ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅಧ್ಯಯನಶೀಲರಾಗಬೇಕು : ಹೆಚ್ ಎಸ್ ಟಿ ಸ್ವಾಮಿ

  •  
  •  
  •  
  •  
  •    Views  

ವಿದ್ಯಾರ್ಥಿಗಳು ಪರೀಕ್ಷೆಗಳು ಸಮೀಪ ಬಂದಾಗ ತರಾತುರಿಯಲ್ಲಿ ಸಿದ್ಧತೆ ನಡೆಸಿಕೊಳ್ಳದೆ ಶೈಕ್ಷಣಿಕ ವರ್ಷದ ಆರಂಭದಿಂದಲೆ ಅಧ್ಯಯನಶೀಲರಾದರೆ ಯಾವುದೇ ಆತಂಕವಿಲ್ಲದೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಹೆಚ್.ಎಸ್.ಟಿ ಸ್ವಾಮಿ ತಿಳಿಸಿದರು. 

ಸಿರಿಗೆರೆಯ ಶ್ರೀ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯಲ್ಲಿ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. 

ವಿದ್ಯಾರ್ಥಿಗಳು ಅವಧಾನವನ್ನು ಕೇಂದ್ರೀಕರಿಸುವ ಬಗೆ, ಓದುವ ಹವ್ಯಾಸ, ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆಗುವ ಪರಿಣಾಮಗಳ ಕುರಿತು ಮಾತನಾಡಿದರು. ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿನಿಗೆ ಅತ್ಯುತ್ತಮವಾದ ಟೆಲಿಸ್ಕೋಪನ್ನು ಬಹುಮಾನವಾಗಿ ನೀಡುವುದಾಗಿ ಅವರು ಘೋಷಿಸಿದರು.

ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಜಿ.ಮಂಜುನಾಥ್ ಮುಖ್ಯ ಅತಿಥಿಯಾಗಿ  ಪಾಲ್ಗೊಂಡು ವಿದ್ಯಾರ್ಥಿನಿಯರು ಸರಿಯಾದ ಅಧ್ಯಯನ ಕ್ರಮವನ್ನು ಅನುಸರಿಸಿದರೆ ಅತ್ಯುನ್ನತ ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ನೀಡಿದರು. ಈ ನಮ್ಮ ವಿದ್ಯಾಸಂಸ್ಥೆಯು ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವರದಾನದಂತಿದೆ. ಇದರ ಸದುಪಯೋಗ ಪಡಿಸಿಕೊಂಡ ಅನೇಕರು ದೇಶ ವಿದೇಶಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಇತರ ದೇಶಗಳು ಭಾರತವನ್ನು ನೋಡುವ ದೃಷ್ಟಿಕೋನ ಈಗ ತುಂಬಾ ಬದಲಾಗಿದೆ ಭಾರತಮಾತೆಯ ಮಕ್ಕಳಾದ ನಾವು ಇದಕ್ಕೆ ಹೆಮ್ಮೆ ಪಡಬೇಕು ಎಂದು ತಿಳಿಸಿದರು. ನಮ್ಮ ತಂದೆ ತಾಯಿಗಳ ಹೆಸರಿನಲ್ಲಿ ದತ್ತಿ ನಿಧಿ ನೀಡುವುದಾಗಿ ತಿಳಿಸಿದ ಅವರು ಉತ್ತಮ ಸಾಧನೆ ತೋರುವ ಮಕ್ಕಳಿಗೆ ಇದನ್ನು ನೀಡಿ ಪ್ರೋತ್ಸಾಹಿಸಿ ಎಂದರು.

ದೈಹಿಕ  ಶಿಕ್ಷಕ ಎ.ಸಿ.ಗಿರೀಶ್ ರಾಷ್ಟ್ರೀಯ ಕ್ರೀಡಾ ದಿನದ ವಿಶೇಷ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಕುರಿತು ಮಾತನಾಡಿದರು. ಕ್ರೀಡೆಗೆ ಪ್ರೇರಣೆ ನೀಡಲು ಕ್ರೀಡೆಯಲ್ಲೂ ಅತ್ಯುನ್ನತ ಸಾಧನೆ ತೋರುವ ವಿದ್ಯಾರ್ಥಿಗಳಿಗೂ ಕೂಡ ಪ್ರತಿಭಾ ಪುರಸ್ಕಾರ ನೀಡಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿ ಸ್ವತಃ ತಾವೇ 10,000 ರೂಪಾಯಿಗಳ ದತ್ತಿ ನಿಧಿಯನ್ನು ನೀಡುವುದಾಗಿ ಘೋಷಿಸಿ ಇದರಿಂದ ಪ್ರತಿವರ್ಷ ಅತ್ಯುನ್ನತ ಕ್ರೀಡಾಸಾಧನೆ ತೋರುವ ವಿದ್ಯಾರ್ಥಿನಿಗೆ ಪುರಸ್ಕಾರ ನೀಡವಂತಾಗಲಿ ಎಂದರು. 

2024ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಮೇಘ ಎಂ.ಕುಂದಗೋಳ್ ದಾನಿಗಳು ಸ್ಥಾಪಿಸಿರುವ ಪ್ರಥಮ ಸ್ಥಾನದ ಪ್ರತಿಭಾ ಪುರಸ್ಕಾರವನ್ನು ಪಡೆದರು. ಅಲ್ಲದೆ ಕನ್ನಡ ಇಂಗ್ಲಿಷ್ ಹಿಂದಿ ಗಣಿತ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಈ ಆರು ವಿಷಯಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡುವ ಬಹುಮಾನವನ್ನು ಸಹ ಮೇಘ ಎಂ.ಕುಂದಗೋಳ್ ಪಡೆದುಕೊಂಡರು. ದ್ವಿತೀಯ ಸ್ಥಾನ ಬಸಮ್ಮ ಬಣಕಾರ್, ತೃತೀಯ ಸ್ಥಾನ ಅಶ್ವೇತಾ ಕಮಲೇಕರ್ ಮತ್ತು ಸೃಷ್ಟಿ ಹಂಚಿಕೊಂಡರು. 

ವಿದ್ಯಾರ್ಥಿ ಕ್ಷೇಮಾಭಿವೃದ್ಧಿನಿಧಿಯ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್ಸೋ.ಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ವಿದ್ಯಾರ್ಥಿಸಂಘದ ಅಧ್ಯಾಪಕ ಕಾರ್ಯದರ್ಶಿ ದೀಪ.ಜಿ.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ರಶ್ಮಿ ಮತ್ತು ಸಂಗಡಿಗರು ವಚನಗೀತೆ ಹಾಡಿದರು. ಸಹನಾ.ಡಿ ಸ್ವಾಗತಿಸಿದರು, ಮಾನಸ.ಎಂ ವಂದಿಸಿದರು, ನಿಖಿತಾ.ಎನ್ಕೆ. ಮತ್ತು ಮಾನಸ.ಆರ್ ನಿರೂಪಸಿದರು. ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.