ಅಮರ ಚೇತನ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #107
"ಈಗಿನ ಸನ್ಯಾಸಿಗಳಿಂದ ಜಗತ್ತಿಗೆ ಭಯಂಕರವಾದ ಹಾನಿಯಾಗಿದೆ. ಸನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ" ಎಂದು ಎಂಬತ್ತೈದು ರ್ಷಗಳ ಹಿಂದೆಯೆ ಜಗತ್ತಿಗೆ ಘಂಟಾಘೋಷವಾಗಿ ಸಾರಿದವರು ಯಾರೋ ಕ್ರಾಂತಿಕಾರಿ ಲೇಖಕ ಎಂದು ಓದುಗರಿಗೆ ಎನಿಸಬಹುದು. ಆದರೆ ಈ ಮಾತುಗಳನ್ನು ಎಂಬತ್ತು ವರ್ಷಗಳ ಹಿಂದೆಯೇ ತಮ್ಮ ದಿನಚರಿಯಲ್ಲಿ ದಾಖಲಿಸಿದವರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಆಗಿನ್ನೂ 23-24ರ ಆಸುಪಾಸಿನ ಯುವ ಸನ್ಯಾಸಿಯಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಜೀವನದುದ್ದಕ್ಕೂ ಇಂತಹ ಕ್ರಾಂತಿಕಾರಕ ಹೆಜ್ಜೆಗುರುತುಗಳಿಂದ ಜನಮನದಲ್ಲಿ ದಂತಕಥೆಯಾಗಿದ್ದಾರೆ. ನೂರಾರು ವರ್ಷಗಳಲ್ಲಿ ಸಾಧಿಸಬಹುದಾದುದನ್ನು ಕೇವಲ 40 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. "ಆಡು ಮುಟ್ಟದ ಸೊಪ್ಪಿಲ್ಲ" ಎಂಬ ಗಾದೆ ಮಾತಿನಂತೆ ಶ್ರೀಗಳು ಕಾಲಿಡದ ಕ್ಷೇತ್ರಗಳಿಲ್ಲ. ಧರ್ಮ, ಆಧ್ಯಾತ್ಮ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಕೃಷಿ, ರಂಗಭೂಮಿ, ಪರಿಸರ, ಮೌಢ್ಯಗಳ ನಿರಾಕರಣೆ, ಅಮಾವಾಸ್ಯೆ ದಿನ ಶುಭಕಾರ್ಯ, ಅಂತರಜಾತಿ, ಅಂತರಧರ್ಮೀಯ, ಅಂತಾರಾಷ್ಟ್ರೀಯ ವಿವಾಹಗಳನ್ನು 60-70ರ ದಶಕದಲ್ಲಿಯೆ ಸಮರೋಪಾದಿಯಲ್ಲಿ ಮಾಡಿದರು. ಅವರ ಬದುಕು ತೆರೆದ ಪುಸ್ತಕದಂತಿತ್ತು. ಪೂಜ್ಯರ ಅಂತರಂಗದ ಬದುಕನ್ನು “ಆತ್ಮನಿವೇದನೆ” ಗ್ರಂಥದಲ್ಲಿ ಮತ್ತು ಬಹಿರಂಗದ ಬದುಕನ್ನು “ದಿಟ್ಟ ಹೆಜ್ಜೆ ಧೀರಕ್ರಮ” ಪುಸ್ತಕಗಳಲ್ಲಿ ಕಾಣಬಹುದು.
ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಕನ್ನಡ ನಾಡು ಕಂಡ ಅದ್ಬುತ ಚೇತನ. 1914ರ ಏಪ್ರಿಲ್ 28ರಂದು (ಬಸವ ಜಯಂತಿ-ರೋಹಿಣಿ ನಕ್ಷತ್ರ) ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದಲ್ಲಿ ಜನಿಸಿದರು. ಮಹಾದೇವಯ್ಯ ಬಸಮ್ಮ ದಂಪತಿಗಳ ಮೂರನೆಯ ಮಗನಾದ ಇವರ ಜನ್ಮನಾಮ ರೇವಣಸಿದ್ಧಯ್ಯ ಎಂದು. ಬಾಲ್ಯದಲ್ಲಿಯೇ ತಮ್ಮ ಚುರುಕುತನದಿಂದಾಗಿ ಸಿರಿಗೆರೆ 19ನೆಯ ಜಗದ್ಗುರುಗಳಾದ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಕಣ್ಣಿಗೆ ಬಿದ್ದರು. ಗುರುಕೃಪೆಯಿಂದ ಸಂಸ್ಕೃತ ಭಾಷೆ ಮತ್ತು ಸಾಹಿತ್ಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಕಾಶಿಗೆ ತೆರಳಿದರು. ಆದರೆ ಪರ್ಣ ವಿದ್ಯಾಭ್ಯಾಸ ಮುಗಿಸುವಷ್ಟು ಉತ್ತಮ ಪರಿಸ್ಥಿತಿ ಮಠದಲ್ಲಿ ಇರಲಿಲ್ಲ. ಹಾಗಾಗಿ ತಮ್ಮ ಕನಸಿನ “ಆಚರ್ಯ ಪರೀಕ್ಷೆ” ಬರೆಯದೆ ಸಿರಿಗೆರೆಗೆ ವಾಪಸು ಬರಬೇಕಾಯಿತು. ಆಗ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಎಂಬ ಹೆಸರಿನಲ್ಲಿ ಸನ್ಯಾಸ ಸ್ವೀಕರಿಸಿ, ಬೇಲೂರು ತಾಲೂಕಿನ ಎಲಹಂಕ ಮಠದ ಚರಪಟ್ಟಧ್ಯಕ್ಷರಾದರು.
1940ರಲ್ಲಿ ಒಂದು ವಿಷಮ ಪರಿಸ್ಥಿತಿಯಲ್ಲಿ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಚುಕ್ಕಾಣಿ ಹಿಡಿಯಬೇಕಾಯಿತು. ಅದು ಯೋಗಾಯೋಗವೋ ಅಂದು ಸಹ ಬಸವ ಜಯಂತಿಯ ಶುಭ ದಿನವಾಗಿತ್ತು. ಅಂದಿನಿಂದ 1979ರವರೆಗೆ ನಾಡಿನ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ವಿಶಿಷ್ಟ ಹೆಜ್ಜೆ ಗುರುತುಗಳು ಮೂಡುವಂತಹ ಕಾರ್ಯಗಳನ್ನು ನಿರ್ವಹಿಸಿದರು.
12ನೆಯ ಶತಮಾನದ ವಚನಕಾರರ ಆಶಯಗಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಅಪಾರ ಪ್ರಭಾವ ಬೀರಿದ್ದವು. ಹಾಗಾಗಿ ವಚನಕಾರರ ತತ್ತ್ವ ಸಂದೇಶಗಳನ್ನು 20ನೆಯ ಶತಮಾನದಲ್ಲಿ ಜನಮನಕ್ಕೆ ತಲುಪಿಸುವ ಕಾರ್ಯುವನ್ನು ವ್ರತದಂತೆ ಸ್ವೀಕರಿಸಿದರು. ಉತ್ತರ ಕರ್ನಾಟಕದಲ್ಲಿ ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಶೋಧಿಸಿ , ನಾಡಿಗೆ ಕೊಟ್ಟರು. ಆ ವಚನ ಸಾಹಿತ್ಯವನ್ನು ನಾಟಕ, ಸಂಗೀತ, ನೃತ್ಯ, ಪ್ರವಚನ, ಪುಸ್ತಕ ಪ್ರಕಟಣೆ ಮುಂತಾದ ಬಹುಮಾಧ್ಯಮಗಳಲ್ಲಿ ಪ್ರಚಾರ ಮಾಡಿದರು.
ಬಸವಾದಿ ಶಿವಶರಣರ ಹೆಸರನ್ನು ಹೇಳಲು ಹಿಂಜರಿಯುತಿದ್ದ ಕಾಲದಲ್ಲಿ ಬಸವಣ್ಣನ ಆಶಯಗಳನ್ನು ತಲೆಯ ಮೇಲೆ ಹೊತ್ತು, ನಾಡಿನೆಲ್ಲೆಡೆ ಸಾರಿದರು. ಅದಕ್ಕಾಗಿ ಅಣ್ಣನ ಬಳಗ, ಅಕ್ಕನ ಬಳಗ, ಕಲಾಸಂಘ, ವಚನ ಮಂಟಪ, ಶಿವಾನುಭವ ಪ್ರವಾಸ ಸಮಿತಿ, ಪ್ರಕಾಶನ ಸಂಸ್ಥೆ ಮುಂತಾದ ಸಂಘಸಂಸ್ಥೆಗಳ ಸ್ಥಾಪಿಸಿದರು. ಧರ್ಮಶರಣ ಸಮ್ಮೇಳನ, ಶಿವಾನುಭವ ಕಮ್ಮಟ, ದಂದಣ ದತ್ತಣ ಗೋಷ್ಠಿ, ತರಳಬಾಳು ಹುಣ್ಣಿಮೆ ಮುಂತಾದ ವೇದಿಕೆಗಳನ್ನು ರೂಪಿಸಿ ಶರಣರ ತತ್ತ್ವಾರ್ಶಗಳನ್ನು ಬಿತ್ತಿದರು. ಇದು ಬರೀ ರ್ನಾಟಕ ಮಾತ್ರವಲ್ಲದೆ ಭಾರತದ ನಾನಾ ಭಾಗಗಳ ಜನತೆಗೆ ತಲುಪುವಂತೆ ಮಾಡಿದರು. ಬಸವಣ್ಣನವರ ವಚನಗಳನ್ನು ಇಂಗ್ಲಿಷ್, ಹಿಂದಿ, ತೆಲುಗು ಭಾಷೆಗಳಿಗೆ ಅನುವಾದಿಸುವ ಕೆಲಸವನ್ನು 60 - 70ರ ದಶಕಗಳಲ್ಲಿಯೇ ಮಾಡಿದ್ದು ಸೋಜಿಗಪಡುವಂತಹ ಸಂಗತಿ ಎಂದರೆ ಉತ್ಪ್ರೇಕ್ಷೆ ಮಾತಲ್ಲ. ಬಸವಾದಿ ಪ್ರಮಥರ ಚಿಂತನೆಗಳನ್ನು ಈ ಪರಿಯಾಗಿ ನಾನಾ ವಿಧವಾಗಿ ಪ್ರಚಾರ, ಪ್ರಸಾರ ಮಾಡಿದ ಮಠಾಧೀಶರಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಅಗ್ರಗಣ್ಯರು.
ಶರಣರಿಗೆ ಸಂಬಂಧಿಸಿದ ಕ್ಷೇತ್ರಗಳ ಸಂರಕ್ಷಣೆಯಲ್ಲಿ ಶ್ರೀಗಳ ಪಾತ್ರವನ್ನು ಮರೆಯುವಂತಿಲ್ಲ. ಬಸವಣ್ಣನವರ ಬದುಕಿನ ಮಹತ್ವದ ಸ್ಥಳವಾದ ಕೂಡಲಸಂಗಮ ಕ್ಷೇತ್ರದ ಇಂದಿನ ಪರಿಸ್ಥಿತಿಗೆ ಪೂಜ್ಯರ ದೂರದೃಷ್ಟಿ ಕಾರಣ. 80ರ ದಶಕದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಮುಳುಗುತ್ತಿದ್ದ ಕೂಡಲಸಂಗಮ ಕ್ಷೇತ್ರವನ್ನು ಅಂತಾ ರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣ, ವಚನ ಸಾಹಿತ್ಯ ಅಧ್ಯಯನ ಕೇಂದ್ರ ಮಾಡಬೇಕೆಂಬ ಹಂಬಲ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರದು. ಈ ಇಂಗಿತವನ್ನು ಅರಿತ ಇಂದಿನ ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಶಕ್ತಿ, ಭೌದ್ಧಿಕ ಚಿಂತನೆಯ ಫಲವಾಗಿ ಕೂಡಲಸಂಗಮ ಕ್ಷೇತ್ರ ಇಂದು ಶರಣ ತತ್ತ್ವಾಭಿಮಾನಿಗಳ ಬಸವ ಕಾಶಿಯಾಗಿದೆ.
ಅಕ್ಕಮಹಾದೇವಿಯವರ ಜನ್ಮಸ್ಥಳ ಉಡುತಡಿಯು ಸಹ 60ರ ದಶಕದಲ್ಲಿ ಖಾಸಗಿ ವ್ಯಕ್ತಿಯ ಒಡೆತನದಲ್ಲಿತ್ತು. ಅದನ್ನು ಸಂರಕ್ಷಿಸಲು ಅಂದಿನ ಸರಕಾರದೊಂದಿಗೆ ವ್ಯವಹರಿಸಿದ ಶ್ರೀಗಳವರು ಇಂದಿನ ಸ್ಥಿತಿಗೆ ಕಾರಣರಾಗಿದ್ದಾರೆ. ಅಕ್ಕಮಹಾದೇವಿಯವರ ಐಕ್ಯಸ್ಥಳ ಕದಳಿವನದ ಸಂಶೋಧನೆಯು ಸಹ ಪೂಜ್ಯರ ಆಸಕ್ತಿಯ ಫಲವಾಗಿದೆ. ಗ್ರಾಮೀಣ ಪ್ರದೇಶದ ಜನರನ್ನು ಕರೆದುಕೊಂಡು ಶ್ರೀ ಶೈಲ ಸಮೀಪದ ಅಡವಿ ಚುಂಚರು ಎಂಬ ಬುಡಕಟ್ಟು ಜನಾಂಗದ ಸಹಾಯದಿಂದ ತ್ರಿಕೂಟ ರ್ವತದ ತಪ್ಪಲಿನ ಕದಳಿವನವನ್ನು ಹುಡುಕಿ ಜಗತ್ತಿಗೆ ತೋರಿಸಿಕೊಟ್ಟವರು ಶ್ರೀ ಶಿವಕುಮಾರ ಶಿವಾಚರ್ಯ ಮಹಾಸ್ವಾಮಿಗಳವರು. ಈ ಸಂಶೋಧನಾ ಪ್ರವಾಸದ ತಂಡದಲ್ಲಿ ಖ್ಯಾತ ಸಾಹಿತಿಗಳಾದ ಡಾ. ಎಚ್ ತಿಪ್ಪೇರುದ್ರಸ್ವಾಮಿ ಮತ್ತು ಮಹದೇವ ಬಣಕಾರರು ಜೊತೆಯಲ್ಲಿ ಭಾಗವಹಿಸಿದ್ದರು. ಈ ಪ್ರವಾಸದ ಫಲವಾಗಿ ಡಾ. ಎಚ್ ತಿಪ್ಪೇರುದ್ರಸ್ವಾಮಿಯವರು ಅಕ್ಕಮಹಾದೇವಿ ಕುರಿತು “ಕದಳಿ ಕರ್ಪೂರ” ಎಂಬ ಕಾದಂಬರಿ ರಚಿಸಿದರು.
1967ರಲ್ಲಿ ಬಸವಣ್ಣನವರ ಅಷ್ಟ ಶತಮಾನೋತ್ಸವವನ್ನು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳ ಪ್ರಮುಖ ಕೇಂದ್ರಗಳಲ್ಲಿ ಆಚರಿಸಿದರು. 12ನೆಯ ಶತಮಾನದ 770 ಅಮರ ಗಣಂಗಳ ನೆನಪಿಗೆ 770 ಜನ
ಭಕ್ತರನ್ನು ಕರೆದುಕೊಂಡು ಹೋಗಿ ಅಭೂತಪರ್ವ ಕಾರ್ಯಕ್ರಮ ನಡೆಸಿದರು. ಆಗ ಕಲಾವಿದರು, ಸಂಘಟಕರು ಮತ್ತು ಅವರ ಊಟ, ವಸತಿಗಾಗಿ 18 ಬಸ್ಸುಗಳಲ್ಲಿ ವ್ಯವಸ್ಥೆ ಮಾಡಿದ್ದು ಐತಿಹಾಸಿಕ ದಾಖಲೆಯಾಗಿದೆ. ನೂರಾರು ಭಕ್ತರನ್ನು ಕರೆದುಕೊಂಡು ಉತ್ತರ ಭಾರತದಲ್ಲಿ ಪ್ರವಾಸ ಮಾಡಿಸಿದರು. ಹೈದರಬಾದ್, ಶ್ರೀ ಶೈಲ, ಆಗ್ರ, ಕಾಶಿ, ದೆಹಲಿ ಮತ್ತು ನೇಪಾಳದ ಕಠ್ಮಂಡುವರಿಗೆ ಹಳ್ಳಿಯ ಅನಕ್ಷರಸ್ಥ ಜನರನ್ನು , ಇಷ್ಟೊಂದು ಸಂರಕ್ಷಕ ಸಾಧನಗಳಿಲ್ಲದ ಆ ಕಾಲದಲ್ಲಿ ಶಿವಾನುಭವ ಪ್ರವಾಸ ರದ್ದುಪಡಿಸಿ, ಯಶಸ್ವಿಯಾದುದು ಪೂಜ್ಯರ ಸಂಕಲ್ಪ ಶಕ್ತಿಗೆ ಉದಾಹರಣೆಯಾಗಿದೆ.
1946ರಲ್ಲಿ ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಿರಿಗೆರೆಯಲ್ಲಿ ಪ್ರೌಢಶಾಲೆಯನ್ನು ಆರಂಭಿಸಿ, ಸಹಪಂಕ್ತಿ ಭೋಜನಕ್ಕೆ ನಾಂದಿ ಹಾಡಿದರು. ಸಹಪಂಕ್ತಿ ಭೋಜನಕ್ಕೆ ವಿರೋಧ ಬಂದಾಗ ಪೀಠ ತ್ಯಾಗ ಮಾಡಲು ಸಿದ್ಧವೇ ವಿನಾ ನಮ್ಮ ನರ್ಧಾರವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು. ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರವೆಂದು ತಿಳಿದ ಶ್ರೀಗಳವರು ಹಳ್ಳಿಗಳಲ್ಲಿ ಮನೆ ಮಾಡಿದ್ದ ಅಜ್ಞಾನ, ಅನಕ್ಷರತೆ, ಮೌಢ್ಯ, ಕಂದಾಚಾರಗಳನ್ನು ಹೋಗಲಾಡಿಸಲು ಶಿಕ್ಷಣವೇ ಸಂಜೀವನಿ ಎಂದು ತಿಳಿದಿದ್ದರು. ಅದಕ್ಕಾಗಿ 1942ರಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು. ಆ ಮೂಲಕ ರಸ್ತೆ, ವಿದ್ಯುತ್ ಗಳಿಲ್ಲದ ಹಳ್ಳಿಗಳಲ್ಲಿ ಶಾಲೆ ತೆರೆದು, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ವಿದ್ಯೆ ನೀಡಿದರು. 250 ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ತೆರೆದು ಲಕ್ಷಾಂತರ ಜನಕ್ಕೆ ಅನ್ನ, ಅಕ್ಷರ, ಅರಿವಿನ ಭಾಗ್ಯ ಕಲ್ಪಿಸಿದವರು.
ಬಸವಣ್ಣನ ಹಾದಿಯಲ್ಲಿ ನಡೆದು ಕಾಲ, ಕಾಯಕ, ಕಾಸುಗಳ ಬಗ್ಗೆ ಜನತೆಗೆ ತಿಳಿ ಹೇಳಿದರು. ಕಾಲಕ್ಕೆ ಬಹಳಷ್ಟು ಮಹತ್ವ ನೀಡುತ್ತಿದ್ದ ಶ್ರೀಗಳು ಎಂತಹದೇ ಸಂದರ್ಭದಲ್ಲೂ ರಾಜಿಮಾಡಿಕೊಳ್ಳುತ್ತಿರಲಿಲ್ಲ. ಸಮಯ ಪಾಲನೆಯಲ್ಲಿ ಪೂಜ್ಯರ ಆರ್ಶ ಇಂದಿಗೂ ದಂತಕಥೆಯಂತಾಗಿದೆ. ಬಸವಣ್ಣನವರ ''ಇವನಮ್ಮವ ಇವನಮ್ಮವ" ಎನ್ನುವ ಮಾತಿನಂತೆ ತಮ್ಮ ಸಂರಕ್ಷಣಕ್ಕೆ ಬಂದ ಪ್ರತಿ ವ್ಯಕ್ತಿಯನ್ನು ಸಮಾಜಮುಖಿ ಕೆಲಸಗಳಲ್ಲಿ ದುಡಿಯುವ ಶಕ್ತಿವಂತರನ್ನಾಗಿ ರೂಪಿಸಿದರು. ಸಂವಿಧಾನ ರಚನೆಯ ಪೂರ್ವದಲ್ಲಿಯೇ ಸಂವಿಧಾನದ ಆಶಯಗಳನ್ನು ಮಠದ ಪರಿಸರದಲ್ಲಿ ಜಾರಿಗೆ ತಂದ ಕೀರ್ತಿ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರದು. ಇದಕ್ಕೆ ಹಿಂದುಳಿದ ವರ್ಗದ ದುಗ್ಗಪ್ಪ, ಓಬನಾಯ್ಕರಂತಹ ಅನೇಕ ವ್ಯಕ್ತಿಗಳ ಬೆಳವಣಿಗೆಯಲ್ಲಿ ಮಠದ ಪಾತ್ರವನ್ನು ಗಮನಿಸಬಹುದು.
ರಾಜಕೀಯದಲ್ಲಿ ಪೂಜ್ಯರಿಗೆ ವಿಶೇಷ ಆಸಕ್ತಿ. ಅವರು ಪ್ರತಿ ಚುನಾವಣೆಯಲ್ಲೂ ತಪ್ಪದೆ ಮತದಾನ ಮಾಡುತ್ತಿದ್ದರು. ಮತದಾನದ ಮಹತ್ವವನ್ನು ಪ್ರತಿಯೊಬ್ಬ ಭಕ್ತನಿಗೂ ತಿಳಿಸಿಕೊಡುತ್ತಿದ್ದರು. ಜಾತ್ಯತೀತವಾಗಿ ಅಭ್ರ್ಥಿಯ ಆಯ್ಕೆಗೆ ಕರೆಕೊಡುತ್ತಿದ್ದರು. ಒಮ್ಮೊಮ್ಮೆ ಬಹಿರಂಗವಾಗಿ ಅಭ್ರ್ಥಿ ಪರ ನಿಲ್ಲುತ್ತಿದ್ದುದು ಉಂಟು.
ಸ್ವತಃ ಬರಹಗಾರರಾಗಿ ಮರಣವೇ ಮಹಾನವಮಿ, ಶರಣಸತಿ ಲಿಂಗಪತಿ, ವಿಶ್ವಬಂಧು ಮರುಳಸಿದ್ಧ ನಾಟಕಗಳನ್ನು, ಶತಮಾನೋತ್ಸವ ಸಂದೇಶ, ಅಣ್ಣ ಬಸವಣ್ಣ, ಸಂಕಲ್ಪ, ದಿಟ್ಟಹೆಜ್ಜೆ ಧೀರಕ್ರಮ ರಚಿಸಿದ್ದಾರೆ. ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಸಂಸ್ಕೃತ ಭಾಷೆಯಲ್ಲಿ ಕಾವ್ಯ ರಚನೆ ಮಾಡುತ್ತಿದ್ದುದು ಪೂಜ್ಯರ ಸೃಜನಶೀಲತೆಗೆ ಸಾಕ್ಷಿಯಾಗಿದೆ.
ಕವಿಚಕ್ರವರ್ತಿ ರನ್ನ ತನ್ನ “ಅಜಿತಪುರಾಣ ತಿಲಕ” ಕಾವ್ಯದಲ್ಲಿ ಅಜಿತನಾಥರನ್ನು ವರ್ಣಿಸಿರುವ ಪದ್ಯ ಹೀಗಿದೆ:
ದೊರೆಗಾಣೆಂ ನಿನಗೆ ಜಿನೇ
ಶ್ವರ ಪೆರರಂ ನಿನಗೆ ನೀನೆ ದೊರೆಯೆನಿಪೈ ಮಂ
ದರಗಿರಿಗೆ ಮಂದರಾದ್ರಿಯೆ
ದೊರೆ ಜಲಧಿಗಗಾಧಜಲಧಿ ದೊರೆ ಪೆರೆವೊಳವೇ||
ಓ ಪರಮ ದಯಾಳುವಾದ ಜಿನ ಮುನಿಯೇ ನಿನಗೆ ಸಮಾನರಾದವರನ್ನು ನಾನು ಈ ಜಗತ್ತಿನಲ್ಲಿ ಕಾಣಲು ಸಾಧ್ಯವಾಗಿಲ್ಲ. ಹಾಗೇನಾದರೂ ಈ ಜಗತ್ತಿನಲ್ಲಿ ನಿನಗೆ ಸಮಾನರಾದವರು ಇದ್ದರೆ ಅವರು ನೀನಲ್ಲದೆ ಮತ್ತಾರೂ ಆಗಿರುವುದಕ್ಕೆ ಸಾಧ್ಯವಾಗಿರುವುದಿಲ್ಲ. ಮಂದರ ಪರ್ವತಕ್ಕೆ ಮಂದರ ಪರ್ವತವೇ ಸಾಟಿ. ಸಮುದ್ರಕ್ಕೆ ಸಮುದ್ರವೇ ಉಪಮೆಯೋ ಹಾಗೆ ನಿನಗೆ ನೀನೇ ಹೋಲಿಕೆಯಾಗಿರುವೆ. ಅನನ್ಯಾಲಂಕಾರಕ್ಕೆ ಉದಾಹರಣೆಯಾಗಿರುವ ಈ ಚಿಕ್ಕ ಪದ್ಯದಲ್ಲಿ ಜಿನ ಮುನಿಯ ಕುರಿತಾದ ಭಕ್ತಿ ಭಾವ, ಆ ಮುನಿಯ ಎತ್ತರವನ್ನು ಅರಿಯಲು ಸಾಧ್ಯವಾಗುತ್ತದೆ. ಇಲ್ಲಿ ಜಿನ ಮುನಿಯ ಎಲ್ಲಾ ಉಪಮೆಗಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಲೇಪಿಸಿದರೆ ಅತಿಶಯೋಕ್ತಿಯಾಗಲಾರದು. ಅಂತಹ ಘನ, ಧೀರ ಮತ್ತು ಉದಾತ್ತ ವ್ಯಕ್ತಿತ್ವ ಶ್ರೀಗಳವರದು.
ಆದರ್ಶ ಸಮಾಜದ ಕನಸುಗಾರರಾಗಿದ್ದ ಶ್ರೀಗಳು ಒಂದು ಸಮಾಜವನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎನ್ನುವುದಕ್ಕೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಆದರ್ಶವಾಗಿದ್ದಾರೆ. ವೈರಿಯು ಮೆಚ್ಚುವಂತಹ ಧೀಮಂತರಾಗಿದ್ದ ಶ್ರೀಗಳು ನಾಲ್ಕು ದಶಕಗಳ ಕಾಲ ಅಹರ್ನಿಶಿ ದುಡಿದು ಕರ್ನಾಟಕದ ಇತಿಹಾಸದಲ್ಲಿ ಅಮರ ಚೇತನರಾಗಿದ್ದಾರೆ.
- ನಾಗರಾಜ ಸಿರಿಗೆರೆ
ಕನ್ನಡ ಅಧ್ಯಾಪಕರು,
ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ
ಆನಗೋಡು
ಚರವಾಣಿ: 9916452625