ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

  •  
  •  
  •  
  •  
  •    Views  

ಹೊನ್ನಾಳಿ (ದಿ. ಸೆ 15): 

ಭಕ್ತರಿಂದ ಮಠವೇ ಹೊರತು ರಾಜಕಾರಣಿಗಳಿಂದ ಅಲ್ಲ, ಮಠದ ಘನತೆ, ಗೌರವ, ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇವೆ, ನಿಮಗೆ ಏನಾದರೂ ಅನುಮಾನವಿದ್ದರೆ ಮಠಕ್ಕೆ ಬನ್ನಿ. ಶಿಷ್ಯರ ಮುಂದೆ ಬಹಿರಂಗ ವೇದಿಕೆಯಲ್ಲಿ ಚರ್ಚೆ ಮಾಡಿ. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ರೆಸಾರ್ಟ್ ಗಳಲ್ಲಿ ಮಠ ಮತ್ತು ಗುರುಗಳ ಬಗ್ಗೆ ಹಗುರವಾಗಿ ಮಾತನಾಡವುದಲ್ಲ ಎಂದು ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಟೀಕಾಕಾರರಿಗೆ ಮುಕ್ತ ಪಂಥಾಹ್ವಾನ ನೀಡಿದರು.

ಭಾನುವಾರ ತಾಲೂಕಿನ ಎಂ.ಹನುಮನಹಳ್ಳಿ ಗ್ರಾಮದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಸಾಧು ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಠದ ಎಲ್ಲಾ ಆಸ್ತಿ ಪಾಸ್ತಿಗಳು ಮಠಕ್ಕೆ ಸೇರಿದ್ದು, ಯಾವುದೇ ಖಾಸಗಿ ವ್ಯಕ್ತಿಗೆ ಅಲ್ಲ ಎಂದು ಟ್ರಸ್ಟ್ ಡೀಡ್ ನಲ್ಲಿ ಬರೆಯಲಾಗಿದೆ. ಸರಿಯಾಗಿ ಓದಿ ತಿಳಿದುಕೊಳ್ಳಿ, ಮನಸ್ಸಿಗೆ ಬಂದಂತೆ ಹರಟುವುದಲ್ಲ.

ಪ್ರಜಾಪ್ರಭುತ್ವದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಇರುತ್ತವೆ. ನ್ಯೂನ್ಯತೆಗಳನ್ನು ಪ್ರಶ್ನೆ ಮಾಡುವ ಸ್ವಾತಂತ್ರ್ಯ ವಿರೋಧ ಪಕ್ಷಗಳಿಗಿದೆ. ಅದಕ್ಕೆ ಉತ್ತರ ಕೊಡುವ ಕೆಲಸವನ್ನು ಆಡಳಿತ ಪಕ್ಷ ಮಾಡಬೇಕಾಗುತ್ತದೆ. ಮಠದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಉತ್ತರ ಕೊಡುವ ನೈತಿಕ ಶಕ್ತಿ ತಮಗಿದೆ ಎಂದು ಸ್ವಾಮೀಜಿಯವರು ನುಡಿದರು. ಈಗ ಎದ್ದಿರುವ ವಿವಾದ ಭಕ್ತರು ಮತ್ತು ಮಠದ ನಡುವಿನ ಸಂಘರ್ಷವಲ್ಲ, ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ ಎಂದು ಹೇಳಿದ ಸ್ವಾಮೀಜಿ, ಗುರುಗಳು ಟ್ರಸ್ಟ್ ಹೆಸರಿನಲ್ಲಿ ಎಲ್ಲಾ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎನ್ನುವವರು ಭಕ್ತರ ಎದುರು ಬಹಿರಂಗ ಸಭೆಯಲ್ಲಿ ಆರೋಪಗಳನ್ನು ಸಾಬೀತು ಪಡಿಸಲಿ, ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರಲಿ ಎಂದು ಸವಾಲು ಹಾಕಿದರು.

ತೆರಿಗೆ ವಿನಾಯಿತಿಗಾಗಿ ದೊಡ್ಡ ಗುರುಗಳು ಮಾಡಿದ ಪ್ರಯತ್ನವನ್ನು ತಾವು ಮುಂದುವರೆಸಿಕೊಂಡು ಹೋಗುವ ಸಂಬಂಧ ಹೊಸ ಕಾನೂನಿನಡಿ ಆರ್ಥಿಕ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆದಿದೆ. ಇದರಿಂದ ನಮ್ಮ ಮಠಕ್ಕೆ ಕೇಂದ್ರ ಸರ್ಕಾರದಿಂದ ಆದಾಯ ತೆರಿಗೆ ವಿನಾಯಿತಿ ಮುಂದುವರಿಕೆ ಆದೇಶ ಸಿಕ್ಕಿದೆ. ಇದರಿಂದ ಅನುಕೂಲವಾಗಿದ್ದು ನಮಗೋ ಅಥವಾ ಮಠಕ್ಕೋ ಎಂದು ಭಕ್ತರನ್ನು ಪ್ರಶ್ನಿಸಿದರು. ಇದನ್ನು ಅರಿಯದ ಕೆಲವರು ಮಠದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ನಾವು ಏನನ್ನೂ ಮುಚ್ಚಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. 

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಗುರುಗಳು ಸಮಾಜದ ಉದ್ದಾರಕ್ಕಾಗಿ ದುಡಿಯುತ್ತಿದ್ದಾರೆಯೇ ವಿನಹಃ ಅವರು ಏನನ್ನೂ ತಿಂದಿಲ್ಲ ಇಂಥ ಗುರುಗಳನ್ನು ಟೀಕಿಸುತ್ತೀರಾ ಎಂದು ಪ್ರಶ್ನಿಸಿದರು. ಮುಂದಿನ ವರ್ಷದ ಅಕ್ಕಿ ಸಮರ್ಪಣೆಯನ್ನು ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಇಟ್ಟುಕೊಳ್ಳಲು ಅಲ್ಲಿನ ಗ್ರಾಮಸ್ಥರು ಮನವಿ ಮಾಡಿದ್ದರಿಂದ ಗುರುಗಳ ಅಪ್ಪಣೆ ಪಡೆದು ಮಾ ಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಾಧು ವೀರಶೈವ ಸಮಾಜದ ರಾಜ್ಯಾಧ್ಯಕ್ಷ ಬಸವರಾಜಪ್ಪ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕ ಬಿ.ಪಿ.ಹರೀಶ್, ಶಿಮುಲ್ ನಿರ್ದೇಶಕ ಬಿ.ಜಿ.ಬಸವರಾಜಪ್ಪ, ಅಧ್ಯಕ್ಷ ಎಚ್. ಎ. ಗದ್ದಿಗೇಶ್ ಮಾತನಾಡಿದರು. ನ್ಯಾಮತಿ ತಾ. ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಶಿವಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಜಿ.ಪಂ. ಮಾಜಿ ಸದಸ್ಯ ಕೆ.ಎಚ್. ಗುರುಮೂರ್ತಿ, ಕೆಂಗಲಹಳ್ಳಿ ಷಣ್ಮುಖಪ್ಪ, ಶಿವ ಬ್ಯಾಂಕಿನ ಅಧ್ಯಕ್ಷ ಉಸ್ಥಿತರಿದ್ದರು.