ಸಮಾಜದಲ್ಲಿ ಸುಸಂಸ್ಕೃತಿ ಬೆಳೆಸಿದ ಹಿರಿಯ ಶ್ರೀಗಳಿಗೆ ನೀವು ಸಲ್ಲಿಸಿದ ಭಕ್ತಿಸಮರ್ಪಣೆ ಮಾದರಿಯಾಗಿದೆ :ಸಿರಿಗೆರೆಶ್ರೀ
ಮಲೇಬೆನ್ನೂರು : ಗುರುಗಳ ಆದೇಶವನ್ನು ಉಲ್ಲ೦ಘಿಸುವ ಮಾತು ಸಿರಿಗೆರೆ ಮಠದ ಪರಂಪರೆಯಲ್ಲಿ ಇಲ್ಲ. ಅಂತಹ ಮಠದ ಪರಂಪರೆಗೆ ಚ್ಯುತಿ ಬರದಂತೆ ನಡೆದುಕೊಳ್ಳಿ ಎ೦ದು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಭಕ್ತರಿಗೆ ಕಿವಿಮಾತು ಹೇಳಿದರು.
ಶನಿವಾರ ಯಲವಟ್ಟಿ ಗ್ರಾಮದಲ್ಲಿ ಹರಿಹರ ತಾ. ಸಾಧು ವೀರಶೈವ ಸಮಾಜದಿಂದ ಹಮ್ಮಿಕೊಂಡಿದ್ದ ಸಿರಿಗೆರೆಯಲ್ಲಿ ಇದೇ ದಿನಾಂಕ 24ರಂದು ಜರುಗುವ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಮ್ಮ ಮಠದ ಇತಿಹಾಸ ಮೈ ನವಿರೇಳಿಸುವಂತಿದ್ದು, ಮಠದಲ್ಲಿ ಏನೇ ತೀರ್ಮಾನ ಮಾಡಿದರೂ ಅದು ಭಕ್ತರ ಹಿತಕ್ಕಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ಕಾರಣಕ್ಕಾಗಿ ಹಿರಿಯ ಗುರುಗಳ ಮೇಲೂ ಆರೋಪ ಬಂದಿತ್ತು. ಈಗ ನಮ್ಮ ಮೇಲೂ ಬಂದಿದೆ. ಆದರೆ ಗುರುಗಳ ಮೇಲೆ ಕೊಲೆ ಆರೋಪ ಬಂದಿತ್ತೆಂದು ಸ್ವತಃ ಅವರೇ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದಿದ್ದಾರೆ. ಅವರ ಮೇಲೆ ಆರೋಪ ಮಾಡಿದ್ದ ವ್ಯಕ್ತಿಗಳ ಸಮ್ಮುಖದಲ್ಲಿಯೇ ಆರೋಪ ಸುಳ್ಳು ಎಂದು ಸಾಕ್ಷಿ ಸಮೇತ ಗುರುಗಳು ಸಾಬೀತು ಪಡಿಸಿದ್ದರು.
ಗುರುಗಳಿಗೆ ಮಾಡಿದ್ದ ಆರೋಪಗಳಿಗೆ ಹೋಲಿಸಿದರೆ ನಮ್ಮ ಮೇಲೆ ಮಾಡಿರುವ ಆರೋಪ ಗುಲಗಂಜಿಯಷ್ಟದ್ದು. ಈ ಬಗ್ಗೆ ಭಕ್ತರು ಗೊಂದಲ ಅಥವಾ ಆತಂಕಕ್ಕೆ ಒಳಗಾಗಬೇಕಿಲ್ಲ.
ನಮ್ಮ ಸಮಾಜದಲ್ಲಿ ಓರೆ-ಕೋರೆಗಳಿಲ್ಲ. ಸಮಾಜ ಕೊರೆಯುವ ರಂಧ್ರಗಳು ಬಂದರೆ ಅವುಗಳನ್ನು ತಡೆಯುವ ಶಕ್ತಿ ನಮ್ಮ ಮಠಕ್ಕಿದೆ. ಏನೇ ಸವಾಲು-ಸಂಕಷ್ಟ ಬಂದರೂ ಅವರುಗಳನ್ನು ಎದುರಿಸುವ ಶಕ್ತಿ ಮಠ ಹಾಗೂ ಸಮಾಜಕ್ಕಿದೆ. ಅಸಮಾನ್ಯ ಘಟನೆ-ಪವಾಡಗಳೂ ನಮ್ಮ ಮಠದ ಇತಿಹಾಸದಲ್ಲಿ ನಡೆದು ಹೋಗಿವೆ. ಮರುಳಸಿದ್ದರ ಕಾಲದಲ್ಲಿ ಸಮಾಜದ ಉನ್ನತಿಗಾಗಿ ಎದುರಿಸದ ಸವಾಲುಗಳು ಇತಿಹಾಸ ಪುಟ ಸೇರಿವೆ ಎಂದು ಅಣಜಿ ಕೆರೆಯಲ್ಲಿ ಮರುಳಸಿದ್ಧರನ್ನು ಸಾಯಿಸಲು ಹೋಗಿದ್ದ ವಿಷಯವನ್ನು ಶ್ರೀಗಳು ಪ್ರಸ್ತಾಪಿಸಿದರು.
ದಾವಣಗೆರೆಯಲ್ಲಿ ನಮ್ಮ ವಿರುದ್ಧ ನಡೆಸಿದ ಸಭೆಯಿಂದ ಮನನೊಂದ ಭಕ್ತರು ತಾವೇ ತಾವಾಗಿ ಸಿರಿಗೆರೆಗೆ ಬ೦ದು ನಮಗೆ ಭಕ್ತಿ-ಭಾವ ತೋರಿಸಿದ್ದಾರೆಯೇ ಹೊರತು ನಾವ್ಯಾರನ್ನೂ ಸಿರಿಗೆರೆಗೆ ಬನ್ನಿ ಎಂದು ಕರೆದಿರಲಿಲ್ಲ. ನಾವು ಮಠಕ್ಕೆ ಬ೦ದಾಗಿನಿಂದ ಇಲ್ಲಿಯವರೆಗೆ 8 ಕೋಟಿ ರೂ. ಪಾದ ಕಾಣಿಕೆ ಬಂದಿದ್ದು, ಆ ಹಣದಲ್ಲಿ 25 ಲಕ್ಷ ರೂ.ಗಳನ್ನು ನಮಗೆ ಚಿಕಿತ್ಸೆ ನೀಡಿದ ಸ್ಪರ್ಶ ಆಸ್ಪತ್ರೆಗೆ ಡಾ. ಶರಣ್ ಪಾಟೀಲ್ ಅವರು ನಮಗೆ ಚಿಕಿತ್ಸೆ ನೀಡಿದಾಗ ಯಾವತ್ತೂ ಹಣ ಪಡೆದಿರಲಿಲ್ಲ. ಆದರೆ ನಾವು ಅವರ ಬಳಿ ನಮ್ಮ ಮಠದ ಸಾಕಷ್ಟು ಭಕ್ತರನ್ನು ಚಿಕಿತ್ಸೆಗಾಗಿ ಕಳುಹಿಸಿರುತ್ತೇವೆ. ಕೆಲವರಿಗೆ ಪೂರ್ತಿ ರಿಯಾಯಿತಿ ಮಾಡಿಸಿದ್ದೇವೆ. ಆ ಕಾರಣಕ್ಕಾಗಿ ನಾವೇ ಬಲವಂತವಾಗಿ ಅವರಿಗೆ ಚೆಕ್ ನೀಡಿದ್ದೇವೆ. ಆದರೆ, ಕೆಲವರು ಇದನ್ನು ಬೇರೆ ರೀತಿ ಅರ್ಥ ಕಲ್ಪಿಸಿ, ಅಪಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕೋರ್ಟಿಗೂ ಹೋಗಿದ್ದಾರೆ. ಸಿರಿಗೆರೆ ಮಠಕ್ಕೆ ಕೋರ್ಟ್ ಹೊಸದೇನೂ ಅಲ್ಲ. ಸತ್ಯಕ್ಕಾಗಿ ಮಠ ಮೊದಲಿನಿ೦ದಲೂ ಹೋರಾಟ ಮಾಡಿ ಗೆದ್ದಿದೆ. ಈಗಲೂ ಸತ್ಯ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಶ್ರೀಗಳು ಹೇಳಿದರು.
ಮಠ ಹುಟ್ಟಿರುವುದು ರಾಜಕೀಯಕ್ಕಾಗಿ ಅಲ್ಲ. ಶಾಸಕರು, ಮಂತ್ರಿಗಳಾಗವುದು ನಿಮ್ಮಿ೦ದಲೆ, ಗುರುಗಳಾಗುವುದೂ ನಿಮ್ಮಿ೦ದಲೆ. ಆದರೆ ರಾಜಕಾರಣಿಗಳು ಮಾಜಿಗಳಾಗುತ್ತಾರೆ. ಗುರುಗಳಾದವರು ಮಾಜಿ ಆಗಲ್ಲ ಎಂದು ಈ ಹಿಂದೆ ಹಿರಿಯ ಗುರುಗಳ ಕಾಲದಲ್ಲಿ ನಡೆದ ಹನಗವಾಡಿ ಸಿದ್ಧವೀರಪ್ಪ ಮತ್ತು ಕೊಂಡಜ್ಜಿ ಬಸಪ್ಪನವರ ರಾಜಕೀಯ ಹಾಗೂ ಗುರುಗಳ ಸಿದ್ದವೀರಪ್ಪನವರ ನಡುವೆ ಇದ್ದ ಕೋಪ, ಭಕ್ತಿ, ಪ್ರೀತಿಯ ಬಗ್ಗೆ ವಿವರವಾಗಿ ಶ್ರೀಗಳು ತಿಳಿಸಿದರು.
ಗುರುಗಳಿಗೆ ಅಂಜಿ ಶಿಷ್ಟರು, ಶಿಷ್ಯರಿಗೆ ಅಂಜಿ ಗುರುಗಳು ಎಂಬುದನ್ನು ಭಕ್ತರು ಅರ್ಥಮಾಡಿಕೊಳ್ಳಬೇಕು. ಭಕ್ತರ ವಿಷಯದಲ್ಲಿ ನಾವು ಬಹಳ ನಿಷ್ಠುರವಾಗಿ ಸತ್ಯಪಥದಲ್ಲಿ ನಡೆದಿದ್ದೇವೆ ಎಂಬ ಆತ್ಮತೃಪ್ತಿ ನಮಗಿದೆ. ಧರ್ಮ ಬರೀ ಉಪದೇಶ ಮಾಡುವುದರಿಂದ ಆಗಲ್ಲ. ಧರ್ಮ ಬದುಕನ್ನು ಬಿಟ್ಟು ಇಲ್ಲ. ಹಾಗಾಗಿ ಧರ್ಮಪ್ರಜ್ಞೆ ಜಾಗೃತಿ ಎಲ್ಲರಲ್ಲೂ ಬ೦ದಾಗ ಮಾತ್ರ ಸವಾಲು ಎದುರಿಸುವ ಶಕ್ತಿ ಬರುತ್ತದೆ ಎಂದು ಸಿರಿಗೆರೆ ಶ್ರೀಗಳು ಹೇಳಿದರು.
ಅಲ್ಲಲ್ಲಿ ಅಪಸ್ವರ, ಸುಳ್ಳು ವದಂತಿಗಳು ಹರಡುತ್ತಿದ್ದು, ಅವುಗಳ ಬಗ್ಗೆ ಕಿವಿಗೊಡಬೇಡಿ. ಸತ್ಯವನ್ನು ಪರಿಶೀಲಿಸಿ ತಿಳಿದುಕೊಳ್ಳಿ ಎಂದು ಭಕ್ತರಿಗೆ ತಿಳಿಸಿದ ಶ್ರೀಗಳು, ನಮ್ಮ ಸೌಭಾಗ್ಯ ಎಂದರೆ ನಮ್ಮ ಮಠದ 100ಕ್ಕೆ 99.99 ಭಕ್ತರು ನಮ್ಮನ್ನು ನಮ್ಮ ಭಕ್ತಿ-ಭಾವ ಹೊಂದಿದ್ದಾರೆ. ಸಿರಿಗೆರೆ ಮಠವೂ ಭಕ್ತಿ-ಭಾವದಿಂದಲೇ ಬೆಳೆದು ಬಂದಿದೆ ಎಂದು ತಮ್ಮ ಸುದೀರ್ಘ ಆಶೀರ್ವಚನದ ಮೂಲಕ ಶ್ರೀಗಳು ತಮ್ಮ ಮನಸ್ಸಿನ ಭಾವನೆಗಳನ್ನು ಭಕ್ತರೆದುರು ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಂಡರು.
ಹಿಂದೊಬ್ಬ ಗುರುವಿದ್ದು, ಮುದೊಂದು ಗುರಿಯಿದ್ದು ಸಾಗಿತ್ತು ಧೀರರ ಪಡೆ:
ಹಿಂದೊಬ್ಬ ಗುರುವಿದ್ದು, ಮುದೊಂದು ಗುರಿಯಿದ್ದು ಸಾಗಿತ್ತು ಧೀರರ ಪಡೆ ಎಂಬಂತೆ ಯಲವಟ್ಟಿಯ ಈ ಸಮಾರಂಭಕ್ಕೆ ಆಗಮಿಸಿದ ನಮ್ಮನ್ನು ಗ್ರಾಮದ ಯುವಕರು ಬೈಕ್ ರ‍್ಯಾಲಿ ಮೂಲಕ ಕರೆ ತ೦ದರೆ ಮಹಿಳೆಯರು ಪೂರ್ಣ ಕುಂಭಮೇಳ ದೊಂದಿಗೆ ಭಕ್ತಿ ಸಮರ್ಪಿಸಿದ್ದಾರೆ. ಸಮಾಜದಲ್ಲಿ ಇಂತಹ ಸುಸಂಸ್ಕೃತಿ ಬೆಳೆಸಿದ ಮತ್ತು ಸಮಾಜಕ್ಕೆ ಎಲ್ಲಾ ಹಂತದಲ್ಲೂ ಶಕ್ತಿ ತುಂಬಿದ ಹಿರಿಯ ಗುರುಗಳಿಗೆ ನೀವು ಸಲ್ಲಿಸಿದ ಭಕ್ತಿ ಸಮರ್ಪಣೆ ಮಾದರಿ ಎ೦ದು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ವರ್ಷ ನಿಟ್ಟೂರಿನಲ್ಲಿ : ನಿಟ್ಟೂರು ಗ್ರಾಮಸ್ಥರ ಕೋರಿಕೆಯಂತೆ ಮುಂದಿನ ವರ್ಷ ಭಕ್ತಿ ಸಮಾರಂಭವನ್ನು ನಿಟ್ಟೂರಿನಲ್ಲಿ ಸಮರ್ಪಣೆ ಹಮ್ಮಿಕೊಳ್ಳುವಂತೆ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಯಲವಟ್ಟಿ ಗುರುಸಿದ್ಧಾಶ್ರಮದ ಶ್ರೀ ಯೋಗಾನ೦ದ ಸ್ವಾಮೀಜಿ ಮಾತನಾಡಿ, ತುಂಗಭದ್ರಾ ನದಿಯಿ೦ದ ನೂರಾರು ಕಿ.ಮೀ. ದೂರ ನೀರನ್ನು ತೆಗೆದು ಕೊಂಡು ಹೋಗಿ ಅನೇಕ ಕೆರೆ-ಕಟ್ಟೆಗಳನ್ನು ತುಂಬಿಸುವ ಮೂಲಕ ಎಲ್ಲಾ ವರ್ಗಗಳ ಜನರಿಗೆ ನೆರವಾಗಿರುವ ಸಿರಿಗೆರೆ ಶ್ರೀಗಳು ಆಧುನಿಕ ಭಗೀರಥರಾಗಿದ್ದಾರೆ. ಇಂತಹ ಸಮಾಜಮುಖಿ ಗುರುಗಳನ್ನು ಪಡೆದಿರುವ ಸಾಧು ವೀರಶೈವ ಸಮಾಜದವರು ಪುಣ್ಯವಂತರು ಎ೦ದ ಶ್ರೀಗಳು, ಭಕ್ತಿ ಎಂದರೆ ಪ್ರೇಮ, ಅಂತಹ ಅನನ್ಯ
ಭಕ್ತಿಯನ್ನು ಹಿರಿಯ ಗುರುಗಳ ಮೇಲೆ ಭಕ್ತರು ಇಟ್ಟಿರುವುದನ್ನು ನೋಡಿದರೆ ಅವರು ಸಮಾಜಕ್ಕಾಗಿ ಮಾಡಿದ ಹೋರಾಟ, ತ್ಯಾಗ ಎಂತಹುದು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ನಮ್ಮ ಸಮಾಜದವನ್ನು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಬಲಿಷ್ಠಗೊಳಿಸಿದ ಕೀರ್ತಿ ಹಿರಿಯ ಗುರುಗಳಿಗೆ ಸಲ್ಲುತ್ತದೆ. ಅಷ್ಟೇ ಅಲ್ಲ, ನಮ್ಮ ಸಮಾಜದವರನ್ನು ಸುಸಂಸ್ಕೃತ ಸಮಾಜವನ್ನು ಬೆಳೆಸುವಲ್ಲಿ ಹಿರಿಯ ಗುರುಗಳ ಪಾತ್ರ ಪ್ರಮುಖವಾಗಿದೆ. ಆವರೊಬ್ಬ ಮಹಾನ್ ಪುರುಷರಾಗಿದ್ದು, ಅವರಿಗೆ ನಮ್ಮ ಸಮಾಜ ಸದಾಕಾಲ ಚಿರಋಣಿಯಾಗಿರುತ್ತದೆ. ಈಗಿನ ಶ್ರೀಗಳು ತಮ್ಮ ಪ್ರಜ್ಞಾವಂತಿಕೆಯಿ೦ದ ಮಠವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದಾರೆ. ಮದ್ಯಪಾನ ನಿಷೇಧಕ್ಕಾಗಿ ಈಗಿನ ಶ್ರೀಗಳು ಆಂದೋಲನವನ್ನೇ ಮಾಡಿದ್ದರು. ಆದರೆ ಅದಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಶೇ. 80ರಷ್ಟು ಯುವಕರು ದುಶ್ಚಟಗಳಿಂದ ಬಲಿಯಾಗುತ್ತಿದ್ದು, ತುಂಬಾ ಬೇಸರ ತಂದಿದೆ.
ಯುವಕರು ದುಶ್ಚಟಗಳಿಂದ ದೂರವಿದ್ದು, ತಂದೆ- ತಾಯಿಗಳು ಗುರುಗಳ ಆಶಯವನ್ನು ಈಡೇರಿಸಬೇಕೆಂದು ಶಾಸಕ ಹರೀಶ್ ಮನವಿ ಮಾಡಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಅನಕ್ಷರತೆ, ಮೂಢನಂಬಿಕೆ, ಬಡತನಗಳ ವಿರುದ್ಧ ಹೋರಾಟ ಮಾಡಿ ಸಮಾಜವನ್ನು ಹೊಸ ದಿಕ್ಕಿನ ಕಡೆಗೆ ಕರೆದುಕೊಂಡು ಹೋದ ಕೀರ್ತಿ ಲಿಂಗೈಕ್ಯ ಶ್ರೀಗಳಿಗೆ ಸಲ್ಲುತ್ತದೆ.
ಸಮಾಜದ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸಭೆಗಳನ್ನು ನಡೆಸಿ ಅನವಶ್ಯಕವಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಬಗ್ಗೆ ಸಮಾಜ ಜಾಗೃತವಾಗಬೇಕು. ನಮ್ಮ ಸಮಾಜ ಸುಶಿಕ್ಷಿತವಾಗಿದ್ದು, ಶ್ರೀಗಳು ಸಮಾಜಕ್ಕೆ ಸರಿದಾರಿ ತೋರಿಸಿದ್ದಾರೆ ಎಂದು ವೀರೇಶ್ ಹೇಳಿದರು.
ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದ ಕಾರ್ಯದರ್ಶಿ ಇಟಗಿ ಶಿವಣ್ಣ ಮಾತನಾಡಿ, ಶ್ರೀಗಳ ಹೃದಯ ತಾಯಿ ಹೃದಯದಂತೆ ಇದ್ದು, ಭಕ್ತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇಂತಹ ಗುರುಗಳು ನಮಗೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಅಮರಾವತಿ ಮಹಾದೇವಪ್ಪ ಗೌಡ್ರು, ಮಾತನಾಡಿ, ಶ್ರೀಗಳ ಬಗ್ಗೆ ರೆಸಾರ್ಟ್ನಲ್ಲಿ ಕುಳಿತು ಮಾತನಾಡುವವರು ಸಮಾಜ ಕಟ್ಟಿಲ್ಲ. ಸಮಾಜವನ್ನು ಕಟ್ಟಿ ಬೆಳೆಸಿದ ಹಿರಿಯ ಹಾಗೂ ಈಗಿನ ಶ್ರೀಗಳಿಗೆ ನಾವು ಚಿರಋಣಿಯಾಗಿರಬೇಕೆಂದರು.
ಗ್ರಾಮದ ಡಿ. ರಾಜಪ್ಪ ಮಾತನಾಡಿದರು. ಸಮಾಜದ ಉಪಾಧ್ಯಕ್ಷ ಹಲಸಬಾಳು ಶಿವಾನಂದಪ್ಪ, ನಿರ್ದೇಶಕರಾದ ಜಿ. ಮಂಜುನಾಥ್ ಪಟೇಲ್, ಶ್ರೀಮತಿ ರತ್ನಮ್ಮ, ಡಿ.ಹೆಚ್.ಚನ್ನಬಸಪ್ಪ, ಶ್ರೀಮತಿ ವನಜಾಕ್ಷಮ್ಮ ಓಂಕಾರಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ರಾಜಣ್ಣ, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್, ಯಕ್ಕನಹಳ್ಳಿ ಬಸವರಾಜಪ್ಪ, ಜಿಗಳಿಯ ಇಂದೂಧರ್, ಜಿ.ಆನಂದಪ್ಪ, ತಳಸದ ಬಸವರಾಜ್, ಮಾಗೋಡ್ ಓಂಕಾರಪ್ಪ, ಕುಂಬಳೂರಿನ ಕೆ.ತೀರ್ಥಪ್ಪ, ಹಳೇಮನಿ ಶಂಭುಲಿಂಗಪ್ಪ, ನಿಟ್ಟೂರಿನ ಬಿ.ಜಿ.ಧನಂಜಯ, ಇ.ಎಂ.ಮರುಳಸಿದ್ದಪ್ಪ, ಎನ್.ಜಿ.ಬಸವನ ಗೌಡ್ರು, ಹೊನ್ನಾಳಿ ತಾ. ಸಾಧು ವೀರಶೈವ ಸಮಾಜದ ಅಧ್ಯಕ್ಷ ಗದ್ದಿಗೇಶ್, ಶಿಮೂಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿ.ಆ೦ಜನೇಯ, ಬೆಳ್ಳೂಡಿ ರುದ್ರೇಶ್, ಗ್ರಾಮದ ಡಿ.ಹೆಚ್. ಮಹೇಂದ್ರಪ್ಪ, ಡಿ.ಹೆಚ್. ಚನ್ನಬಸಪ್ಪ, ಬಿ.ಸಿದ್ದೇಶ್, ನಿವೃತ್ತ ಸುಬೇದಾರ್ ಹೆಚ್. ಶಿವಕುಮಾರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಈ ವೇಳೆ ನೀರಾವರಿ ಇಳಾಖೆಯ ಎಇಇ ಧನಂಜಯ, ಎಇ ಭರತ್, ಬೆಸ್ಕಾಂ ಲೈನ್ಮ್ಯಾನ್ ಸಿದ್ದೇಶ್, ಪಶು ವೈದ್ಯಾಧಿಕಾರಿ ಬಾಬಾ ಬುಡೇನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕವಿತಾ ಪ್ರಾರ್ಥಿಸಿದರು. ವಲಯ ಅರಣ್ಯಾಧಿಕಾರಿ ಡಿ.ಎಂ. ಷಣ್ಮುಖ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸುಮತಿ ಜಯಪ್ಪ ಕಾರ್ಯಕ್ರಮ ನಿರೂಪಿಸಿದರೆ, ಗ್ರಾಮದ ಸಿವಿಲ್ ಗುತ್ತಿಗೆದಾರ ಡಿ.ಜಿ. ರಾಜೇಶ್ಗೌಡ ವಂದಿಸಿದರು.