷಾಂತರ ಮಾಡಿಸಬೇಕೆಂಬ ಕುತೂಹಲ ನಮಗಿತ್ತು. ಮೈಸೂರು ಯೂನಿವರ್ಸಿಟಿಯಲ್ಲಿ ಹಿಂದೀ ಪ್ರೊಫೆಸರಾಗಿರುವ ಶರಣ ಎಂ.ರಾಜಶೇಖರಯ್ಯನವರು ನಮ್ಮಲ್ಲಿ ಪ್ರಸ್ತಾಪಿಸಿದರು. ನಾವು ಇದೊಂದು ಸುಯೋಗವೆಂದು ತಿಳಿದು, ನಮ್ಮಲ್ಲಿ ಹಣವಿಲ್ಲದಿದ್ದರೂ, ಬ್ಯಾಂಕ್ನಿಂದ ಒಂದು ಲಕ್ಷ ರೂ. ಸಾಲ ತೆಗೆದುಕೊಟ್ಟೆವು. ಈ ಹಣವನ್ನು ಯೂನಿವರ್ಸಿಟಿಯಲ್ಲಿ ಇಡಬೇಕೆಂತಲೂ ಅದರ ಬಡ್ಡಿಯಿಂದ ಯೂನಿವರ್ಸಿಟಿಯವರು ವಚನ ಸಾಹಿತ್ಯವನ್ನು ಹಿಂದಿಗೆ ತರ್ಜುಮೆ ಮಾಡಿಸಬೇಕೆಂತಲೂ ಕರಾರು ಮಾಡಿಕೊಂಡೆವು. ಆದರೆ ಈಗ 4-5 ವರ್ಷಗಳಾದರೂ ಆ ಹಣ ಯೂನಿವರ್ಸಿಟಿಯನ್ನೇ ಮುಟ್ಟಿಲ್ಲ. ರಾಜಶೇಖರಯ್ಯನವರಲ್ಲೇ ಇದೆಯೆಂದು ಅವರು ಹೇಳುತ್ತಿದ್ದಾರೆ. ನಮ್ಮಂತೆಯೇ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರೂ ಒಂದು ಲಕ್ಷ ರೂ. ಕೊಟ್ಟಿದ್ದಾರೆ. ಅದಕ್ಕೂ ಇದೇ ಗತಿಯಾಗಿದೆ. ಯೂನಿವರ್ಸಿಟಿಯ ಮೇಲೆ ಈಗ ಒತ್ತಾಯ ತಂದಿದ್ದೇವೆ.* ವೀರಶೈವ ಸಮಾಜ ಸುಧಾರಕರಲ್ಲಿ ಮತ್ತು ಮುಖಂಡರಲ್ಲಿ ಇರುವ “ಕಲ್ಯಾಣ” ಗುಣಗಳು ಇವು. “ತಾವೂ ಮಾಡರು, ಮಾಡುವವರನ್ನು ನೋಡಿಯೂ ಸೈರಿಸರು” ಎಂಬ ಬಸವಣ್ಣನವರ ಮಾತು ಇಲ್ಲಿಗೆ ಅನ್ವಯಿಸುತ್ತದೆ.

ಇದೇ ಸಂದರ್ಭದಲ್ಲಿ ಶರಣ ಬಾಡಾಲು ರಾಮಯ್ಯ ಎಂಬ ತೆಲುಗು ಪ್ರೊಫೆ ಸರ್ ಅವರ ಪರಿಚಯ ನಮಗೆ ಮೈಸೂರಲ್ಲಿ, ನಮ್ಮ ಆಪ್ತರಾದ ಶರಣ ಎಂ.ಜಿ.ನಂಜುಂಡಾರಾಧ್ಯರ ಮೂಲಕ ಆಯಿತು. ಆಗ ಇವರು ಬಸವೇಶ್ವರ ವಚನಗಳನ್ನು ತೆಲುಗಿಗೆ ಭಾಷಾಂತರಿಸಿದ್ದಾರೆಂದು ತಿಳಿಯಿತು. 5 ಸಾವಿರ ರೂ. ಖರ್ಚಾಗುತ್ತದೆ. ತಾವು ಇದಕ್ಕೆ ಮನಸ್ಸು ಮಾಡಬೇಕೆಂದು ನಂಜುಂಡಾರಾಧ್ಯರು ಹೇಳಿದರು. ನಾವು ಒಪ್ಪಿಕೊಂಡೆವು. ಬಸವಣ್ಣನವರ ಜೀವಿತ, ವ್ಯಕ್ತಿತ್ವ, ಜೀವನ ಕಾಲ ಇವುಗಳ ಬಗ್ಗೆ ರಾಮಯ್ಯನವರ ಅಭಿಪ್ರಾಯವೇ ಬೇರೆ ಇದೆ. 12ನೇ ಶತಮಾನದ ಕೊನೆಯವರೆಗೂ ಬಿಜ್ಜಳನು ಬದುಕಿದ್ದನೆಂದು ಅವರು ಆಧಾರ ಕೊಡುತ್ತಾರೆ. 1167 ರಲ್ಲಿ ಬಸವಣ್ಣ ತೀರಿಲ್ಲ. ಬಿಜ್ಜಳ ರಾಜ್ಯವನ್ನು ಬಿಟ್ಟು ತನ್ನ ಮಗನಿಗೆ ವಹಿಸಿ ಕೊಟ್ಟಿದ್ದಾನೆ. ಧಾರ್ಮಿಕ ಕ್ರಾಂತಿಯೆನ್ನಿ ಅಥವಾ ಅದನ್ನು ರಾಜಕೀಯ ಕ್ರಾಂತಿಯೆನ್ನಿ, ಅದು ನಡೆದದ್ದು 1186 ಅಥವಾ 1186 ರಲ್ಲಿ ಎಂದು ಹೇಳುತ್ತಾರೆ. ಬಿಜ್ಜಳನ ಆಡಳಿತವು ಪುನಃ ಚಾಲುಕ್ಯರ ಕೈ ಸೇರಿದ್ದು ಈ ಕಾಲದಲ್ಲಿಯೇ ಎನ್ನುತ್ತಾರೆ. ಇದಕ್ಕೆ ಅನೇಕ ವಚನಗಳ ಆಧಾರ ಕೊಡುತ್ತಾರೆ. ರಾಮಯ್ಯನವರು ತುಂಬಾ ನಿಷ್ಕಪಟ ಸ್ವಭಾವದವರು. ಈ ಪುಸ್ತಕದ ಪ್ರಕಟಣೆಗೆ ಕೈ ಹಾಕುವವರೆಗೂ ಲೆಕ್ಚರರ್ ಆಗಿಯೇ ಇದ್ದರು. ಮುದ್ರಣ ಕೆಲಸ ಮುಗಿಯುವುದರಲ್ಲಿ ರೀಡರ್ ಆದರು. ನಮ್ಮಿಂದ ಯಾವ ಪ್ರತಿಫಲವನ್ನೂ ಅವರು ಬಯಸಲಿಲ್ಲ. ತಾವೇ ಸಂಬಳವಿಲ್ಲದ ರಜಾ ಪಡೆದು ಮದರಾಸಿನಲ್ಲಿದ್ದು ತೆಲುಗಿಗೆ ಅಚ್ಚು ಹಾಕಿಸಿದರು. ನಮ್ಮಿಂದ ಅವರಿಗೆ ಆದದ್ದು ಕೇವಲ ಒಂದೇ ಒಂದು ಸಹಾಯ. ಅವರ ಮಗನಿಗೆ ಸಿಂಡಿಕೇಟ್ ಬ್ಯಾಂಕ್ನಲ್ಲಿ ಕ್ಲರ್ಕ್ ಕೆಲಸ ಕೊಡಿಸಿದ್ದು. ಅವರು ಅದನ್ನು ಬಯಸಿರಲಿಲ್ಲ.

-ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

ದಿಟ್ಟಹಜ್ಜೆ ಧೀರಕ್ರಮ  #268