ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!
ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿದ ವೈದ್ಯಕೀಯ ವೃತ್ತಿಯ ಶಿಷ್ಯರೊಬ್ಬರು ನಮ್ಮ ಸಮ್ಮುಖದಲ್ಲಿ ನಡೆದ ಒಂದು ಹಳ್ಳಿಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಷಣ ಮಾಡಿದರು. ತುಂಬಾ ಉತ್ಸಾಹದಿಂದ ಮಾತು ಆರಂಭಿಸಿದ ಅವರು ನಡೆ-ನುಡಿ ಕುರಿತು ಸಭಿಕರಿಂದ ಒಂದು ಪ್ರಯೋಗವನ್ನು ಮಾಡಿಸಿದರು. ಅದು ನಮಗೆ ನೆನಪಿರುವಂತೆ ಕಳೆದ ವರ್ಷ ವಸತಿ ಶಾಲೆಯೊಂದರ ನೂತನ ಕಟ್ಟಡದ ಉದ್ಘಾಟನಾ ಸಂದರ್ಭದಲ್ಲಿ ಹೆಸರಾಂತ ವಿಚಾರವಾದಿ, ಶಿಕ್ಷಕ ಮತ್ತು ವಾಗ್ಮಿಯಾದ ಗುರುರಾಜ ಕರ್ಜಗಿಯವರು ಸಭಿಕರಿಂದ ಮಾಡಿಸಿದ ಪ್ರಯೋಗ. ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವ ಬಗೆ ಹೇಗೆ ಎಂಬ ಪ್ರಶ್ನೆಯನ್ನು ಕರ್ಜಗಿಯವರು ಕೈಗೆತ್ತಿಕೊಂಡು ಶಾಲೆಯಲ್ಲಿ ವಾರಕ್ಕೆ ಒಂದು ದಿನ “ಮೌಲ್ಯಗಳು” ಎಂಬ ಪಾಠವನ್ನು ಇಟ್ಟುಕೊಂಡರೆ ಸಾಲದು. ಶಿಕ್ಷಕರು ಮತ್ತು ಪೋಷಕರು ಮೌಲ್ಯಗಳನ್ನು ಮಕ್ಕಳಿಗೆ ಪಾಠಮಾಡಿ, ಭಾಷಣ ಮಾಡಿ ಕಲಿಸುವುದಕ್ಕೆ ಆಗುವುದಿಲ್ಲ. ಶಿಕ್ಷಕರು ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಾ ಎಂದು ಹೇಳುವ ಮುನ್ನ ಸ್ವತಃ ಸಮಯಕ್ಕೆ ಸರಿಯಾಗಿ ಶಾಲೆಗೆ ಬರಬೇಕು. ಬರೀ ಉಪದೇಶದ ಮಾತುಗಳನ್ನಾಡದೆ ಸ್ವತಃ ನಡೆದು ತೋರಿಸಬೇಕು. ಹೇಳುವುದು ಬೇರೆ, ಮಾಡುವುದು ಬೇರೆಯಾದರೆ ಹೇಗೆ ಹಾಸ್ಯಾಸ್ಪದವಾಗುತ್ತದೆ ಎಂಬುದಕ್ಕೆ ಕರ್ಜಗಿಯವರು ಸಭಿಕರಿಂದ ಮಾಡಿಸಿದ ಆ ರೋಚಕವಾದ ಪ್ರಯೋಗ ಹೀಗಿದೆ:
“ಎಲ್ಲರೂ ನಾನು ಹೇಳಿದ ಹಾಗೆ ಮಾಡಿ” ಎಂದು ಕರ್ಜಗಿಯವರು ಒತ್ತಿಒತ್ತಿ ಹೇಳಿ ಸಭಿಕರೆಲ್ಲರೂ ಬಲಗೈಯನ್ನು ಮೇಲಕ್ಕೆತ್ತುವಂತೆ ಮಾಡಿದರು. ಎಲ್ಲಾ ಬೆರಳುಗಳನ್ನು ಸೇರಿಸಿ ಮುಷ್ಠಿ ಮಾಡಿ, ನಿಧಾನವಾಗಿ ಕೈ ಮುಂದಕ್ಕೆ ತೆಗೆದುಕೊಂಡು ಬಂದು ತೋರು ಬೆರಳನ್ನು ಮಾತ್ರ ಚಾಚಿರಿ. ತಲೆಯ ಮೇಲೆ ಇಟ್ಟುಕೊಳ್ಳಿ, ಎಡಭಾಗದ ಕಿವಿಯ ಮೇಲೆ ಇಟ್ಟುಕೊಳ್ಳಿ, ಬಲಭಾಗದ ಕೆನ್ನೆಯ ಮೇಲೆ ಇಟ್ಟುಕೊಳ್ಳಿ ಎಂದು ಹೇಳಿ ಅವರು ತಮ್ಮ ಬೆರಳನ್ನು ಗಲ್ಲದ ಮೇಲೆ ಇಟ್ಟುಕೊಂಡರು. ಅವರನ್ನು ಅನುಕರಣೆ ಮಾಡುತ್ತಾ ಹೋದ ಸಭಿಕರೆಲ್ಲರೂ ಅವರು ಮಾಡಿದಂತೆ ತೋರುಬೆರಳನ್ನು ತಮ್ಮ ಗಲ್ಲದ ಮೇಲೆ ಇಟ್ಟುಕೊಂಡರು! ಕರ್ಜಗಿಯವರು ಕೈಬೆರಳನ್ನು ಇಟ್ಟುಕೊಳ್ಳಲು ಹೇಳಿದ್ದು ಬಲಗೆನ್ನೆಯ ಮೇಲೆ. ಆದರೆ ಸಭಿಕರು ಇಟ್ಟುಕೊಂಡದ್ದು ಗಲ್ಲದ ಮೇಲೆ, ಬಲಗೆನ್ನೆಯ ಮೇಲೆ ಅಲ್ಲ! ಅದಕ್ಕೆ ಕಾರಣ ಕರ್ಜಗಿಯವರು ತಮ್ಮ ಕೈಬೆರಳನ್ನು ಸ್ವತಃ ಗಲ್ಲದ ಮೇಲೆ ಇಟ್ಟುಕೊಂಡು ತೋರಿಸಿದ್ದು! “ನಾನು ಹೇಳಿದ್ದೇನು? ನೀವು ಮಾಡಿದ್ದೇನು? ನಿಮ್ಮ ಬೆರಳನ್ನು ಎಲ್ಲಿಟ್ಟುಕೊಂಡಿದ್ದೀರಿ ನೋಡಿ” ಎಂದು ಎಚ್ಚರಿಸಿದಾಗ ಸಭೆ ನಗೆಗಡಲಲ್ಲಿ ತೇಲಿತು! ಮಕ್ಕಳು ನೀವು ಹೇಳಿದಂತೆ ಮಾಡುವುದಿಲ್ಲ, ನೀವು ಮಾಡಿದಂತೆ ಅನುಕರಣೆ ಮಾಡುತ್ತಾರೆ, ನೆನಪಿಟ್ಟುಕೊಳ್ಳಿ ಎಂದು ಸಭಿಕರಿಗೆ ಕಿವಿ ಮಾತು ಹೇಳಿದರು.
ಎಲ್ಲ ಸಭೆಗಳಲ್ಲೂ ಈ ಪ್ರಯೋಗ ಮಾಡಿದಾಗ ಸಭಿಕರು ಏಕೆ ಮೋಸಗೊಳ್ಳುತ್ತಾರೆ ಎಂಬುದಕ್ಕೆ ಒಂದು ವೈಜ್ಞಾನಿಕ ಕಾರಣವಿದೆ. ಅದೇನೆಂದರೆ ಕಣ್ಣು, ಕಿವಿ, ಮೂಗು ಇತ್ಯಾದಿ ಪಂಚೇಂದ್ರಿಯಗಳು ಜ್ಞಾನವಾಹಿನಿಗಳು. ಕಣ್ಣು ಬೇಗನೆ ಗ್ರಹಿಸುತ್ತದೆ. ಕಿವಿ ತಡವಾಗಿ ಗ್ರಹಿಸುತ್ತದೆ. ನೋಡಲು ಬೆಳಕು ಬೇಕು. ಬೆಳಕಿನ ವೇಗ ಒಂದು ಸೆಕೆಂಡಿಗೆ 3 ಲಕ್ಷ ಕಿ.ಮೀ ಗಳು. ಶಬ್ದದ ವೇಗ ಒಂದು ಸೆಕೆಂಡಿಗೆ ಕೇವಲ 331 ಮೀಟರ್ ಗಳು. ಇದು ತಾಪಮಾನಕ್ಕೆ ಅನುಗುಣವಾಗಿ ಬೇರೆ ಬೇರೆಯಾಗುತ್ತದೆ. ಆಕಾಶದಲ್ಲಿ ಹಾರಾಡುವ ವಿಮಾನವು ಮೋಡ ಮರೆಯಾಗದಿದ್ದರೆ ತತ್ಕ್ಷಣದಲ್ಲಿಯೇ ಕಣ್ಣಿಗೆ ಗೋಚರಿಸುತ್ತದೆ. ಆದರೆ ವಿಮಾನ ಹಾರಾಟದ ಶಬ್ದ ತಡವಾಗಿ ಕಿವಿಗೆ ಬೀಳುತ್ತದೆ. ವಿಮಾನ ಮುಂದೆ ಮುಂದೆ ಚಲಿಸುತ್ತಿದ್ದರೂ ಅದರ ಶಬ್ದ ಮಾತ್ರ ತಡವಾಗಿ ಹಿಂದೆ ಹಿಂದೆ ಕೇಳಿಸುತ್ತದೆ. ಶಬ್ದ ಕೇಳಿಬರುವ ದಿಕ್ಕಿನಲ್ಲಿ ವಿಮಾನ ಇರುವುದಿಲ್ಲ. ದೃಶ್ಯ ಮತ್ತು ಶ್ರವಣ ಒಂದೇ ಸಮಯದಲ್ಲಿ ಘಟಿಸುವುದಿಲ್ಲ (Synchronize), ಹಿಂದೆ ಮುಂದೆ ಆಗುತ್ತದೆ. ಅದರಂತೆಯೇ ಸಭಿಕರ ದೃಷ್ಟಿ ವೇದಿಕೆಯ ಮೇಲೆ ಕೇಂದ್ರೀಕೃತವಾದಾಗ ಭಾಷಣಕಾರರು ಮಾಡಿ ತೋರಿಸಿದ್ದನ್ನು ಸಭಿಕರ ಕಣ್ಣುಗಳು ಬೇಗನೆ ಗ್ರಹಿಸುತ್ತವೆ; ಅವರು ಆಡಿದ ಮಾತುಗಳನ್ನು ಕಿವಿಗಳು ತಡವಾಗಿ ಗ್ರಹಿಸುತ್ತವೆ.
"Do as I say, not as I do!" ( ನಾನು ಹೇಳಿದಂತೆ ಮಾಡು, ನಾನು ಮಾಡಿದಂತೆ ಮಾಡಬೇಡ) ಎಂಬ ಪದಪ್ರಯೋಗ ನೂರಾರು ವರ್ಷಗಳಿಂದ ಆಂಗ್ಲ ಭಾಷೆಯಲ್ಲಿದೆ. ಪಾಶ್ಚಾತ್ಯ ದೇಶಗಳಲ್ಲಿ ತಾಯಂದಿರು ತಮ್ಮ ಹಠಮಾರಿ ಮಕ್ಕಳಿಗೆ ಹೇಳುತ್ತಾ ಬಂದಿರುವ ಉಪದೇಶದ ಮಾತಿದು. ತಮ್ಮ ತಪ್ಪನ್ನು ಒಪ್ಪಿಕೊಂಡು ಅಂತಹ ತಪ್ಪು ದಾರಿಯಲ್ಲಿ ತಮ್ಮ ಮಕ್ಕಳು ಹೋಗಬಾರದು, ತಾವು ಪಾಲಿಸಲಾಗದ ನೀತಿ-ನಿಯಮಗಳನ್ನು ತಮ್ಮ ಮಕ್ಕಳಾದರೂ ಪಾಲಿಸಲಿ ಎಂಬ ಸದಾಶಯ ತಾಯಂದಿರದು. ಒಂದು ವಿಡಂಬನೆ ಎಂದರೆ ಸಾರ್ವಜನಿಕ ಜೀವನದಲ್ಲಿ ವೇದಿಕೆಯ ಮೇಲೆ ಕೆಲ ರಾಜಕೀಯ/ಧಾರ್ಮಿಕ ಧುರೀಣರು ಆಡುವ ಮಾತುಗಳೇ ಬೇರೆ, ಅವರು ನಡೆದುಕೊಳ್ಳುವ ರೀತಿಯೇ ಬೇರೆ. ಅವರ ಆವೇಷಭರಿತ ಮಾತುಗಳು ಕೇಳಲು ಆಕರ್ಷಕವಾಗಿರುತ್ತವೆ. ಆದರೆ ಅವರಾಡುವ ಮಾತುಗಳಿಗೆ ತಕ್ಕಂತೆ ಅವರ ನಡೆ ಇದೆಯೇ ಎಂಬುದು ಪ್ರಶ್ನಾರ್ಹವಾಗುತ್ತದೆ. ತಮಗಾಗದವರನ್ನು, ವಿಭಿನ್ನ ಧರ್ಮೀಯರನ್ನು ಮನಸ್ವಿ ನಿಂದಿಸುತ್ತಾರೆ. “ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪ ಕಾಣಾ” ಎನ್ನುತ್ತಾರೆ ಬಸವಣ್ಣನವರು. “ನುಡಿ ಪುರಾತನರದು, ನಡೆ ಕಿರಾತರದು ಆಗಬಾರದು” ಎಂದು ನಮ್ಮ ಲಿಂಗೈಕ್ಯ ಗುರುವರ್ಯರು ಆಗಾಗ್ಗೆ ಹೇಳುತ್ತಿದ್ದರು. ಇತ್ತೀಚೆಗೆ ಸಾರ್ವಜನಿಕ ವೇದಿಕೆಗಳ ಮೇಲೆ ಮಾತನಾಡುವವರ ನುಡಿ ಮತ್ತು ನಡೆ ಎರಡೂ ಕಿರಾತರದಾಗಿವೆ. ಸುಳ್ಳು, ವಂಚನೆ, ಕಪಟ, ಮೋಸ ಮಾಡುವವರೇ ವಿಜೃಂಭಿಸುತ್ತಿದ್ದಾರೆ. ಆದರೂ ಅಂಥವರನ್ನು ಈ ನಾಡಿನಲ್ಲಿ ಗೌರವಿಸುತ್ತಾರೆಂಬುದೇ ಸೋಜಿಗ. ಅದಕ್ಕೆ ಕಾರಣವನ್ನು ಬಹಳ ಕಷ್ಟಪಟ್ಟು ಹುಡುಕಬೇಕಾಗಿಲ್ಲ. “ಸರ್ವೇ ಗುಣಾಃ ಕಾಂಚನಮಾಶ್ರಯಂತಿ” ಎಂದು ಸಂಸ್ಕೃತದ ಸೂಕ್ತಿಯೊಂದು ಹೇಳುವ ಪ್ರಕಾರ ದುಡ್ಡಿದ್ದವರು ದೊಡ್ಡ ಮನುಷ್ಯರೆನಿಸಿಕೊಳ್ಳುತ್ತಾರೆ.
ಯಾರೋ ಸ್ವಾರ್ಥಿಗಳು ಏನೋ ಹೇಳಿದ್ದನ್ನು ಕೇಳಿ ವಿಚಾರ ಮಾಡದೆ ಮಾತನಾಡುವವರೇ ಬಹಳ ಮಂದಿ. “ಎತ್ತು ಈಯಿತೆಂದರೆ ಕೊಟ್ಟಿಗೆಗೆ ಕಟ್ಟು” ಎಂಬ ಗಾದೆ ಮಾತು ಇಂಥವರನ್ನು ನೋಡಿಯೇ ಬಂದಿರಬೇಕು. ಆಳವಾದ ಅಧ್ಯಯನ ಮಾಡದೆ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಹೇಳಿಕೆಗಳನ್ನು ಕೊಡುವುದು ಮತ್ತು ಕೂಗೆಬ್ಬಿಸುವುದು ಬೇಜವಾಬ್ದಾರಿತನ. ಅರಮನೆಗಳು ಅಳಿದರೂ ಗುರುಮನೆಗಳು ಉಳಿದಿರುವುದು ಭರತಖಂಡದ ಉದ್ದಗಲಕ್ಕೂ ಸಹಸ್ರಾರು ವರ್ಷಗಳಿಂದ ಹರಿದುಬರುತ್ತಿರುವ ಭಕ್ತಿಭಾವಗಳ ರಸಗಂಗೆ! ಅದರ ವಿರುದ್ಧ ಈಜಲು ಯಾರಿಂದಲೂ ಸಾಧ್ಯವಿಲ್ಲ. ಸದ್ಭಕ್ತರೊಂದಿಗೆ ಸರಸವಾಡಿದರೆ ಏನಾಗಬಹುದೆಂದು ಎಚ್ಚರಿಸುವ ಬಸವಣ್ಣನವರ ಈ ಮುಂದಿನ ವಚನದ ಹಿನ್ನೆಲೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಹೇಗೆ ವರ್ತಿಸಬೇಕೆಂಬ ಒಳ ಎಚ್ಚರ ರಾಜಕೀಯ/ಧಾರ್ಮಿಕ ಧುರೀಣರಿಗೆ ಇದ್ದರೆ ಒಳಿತು:
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸಿಕೊಂಡಂತೆ!
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದು ಉಯ್ಯಾಲೆಯ ಆಡಿದಂತೆ!
ಉರಿವ ಕೊಳ್ಳಿಯ ಹಿಡಿದು ಮಂಡೆಯ ಸಿಕ್ಕ ಬಿಡಿಸಿದಂತೆ!
ಕೂಡಲ ಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.19-9-2024.