ವಿದ್ಯಾರ್ಥಿಗಳ ಶ್ರಮದಾನದಿಂದ ಕಟ್ಟಡ ನಿರ್ಮಾಣ : ಶ್ರೀ ಶಿವಕುಮಾರ ಶ್ರೀಗಳವರಿಂದ ಪ್ರೋತ್ಸಾಹ, ಮಾರ್ಗದರ್ಶನ
ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #103
ವಿದ್ಯಾರ್ಥಿಗಳ ಶ್ರಮದಾನದಿಂದ 1946 ರಲ್ಲಿ ಕಟ್ಟಡ ನಿರ್ಮಾಣ:
ನಮಗೂ ವಿದ್ಯಾರ್ಥಿಗಳಿಗೂ ಉತ್ಸಾಹ ಹೆಚ್ಚಿತು. ಪ್ರತಿನಿತ್ಯ ಬೆಳ್ಳಿಗ್ಗೆ 7ಕ್ಕೆ ಕೆಲಸ ಪ್ರಾರಂಭ, ಮಧ್ಯಾಹ್ನ 12ಕ್ಕೆ ಕೆಲಸ ಮುಕ್ತಾಯ. ನಂತರ ಊಟ. ಮತ್ತೆ 3 ಘಂಟೆಗೆ ಕೆಲಸ ಪ್ರಾರಂಭವಾಗಿ ಸಂಜೆ 7ಕ್ಕೆ ಮುಕ್ತಾಯವಾಗುತ್ತಿತ್ತು. ಪ್ರತಿನಿತ್ಯ ಕೆಲಸ ಮುಗಿದ ಕೂಡಲೇ ನಾಲ್ಕಾರು ಹಳ್ಳಿ ತಿರುಗಿ ವಿದ್ಯಾರ್ಥಿಗಳ ಊಟಕ್ಕೆ ದವಸ ಸಂಗ್ರಹಿಸುತ್ತಿದ್ದೆವು, ಕೆಲಸದ ಕಾಲದಲ್ಲಿ ಬೆಳಗಿನ 6-30 ಕ್ಕೆ ಬೆಳಗಿನ ಉಪಾಹಾರ. 12-30 ಕ್ಕೆ ಊಟ, 2ಕ್ಕೆ ಬೇಸಗೆಯ ಹಣ್ಣು (ಕಲ್ಲಂಗಡಿ, ಕರಬೂಜ, ಸಿದ್ದೋಟಿ), ಕಬ್ಬು, 5ಕ್ಕೆ ಮತ್ತೆ ಉಪಹಾರ, ಯಾವನೇ ವಿದ್ಯಾರ್ಥಿ ಒಂದು ನಿಮಿಷ ತಡವಾದರೂ ಅವನನ್ನು ಕೆಲಸದಿಂದ ಹೊರ ಹಾಕುತ್ತಿದ್ದೆವು. ಸುಮಾರು 300-400 ಜನ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದರೂ ಯಾರನ್ನೂ ಹೊರಹಾಕುವ ಪ್ರಸಂಗ ಬರಲಿಲ್ಲ. ಗಾರೆ ಅರೆಯುವುದು, ಬಾವಿಯಿಂದ ನೀರೆತ್ತುವುದು, ಕಲ್ಲು ಹೊತ್ತುಕೊಂಡು ಹೋಗಿ ತರಗಾರರಿಗೆ ಕೊಡುವುದು. ಅಡುಗೆ ವ್ಯವಸ್ಥೆ ಮಾಡುವುದು, ಲಾರಿಯಲ್ಲಿ ಅಡವಿಯಿಂದ ಸೈಜುಕಲ್ಲು, ಮರಳು ತರುವುದು. ಈ ಮುಂತಾದ ಎಲ್ಲಾ ಕೆಲಸಗಳನ್ನೂ ನಮ್ಮ ವಿದ್ಯಾರ್ಥಿಗಳೇ ಮಾಡುತ್ತಿದ್ದರು. ಇದು ಇಡೀ ರಾಷ್ಟ್ರದಲ್ಲಿಯೇ ಒಂದು ಕ್ರಾಂತಿಯನ್ನುಂಟುಮಾಡಿತು.
ಈಗಾಗಲೇ ಕಾಂಗ್ರೆಸನ್ನು ವಿರೋಧಿಸಿ ಮೂಲೆಗೆ ಕುಳಿತಿದ್ದ ಸಿದ್ಧವೀರಪ್ಪನವರನ್ನು ಕಾಂಗ್ರೆಸ್ ಎಚ್.ಸಿದ್ಧಯ್ಯನವರನ್ನೂ ಕೆ.ಸಿ.ರೆಡ್ಡಿಯವರನ್ನೂ ಸಾಹುಕಾರ್ ಚನ್ನಯ್ಯನವರನ್ನೂ ಕೆ.ಹನುಮಂತಯ್ಯನವರನ್ನೂ ಬಳಸಿಕೊಂಡು ಭಾರತ ರಾಜ್ಯಾಂಗ ಸಭೆಯ ಸದಸ್ಯರನ್ನಾಗಿ ಮಾಡಲಾಗಿತ್ತು. ಆಗ ಆರ್.ಆರ್.ದಿವಾಕರವರು ಕೇಂದ್ರದಲ್ಲಿ ಮಂತ್ರಿಗಳಾಗಿದ್ದರು. ಪತ್ರಿಕೆಗಳಲ್ಲಿ ಬರುತ್ತಿದ್ದ ಸುದ್ದಿಗಳನ್ನು ಕೇಳಿ, ದಿವಾಕರರು ಸಿದ್ಧವೀರಪ್ಪನವರಲ್ಲಿ ಸಮಾಲೋಚಿಸಿ ಈ ಶ್ರಮದಾನ ಶಿಕ್ಷಣವು ವಿದ್ಯಾರ್ಥಿಗಳಿಗೆ ಅತ್ಯಾವಶ್ಯಕವಾದುದೆಂದು ಹೇಳಿ ಈ ಕೆಲಸಕಾರ್ಯಗಳ ಎಲ್ಲಾ ಚಟುವಟಿಕೆಗಳನ್ನೂ ವಾರ್ತಾ ಚಿತ್ರವಾಗಿ ಚಿತ್ರಿಸಿಕೊಂಡು ರಾಷ್ಟ್ರಾದ್ಯಂತ ಪ್ರದರ್ಶಿಸಿದರು. ಸಿರಿಗೆರೆಯ ವಿದ್ಯಾರ್ಥಿಗಳೆಂದರೆ ಎಲ್ಲೆಲ್ಲ ಪ್ರಾಶಸ್ಯ, ಹೊಗಳಿಕೆಯೇ ಹೊಗಳಿಕೆ. 300-400 ಜನ ವಿದ್ಯಾರ್ಥಿಗಳಲ್ಲಿ ಶಿಸ್ತು ಮೀರಿದವರನ್ನು ನಾವು ಯಾರನ್ನೂ ಕಾಣಲಿಲ್ಲ. ಆಗ ವಿದ್ಯಾಭ್ಯಾಸದಲ್ಲೂ ಸಹ ವಿದ್ಯಾರ್ಥಿಗಳ ಮಟ್ಟ ತುಂಬಾ ಮೆಚ್ಚಿಕೆಯಾಗಿತ್ತು. ಪ್ರತಿ ವರ್ಷ 10 ರಿಂದ 15 ರವರೆಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದರು. ಹರಿಜನರಿಂದ ಹಿಡಿದು ಎಲ್ಲಾ ಮತೀಯ ವಿದ್ಯಾರ್ಥಿಗಳಿಗೂ ಊಟ ವಸತಿ ಮುಂತಾದ ಎಲ್ಲಾ ನಡವಳಿಕೆಗಳಲ್ಲೂ, ತಾರತಮ್ಯಕ್ಕೆ ಅವಕಾಶವೇ ಇರಲಿಲ್ಲ.
ಸಿರಿಗೆರೆಯ ಕೆರೆಯಲ್ಲಿ ಬೇಸಿಗೆಯಲ್ಲಿ ನೀರು ಇಲ್ಲದಂತಾದಾಗ ಕಲ್ಲಂಗಡಿ, ಕರುಬೂಜ, ಸಿದೋಟಿ ಮುಂತಾದ ಹಣ್ಣುಗಳನ್ನು ಬೆಳೆಯುವುದು ಪದ್ಧತಿ, ಗಾಡಿಗಟ್ಟಲೆ ಹಣ್ಣು ತರಿಸುತ್ತಿದ್ದೆವು. ಡಾಕ್ಟರುಗಳು, ಹೀಗೆ ವಿಶೇಷವಾಗಿ ಹಣ್ಣು ಕೊಡಬಾರದು, ಅಕಸ್ಮಾತ್ ವಾಂತಿ, ಭೇದಿ ಪ್ರಾರಂಭವಾಗಬಹುದು ಎಂದು ನಮಗೆ ಸಲಹೆ ಮಾಡುತಿದ್ದರು. ನಾವು, ಪರವಾಗಿಲ್ಲ, ಏನೂ ಆಗುವುದಿಲ್ಲ. ಇವರೆಲ್ಲಾ ದೇವರ ಮಕ್ಕಳು, ದೇವರು ಕಾಪಾಡುತ್ತಾನೆ ಎಂದು ಹೇಳುತ್ತಿದ್ದೆವು. ಇದರ ಜೊತೆಗೆ ವಾರಕ್ಕೊಮ್ಮೆ ವಿಶೇಷ ಊಟ, ಪ್ರತಿದಿನ 9 ಘಂಟೆ ಕಾಲ ಕೆಲಸ ಮಾಡಿದ ಮಕ್ಕಳು ಊಟ ಮಾಡುತಿದ್ದುದನ್ನು ನೋಡಿದರೆ ಒಂದಕ್ಕೆ ಹತ್ತು ಪಾಲು. ಮಾವಿನಹಣ್ಣಿನ ಕಾಲದಲ್ಲಿ ಹೋಳಿಗೆ ಸೀಕರಣೆ ಮಾಡಿಸಿದಾಗ ಒಬ್ಬೊಬ್ಬರೂ 10-12 ಹೋಳಿಗೆ ಊಟ ಮಾಡುತ್ತಿದ್ದರು. ಯಾರಿಗೂ ಯಾವ ರೋಗವೂ ಬರುತ್ತಿರಲಿಲ್ಲ. ಇದಕ್ಕೆ ಕಾರಣ ದೈಹಿಕ ಶ್ರಮ. ಇಂತು ಸರಿಯಾಗಿ ಕಟ್ಟಡವು ಒಂದಂತಸ್ತು ಪೂರ್ತಿಯಾಯಿತು, ಒಂದು ಲಕ್ಷ ನಲವತ್ತು ಸಾವಿರ ರೂ. ನ ಅಂದಾಜು ಕೆಲಸಕ್ಕೆ 50ಸಾವಿರ ರೂ. ಮಾತ್ರ ಸರ್ಕಾರದಿಂದ ಬಂದುದು. ಮತ್ತೆ ಗರ್ಜೆ ಮರುಳಪ್ಪನವರು ಅಂದಾಜಿನ ಅರ್ಧ ಮೊಬಲಗನ್ನು ಕೊಡಬೇಕೆಂದು ವಾದಿಸಿದರು. ಆಗ ಟಿ. ಮರಿಯಪ್ಪನವರು ಹಣಕಾಸಿನ ಮಂತ್ರಿಗಳು. ಮತ್ತೆ 20,000-00 ರೂ ಸರ್ಕಾರದಿಂದ ಮಂಜೂರಾಯಿತು ಒಟ್ಟು ಒಂದು ಲಕ್ಷ ನಲವತ್ತು ಸಾವಿರ ರೂ, ಕಟ್ಟಡವು ಕೇವಲ ಒಂದೇ ಲಕ್ಷದಲ್ಲಿ ಪೂರ್ತಿಯಾಯಿತು, ಕೂಲಿಕಾರರು ಒಂದು ವಾರ ಮಾಡುವ ಕೆಲಸವನ್ನು ವಿದ್ಯಾರ್ಥಿ ಗಳು ಕೇವಲ ಎರಡೇ ದಿನದಲ್ಲಿ ಪೂರೈಸುತ್ತಿದ್ದರು.
ಆಗ ಸಿಮೆಂಟ್ ಬಳಸುತ್ತಿರಲಿಲ್ಲ. ಗಾರೆ ಬಳಸುತ್ತಿದ್ದರು, ಗಾರೆ ಅರೆಯುವವರ ಮತ್ತು ಗಾರೆಯನ್ನು ಕಟ್ಟಡಕ್ಕೆ ತೆಗೆದುಕೊಂಡು ಹೋಗುವವರ ಕೈಗಳು ಪೋಟು ಬಿದ್ದು ಅವಕ್ಕೆಲ್ಲಾ ಅರಿಸಿನ ಹಚ್ಚಿಕೊಂಡು ಮತ್ತೆ ಕೆಲಸ ಮಾಡುತ್ತಿದ್ದರೇ ವಿನಾ ಕೈ ಪೋಟು ಬಿದ್ದಿದೆ, ನೋವಾಗಿದೆ ಎಂದು ಯಾರೂ ಕೆಲಸ ಬಿಡುತ್ತಿರಲಿಲ್ಲ. ಒಮ್ಮೊಮ್ಮೆ ಗಾರೆ ಸಾಲದಾದಾಗ ರಾತ್ರಿಯೆಲ್ಲಾ ರೋಣು ಹೊಡೆಯವ ಪ್ರಸಂಗ ಬರುತ್ತಿತ್ತು, ಎಲ್. ಸಿದ್ದಪ್ಪನವರು ಮಂತ್ರಿಗಳಾಗಿದ್ದಾಗ ಸಿರಿಗರೆಗೆ ಎರಡು ಬೋರ್ವೆಲ್ಗಳನ್ನು ಮಂಜೂರು ಮಾಡಿಸಿದ್ದರು. ಅವರ ಕಾಲದಲ್ಲೇ ಸಿರಿಗೆರೆಗೆ ವಿದ್ಯುಚ್ಛಕ್ತಿ, ಬಂದದ್ದು. ಬೋರ್ವೆಲ್ ಎಂದರೇನೆಂಬುದೇ ನಮಗೆ ಗೊತ್ತಿರಲಿಲ್ಲ. ಈ ಎರಡರ ಪೈಕಿ ಒಂದನ್ನು ಹೈಸ್ಕೂಲು ಸೈಟಿನಲ್ಲಿ ಸೇದುವ ಬಾವಿಯನ್ನಾಗಿ ಮಾಡಿಕೊಂಡೆವು. 70 ಅಡಿ ಆಳಕ್ಕೆ ನೀರು ಬಿತ್ತು. ಹಗಲೂ ರಾತ್ರಿ 70 ಅಡಿ ಆಳದಿಂದ ನೀರೆತ್ತುವುದೆಂದರೆ ಹುಡುಗಾ ಟದ ಕೆಲಸವಲ್ಲ. ವಿದ್ಯಾರ್ಥಿಗಳು ಬೇಸರವಿಲ್ಲದೆ ಹಗಲು ರಾತ್ರಿ ನೀರು ಸರಬಾರಾಜು ಮಾಡುತ್ತಿದ್ದರು. ಗಾರೆಯನ್ನು ಕೊಳೆಹಾಕುವುದು, ಕೊಚ್ಚುವುದು ಇವಾವೂ ಸಾಮಾನ್ಯ ಕೆಲಸಗಳಲ್ಲ. ಇವೆಲ್ಲಾ ನಮಗೆ ಒಳಗೊಳಗೇ ವ್ಯಥೆಯನ್ನುಂಟುಮಾಡುತ್ತಿದ್ದರೂ ಹಣಕಾಸಿನ ಇಕ್ಕಟ್ಟಿನಿಂದ ಬೇರೊಂದು ಮಾರ್ಗವೇ ಇರಲಿಲ್ಲ. ನಾವು ಸಹ ಬೆಳಗ್ಗೆ 7 ರಿಂದ 12, ಮಧ್ಯಾಹ್ನ 3 ರಿಂದ ಸಂಜೆ 7 ಘಂಟೆವರೆಗೆ ವಿದ್ಯಾರ್ಥಿಗಳ ಮಧ್ಯೆ ಇದ್ದು ಅವರಿಗೆ ನೆರವಾಗುತ್ತಿದ್ದು ಮಾರ್ಗದರ್ಶನ ಮಾಡಬೇಕಾಗುತ್ತಿತ್ತು. ಮಠದ ತೋಟದಲ್ಲಿದ್ದ ಮಾವಿನ ಹಣ್ಣುಗಳೆಲ್ಲಾ ವಿದ್ಯಾರ್ಥಿಗಳಿಗೇ, ಒಟ್ಟಿನಲ್ಲಿ ಈ ರೀತಿಯಲ್ಲಿ ಹೈಸ್ಕೂಲಿನ ಒಂದು ಅಂತಸ್ತನ್ನು ಪೂರೈಸಿದೆವು.
-ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು
ದಿಟ್ಟಹಜ್ಜೆ ಧೀರಕ್ರಮ #180