ಮನುಷ್ಯಾ ಅಂದಮ್ಯಾಲೆ ಆತ್ಮನಿವೇದನೆ ಇರ್ಬೇಕು!

  •  
  •  
  •  
  •  
  •    Views  

ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #104

ನುಷ್ಯಾ ಅಂತ ಹುಟ್ಟಿದ ಮ್ಯಾಲೆ ಯಾರಿಗೂ ಹೆದರದಿದ್ರೂ ನಮ್ಮ ಆತ್ಮಕ್ಕರ ನಾವು ಹೆದರಬೇಕು. ಯಾಕಂದ್ರ ಅದು ಐತೀ ಅಂತ ನಾವು ಅದೇವಿ. ಇಲ್ಲಾಂದ್ರ ನಾನು ಇಲ್ಲ ನೀವು ಇಲ್ಲ. ಬರೀ ಮಣ್ಣಾಗಿರೂ ದೇಹ ಅಷ್ಟ. ಅಂದಮ್ಯಾಲೆ ಈ ಆತ್ಮಕ್ಕ ಹೆದರದಿದ್ರೆ ಹೆಂಗ ಹೇಳ್ರಿ?. ಏನು, ಈ ವಾರ ಏಕಾಏಕಿ ಆತ್ಮದ ಬಗ್ಗೆ ಮಾತಾಡಾಕ ಶುರು ಮಾಡೇನಿ ಅನ್ಕೋಳ್ಳಾಕ ಹತ್ತಿರಬೇಕು!. ಆತ್ಮದ ಬಗ್ಗೆ ಉಪದೇಶ ಮಾಡುವಷ್ಟು ದೊಡ್ಡವ ನಾನಲ್ಲ. ಆದ್ರೆ ತಿಳಿದಿದ್ದನ್ನ, ತಿಳಕೊಂಡಿದ್ದನ್ನ ಹಂಚಿಕೊಳ್ಳೋದ್ರಾಗ ಏನ್ ತಪ್ಪಿಲ್ಲಂತ ನನ್ನ ಮಾತು ಶುರು ಮಾಡೇನಿ. ಈ ಆತ್ಮದ ಹುಳಾ ಒಂದ ತಿಂಗಳದಿಂದ ನನ್ನ ತಲಿಯೊಳ್ಗ ಕೊರಿಯಾಕ ಹತ್ತೇತಿ. ಈಗ ಅದನ್ನ ನಿಮ್ಮ ಮುಂದ ಹೇಳಿ ನಾನು ಒಂದಷ್ಟು ಸಮಾಧಾನ ಅಕ್ಕೇನಿ. 

ಈ ಆತ್ಮದ ಹುಳಾ ನನ್ನ ತಲಿಯೊಳ್ಗ ಹೊಕ್ಕಿದ್ದು ನಮ್ಮ ವಿಘ್ನವಿನಾಶಕ ಗಣೇಶನ ಕುಂದ್ರಿಸೊ ದಿನಾ. ಅವತ್ತು ರಾತ್ರಿ ಪತ್ರಿಕೆಗಳ ಮ್ಯಾಲೆ ಕಣ್ಣಾಡಿಸಾಕ್ಕತ್ತಿದ್ದೆ. ವಿಜಯ ಕರ್ನಾಟಕ ಪೇಪರನ್ಯಾಗ ಸಿರಿಗೆರೆಯ ತರಳಬಾಳು ಜಗದ್ಗುರು ಬ್ರಹನ್ಮಠದ ಪೂಜ್ಯರಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ “ಬಿಸಿಲು-ಬೆಳದಿಂಗಳು” ಅಂಕಣ ಓದಿದ್ಯಾ, ವೈಚಾರಿಕವಾಗಿ, ಮನುಷ್ಯ ಬದುಕಿನ ಬಗ್ಗೆ ವಿಚಾರ ಮಾಡೊ ರಾಜ್ಯದ ಕೆಲವೇ ಕೆಲವು ಸ್ವಾಮಿಗಳೊಳ್ಗ ಇವ್ರು ಒಬ್ರು ಜೊತಿಗೆ ನಾ ಮೆಚ್ಚೊ ಮತ್ತು ಗೌರವಿಸೊ ಬೆರಳಣಿಕಿ ಸ್ವಾಮಿಗಳ ಪಟ್ಟಿಯೊಳ್ಗ ಈ ಪೂಜ್ಯರು ಅದಾರು. ಹಿಂಗಾಗಿ ಇವ್ರ ಬರಹಗಳನ್ನ ನನ್ನ ಬಿಡುವಿನ ವೇಳ್ಯಾದಾಗ ಓದತೇನಿ. ಆ ದಿನದ ಅಂಕಣದೊಳ್ಗ ಹಿರಿಯ ಸಂಶೋಧಕರಾದ ಎಂ.ಎಂ.ಕಲಬುರ್ಗಿ ಅವ್ರ ಕುರಿತು ಬರಹದೊಳ್ಗ ಅವ್ರ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಡೈರಿ ಪ್ರಸ್ತಾಪ ಮಾಡಿದ್ದು. ಶಿವಕುಮಾರ ಶ್ರೀಗಳು ಬರೆದ ಡೈರಿಯ ಬರಹಗಳನ್ನ ಸಂಪಾದಿಸಿ “ಆತ್ಮನಿವೇದನೆ” ಅನ್ನೋ ಪುಸ್ತಕದ ಬಗ್ಗೆ ಓದಿದ್ದ ತಡಾ ನನ್ನೊಳಗ ಆತ್ಮದ ಪ್ರಶ್ನೆ ಶುರುವಾತು. ತಡಮಾಡದಂಗ್ ಸಿರಿಗೆರೆಯೊಳ್ಗ ಪಿಯುಸಿ ಓದೊ ನನ್ನ ಅಣ್ಣನ ಮಗ ವಿಕಾಸನಿಗೆ ಹೇಳಿ “ಆತ್ಮನಿವೇದನೆ” ತರಿಸಿಕೊಂಡು ಪಟ್ಟು ಹಿಡಿದು ಕುತೂಹಲ ಮತ್ತೆ ಖುಷಿಯಿಂದ ಓದಿದೆ. ನನ್ನೊಳಗ ಏನೊ ಸಂಚಾರ ಆದಂಗಾತು. ಈ ಕುರಿತು ಹಿರಿಯ ಸಾಹಿತಿ ಪ್ರಸಿದ್ಧ ಅಂಕಣಕಾರರಾಗಿದ್ದ ದಿ. ಹಾ.ಮಾ.ನಾಯಕ ಅವರು “ಮಠದ ಸ್ವಾಮಿಗಳಿಗೆ ಒಂದು ಕೈಪಿಡಿ” ಅನ್ನೋ ತಲೆಬರಹದ ಮ್ಯಾಲೆ ಬರೆದ ಬರಹ ಇದ್ರ ಮೌಲ್ಯಾನ ಎತ್ತಿ ಹೇಳತೈತಿ. ಇದು ಹಾಮಾನಾ ಅವ್ರು ಹೇಳಿದಂಗ ಬರೀ ಸ್ವಾಮಿಗಳಿಗೆ ಅಲ್ಲ, ಒಂದಷ್ಟು ಒಳಮನಸ್ಸಿನ ಬಗ್ಗೆ ಅರಿವು ಇರೊ ತಮ್ಮನ್ನ ತಾವು ಪರೀಕ್ಷಿಸಿಕೊಳ್ಳಬೇಕು ಅನ್ನೋರಿಗೆ ಎಲ್ಲದಕ್ಕೂ ಮುಖ್ಯವಾಗಿ ಸಾರ್ವಜನಿಕ ಜೀವನಾದಾಗ ಇರೋವ್ರಿಗೆ ಇದು ಗೈಡು ಅನ್ನೋದು ನನ್ನ ಸ್ಪಷ್ಟ ಅನಿಸಿಕೆ. ಅಷ್ಟೇ ಅಲ್ಲ, ಇವರೆಲ್ಲ ಓದಲೇಬೇಕಾದ ಪುಸ್ತಕ ಕೂಡಾ ಹೌದು ಇದು.

ವಿದೇಶದಲ್ಲಿ ಓದಿ, ಸಂಶೋಧನೆ ಮಾಡಿ ಬಂದಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಗುರುಗಳ ಡೈರಿಯನ್ನು ಶೋಧ ಮಾಡಿ ಅದನ್ನು “ಆತ್ಮನಿವೇದನೆ” ಹೆಸರಿನಲ್ಲಿ ಪುಸ್ತಕ ಮಾಡಿರೋದು ನನಗಂತೂ ಅತ್ಯಂತ ಖುಷಿಯಾತು. ಪೂಜ್ಯರು ಈ ಪುಸ್ತಕ ಪ್ರಕಟ ಮಾಡದ ಹೋಗಿದ್ರ ಇದ್ರ ಮಹತ್ವ ಗೊತ್ತಾಕ್ತಿರಲಿಲ್ಲ. 1937-38ರೊಳ್ಗ ಪೂಜ್ಯರು 2015ರ ಹೊತ್ತಿಗೆ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಹೇಳ್ಯಾರ ಅಂದ್ರ... ಅವ್ರ ಜ್ಞಾನಶಕ್ತಿ, ಪರಿಶುದ್ಧವಾದ ಆತ್ಮನಿಷ್ಠೆ, ಸಮಾಜದ ಬಗೆಗಿನ ಕಾಳಜಿ ನಮ್ಮ ಗೊತ್ತಾಕ್ತೈತಿ. ತಮ್ಮ ಗುರುಗಳನ್ನ ಸದಾ ಸ್ಮರಿಸುವ ಮತ್ತು ಪೂಜ್ಯರ ಎಚ್ಚರವನ್ನು ಮರೆಯದಂತೆ ಉಳಿಸಿಕೊಳ್ಳುವ ನಿಟ್ಟಿನೊಳ್ಗ ಈಗಿನ ಪೂಜ್ಯ ಶ್ರೀಗಳು ಈ ಪುಸ್ತಕಾನ 1985 ರೊಳ್ಗ ಪ್ರಕಟ ಮಾಡ್ಯಾರು. ಇದೀಗ ಈ ಪುಸ್ತಕಾ ಐದನೇ ಮುದ್ರಣ ಕಂಡೈತಿ. ಈ ಪುಸ್ತಕದ ಸಂಪಾದಕರ ನುಡಿ ಅಂದ್ರ ಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ನುಡಿ ಪುಸ್ತಕದೊಳ್ಗ ಏನ್ ಐತೀ ಅನ್ನೋದನ್ನ ಸಮಗ್ರವಾಗಿ ಹೇಳತೈತಿ. ಜೊತಿಗೆ ಸಿರಿಗೆರೆ ಮಠ ಮತ್ತೆ ಈಗಿನ ಪೂಜ್ಯರ ಬಗ್ಗೆ ಕೂಡಾ ಒಂದಷ್ಟು ಮಾಹಿತಿ ನೀಡತೈತಿ.

ಶಿವಕುಮಾರ ಶ್ರೀಗಳು ಒಬ್ಬ ಜಗದ್ಗುರುವಾಗಿ ತಮ್ಮ ಆತ್ಮನಿವೇದನೆಯ ಮೂಲಕ ಇವತ್ತಿನ ಸ್ವಾಮಿಗಳ ಬಗೆಗೆ ಹೇಳಿರುವ ಮಾತು ಪ್ರತಿಯೊಬ್ಬ ಸ್ವಾಮಿಗಳು ಎಂದು ಒಪ್ಪಿಕೊಂಡ ಭಕ್ತರು ಕೂಡಾ ತಮ್ಮ ತಮ್ಮ ಆತ್ಮಗಳ ಎದುರು ನಿಂತು ನಿವೇದನೆ ಮಾಡಿಕೊಳ್ಳುವ ಅಗತ್ಯ ಐತಿ. ಯಾಕಂದ್ರ ಶ್ರೀಗಳು 15 ಮೇ 1938ಕ್ಕ ಬರೆದ ಬರಹ ಈ ಎಚ್ಚರವನ್ನು ನಮ್ಗ ಕೊಡತೈತಿ. ಆ ಬರಹ ಹಿಂಗೈತಿ.

“ಈಗಿನ ಸನ್ಯಾಸಿಗಳಿಂದ ಜಗತ್ತಿಗೆ ಭಯಂಕರವಾದ ಹಾನಿಯಾಗಿದೆ. ಸನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ, ಅಜ್ಞಾನವಿದ್ದಲ್ಲಿ ಸತ್ಯಕ್ಕೆ ಬೆಲೆಯಿಲ್ಲ. ಕಂದಾಚಾರಕ್ಕೆ ಬೆಲೆಯಿರುವವರೆಗೆ ಜಗತ್ತಿಗೆ ಸುಖವಿಲ್ಲ. ನಿರಕ್ಷರ ಕುಕ್ಷಿಗಳೂ, ವಿಷಯಕೂಪದಲ್ಲಿ ಬೆಳೆದವರೂ ಮತ್ತು ವಿಷಯದಲ್ಲಿ ತೊಳಲಿ ಬಳಲಿದವರೂ ಗುರುಗಳಾಗುವುದೆಂದರೆ ಯಾವ ಜಗತ್ತು ಉದ್ಧಾರವಾಗುತ್ತೆ". 

"ಗುರುಗಳಾಗುವುದೆಂದರೆ ನಾಟಕದಲ್ಲಿ ವೇಷಹಾಕಿಕೊಂಡು ಪಾರ್ಟು ಮಾಡುವುದೆಂದು ಜನರು ಭಾವಿಸಿರುವಂತೆ  ತೋರುತ್ತದೆ. ಶಿವ ಶಿವ! ದನ ಕಾಯುವವರೆಲ್ಲ, ಸುಳ್ಳು ಹೇಳುವವರೆಲ್ಲಾ, ವಿಧವಾ ಪ್ರಿಯರೆಲ್ಲಾ ನಿನ್ನ ಹೆಸರಿನಿಂದ ದೇಶದಲ್ಲಿ ಮೆರೆಯುತ್ತಾರಲ್ಲಾ, ಅಯ್ಯೋ ಮೂಢಭಕ್ತರೇ! ನಿಮ್ಮ ಭಕ್ತಿಗೆ ಸರಿಯಾದ ಗುರುಗಳನ್ನು ಪಡೆದಿರುವಿರಿ, ಅಯ್ಯೋ ನಿರ್ದಯಿ ಗುರು ವರ್ಗವೇ! ನಿಮಗಾದರೂ ಪಾಪವನ್ನು ಮಾಡಿ ಜಗತ್ತನ್ನು ಹಾಳು ಮಾಡುತ್ತಿರುವಿರಲ್ಲಾ ದಯೆ ಬೇಡವೇ? ಶಿವ ಶಿವ! ಜಗತ್ತಿನ ಸೂತ್ರವೆಲ್ಲಾ ವ್ಯಭಿಚಾರಿಗಳ ಕೈಯಲ್ಲಿದೆ. ವ್ಯಭಿಚಾರಿಗಳು ಗುರುಗಳೆಂದು ಹೇಳಿಸಿಕೊಳ್ಳಲು ನಾಚಿಕೆಗೊಳ್ಳುವುದಿಲ್ಲವಲ್ಲಾ! ಹರ, ಹರ! ಶಿವ ಶಿವಾ!" (ಪುಟ 145–146).

ಎಷ್ಟು ನಿಷ್ಟುರವಾದ ಬರಹ, ಇಂಥಾ ಬರಹ ಒಂದು ಪವಿತ್ರ ಆತ್ಮದಿಂದ ಮಾತ್ರ ಸಾಧ್ಯ ಅನ್ನೋದು ಇದು ಸಾಭೀತು ಮಾಡತೈತಿ. ಇದನ್ನ ಓದಿದಂಗೆಲ್ಲ ನಾ ಮೆಚ್ಚಿ ಮತ್ತ ಗೌರವಿಸೊ ಪಟ್ಟಿಯೊಳ್ಗ ಮೊದಲಿಗರಾಗಿರೊ ಕನ್ನಡ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ತಮ್ಮ ಮುಂಡರಗಿ ಶಾಖಾ ಮಠದ ನಿರಂಜನ ಪಟ್ಟಾಧಿಕಾರದೊಳ್ಗ ಹೇಳಿದ ಮಾತು, ಆಗಾಗ ಅವು ಸ್ವಾಮಿಗಳ ಬಗ್ಗೆ ಹೇಳೊ ಮಾತುಗಳು ಒಳಗೊಳಗ ಸುಳಿದಾಡಿದವು. 

ಈ ಪುಸ್ತಕದೊಳ್ಗ ನನ್ಗ ಹಿಡಿಸಿದ ಇನ್ನೊಂದು ದೃಷ್ಟಾಂತ ನಿಮ್ಗ ಹೇಳತೇನಿ. ಈ ಮುಂಚೆ ಇದನ್ನ ಪೂಜ್ಯರು ತಮ್ಮ ಅಂಕಣದೊಳ‍್ಗ ಬರದಿದ್ರು, ಸ್ವಾಮಿಗಳಿಗೆ ಇರೋ ಎತ್ತರದ ಖುರ್ಚಿ ಮೋಹ. ಇದು ರಾಜಕಾರಣಿಗಳಿಗಿಂತ ಕೆಟ್ಟದಾದ ಪ್ರವೃತ್ತಿ.”ದೊಡ್ಡ ಖುರ್ಚಿ ಮ್ಯಾಲೆ ಕುಳ್ತು ದೊಡ್ಡವರಾಗೋದಲ್ಲ, ನಮ್ಮ ನಡವಳಿಕಿ  ನಮ್ಮನ್ನು ದೊಡ್ಡವರನ್ನು ಮಾಡಬೇಕು” ಅನ್ನೋದ ಕೂಡಾ ಗೊತ್ತಿಲ್ಲದವ್ರು ಸ್ವಾಮಿಗಳು. ಈ ಬಗ್ಗೆ ಪೂಜ್ಯರು ಹೇಳಿರೊ ರಾವಣ-ಹನುಮಂತನ ಕಥಿ ಮನಮುಟ್ಟುವಂಗೈತಿ.

ಪೂಜ್ಯರು “ಆತ್ಮನಿವೇದನೆ”ಯಲ್ಲಿ ಹೇಳಿರೊ ಒಂದೆರಡು ಮಾತು ನಾನು-ನೀವು ತಿಳ್ಕೊಳ್ಳಬೇಕು. ಈ ಕೆಳ್ಗ ಹೇಳೊ ಅವ್ರ ಎರಡು ಎಚ್ಚರಿಕೆಗಳು ಇವತ್ತಿಗೆ ಭಾಳ ಪ್ರಸ್ತುತ ಅದಾವು. “ಮಸೀದಿಯಲ್ಲಿರುವ ದೇವರೇ ಮಂದಿರದಲ್ಲಿದ್ದಾರೆ. ಮಂದಿರದಲ್ಲಿರುವವನೇ ಚರ್ಚಿನಲ್ಲಿದ್ದಾನೆ. ಮಂದಿರದಲ್ಲಿ ಕಂಡುಬರುವ ದೇವರು ಮಸೀದಿಯಲ್ಲಾಗಲೀ ಚರ್ಚಿನಲ್ಲಿಯಾಗಲೀ ಯಾವನಿಗೆ ಕಂಡು ಬರುವುದಿಲ್ಲವೋ ಅವನು ದೇವಭಕ್ತನಲ್ಲ. ಅವನು ದೇವದ್ರೋಹಿಯು, ಹಿಂದೂ ಜನರ ದೇವರನ್ನು ನಾಶಗೊಳಿಸಬೇಕೆಂಬ ಮಹಮ್ಮದನು ತನ್ನ “ಅಲ್ಲಾ” ನನ್ನೇ ಹೊಡೆಯುತ್ತಾನೆ. ತನ್ನ ಅಲ್ಲಾಗೆ ದ್ರೋಹಿಯಾಗುತ್ತಾನೆ." (ಪುಟ-61)

"ಈಗಿನ ವಿದ್ಯಾವಂರಿಂದಲೇ ಜಗತ್ತಿಗೆ ಮಹಾ ಹಾನಿಯಾಗುತ್ತಿರುವುದು. ವ್ಯವಹಾರಿಕ ಶಿಕ್ಷಣದೊಂದಿಗೆ ಅಧ್ಯಾತ್ಮಿಕ ಶಿಕ್ಷಣವು ಅವಶ್ಯವಾದುದು. ಈಗಿನ ವಿಚಾರಕ್ರಾಂತಿಯು ಬದಲಾಯಿಸದೇ ಜಗತ್ತಿಗೆ ಸುಖವಿಲ್ಲ. ಸುಖ-ಕ್ಕಾಗಿ ಬಾಹ್ಯವಸ್ತುಗಳನ್ನು ಸಂಗ್ರಹಿಸುವವನು ಸುಖಿಯಾಗಲಾರ. ಅಂತಃಶಕ್ತಿಯನ್ನು ಸಂಗ್ರಹಿಸಬೇಕು. ಅಂತಶಕ್ತಿಯೆಂದರೆ ಅತ್ಮಬಲ, ಆತ್ಮವಿಶ್ವಾಸ. ಶಿಕ್ಷಣದಲ್ಲಿ ಪರಿವರ್ತನೆಯಾಗದೆ ಜಗತ್ತಿಗೆ ಸುಖವಿಲ್ಲ, ವಿದ್ಯಾರ್ಥಿಗಳಿಗೆ ಔದ್ಯೋಗಿಕ ವ್ಯವಹಾರಿಕ, ಆಧ್ಯಾತ್ಮಿಕ ಮೂರು ಶಿಕ್ಷಣಗಳನ್ನು ಕೊಡಬೇಕು. ಯಾವ ಸಮಾಜದಲ್ಲಿ ಉತ್ತಮ ತಾಯಂದಿರಿಲ್ಲವೋ ಆ ಸಮಾಜವು ಮುಂದುವರಿಯುವುದು ಸಾಧ್ಯವಿಲ್ಲ. ಸಮಾಜ ಸುಧಾರಣೆಗೆ ತಾಯಂದಿರೇ ಮೂಲ ಕಾರಣ.” (ಪುಟ-62).

ನೋಡಿದ್ರಲ್ಲ ಎಂಥೆಂಥಾ ಎಚ್ಚರಿಕೆ ಮತುಗಳನ್ನ ಪೂಜ್ಯರು 78 ವಸಂತಗಳ ಹಿಂದ ಹೇಳ್ಯಾರು, ಈ ಪುಸ್ತಕದ ಪ್ರತಿ ಪುಟದೊಳಗ ಪೂಜ್ಯರು ತಮ್ಮ ಆತ್ಮನಿವೇದನದ ನೆವದೊಳ್ಗ ನಮ್ಮ ನಮ್ಮ ಅತ್ಮಗಳನ್ನು ಎಚ್ಚರಗೊಳಿಸುವ, ಮನುಷ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲ್ಸ ಮಾಡ್ಯಾರು. ಈ ಪುಸ್ತಕ ಸಂಪಾದಿಸಿರೋ ಪೂಜ್ಯರು ಡೈರಿಯಲ್ಲಿ ಬರುವ ಸ್ವಾನುಭವದ ನೀತಿ ವಾಕ್ಯಗಳನ್ನ ಮಸ್ತಕದ ಆರಂಭಕ್ಕೆ ಪಟ್ಟಿ ಮಾಡಿಕೊಟ್ಟಾರು. 92 ನೀತಿ ವಾಕ್ಯಗಳು ಒಂದಕ್ಕಿಂತ ಒಂದ ಮನಸ್ಸಿಗೆ ನಾಟುವಂಗ್ ಮತ್ತ ಮನಸಿನೊಳ್ಗ ಅಚ್ಚಳಿಯದೇ ಉಳಿಯುವಂಗ್ ಅದಾವು. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಒಂದೊಂದು ವಾಕ್ಯ ಒಂದೊಂದು ಮಹಾನ್ ಗ್ರಂಥದಷ್ಟೇ ಉತ್ಕೃಷ್ಟ ಅದಾವು. ಈಗಾಗಲೇ ಅದಾವು ನಾನು ಹೇಳಿರೊ ಪೂಜ್ಯರ ಮಾತಿನೊಳ್ಗ ಒಂದಷ್ಟು ನೀತಿ ವಾಕ್ಯ ಬಂದಾವು. ಅವನ್ನ ಬಿಟ್ಟು ನಿಮ್ಮ ಜ್ಞಾನರುಚಿಗಾಗಿ ಮತ್ತೊಂದಿಷ್ಟು ನೀತಿ ವಾಕ್ಯ ಇಲ್ಲಿ ಹೇಳತೀನಿ.

* ಮನುಷ್ಯನು ಮನಸ್ಸಿನಿಂದಲೇ ಹಾಳಾಗುವುದು, ಉದ್ಧಾರವಾಗುವುದೂ ಮನಸ್ಸಿನಿಂದಲೇ.

* ತನ್ನ ಮನಸ್ಸಿಗೆ ತಾನು ಅಂಜುವವನು ಶೀಘ್ರದಲ್ಲಿ ಉದ್ಧಾರವಾಗುತ್ತಾನೆ.

* ಮನಸ್ಸನ್ನು ಸ್ಥಿರಪಡಿಸದವನಿಗೆ ಅಖಂಡ ಸಾಮ್ರಾಜ್ಯದಿಂದಲೂ ಸುಖವಿಲ್ಲ.

* ಪವಿತ್ರವಾದ ವಿಚಾರವನ್ನು ಸಂಪಾದಿಸಲು ಸಹವಾಸವು ಪವಿತ್ರವಾದುದಾಗಿರಬೇಕು.

* ಏನೂ ತಿಳಿಯದ ಮೂರ್ಖನಂತಿರುವುದೇ ಜ್ಞಾನಿಯ ಲಕ್ಷಣವು

* ಜನರ ಅಪವಾದಗಳಿಗಂಜಬೇಡ, ಸ್ವಾರ್ಥವು ಸಿಗದಿದ್ದರೆ ದೂಷಿಸುತ್ತಾರೆ, ಸಿಕ್ಕರೆ ಹೊಗಳುತ್ತಾರೆ. ಅವರ ಹೊಗಳಿಕೆಗೂ ಬೆಲೆಯಿಲ್ಲ, ಉಗುಳುವಿಕೆಗೂ ಬೆಲೆಯಿಲ್ಲ.

* ನಾನು ಮಾಡಬೇಕೆಂಬ ಬಯಕೆ ಹೃದಯದಲ್ಲಿ ಹುಟ್ಟಿ ಮಾಡುವ ಕೆಲಸಕ್ಕೂ ಹೇಳಿಕೆಯಿಂದ ಮಾಡುವ ಕೆಲಸಕ್ಕೂ ಬಹಳ ಭೇದವಿದೆ.

* ಪರರ ನಿಂದೆಗೆ ವೃಥಾ ವ್ಯಾಕುಲ ಪಡಬೇಡ. ನಿನ್ನಲ್ಲಿ ದೋಷವನ್ನು ಕಂಡು ಯಾರೂ ನಿಂದಿಸುವುದಿಲ್ಲ. ತಮ್ಮ ಸ್ವಾರ್ಥವು ಸಿಗದೆ ಕಾರಣ ನಿಂದಿಸುತ್ತಾರೆ.

* ಹೊರಗೆ ಎಲ್ಲೂ ಸುಖವನ್ನು ಹುಡುಕಬೇಡ. ಸುಖವು ನಿನ್ನಲ್ಲಿಯೇ ಇದೆ.

* ನಿನ್ನ ಆಳವು ನಿನಗೆ ಗೊತ್ತಿಲ್ಲ. ಪರರನ್ನು ನಿಂದಿಸುವ ಮಹಾಘಾತಕ್ಕೆ ಏಕೆ ಬೀಳುತ್ತೀ?!

ಏನೇ ಆಗಲಿ ಶಿವಕುಮಾರ ಶ್ರೀಗಳ ಈ ಆತ್ಮನಿವೇದನೆ ಪ್ರತಿ ಆತ್ಮಗಳ ನಿವೇದನೆಗೆ ದಾರಿಯ ಬೆಳಕು, ಇಂಥಾ ಬೆಳಕನ್ನು  ಹುಡುಕಿ ತಂದು, ತಾವು ಕಂಡುಂಡ ಬೆಳಕು ಇಂಥ ಬೆಳಕನ್ನು ಹುಡುಕಿ ತಂದು ತಾವು ಕಂಡುಂಡ ಬೆಳಕು ಬೇರೆಯವರಿಗೂ ಬೆಳಕು ಆಗಲಿ, ಅಂತ ಈ ಪುಸ್ತಕ ಪ್ರಕಟ ಮಾಡಿರೊ ಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ನಾನು ಕೃತಜ್ಞ ಮತ್ತೆ ಅವ್ರಿಗೆ ನನ್ನ ಭಕ್ತಿಪೂರ್ವಕ ನಮಸ್ಕಾರ ಸಲ್ಲಿಸ್ತೀನಿ. ಜೊತಿಗೆ ಶಿವಕುಮಾರ ಮಹಾಸ್ವಾಮಿಗಳ ಮಹಾಚೇತನಕ್ಕೂ ನಾನು ತಲಿಬಾಗತೇನಿ. ಒಟ್ಟಾರೆ ಈ ಪುಸ್ತಕಾ ನನ್ನ ತಿಳಿದಾಂಗ್ ಪ್ರತಿ ಮನುಷ್ಯನಿಗೆ ಒಂದು “ಎಚ್ಚರದ ಬೆಳಕು!” ನಾನು ಹೇಳಿದ್ದು ಈ ಪುಸ್ತಕದ ಒಂದು ಚುಂಗು ಮಾತ್ರ ಉತ್ತಮ ಬದುಕಿಗೆ ದಾರಿ ತೋರಿಸೊ ಬೆಳಕಿನ ದೊಡ್ಡ ಜಗತ್ತ ಐತೀ. 

ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ - ಈ ಪುಸ್ತಕಾ ಪ್ರಕಟ ಆಗೇತಿ. ಈ ಪುಸ್ತಕಾಕ್ಕ ಬರೀ 80 ರೂಪಾಯಿ, ಏನ್ ದೊಡ್ಡ ರೊಕ್ಕ ಅಲ್ಲ. ಪ್ರತಿಯೊಬ್ರ ಹತ್ರ ಈ ಪುಸ್ತಕಾ ಇರಬೇಕು. ಸ್ವಾಮಿಗಳು ಬರೆದ ಪುಸ್ತಕಾ ಅಂತ ತರೀಸಿ ಜಗಲಿಮ್ಯಾಲಿದ್ದ ದೇವ್ರ ಕೂಡ ಇದನ್ನು ಒಂದು ಇಟ್ಟು ದಿನಾನೂ ವಿಭೂತಿ-ಕುಂಕುಮಾ-ಭಂಡಾರ ಹಚ್ಚಿ ಊದಿನಕಡ್ಡಿ ಬೆಳಗಿ ದಿನಾ ಒಂದು ಪಟ ಹರಿದು ಹೋಗುವಂಗ ಮಾಡಬ್ಯಾಡ್ರಿ, ಈ ಪುಸ್ತಕಾ ತರಿಸಿ ಸ್ವಾಮಿಗಳ ಬರೆದ ಡೈರಿಯ ಒಂದೊಂದ ಪುಟಾನ ಒಂದೊಂದ ದಿನಾ ಓದಿ ಮನನ ಮಾಡಿಕೊಂಡ್ರ ಅದೇ ದೊಡ್ಡ ಪೂಜಾ ಮತ್ತ ನೀವು ಆತ್ಮನಿವೇದನೆ ಮಾಡಿಕೊಂಡು ಪೂಜ್ಯರಿಗೆ ಸಲ್ಲಿಸಿವ ಗೌರವ, ಅನ್ನೋದು ನನ್ನ ಸ್ಪಷ್ಟ ಅನಿಸಿಕೆ, ಇದ್ನ ನೀವು ಏನಂತೀರಿ?.

ಎಂ. ಮಂಜುನಾಥ ಬಮ್ಮನಕಟ್ಟಿ
ಸಾಹಿತಿ, ಗದಗ