ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

  •  
  •  
  •  
  •  
  •    Views  

ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #105

ನಾವು ಆಗ ಬೆಂಗಳೂರಿನಲ್ಲಿದ್ದೆವು. ಈ ಕಡೆ ಇಲ್ಲಿ ಮಠಕ್ಕೆ ಮರಿಯನ್ನು ನುಗ್ಗಿಸಬೇಕೆಂದು ಬಹಳ ಯತ್ನ ನಡೆದಿತ್ತು. ಹೊಳಲ್ಕೆರೆ ತಾಲ್ಲೂಕು ಶಿವಪುರದ ಲೋಹಿತಕುಮಾರ ಎಂಬ ಉಪಾಧ್ಯಾಯನು ಕಡೂರು ಹೊಸಹಳ್ಳಿಯಲ್ಲಿರುವ ಒಂದು ಮನೆಯಲ್ಲಿ ಇರುತ್ತಿದ್ದನು. ತನ್ನ ಊರು ಮಲ್ಲಾಡಿಹಳ್ಳಿ ಎಂದು ಹೇಳಿಕೊಂಡಿದ್ದನು. ಈ ಲೋಹಿತಕುಮಾರನು ಸಿರಿಗೆರೆ ಮಠದ ವಿರೋಧಿಯೆಂದು ತಿಳಿದುಕೊಂಡು ಆ ಮನೆಯಲ್ಲಿ ಒಬ್ಬ ಸ್ವಾಮಿಗಳ ಸಮಕ್ಷಮ ಎರಡು ಮಸಲತ್ತು ಮಾಡಿದರು. “ಸಿರಿಗೆರೆ ಸ್ವಾಮಿಗಳವರು ಯಾರಿಗೂ ಬಗ್ಗುವುದಿಲ್ಲ, ಏನಾದರೂ ಮಾಡಿ ಇವರ ಪ್ರಾಣ ತೆಗೆಯಬೇಕು. ಇಲ್ಲವೇ ಮಾನ ಕಳೆಯಬೇಕು” ಎಂದು ನಿರ್ಣಯಿಸಿದರು. 

ಈ ಲೋಹಿತಕುಮಾರ (ಉಪಾಧ್ಯಾಯ) ತನಗೆ ಆ ಮಾತುಗಳ ಕಡೆ ಗಮನವಿಲ್ಲದಂತೆ, ಪುಸ್ತಕ ಹಿಡಿದು ಓದಿಕೊಳ್ಳುತ್ತಿದ್ದಂತೆ ನಟಿಸುತ್ತಾ, ಅದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದನು. ಆಗ ಈತನಾರು? ಎಂದು ಚಿಕ್ಕಮಗಳೂರಿನವರು ಆ ಸ್ವಾಮಿಗಳನ್ನು ಕೇಳಿದರು. “ಈತ ಮಲ್ಲಾಡಿಹಳ್ಳಿಯವನು. ಸಿರಿಗೆರೆ ಸ್ವಾಮಿಗಳ ವಿರೋಧಿ. ಇಲ್ಲಿಯೇ ಟೀಚರ್ ಆಗಿದ್ದಾನೆ. ಪರವಾಗಿಲ್ಲ ಮಾತನಾಡಿ” ಎಂದರು. ಒಂದನೇ ಯೋಜನೆ ನಾವು ಚಿಕ್ಕಮಗಳೂರಿಗೆ ಬಂದು ಹಾಸ್ಟೆಲಿನಲ್ಲಿ ಇರುವಾಗ ಒಬ್ಬ ಹುಡುಗಿಯನ್ನು ಒಳಕ್ಕೆ ಕಳುಹಿಸಿ, "ಸಿರಿಗೆರೆ ಸ್ವಾಮಿಗಳು ನನ್ನ ಮಾನಭಂಗಕ್ಕೆ ಯತ್ನ ಮಾಡಿದರು” ಎಂದು ಕೋರ್ಟಿಗೆ ಆಕೆಯಿಂದ ಕೇಸು ಹಾಕಿಸುವುದು. ಎರಡನೆಯದು “ಬೆಂಗಳೂರಿನಿಂದ ಸ್ವಾಮಿಗಳು ಚಿಕ್ಕಮಗಳೂರಿಗೆ ಬರುವವರಿದ್ದಾರೆ. ವೀರಣ್ಣ ಕಣಿವಿಯಲ್ಲಿ ಅವರ ಕಾರು ಉರುಳಿ ಕೆಳಗೆ ಬೀಳುವಂತೆ ಲಾರಿಯಿಂದ ಡ್ಯಾಷ್ ಹೊಡೆಸುವುದು. ಕಾರು ಕೆಳಗೆ ಉರುಳುತ್ತದೆ. ಸ್ವಾಮಿಗಳು ಸಾಯುತ್ತಾರೆ”.  ಇದು ಆ ವಿರೋಧಿ ಸ್ವಾಮಿಗಳು ಕೊಟ್ಟ ಸಲಹೆ. ಇದನ್ನು ಎಲ್ಲರೂ ಅಂಗೀಕರಿಸಿದರು. ಇದಕ್ಕಾಗಿ ಒಂದು ಲಾರಿಯನ್ನೂ, ಹೆಣ್ಣನ್ನೂ ಸಜ್ಜುಗೊಳಿಸಬೇಕೆಂದು ಊರಿಗೆ ಹೊರಟರು. ಲೋಹಿತಕುಮಾರನು ಜಲಬಾಧೆಗೆ ಹೊರಕ್ಕೆ ಬಂದವನಂತೆ ನಟಿಸಿ ಸೈಕಲ್ ನಲ್ಲಿ ಸೀದಾ ಬೀರೂರಿಗೆ ಬಂದು ಮಾರ್ಗದ ಶ್ರೀ ಮಹದೇವಪ್ಪನವರಿಗೆ ವಿಚಾರ ತಿಳಿಸಿದನು. ಮಹದೇವಪ್ಪನವರು ಕೂಡಲೇ ಮಾತುಗಳನ್ನು ಗುರುತು ಹಾಕಿಕೊಂಡಿದ್ದ ಲೋಹಿತಕುಮಾರನ ಚೀಟಿಯೊಂದಿಗೆ ಬೀರೂರು ಹಾಸ್ಟೆಲ್ ಮ್ಯಾನೇಜರ್ ಶಿವರುದ್ರಪ್ಪನನ್ನು ಬೆಂಗಳೂರಿಗೆ ಕಳುಹಿಸಿ, ನಾವು ಚಿಕ್ಕಮಗಳೂರಿಗೆ ಬರುವುದು ಬೇಡವೆಂತಲೂ, ಸೀದಾ ಸಿರಿಗೆರೆಗೆ ಹೋಗಬೇಕೆಂತಲೂ ಪತ್ರ ಬರೆದು ತಿಳಿಸಿದರು. ನಾವು ಜಿ. ಚನ್ನಪ್ಪನವರಿಗೆ ತೋರಿಸಿದೆವು. ಅವರು ಸಹ ನಾವು ನೇರವಾಗಿ ಸಿರಿಗೆರೆಗೆ ಹೋಗಬೇಕೆಂದೂ ಚಿಕ್ಕಮಗಳೂರಿಗೆ ಬೇಡವೆಂದೂ ಸಲಹೆಯಿತ್ತರು. ನಾವು ಚಿಕ್ಕಮಗಳೂರಿಗೂ ಹೋಗಲಿಲ್ಲ, ಸಿರಿಗೆರೆಗೂ ಹೋಗಲಿಲ್ಲ. ಸೀದಾ ಬೀರೂರಿಗೆ ಬಂದೆವು.

ಎಸ್.ಬಿ. ಮುಳ್ಳಪ್ಪ ಆಗ ಕಡೂರಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ಆಗಿದ್ದನು. ಆತನಿಗೆ ನಮ್ಮ ವಿರೋಧಿ ಪಾರ್ಟಿಯಲ್ಲಿ ಅನೇಕ ಬಂಧು ಬಾಂಧವರಿದ್ದುದರಿಂದ ವಿರೋಧಿಗಳು ಆತನನ್ನು ನಂಬಿಕೊಂಡಿದ್ದರು. ಕೂಡಲೇ ಆತನನ್ನು ನಾವು ಬೀರೂರಿಗೆ ಕರೆಸಿ “ನೀವು ಕಡೂರು ಹೊಸಹಳ್ಳಿಯಲ್ಲಿ ಆ ಸ್ವಾಮಿಗಳವರಲ್ಲಿ ಮಾಡಿದ ಎಲ್ಲಾ ಮಸಲತ್ತು ಗುರುಗಳಿಗೆ ಗೊತ್ತಾಗಿದೆ. ನಿಮ್ಮ ಮೇಲೆ ಕಂಪ್ಲೆಂಟ್ ಕೊಡುತ್ತಾರೆ” ಎಂದು ಎಚ್ಚರಿಸಲು ಹೇಳಿ ಕಳಿಸಿದೆವು. ಆ ಸ್ವಾಮಿಗಳು “ಚಿಕ್ಕಮಗಳೂರಿನವರು ನಮ್ಮಲ್ಲಿ ಬಂದದ್ದು ನಿಜ. ಈ ರೀತಿ ಮಾಡಬೇಕೆಂದು ಹೇಳಿದ್ದು ನಿಜ. ನೀವೇನಾದರೂ ಮುಂದುವರಿದರೆ ನಾನೇ ನಿಮಗೆ ಶಿಕ್ಷೆ ಮಾಡಿಸುತ್ತೇನೆ” ಎಂದು ಹೇಳಿ ಹೆದರಿಸಿ ಕಳುಹಿಸಿದುದಾಗಿ ಹೇಳಿದರೆಂದು ಮುಳ್ಳಪ್ಪ ಬಂದು ಹೇಳಿದನು. ಮುಳ್ಳಪ್ಪ ಸೀದಾ ಚಿಕ್ಕಮಗಳೂರಿಗೆ ಹೋಗಿ “ಆ ಸ್ವಾಮಿಗಳು ಹೀಗೆ ಹೇಳಿದರು, ನೀವು ಹೀಗೆ ಮಾಡಬಹುದೇ?’’ ಎಂದು ಕೇಳಿದನು. ಜನರು ಆ ಸ್ವಾಮಿಗಳ ಮೇಲೆ ತಿರುಗಿಬಿದ್ದರು. “ತಾನೇ ನಮ್ಮನ್ನು ಕರೆಸಿ ಹೀಗೆ ಮಾಡಿರಿ ಎಂದು ನಮಗೆ ಹೇಳಿ, ತಾನೇ ಈಗ ನಮ್ಮ ಮೇಲೆ ಹೇಳುತ್ತಿದ್ದಾನೆಯೇ ಆ ಸ್ವಾಮಿ?” ಎಂದು ಇವರು ಸ್ವಾಮಿಯ ಮೇಲೆ ತಿರುಗಿಬಿದ್ದರು.

ಈ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದಾಗ ಹಾಸ್ಟೆಲಿನ ಬಿಡಾರಕ್ಕೆ, ಕುರುಬರಹಳ್ಳಿ ಮಠದಲ್ಲಿ ಪೂಜೆಗೆ ವ್ಯವಸ್ಥೆ ಮಾಡಿಕೊಂಡಿದ್ದೆವು. ಸಂಜೆ ಕುರುಬರಹಳ್ಳಿ ಮಠಕ್ಕೆ ಹೋಗುವಾಗ ನಮ್ಮನ್ನು ತಡೆದು ಹೊಡೆಯಬೇಕೆಂತಲೂ ಮಾನ ಕಳೆಯಬೇಕೆಂತಲೂ ಒಂದು ಮಸಲತ್ತು ಮಾಡಿದರು. ರಸ್ತೆಯಲ್ಲಿ ತಗ್ಗು ತೆಗೆದು ಅದರ ಮೇಲೆ ಚಾಪೆ ಹಾಕಿ ತೆಳ್ಳಗೆ ಮಣ್ಣು ಹರಡಿ ಬಿಟ್ಟಿದ್ದರು. ಅದು ಹೇಗೋ ನಾವು ಅಲ್ಲಿಗೆ ಬರುವುದಕ್ಕೆ ಮೊದಲೇ ಚಿಕ್ಕ ಕುರುಬರಹಳ್ಳಿಯ ನಮ್ಮ ಅಭಿಮಾನಿಗಳಾದ ಚಂದ್ರಪ್ಪ, ಹಾಲಪ್ಪ, ಮಹದೇವಪ್ಪ ಇವರಿಗೆ ತಿಳಿದು ಇವರು ಕೂಡಲೇ ನಮಗೆ ತಿಳಿಸಿದರು. 

ಇಂತಹ ಎಷ್ಟೋ ದುಷ್ಪ್ರಸಂಗಗಳು ನಡೆದು ಹೋಗಿವೆ. ಎಲ್ಲವೂ ನೆನಪಾಗುತ್ತಿಲ್ಲ. ಎಲ್ಲವನ್ನೂ ಬರೆಯಲಾಗುತ್ತಿಲ್ಲ. ಒಟ್ಟಿನಲ್ಲಿ ಮಠಗಳ ಏಕಾಡಳಿತ ಪದ್ಧತಿಗೂ, ಸಮಾಜದ ಸಂಘಟನೆಗೂ ಸ್ವಾಮಿಗಳಲ್ಲಿಯೇ, ಜನರಲ್ಲಿಯೇ ಎಷ್ಟು ಕೆಟ್ಟ ಅಭಿಪ್ರಾಯವಿತ್ತೆಂಬುದು ಇದರಿಂದ ಗೊತ್ತಾಗುತ್ತದೆ. ಇದರ ವಿರುದ್ಧ ಹೋರಾಟ ಎಲ್ಲೆಲ್ಲೂ ಯಶಸ್ವಿಯಾದುದನ್ನು ಈಗ ನಾವು ನೀವು ಎಲ್ಲಾ ಕಾಣುತ್ತಿದ್ದೇವೆ. ಈಗ ಎಲ್ಲಾ ಮಠಗಳೂ ನಮ್ಮ ಆಡಳಿತದಲ್ಲಿವೆ. ನಮ್ಮ ಸ್ವಾಧೀನದಲ್ಲಿವೆ. ಜಾಬಾಲಪುರಿ ಮಠದ ವ್ಯವಹಾರವು ಮಾತ್ರ ಕೋರ್ಟಿನಲ್ಲಿದೆ. “ಸಿರಿಗೆರೆಯ ಸ್ವಾಮಿಗಳನ್ನು ಗೆಲ್ಲಲು ಆಗುವುದಿಲ್ಲ; ಜಾಬಾಲಪುರಿ ಮಠವು ಎಂದೂ ನಮ್ಮದಾಗುವುದಿಲ್ಲ, ನಾವು ಮಾಡಿಕೊಂಡ ತಪ್ಪಿಗೆ ಮರಿಗೆ ರಕ್ಷಣೆ ಕೊಡಬೇಕಾಗಿದೆ” ಎಂದುಕೊಂಡು ಈಗಲೂ ಆ ಮರಿಗೇ ಜಾಬಾಲಪುರಿಯ ಮಠವನ್ನು ಕೊಡಿಸಬೇಕೆಂದು ಕನಸು ಕಾಣುತ್ತಿದ್ದಾರೆ. 

ಇದಕ್ಕೆ ಸಂಸ್ಕೃತದಲ್ಲಿ ಒಂದು ನಾಣ್ಣುಡಿಯಿದೆ. “ಉತ್ಪದ್ಯಂತೇ ವಿಲೀಯಂತೆ ದರಿದ್ರಾಣಾಂ ಮನೋರಥಾಃ” ಇದರ ಅರ್ಥವಿಷ್ಟೇ: ದುರ್ಬಲರ ಮನೋರಥಗಳು ಹುಟ್ಟುತ್ತವೆ. ಹಾಗೆಯೇ ಸಾಯುತ್ತವೆ, ಕರಗುತ್ತವೆ. ಯಾರು ಏನೇ ಮಾಡಲಿ ಎಲ್ಲಾ ಶಿಷ್ಯರೂ ಸಮಾಜದ ಹಿಂದೆ ಇದ್ದಾರೆ. ನಾಲ್ಕಾರು ಹಳ್ಳಿಯವರು ಮಾತ್ರ ಹಟಕ್ಕಾಗಿ, ಪ್ರತಿಷ್ಠೆಗಾಗಿ ತಮ್ಮ ಕ್ಷುದ್ರ ಸ್ವಭಾವಕ್ಕನುಗುಣವಾಗಿ ಆಟವಾಡಿಸುತ್ತಿದ್ದಾರೆ. 

ಯಾರೂ ಎಷ್ಟೇ ಹಿಂಸೆ ಕೊಟ್ಟರೂ ಶಿವನ ಸಂಕಲ್ಪವು ಭಕ್ತನು ಗೆಲ್ಲಬೇಕೆಂಬುದೇ ಆಗಿರುತ್ತದೆ. ಸ್ವಾಮಿಗಳಾದವರಿಗೆ ವಿಶಾಲಭಾವನೆ, ದೂರದೃಷ್ಟಿ ಇರಬೇಕು. ಅಖಂಡ ಲೋಕವೇ ತನ್ನ ಕುಟುಂಬವೆಂದು ಅವನು ಭಾವಿಸಬೇಕು. “ಉದಾರ ಚರಿತಾನಾಂ ತು ವಸುಧೈವ ಕುಟುಂಬಕಂ”.  ಉದಾರ ಸ್ವಭಾವಿಗಳಿಗೆ ಇಡೀ ಪ್ರಪಂಚವೇ ತನ್ನ ಮನೆ. ಇದು ನಿಜವಾದ ಸನ್ಯಾಸಿಗೆ ಇರಬೇಕಾದ ಗುಣ. ಆದರೆ ಜನರ ಮೌಢ್ಯವನ್ನು ದುರುಪಯೋಗ ಮಾಡಿಕೊಂಡು ತಾನು, ತನ್ನ ಮನೆತನ, ತನ್ನ ದುರ್ನಡವಳಿಕೆ, ಇವುಗಳಿಗೆ ಸಮಾಜವನ್ನು ಬಳಸುವುದು ದ್ರೋಹಾತಿದ್ರೋಹ. 

ನಮ್ಮ ಮಠಗಳ ಅಂದಿನ ಮತ್ತು ಇಂದಿನ ನಡವಳಿಕೆಗಳನ್ನು ಇಲ್ಲಿ ಚಿತ್ರಿಸಿದ್ದೇವೆ. ಒಂದು ಸರಿದಾರಿಯಲ್ಲಿ ಜನತೆಯನ್ನು ಕರೆದೊಯ್ಯಬೇಕಾಗಿದ್ದಲ್ಲಿ ಮುಖಂಡನು ಯಾವ ನಿಲುಮೆಯವನಿರಬೇಕೆಂಬುದು ಈ ಪ್ರಕರಣದಿಂದ ಜನತೆಗೆ ಅರ್ಥವಾಗದಿರದು. ಇಂತಹ ಸಂದರ್ಭದಲ್ಲಿ ಜನರ ಮಾತನ್ನು ಕೇಳಹತ್ತಿದರೆ ಒಬ್ಬ ಆ ಕಡೆ ಒಬ್ಬ ಈ ಕಡೆ, ನಾವಾಗಿಯೇ ಪಾರ್ಟಿಯನ್ನು ಬೆಳೆಸಿದಂತೆ ಆಗುತ್ತದೆ. ಇದೆಲ್ಲವನ್ನೂ ಬಲ್ಲ ನಾವು ಯಾರಾರನ್ನು ಯಾವಾವ ರೀತಿ ಬಳಸಿಕೊಳ್ಳಬೇಕೋ ಬಳಸಿಕೊಂಡು ಯಶಸ್ವಿಯಾಗಿದ್ದೇವೆ. 

ಇಷ್ಟೆಲ್ಲಾ ಸಂಕಷ್ಟಗಳು ನಮಗೊದಗಿದ್ದರೂ ಕವಿಕುಲಗುರು ಕಾಳಿದಾಸನ ಉಕ್ತಿಯಂತೆ; “ಕ್ಲೇಶಃ ಫಲೇನ ಹಿ ನವತಾಂ ವಿಧತ್ತೇ” ಎಂಬಂತೆ ಅನುಭವಿಸಿದ ಕಷ್ಟವು ಸತ್ಫಲ ದೊರೆತಾಗ ಜೀವನಕ್ಕೆ ಹೊಸತನವನ್ನು ತಂದುಕೊಡುತ್ತದೆ.  ಹಾಗೆ ಈಗ ನಾವು ಹೊಸತನದಲ್ಲಿಯೇ ಇದ್ದೇವೆ.

-ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

(ದೊಡ್ಡ ಗುರುಗಳ ಆತ್ಮಕಥನ “ದಿಟ್ಟಹೆಜ್ಜೆ ಧೀರಕ್ರಮ” ಪುಸ್ತಕದಿಂದ ಆಯ್ದಭಾಗ. ಪುಟ 90-92)