ಸಂಘಟನೆಗೆ ಅಡ್ಡಿಪಡಿಸುವವರ ವಿರುದ್ಧ ಸಿಡಿದೇಳಿ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜವನ್ನು ಸಂಘಟನೆ ಮಾಡುವ ವಿಚಾರದಲ್ಲಿ ಯಾವುದೇ ರಂಧ್ರಗಳಿಲ್ಲ. ಕೆಲವರು ಈಗ ರಂಧ್ರ ಕೊರೆಯುವ ಕೆಲಸ ಮಾಡುತ್ತಿದ್ದು ಅವರನ್ನು ಬಲೆ ಹಾಕಬೇಕಿದೆ. ರಂಧ್ರ ಕೊರೆಯುವವರಿಗೆ ವೀರಭದ್ರನ ಅವತಾರ ತಾಳಲೇಬೇಕಾಗುತ್ತದೆ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಎಚ್ಚರಿಕೆ ನೀಡಿದರು.

ನಗರದ ಚೌಕಿ ಮಠದ ಆವರಣದಲ್ಲಿ ಶುಕ್ರವಾರ ಶಿವಮೊಗ್ಗ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯಿಂದ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿದ್ದು ವೀರಭದ್ರ ಜಯಂತಿ ಒಂದು ಜಾತಿಗೆ ಮೀಸಲಾಗಬಾರದು ಎಂದರು.

ಇಂದು ದೀಪ ಹಚ್ಚುವುದು ತುಂಬಾ ಕಷ್ಟ. ಬೆಂಕಿ ಹಚ್ಚುವುದು ಸುಲಭವಾಗಿದೆ. ದೇಶದಲ್ಲಿ ದೀಪ ಹಚ್ಚುವ ಕೆಲಸ ಆಗಬೇಕಿದೆ. ರಾಜಕೀಯಕ್ಕಾಗಿ ಧರ್ಮವನ್ನು ದುರುಪಯೋಗ ಮಾಡಿಕೊಳ್ಳಬಾರದು. ತಾವು ಎಲ್ಲಿರಬೇಕೆಂಬ ಅರಿವು ಜನರಿಗೆ ಇದ್ದರೆ ದೇಶಾದ್ಯಂತ ನಡೆಯುತ್ತಿರುವ ಕೋಲಾಹಲ ಎಂದೋ ನಿಂತು ಹೋಗುತ್ತಿತ್ತು. ಇಂದು ಧರ್ಮ ಕ್ಷೇತ್ರಗಳೇ ಕುರುಕ್ಷೇತ್ರಗಳಾಗಿವೆ. ಇದಕ್ಕೆ ಸಮಾಜ ಸಿಡಿದೆದಿಲ್ಲ ಎಂದಲ್ಲ. ಸಮಾಜ ಸಿಡಿದೆದ್ದಿದೆ. ಅರಮನೆಗಳು ಅಳಿಸಿ ಹೋಗಿವೆ. ಆದರೆ ಗುರುಮನೆಗಳು ಇಂದಿಗೂ ಇವೆ. ಮುಂದೆಯೂ ಇರಲಿವೆ. ಧರ್ಮದ ಬಗ್ಗೆ ಭಾರತೀಯರಿಗೆ ಇರುವ ಅಪಾರ ನಂಬಿಕೆಯೇ ಇದಕ್ಕೆ ಕಾರಣ ಎಂದು ಹೇಳಿದರು.

ಲಿಂಗಾಯತರು ನುಡಿ ವೀರರೋ ಹೊರತು ನಡೆ ವೀರರಲ್ಲ. ನುಡಿಯಲ್ಲಿ ಜಾಣರಾಗಿದ್ದೇವೆ. ಆದರೆ ನುಡಿದಂತೆ ನಡೆಯುತ್ತಿಲ್ಲ. ಈ ಬಗ್ಗೆ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಕೆಲವರು ವೇದಿಕೆಯಲ್ಲಿ ವೀರತನ ತೋರಿಸಿದ್ದಾರೆ. ವೀರಭದ್ರನ ಉತ್ಸಾಹ ಬಂದಿರುವುದು ಸಮಾಧಾನ ತರಿಸಿದೆ. ನುಡಿಯಲ್ಲಿ ಎಚ್ಚೆತ್ತುಕೊಳ್ಳುವುದಕ್ಕಿಂತ ನಡೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಸಮಾಜದ ವಿಶ್ಲೇಷಣೆ ಮಾಡುವ ಕಡೆಗೆ ನಮ್ಮನ್ನು ನಾವು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಸಮಾಜದ ಅಸ್ತಿತ್ವಕ್ಕೆ ನೆಲೆ, ಬೆಲೆ ಬರುತ್ತದೆ. ನಮ್ಮ ಸಮಾಜಕ್ಕೆ ಯಾವುದೇ ಮಾಡೆಲ್ ಗಳು ಬೇಡ. 12ನೇ ಶತಮಾನದ ಮಹಾ ಮಾರ್ಗದಲ್ಲಿ ನಡೆದರೆ ಸಮಾಜದ ಎಲ್ಲ ಅಂಕು ಡೊಂಕುಗಳಿಗೆ ಪರಿಹಾರ ಸಿಗಲಿದೆ. ಸಮಾಜ, ಮಾನವೀಯತೆ ವಿರುದ್ಧ ಕ್ರಿಯೆ ನಡೆಯುತ್ತವೆಯೋ ಅಲ್ಲಿ ವೀರಭದ್ರ ಜನ್ಮ ತಾಳಿದ್ದು ಪ್ರತಿಯೊಬ್ಬರು ಸಮಾಜದ ಪುನರುತ್ಥಾನದ ಕ್ರಿಯೆ ಮಾಡಬೇಕಿದೆ ಎಂದರು.

ವೀರಶೈವ ಲಿಂಗಾಯತ ಸಮಾಜ ಮತ್ತು ಉಪ ಪಂಗಡಗಳು ಒಂದಾಗಬೇಕು. ಸಮಾಜಕ್ಕೆ ಸಂಕಷ್ಟ ಒದಗಿದಾಗ ಎಲ್ಲರೂ ವೀರಭದ್ರರಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ನಮ್ಮ ಸಮಾಜ ಕೂಡ ಶ್ರದ್ಧಾ ಭಕ್ತಿಯಿಂದ ವೀರಭದ್ರ ದೇವರಿಗೆ ನಡೆದುಕೊಳ್ಳುತ್ತದೆ. ಸಮಾಜದ ಸಂಘಟನೆ ಇನ್ನಷ್ಟು ಬೆಳೆಯಬೇಕು. ಸಮುದ್ರದ ರೀತಿಯಲ್ಲಿ ಎಲ್ಲರೂ ಒಂದಾಗಬೇಕು. ಅನೇಕ ಶಕ್ತಿಗಳು ವೀರಶೈವ ಲಿಂಗಾಯತ ಸಮಾಜದ ಉಪಪಂಗಡಗಳನ್ನು ಒಡೆಯಲು ನೋಡುತ್ತಿದೆ. ಆದರೂ ಕೂಡ ಸಮಾಜ ಒಂದಾಗಿ ನಿಲ್ಲುತ್ತದೆ ಎಂಬ ಆಶಯ ನನಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ದೇವಸ್ಥಾನದಿಂದ ಪೂರ್ಣಕುಂಭ ಮೆರವಣಿಗೆ ರುದ್ರಾಭಿಷೇಕ ಮತ್ತು ಶಿಲ್ಪವೈಭವ ಎಂಬ ಆಕರ್ಷಕ ಕಾರ್ಯಕ್ರಮ ನಡೆಯಿತು. 

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ಪ್ರದೀಪ್ ಕಂಕಣವಾಡಿ ಅವರು, ಶ್ರೀ ಶಿವರಾಜ್ ಅವರು, ಶ್ರೀ ಧನರಾಜ್ ಅವರು, ಶ್ರೀ ಜ್ಯೋತಿಪ್ರಕಾಶ್ ಅವರು, ಶ್ರೀ ಅವಿನಾಶ್ ಅವರು, ಶ್ರೀ ಯೋಗೀಶ್ ಅವರು ಸೇರಿದಂತೆ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.