ಧರ್ಮದ ನಿಜಸ್ವರೂಪವನ್ನು ಅರಿಯಿರಿ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು
ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #106
ಒಬ್ಬ ಸೂರ್ಯನೇ ಜಗತ್ತಿಗೆಲ್ಲಾ ಪ್ರಕಾಶಿಸುವಂತೆಯೂ, ಅಜ್ಞಾನಿ ಬಾಲಕರಿಗೆ ಭಿನ್ನ ಭಿನ್ನವಾಗಿ ಕಂಡಂತೆಯೂ, ಏಕಮಾತ್ರ ಗುರಿಯಾದ ಪರಮೇಶ್ವರನು ಅಜ್ಞಾನಿ ಜನರಿಗೆ ಭಿನ್ನ ಭಿನ್ನವಾಗಿ ಕಾಣುತ್ತಾನೆ. ಆದರೆ ಎಲ್ಲಾ ಮತಸಿದ್ಧಾಂತಗಳೂ ಒಬ್ಬ ಪರಮಾತ್ಮನನ್ನೇ ತಮ್ಮ ಗುರಿಯಾಗಿಟ್ಟುಕೊಂಡಿರುತ್ತವೆಂಬುದನ್ನು ಜ್ಞಾನಿಯು ಸಾಕ್ಷಾತ್ಕರಿಸಿರುತ್ತಾನೆ. ಎಲ್ಲಾ ಧರ್ಮಗಳ ತಿರುಳೂ ಒಂದೇ ಎಂದೂ, ಎಲ್ಲಾ ಧರ್ಮಗಳ ಉದ್ದೇಶ ಒಂದೇ ಎಂದು ಜ್ಞಾನಿಯು ತಿಳಿದು ಜಗತ್ತನ್ನೇ ತನ್ನ ಕುಟುಂಬವನ್ನಾಗಿ ಭಾವಿಸಿ, ವಿಶ್ವ ಕುಟುಂಬಿಯಾಗುತ್ತಾನೆ. ಎಲ್ಲರನ್ನೂ ಸಮಾನದೃಷ್ಟಿಯುಳ್ಳವನಾಗಿ ತನಗಿರುವ ಹಕ್ಕು ಬಾಧ್ಯತೆಗಳೇ ಇನ್ನಿತರರಿಗೂ ಇರುವುದೆಂದು ಮನವರಿಕೆಯುಳ್ಳವನಾಗಿ ಯಾರನ್ನೂ ಮೇಲು ಕೀಳು ಎಂದು ಭಾವಿಸದೆ ಎಲ್ಲೆಲ್ಲೂ ಆ ಪರಮೇಶ್ವರನ ಸಾಕ್ಷಾತ್ ಸ್ವರೂಪ ದರ್ಶನವನ್ನೇ ಅನುಭವಿಸತಕ್ಕವನಾಗಿ ಕೃತಕೃತ್ಯನಾಗುತ್ತಾನೆ. ಜನಜೀವನದಲ್ಲಿ ಕಂಡು ಬರುವ ಶುಚಿತ್ವಾಶುಚಿತ್ವ ಭಕ್ಷಾಭಕ್ಷ ಇತ್ಯಾದಿಗಳು ಮೇಲು ಕೀಳೆಂಬ ಭಾವನೆಯನ್ನು ಬೆಳೆಸಿ ಧರ್ಮದ ಸೋಗಿನಲ್ಲಿ ಸುರಕ್ಷಿತವಾಗಿ ಬಾಳಿ ಜಗತ್ತನ್ನೇ ಅಶಾಂತಿಗೊಳಿಸುತ್ತದೆ. ಸ್ವಮಹತ್ವಾಕಾಂಕ್ಷಿಗಳಾದ ಕೆಲವು ಸ್ವಾರ್ಥಿಗಳು ಧರ್ಮ ಸಿದ್ಧಾಂತಗಳಿಗೆಲ್ಲಾ ಸ್ವಾರ್ಥ ಸಾಧಕವಾದ ವ್ಯಾಖ್ಯೆಗಳನ್ನು ಕಲ್ಪಿಸಿ ಜಗತ್ತನ್ನು ದುಃಖಸಾಗರದಲ್ಲಿ ಮುಳುಗಿಸಿದ್ದಾರೆ. ಆದರೆ ಸತ್ಯವಾದ ಧರ್ಮವು ಎಲ್ಲರಿಗೂ ಒಂದೇ ಸಮನಾದ ಫಲವನ್ನು ಕೊಡುತ್ತದೆ. ಅದರಲ್ಲಿ ಮೇಲು ಕೀಳೆಂಬ ಭಾವನೆಗೆ ಅವಕಾಶವೇ ಇಲ್ಲ.
ಧರ್ಮವು ದೈಹಿಕ ವ್ಯವಹಾರಗಳಿಗೆ ಸಂಬಂಧಪಟ್ಟುದು, ದೈಹಿಕ ಕರ್ಮಾಚರಣೆಯು ಧರ್ಮಾಚರಣೆಯಾಗಲಾರದು. ಧರ್ಮವು ಅತ್ಮನ ಆಹಾರವು, ಆತ್ಮಿಕವಾಗಿಯೇ ವ್ಯವಹರಿಸಲ್ಪಡತಕ್ಕದ್ದು. ಯಾವುದರಿಂದ ಆತ್ಮವು ಚಿರಶಾಂತಿಯನ್ನು ಪಡೆಯುತ್ತದೋ ಅದು ಧರ್ಮ. ಈ ಧರ್ಮದ ಅವಶ್ಯಕತೆಯು ಈ ಜಗತ್ತಿಗೆ ಬೇಕಾಗಿರುವುದು, ಇದನ್ನು ಕಳೆದುಕೊಂಡು ಜಗತ್ತು ಶೋಕದಲ್ಲಿ ಮುಳುಗಿದೆ. ಈ ಜಗತ್ತನ್ನು ಮೇಲಕ್ಕೆತ್ತಲು ಇಂತಹ ಧರ್ಮದ ನಿಜಸ್ವರೂಪವನ್ನು ಪ್ರಚುರಪಡಿಸುವುದು ಅತ್ಯಾವಶ್ಯಕವಾಗಿದೆ.
ಶಂಕರ, ರಾಮಾನುಜ, ಬಸವೇಶ್ವರ, ಗೌತಮ ಮುಂತಾದ ಮತಾಚಾರ್ಯರು ಬೋಧಿಸಿರುವುದು ಇದೇ ಧರ್ಮವನ್ನು. ಮಹಾವಿಭೂತಿಗಳ ವ್ಯಾಖ್ಯೆಗಳಲ್ಲಿ ಧರ್ಮದ ಸ್ವರೂಪವು ಈ ರೀತಿಯಾಗಿಯೇ ನಿರ್ಣಯಿಸಲ್ಪಟ್ಟಿರುತ್ತೆ ಮತ್ತು ಇತ್ತೀಚಿನ ಧಾರ್ಮಿಕ ಮಹಾಪುರುಷರೂ ಸಹ ಇದೇ ಅರ್ಥವನ್ನು ಮುಕ್ತಕಂಠರಾಗಿ ಶ್ಲಾಘಿಸಿದ್ದಾರೆ. ಎಲ್ಲಿ ಧರ್ಮವಿದೆಯೋ ಅಲ್ಲಿ ಚಿರಶಾಂತಿ ಇದೆ. ಯಾವಾತನು ಧರ್ಮಾತ್ಮನೋ ಅವನೇ ಪ್ರಪಂಚದಲ್ಲಿ ಕೃತಕೃತ್ಯನು. ಯಾವುದು ಧರ್ಮಪ್ರಧಾನವಾದ ದೇಶವೋ ಅದು ದೇಶಗಳಿಗೆಲ್ಲಾ ಮುಕುಟಪ್ರಾಯವಾದುದು. ಇಂತಹ ಧಾರ್ಮಿಕೋನ್ನತಿಯು ಆದರಣೀಯವಾದುದು.
ಧರ್ಮದ ನಿಜಭಾವವು ಜನಾಂಗದ ಹೃದಯದಲ್ಲಿ ವ್ಯಾಪಿಸಬೇಕು. ಈ ಧರ್ಮದ ಉನ್ನತಿಯು ಎಲ್ಲಿದೆಯೋ ಅಲ್ಲಿ ಸಾಮಾಜಿಕ, ಆರ್ಥಿಕ, ನೈತಿಕ, ಎಲ್ಲಾ ಉನ್ನತಿಗಳು ಇದ್ದೆ ಇರುತ್ತವೆ. ಪ್ರಪಂಚದ ಕಲ್ಯಾಣಕ್ಕೆ ಎಲ್ಲದಕ್ಕಿಂತಲೂ, ಧಾರ್ಮಿಕೋನ್ನತಿಯೇ ಪ್ರಧಾನವಾದುದು. ಭಾರತ ದೇಶವು ಧರ್ಮದ ಜನ್ಮಭೂಮಿಯು. ಧರ್ಮವೆಂಬ ಈ ಅಮೂಲ್ಯ ಆವಿಷ್ಕಾರವನ್ನು ನಮ್ಮ ಹಿರಿಯರು ಕಂಡು ಹಿಡಿದರು. ಅನುಪಮ ಧಾರ್ಮಿಕ ಸಿದ್ಧಾಂತಗಳನ್ನು ಜಗತ್ತಿನ ಶಾಶ್ವತ ಶಾಂತಿಗೆಂದು ನಮ್ಮೆದುರಿನಲ್ಲಿಟ್ಟಿರುತ್ತಾರೆ. ಅವರ ಸಂತಾನವಾದ ನಾವು ಕಣ್ಣೆದುರಿನಲ್ಲಿರುವುದನ್ನೂ ಸಹ ನೋಡಲಸಮರ್ಥರಾಗಿದ್ದೇವೆ. ಸತ್ಯವಾದ ಜ್ಞಾನೋದಯವಿಲ್ಲದೆ ಅಂಧಕಾರದಲ್ಲಿದ್ದೇವೆ. ಇಂತಹ ಧರ್ಮಪ್ರಚಾರಕ್ಕಾಗಿಯೇ ಪೂರ್ವಜರು ಮಠ-ಮಹಂತುಗಳನ್ನು ಪ್ರಾಣಪಣವನ್ನಾಗಿಟ್ಟು ಸ್ಥಾಪಿಸಿದರು. ಮಠಾಧಿಪತಿಗಳು ತಮ್ಮ ತಮ್ಮ ಕರ್ತವ್ಯವನ್ನರಿತು ಜನಾಂಗದಲ್ಲಿ ನಿಜಧರ್ಮದ ಪ್ರಸಾರವನ್ನು ಮಾಡಿ ಪರಮತಸಹಿಷ್ಣುತೆಯನ್ನು ಜನತೆಗೆ ಕಲಿಸಬೇಕಾಗಿದೆ.
ಪ್ರತಿಯೊಂದು ಸಂಪ್ರದಾಯದಲ್ಲೂ ತಮ್ಮ ತಮ್ಮ ಮತಪ್ರಚಾರಕ್ಕೆ ಮಠಗಳಿರುತ್ತವೆ. ಅವರೆಲ್ಲರೂ ಈ ರೀತಿ ಯತ್ನಮಾಡಿ ಜನಜೀವನದಲ್ಲಿ ಪರಮತಸಹಿಷ್ಣುತೆಯನ್ನು ಹೆಚ್ಚಿಸಿದರೆ ಪರಸ್ಪರ ಸೌಹಾರ್ದವು ಬೆಳೆದು ಜನರು ಇಹಪರಗಳೆರಡನ್ನೂ ತಿಳಿಯಲು ಸಮರ್ಥರಾಗಿ ಕೃತಕೃತ್ಯರಾಗುತ್ತಾರೆ. ಹಿಂದುವಾಗಲಿ, ಮಹಮ್ಮದೀಯನಾಗಲಿ, ಕ್ರೈಸ್ತನಾಗಲಿ ಎಲ್ಲರೂ ಪರಮೇಶ್ವರನ ಮಕ್ಕಳಾಗಿದ್ದಾರೆ, ಎಲ್ಲರಲ್ಲೂ ಪರಮೇಶ್ವರನು ಸಮಾನ ಭಾವವುಳ್ಳವನಾಗಿದ್ದಾನೆ. ಇದನ್ನರಿತು ವ್ಯವಹರಿಸಿದರೆ ಜಗತ್ತಿನ ಶಾಶ್ವತ ಶಾಂತಿಯನ್ನು ಕೊಡುತ್ತದೆ. “ವಿದ್ಯಾವಿನಯಸಂಪನ್ನೇ, ಬ್ರಾಹ್ಮಣೇ, ಗವಿ, ಹಸ್ತಿನಿ, ಶುನಿ ಚೈವ ಸ್ವಪಾಕೇ ಚ ಪಂಡಿತಾಃ ಸಮದರ್ಶಿನಃ॥" ಎಂಬ ಗೀತೋಕ್ತಿಯಂತೆ ಬುದ್ಧಿವಂತರು ದೈಹಿಕವಾಗಿ ಭಿನ್ನ ಭಿನ್ನಾವಯವ ಸಂಪನ್ನವಾಗಿದ್ದರೂ, ಆತ್ಮೀಕವಾಗಿ, ವಿದ್ಯಾವಿನಯಾದಿ ಗುಣಯುತನಾದ ಬ್ರಾಹ್ಮಣನನ್ನೂ, ಹಸುವನ್ನೂ, ಆನೆಯನ್ನೂ, ನಾಯಿಯನ್ನೂ ಮತ್ತು ಚಂಡಾಲನನ್ನೂ ಸಹ ಒಂದೇ ಸಮಾನವಾದ ದೃಷ್ಟಿಯಿಂದ ನೋಡುತ್ತಾರೆ. ಅಂದರೆ ಎಲ್ಲೆಲ್ಲೂ ಆತ್ಮದರ್ಶನವನ್ನೇ ಪಡೆಯುತ್ತಾರೆ.
ಜನಾಂಗದ ಸಹಜವಾದ ಉನ್ನತಿಗೆ ಧರ್ಮಜಾಗೃತಿಯೂ, ಐಕ್ಯಮತ್ಯವೂ, ವಿದ್ಯಾಭಿವೃದ್ಧಿಯೂ, ಪರಮತಸಹಿಷ್ಣುತೆಯೂ ಅತ್ಯವಶ್ಯವಾದ ಸಾಧನಗಳು. ಅದರಲ್ಲೂ ಧರ್ಮಜಾಗೃತಿಯೇ ಅತ್ಯಂತ ಪ್ರಧಾನವಾದುದು. “ಧ್ರೀಯತೆ ಅನೇನ ಇತಿ, ಧರ್ಮಃ, ಧರತೀತಿಧರ್ಮಃ'' ಎನ್ನುವಂತೆ ಲೋಕಸತ್ತೆಯು, ಯಾವುದರಿಂದ ಸುರಕ್ಷಿತವಾಗಿ ನಡೆಸಲ್ಪಡುತ್ತೋ ಅದು ಧರ್ಮ. ಅಂದರೆ ಎಲ್ಲೆಲ್ಲೂ ಶಾಂತಿ ಸುಖಸಮಾಧಾನಗಳು ನಿರಂತರವಾಗಿ ನೆಲಸಿರುವುದೇ ಧರ್ಮಾಚರಣೆಯ ಫಲಿತಾಂಶ. ದೇಹಕ್ಕೆ ಅಹಾರವೆಷ್ಟು ಅವಶ್ಯಕವೋ ಅಷ್ಟೇ ಆತ್ಮನಿಗೆ ಜ್ಞಾನದ ಅವಶ್ಯಕತೆ ಇದೆ. ಈ ದೇಹದ ಮರೆಯಲ್ಲಿರುವ ಜೀವಾತ್ಮನು ಪರಮಾತ್ಮನ ಪ್ರೇರಣೆಯಂತೆ ಜಗತ್ತಿನಲ್ಲಿ ವ್ಯವಹರಿಸುತ್ತಾನೆ. ಜೀವಾತ್ಮನಿಗೆ ಪರಮಾತ್ಮನೇ ಮೂಲಸ್ಥಾನವು, ಅಜ್ಞಾನ ಆವೃತವಾದ ಆತ್ಮವೇ ಈ ದೇಹವನ್ನಾಶ್ರಯಿಸಿ ಜೀವಾತ್ಮನೆನಿಸಿಕೊಳ್ಳುತ್ತದೆ. ಜ್ಞಾನಸ್ವರೂಪವಾದ ಆತ್ಮವು ಪರಮಾತ್ಮನೆನಿಸಿಕೊಳ್ಳುತ್ತದೆ. ಆತ್ಮನಿಗೆ ಜ್ಞಾನವೇ ಆಹಾರವು, ಆತ್ಮನು ಜ್ಞಾನಪರಿಪೂರ್ಣನಾದಾಗ ಲೋಕಸತ್ತೆಯು ಸುಖಶಾಂತಿಯಲ್ಲಿ ಲೋಲಾಡುತ್ತದೆ. ಪ್ರಪಂಚದಲ್ಲಿ ಸುಖಸಾಧನಗಳು ಎಷ್ಟೇ ಅವಿಷ್ಕೃತವಾಗಲಿ ಅವೆಂದೂ ಜಾಗತಿಕ ಚಿರಶಾಂತಿಯನ್ನುಂಟು ಮಾಡಲಾರವು. ಯಾವಾಗ ಪ್ರತಿ ದೇಹದಲ್ಲಿರುವ ಜೀವಾತ್ಮನೂ ಪರಿಪೂರ್ಣ ಜ್ಞಾನಭರಿತನಾಗುತ್ತಾನೋ, ಅಂದೇ ಸತ್ಯವಾದ ಶಾಂತಿಯು ನೆಲೆಗೊಳ್ಳತ್ತದೆ. ಅಂತಹ ಶಾಂತಿಯೇ ಧರ್ಮದ ಪ್ರತಿಫಲ. ಅರ್ಥತಃ ನೋಡಿದರೆ ಧರ್ಮಸಿದ್ಧಾಂತದಲ್ಲಿ ಭಿನ್ನತೆಗೆ ಅವಕಾಶವೇ ಇಲ್ಲ. ಅದರೂ ''ಪಿಂಡೇಪಿಂಡೇ ಮತಿರ್ಭಿನ್ನಾ, ತುಂಡೇತುಂಡೇ ಸರಸ್ವತೀ” ಎನ್ನುವಂತೆ ಪ್ರತಿತಲೆಗೂ ಬುದ್ದಿಯು ಭಿನ್ನಸ್ವರೂಪವಾಗಿರುತ್ತೆ. ಎಲ್ಲರ ಗುರಿಯೂ, ಎಲ್ಲರ ಫಲಾನುಭವವೂ ಏಕರೂಪವಾದುದೇ ಆದರೂ, ಸಾಧನ ಮಾರ್ಗಗಳೂ ಮತ್ತು ಅದನ್ನು ಪ್ರತಿಪಾದಿಸತಕ್ಕ ಸಿದ್ಧಾಂತಗಳು ಭಿನ್ನವಾಗಿರುವುದು ಸಹಜವಾಗಿದೆ. ಪ್ರತಿಯೊಂದು ಧರ್ಮ ಸಿದ್ಧಾಂತಕ್ಕೂ ಒಂದು ಗುರಿಯಿದೆ. ಒಬ್ಬ ದೇವನೇ ಎಲ್ಲಾ ಮತಗಳಿಗೂ ಗುರಿಯಾಗಿರುತ್ತಾನೆ. ಒಂದು ನಗರಕ್ಕೆ ಬರುವ ಮಾರ್ಗಗಳು ಚತುರ್ದಿಕ್ಕುಗಳಿಂದಲೂ ಅನೇಕವಾಗಿರುವಂತೆಯೂ, ಪ್ರತಿ ಮಾರ್ಗವೂ ಆ ಒಂದೇ ನಗರವನ್ನು ಗುರಿಯಾಗಿಟ್ಟುಕೊಂಡಿರುವಂತೆಯೂ, ಧರ್ಮಗಳ ಮತ್ತು ಅದರ ಗುರಿಯ ವಿಷಯದಲ್ಲಿ ಸಾಮ್ಯವಿದೆ.
ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು
(*ಸಂದರ್ಭ : ನೂತನವಾಗಿ ಪಟ್ಟಾಭಿಷಕ್ತರಾದ ಮೇಲೆ ಜನ್ಮಸ್ಥಳವಾದ ಮುತ್ತುಗದೂರು ಗ್ರಾಮದಲ್ಲಿ ದಿನಾಂಕ 23.9.1940 ರಂದು ಏರ್ಪಡಿಸಿದ ಸ್ವಾಗತ ಸಮಾರಂಭದ ಆರ್ಶೀರ್ವಚನ: ಸಂಕಲ್ಪ ಪುಸ್ತಕದ ಅಯ್ದ ಭಾಗ ಪುಟ 15-18)