ಜಿ.ನಿಜಲಿಂಗಪ್ಪನವರ ನಿಧನ : ಶ್ರೀ ತರಳಬಾಳು ಜಗದ್ಗುರುಗಳವರ ಸಂತಾಪ

  •  
  •  
  •  
  •  
  •    Views  

ಅನಾರೋಗ್ಯದಿಂದ ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ  ದಾಖಲಾಗಿದ್ದ ನಿಜಲಿಂಗಪ್ಪನವರ ಆರೋಗ್ಯ ವಿಚಾರಿಸಲು ಶ್ರೀ ತರಳಬಾಳು ಜಗದ್ಗುರುಗಳವರು ದಿ.5-9-24ರ ಗುರುವಾರ ಭೇಟಿ ನೀಡಿದರು. “ಕಾಣದ ಕಡಲಿಗೆ ಹಂಬಲಿಸಿದೆ ಮನ” ಎಂಬ ಕವಿ ವಾಣಿಯಂತೆ ನಿಜಲಿಂಗಪ್ಪನವರು ಗುರುಗಳ ಆಗಮನದ ನಿರೀಕ್ಷೆಯಲ್ಲಿದ್ದರು. ಪೂಜ್ಯರನ್ನು ಕಂಡ ತಕ್ಷಣ ಅವರು ತಮ್ಮ ನೋವನ್ನು ಮರೆತು ಹೊಸ ಉತ್ಸಾಹದಿಂದ ಲವಲವಿಕೆಯಿಂದ ಮಾತನಾಡಿದರು. ಪೂಜ್ಯರಿಗೂ ನಿಜಲಿಂಗಪ್ಪನವರ ಆರೋಗ್ಯದಲ್ಲಿ ಸುಧಾರಣೆ ಕಂಡು ಅಪಾರ ಸಂತಸ ವ್ಯಕ್ತಪಡಿಸಿದ್ದರು. 

ಆದರೆ ಮಾರನೆಯ ದಿನವೇ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದರು. ಪೂಜ್ಯರಿಗೆ ನಿಜಲಿಂಗಪ್ಪನವರ ಲಿಂಗೈಕ್ಯರಾದ ಸುದ್ದಿ ತಿಳಿದು ತುಂಬಾ ವಿಷಾದ ವ್ಯಕ್ತಪಡಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿ ದಯಪಾಲಿಸಲೆಂದು ವಿಶ್ವಬಂಧು ಮರಳಸಿದ್ಧನಲ್ಲಿ ಪ್ರಾರ್ಥಿಸಿದರು.

ವಿದ್ಯಾಸಂಸ್ಥೆಗೆ ದೀರ್ಘ ಕಾಲದ ಸ್ಮರಣೀಯ ಸೇವೆ: 

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಗೆ ಜಿ.ನಿಜಲಿಂಗಪ್ಪನವರ ಸಲ್ಲಿಸಿದ್ದು ಸುದೀರ್ಘವಾದ ಮತ್ತು ನಿಷ್ಕಲ್ಮಶವಾದ ಸೇವೆ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕಾಲದಲ್ಲಿ ಆಡಳಿತಾಧಿಕಾರಿಗಳಾಗಿ ಗುರುಗಳ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಉತ್ತಮವಾಗಿ ನಡೆಸಿದ್ದರು. ಈಗಿನ ಜಗದ್ಗುರುಗಳ ಕಾಲದಲ್ಲಿಯೂ ಸಹ ಆಡಳಿತಾಧಿಕಾರಿಗಳಾಗಿ ಉತ್ತಮ ಸೇವೆಯನ್ನು ಮಾಡಿದ್ದಾರೆ. ಅವರು ಉಭಯ ಜಗದ್ಗುರುಗಳವರ ಕೃಪೆಗೆ ಪಾತ್ರರಾಗಿದ್ದರು.  

ದಾವಣಗೆರೆ ತಾಲ್ಲೂಕಿನ ನೀರ್ಥಡಿ ಗ್ರಾಮದ ಗೌಡರ ಹಾಲಪ್ಪನವರ ಮಗ ಜಿ.ನಿಜಲಿಂಗಪ್ಪ ಬಿ.ಎ, ಎಲ್.ಎಲ್.ಬಿ ಪದವೀಧರರು. ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಪ್ರೌಢಶಾಲೆಯ (1949) ಮೂರನೆಯ ತಂಡದ ವಿದ್ಯಾರ್ಥಿಯಾಗಿದ್ದ ಇವರು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಮತ್ತು ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಬಿ.ಎಲ್. ಪದವಿ ಪಡೆದಿದ್ದರು. ಕಾನೂನು ಕಾಲೇಜಿನಲ್ಲಿ ಅಭ್ಯಾಸ ಮಾಡುವಾಗ ಹಾಸನದ ಮಾಜಿ ಸಂಸದ ಎಚ್.ನಂಜೇಗೌಡ ಮತ್ತು ಕಳೆದ ವಾರ ನಿಧನರಾದ ಸಚಿವ, ಹೆಸರಾಂತ ಕವಿ (“ಕಾನಗೋಡು ಮನೆ” ಖ್ಯಾತಿಯ) ಕೆ.ಎಚ್.ಶ್ರೀನಿವಾಸ್ ಮತ್ತು ಹೆಸರಾಂತ ಪತ್ರಕರ್ತ ಬಿ.ವಿ. ವೈಕುಂಠರಾಜು ನಿಜಲಿಂಗಪ್ಪನವರ ಸಹಪಾಠಿಗಳಾಗಿದ್ದರು. 

ಕೆಲದಿನಗಳ ಕಾಲ ಚಿತ್ರದುರ್ಗದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. 1945ರಲ್ಲಿ ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಶ್ರೀ ಕಲ್ಮುರುಡೇಶ್ವರ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಆರಂಭಿಸಿದರು. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಇವರನ್ನು 1967ರಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಗಳಾಗಿ ನೇಮಕ ಮಾಡಿಕೊಂಡರು. ಆನಂತರ 1969 ರಿಂದ 2006ರ ವರೆಗೆ  40 ವರ್ಷಗಳ  ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು.

ನಿಜಲಿಂಗಪ್ಪನವರು ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಅವಧಿಯಲ್ಲಿ ದಕ್ಷ, ಪ್ರಾಮಾಣಿಕ, ನಿಷ್ಠೆಯಿಂದ ಬೃಹತ್ ವಿದ್ಯಾಸಂಸ್ಥೆಯ ಆಡಳಿತ ನಿರ್ವಹಿಸಿದರು. ಜೊತೆ ಜೊತೆಗೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿಯಾಗಿದ್ದರು. ಬೃಹತ್ ವಿದ್ಯಾಸಂಸ್ಥೆ ಮತ್ತು ಮಠದ ಎಲ್ಲಾ ಆಗುಹೋಗುಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಅವರ ಅಗಲಿಕೆ ಸಮಾಜದ ಮತ್ತು ಬೃಹನ್ಮಠದ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ. 

ಇಂದು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಐಕ್ಯಮಂಟಪದ ಮುಂದಿನ ಮಹಾದ್ವಾರದಲ್ಲಿ 2.30 ರಿಂದ 3.30ರವರೆಗೆ ಗ್ರಾಮಸ್ಥರು ಹಾಗೂ ಸಹಪಾಠಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಬಹುದಾಗಿದೆ..

ಶ‍್ರೀಯುತರು ಈ ದಿನ ನಿಧನರಾಗಿದ್ದು, ಇವರ ಅಂತ್ಯಸಂಸ್ಕಾರವು ಭಾನುವಾರ ಮಧ್ಯಾಹ್ನ 12 ಗಂಟೆಗೆ ಶ್ರೀಯುತರ ಸ್ವಗ್ರಾಮ ನೀರ್ಥಡಿ ಗ್ರಾಮದಲ್ಲಿ ನೆರವೇರಲಿದೆ.