ನಮ್ಮ ಮಠದಲ್ಲಿ ಗುರುಶಿಷ್ಯರ ನಡುವೆ ಎಳ್ಳಷ್ಟು ಸಂಘರ್ಷವಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು
ಶಿವಮೊಗ್ಗ: ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿ ನಡೆಯುತ್ತಿರುವುದು ಗುರುಶಿಷ್ಯರ ನಡುವಿನ ಸಂಘರ್ಷವಲ್ಲ. ಎಳ್ಳಷ್ಟು ಗುರುಶಿಷ್ಯರ ನಡುವೆ ಸಂಘರ್ಷವಿಲ್ಲ. ಇಲ್ಲಿರುವುದು ಬಂಡವಾಳ ಶಾಹಿ ಮತ್ತು ಭಕ್ತಿ ಸಂಪನ್ನ ಭಕ್ತರ ನಡುವೆ ಸಂರ್ಘಗಳು ಮಾತ್ರವೆಂದು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ಭಾನುವಾರ ಶಿವಮೊಗ್ಗ ತಾಲೂಕು ಗ್ರಾಮಾಂತರ ಶ್ರೀ ತರಳಬಾಳು ಸೇವಾ ಸಮಿತಿಯಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯ 32ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು.
ಮಠದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಬಾರದೆಂದು ಭಾವಿಸಿದ್ದೆ. ಆದರೆ ಕೆಲವರು ತಮ್ಮ ಮೇಲೆ ಮಾಡುತ್ತಿರುವ ಆಪಾದನೆಗಳಿಂದ ಮನಸ್ಸಿಗೆ ತುಂಬಾ ಬೇಸರವಾಗಿದೆ. ಆ ಕಾರಣಕ್ಕಾಗಿ ಇಂದು ಅನಿವಾರ್ಯವಾಗಿ ಮಾತನಾಡುತ್ತಿದ್ದೇನೆ ಎಂದರು. ಹಳ್ಳಿ ಹಳ್ಳಿಗಳಲ್ಲಿ ಯುವಕರ ಹೆಸರಲ್ಲಿ, ವಾಟ್ಸ್ ಆಪ್, ಟ್ವಿಟರ್(ಎಕ್ಸ್), ಫೇಸ್ಬುಕ್ಗಳ ಮೂಲಕ ಊಹಾಪೋಹಾ ಮಾಡಲಾಗಿತ್ತು. ಅಪಪಚಾರ ಮಾಡಲಾಯಿತು. ಒಣ ಸುಳ್ಳು ಆಪಾದನೆಯಿಂದ ತುಂಬಾ ಬೇಸರವಾಯಿತು. ಆದರೆ ಸತ್ಯವನ್ನು ಎಲ್ಲರೂ ಅರಿಯಬೇಕಿದೆ. ಆ ಕಾರಣಕ್ಕೆ ವಾಸ್ತವ ಸಂಗತಿಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಈಗಿನ ಗುರುಗಳು ಬೆಂಗಳೂರಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದಾಗ 25 ಲಕ್ಷ ರೂ. ಕೊಟ್ಟು ಬಂದಿದ್ದಾರೆ. ಆಸ್ಪತ್ರೆಯವರು ಕೇಳದಿದ್ದರೂ ಲಕ್ಷಾಂತರ ರೂ. ಕೊಟ್ಟು ಬಂದಿದ್ದಾರೆಂದು ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ 25 ಲಕ್ಷ ರೂ. ಕೊಟ್ಟಿರುವುದು ನಿಜ. ನಾನು ಕೊಟ್ಟಿದ್ದು 2021ರ ಮಾರ್ಚ್ ನಲ್ಲಿ. ಆಗ ಕರೋನಾ ಸಂದರ್ಭ. ಎರಡು-ಮೂರು ಬಾರಿ ಆಸ್ಪತ್ರೆಗೆ ಚಿಕಿತ್ಸೆಂದು ಹೋಗಿದ್ದೆವು. ಒಮ್ಮೆ ದೇಹದ ಸಂಪೂರ್ಣ ಪರೀಕ್ಷೆ ಮಾಡುತ್ತೇವೆ. ಒಂದು ವಾರ ಆಸ್ಪತ್ರೆಯಲ್ಲೇ ಇರಬೇಕೆಂದು ವೈದ್ಯರು ಹೇಳಿದ್ದರು. ಎರಡು- ಮೂರು ಬಾರಿ ಹೋದರೂ ಒಮ್ಮೆಯೂ ಹಣ ಪಡೆದಿರಲಿಲ್ಲ. ಆ ಕಾರಣಕ್ಕೆ ಆಲೋಚನೆ ಮಾಡಿ 25 ಲಕ್ಷ ರೂ. ಚೆಕ್ ಕೊಟ್ಟಿದ್ದೆ. ಅದು ಭಕ್ತರ ಕಾಣಿಕೆಯಿಂದ ಬಂದ ಹಣವಾಗಿದ್ದು ಅದು ಭಕ್ತಾದಿ(ಬಡವರು)ಗಳಿಗೆ ಉಪಯೋಗ ಆಗಬೇಕೆಂದು ಆಸ್ಪತ್ರೆಯವರಿಗೆ ತಿಳಿಸಿದ್ದೆ. ಆದರೂ ನಮ್ಮ ಮೇಲೆ 2021ರ ಅಕ್ಟೋಬರ್ ನಲ್ಲಿ ಕೇಸ್ ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.