ಮಠದ ಸ್ವಾಮಿಗಳಿಗೆ ಒಂದು ಕೈಪಿಡಿ

  •  
  •  
  •  
  •  
  •    Views  

ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #107

ಶಿಷ್ಯರ ಹಣವನ್ನು ತೆಗೆದುಕೊಂಡು ಹೋಗಿ ಮಠದಲ್ಲಿರುವ ತಮ್ಮ ಅಣ್ಣ, ತಮ್ಮಂದಿರ ಹೆಂಡಿರ ಮಕ್ಕಳಿಗೆ ಹಾಕುವ ನಾಮದಾರಿ ಗುರುಗಳು ಸಮಾಜದಿಂದ ತೊಲಗದವರೆಗೆ ನಮಗೆ ಕಲ್ಯಾಣವಿಲ್ಲ. ಮಠಗಳಲ್ಲಿ ಸಂಭೋಗ, ತೊಟ್ಟಿಲು ಕಟ್ಟುವುದು ಇತ್ಯಾದಿ ಗೃಹಸ್ಥ ಧರ್ಮ ಕಾರ್ಯಗಳು ನಡೆಯುವಾಗ ಆ ಮಠಗಳು ಪಾಪಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ. ಆ ಪಾಪಕ್ಷೇತ್ರಗಳಲ್ಲಿ ಬಂದು ನಮಸ್ಕರಿಸುವ ಶಿಷ್ಯ ವರ್ಗಕ್ಕೆ ಕಲ್ಯಾಣವಾಗುತ್ತದೆಂಬುದು ಶುದ್ಧ ಅಸಂಗತ ಸಾಮಾಜಿಕರು ಇಂತಹ ನೀಚ ಪದ್ಧತಿಯನ್ನು ತೊಲಗಿಸದಿದ್ದರೆ ಖಂಡಿತವಾಗಿಯೂ ಕಲ್ಯಾಣವಿಲ್ಲ. 

ನಮ್ಮ ಸಮಾಜದಂತಹ ಮೂಢರು ಪ್ರಪಂಚದಲ್ಲೇ ಇಲ್ಲವೆಂದು ಹೇಳಬೇಕಾಗುತ್ತದೆ ಗುರು ಎಂಬುದೊಂದು ಶಬ್ದ ಮಾತ್ರ ಉಳಿಯಿತು. ಗುರುವಿನ ಅಂತಸ್ತು ಹೋಯಿತು. ಗುರುಗಳು ಸ್ತ್ರೀಯರ ಪದತಳದಲ್ಲಿ ಬಿದ್ದರು. ಯರ್ಯಾರೆಂದು ಹೇಳೋಣ? ಎಲ್ಲರೂ ವ್ಯಭಿಚಾರಿಗಳು. ನಾನು ಕಂಡ ಹಾಗೆ ಎಲ್ಲರೂ ದುರಾಚಾರಿಗಳು - ಈಗಿನ ಗುರುಗಳು ಮಾಡಿದಷ್ಟು ಪಾಪವನ್ನು ಮತ್ತಾರೂ ಮಾಡುತ್ತಾ ಇಲ್ಲ. ಹೆಂಗಸರೆಂದರೆ ಬಾಯ್ದೆರೆಯುತ್ತಾ ಇದೆ ಗುರುವರ್ಗ. ಈ ಗುರುವರ್ಗವನ್ನು ಕಂಡರೆ ನನಗೆ ಹೇಸಿಗೆಯಾಗುತ್ತದೆ. ಈ ಗುರುವರ್ಗದಿಂದ ಜಗತ್ತಿನ ವ್ಯಾಪಾರವೆಲ್ಲಾ ನಷ್ಟವಾಗಹತ್ತಿದೆ. ತಾನು ಮಾಡುತ್ತಿರುವ ದ್ರೋಹಕೃತ್ಯವು ಜಗತ್ ಪ್ರಸಿದ್ಧವಾಗಿರುವಾಗ ತಾನು ಅಂಜಿಕೊಂಡು ಸರಿಯಾದ ದಾರಿಯಲ್ಲಿ ಹೋಗಲು ಯತ್ನ ಪಡದೇ ಸುಧಾರಕರನ್ನು ವಿರೋಧಿಸಿದರೆ ಸಂಪೂರ್ಣ ಹಾನಿಯನ್ನು ಅನುಭವಿಸಬೇಕಾಗುತ್ತದೆ. 

ಮಠಗಳ ದುರವಸ್ಥೆಯನ್ನು, ಮಠಾಧೀಶರ ದುರ್ವ್ಯವಹಾರಗಳನ್ನು ಕುರಿತ, ಮಠಾಧೀಶರಿಗೂ, ಭಕ್ತ ಸಮೂಹಕ್ಕೂ ಎಚ್ಚರಿಕೆ ನೀಡುವ, ಸುಧಾರಣೆಗೆ ಕರೆಕೊಡುವ, ಮಠ ಪರಿಸರದ ವಾಸ್ತವ ಸ್ಥಿತಿಗತಿಗಳಿಗೆ ಹೇಸುವ ಈ ಮಾತುಗಳನ್ನು ಯಾರು ಹೇಳಿರಬಹುದು?

ನನಗೆ ಗೊತ್ತು ನೀವು ತಲೆ ಕೆರೆದುಕೊಳ್ಳುತ್ತೀರಿ. ಮಠಾಧೀಶರನ್ನು ಟೀಕಿಸಿ, ಕತೆ ಕಾದಂಬರಿ ಬರೆದ ಲೇಖಕರುಗಳನ್ನೆಲ್ಲ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಮಠಗಳ ವಿರುದ್ಧ ಚಳವಳಿ ನಡೆಸುವ ಸಂಘ ಸಂಸ್ಥೆಗಳ ನಾಯಕರ ಹೆಸರುಗಳಿಗೆ ಹುಡುಕಾಡುತ್ತೀರಿ. ನಾಸ್ತಿಕ ನೇತಾರರಿಗಾಗಿ ಪರದಾಡುತ್ತೀರಿ. ಈ ಮಾತುಗಳನ್ನು ಹೇಳಿದವರು ಅವರಾರೂ ಅಲ್ಲ, ಒಬ್ಬ ಮಠಾಧೀಶರೇ ಎಂದು ಹೇಳಿದರೆ ನೀವು ನಂಬಲಾರಿರಿ. ಆದರೆ ನಾನು ಹೇಳುತ್ತೇನೆ ನೀವು ನಂಬಬೇಕು.

ಮಠಾಧೀಶರನ್ನೇ ಚುಚ್ಚುವ, ತಿವಿಯುವ, ನಾಚುವಂತೆ ಮಾಡುವ ಈ ಮಾತುಗಳನ್ನು ಹೇಳಿದವರು, ಅಲ್ಲ ಬರೆದವರು ನಮ್ಮ ನಾಡಿನ ಸುಪ್ರಸಿದ್ಧ ಮಠಗಳಲ್ಲಿ ಒಂದಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು! ಈ ಮಾತುಗಳನ್ನು ಅವರು ಬರೆದದ್ದು ಸುಮಾರು ಮೂವತ್ತು ವರ್ಷಗಳ ಹಿಂದೆ. ಆದರೆ ಪ್ರಕಟವಾಗಿರುವುದು ಇತ್ತೀಚೆಗೆ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಕೆಲವು ವರ್ಷಗಳ ಹಿಂದೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳವರಿಗೆ ಶ್ರೀ ತರಳಬಾಳು ಜಗದ್ಗುರು ಪಟ್ಟಕಟ್ಟಿ ತಾವು ನಿವೃತ್ತರಾದರು. ತಮ್ಮ ಅರವತ್ತನೆಯ ವಯಸ್ಸಿನಲ್ಲಿ ಈ ನಿವೃತ್ತಿಯನ್ನು ಪಡೆಯುವುದಾಗಿ ಅನೇಕ ವರ್ಷಗಳ ಮೊದಲೇ ಅವರು ಘೋಷಿಸಿ ಮಠವ್ಯವಸ್ಥೆಯಲ್ಲಿಯೇ ಒಂದು ಹೊಸ ಮಾರ್ಗವನ್ನು ತೋರಿಸಿದರು. ಈ ನಿವೃತ್ತಿಯ ನಂತರವೂ ಅವರು ಶ್ರೀ ತರಳಬಾಳು ಮಠದ ಸ್ಫೂರ್ತಿಯೂ ಶಕ್ತಿಯೂ ಆಗಿದ್ದಾರೆಂದರೆ ಅತಿಶಯೋಕ್ತಿಯಾಗುವುದಿಲ್ಲ.

ತಾವು ಒಂದು ದೊಡ್ಡ ಮಠದ ಜವಾಬ್ದಾರಿಯನ್ನು ಹೊತ್ತ ತರುಣ ವಯಸ್ಸಿನಲ್ಲಿ ನಿತ್ಯವೂ ದಿನಚರಿ ಬರೆಯುವ ಕಾಯಕವನ್ನು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ನಡೆಸಿದರು. ಅವರ ಎರಡು ವರ್ಷಗಳ (1937-38) ದಿನಚರಿಯ ಆಯ್ದ ಭಾಗಗಳನ್ನು ಈಗ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳವರು ಸಂಪಾದಿಸಿ “ಆತ್ಮನಿವೇದನೆ” ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ (ಪ್ರಕಾಶಕರು: ತರಳಬಾಳು ಪ್ರಕಾಶನ, ಸಿರಿಗೆರೆ, ಚಿತ್ರದುರ್ಗ ಜಿಲ್ಲೆ).

ದಿನಚರಿ ಎಂದ ಮೇಲೆ ಸಾಮಾನ್ಯವಾಗಿ ದೈನಂದಿನ ಲೌಕಿಕ ಸಂಗತಿಗಳು ವರದಿಗೊಂಡಿರುತ್ತವೆ. ದಿನಚರಿ ಬರೆಯುವವರು ಉದಾತ್ತ ಚೇತನರಾಗಿದ್ದರೆ, ಚಿಂತನಶೀಲರಾಗಿದ್ದರೆ, ವಿಚಾರಪರರಾಗಿದ್ದರೆ ಆತ್ಮಶೋಧನೆಯೂ ನಿರೂಪಣೆಗೊಳ್ಳುವುದು ಸಹಜ. ಲೌಕಿಕ ಸಂಗತಿಗಳನ್ನೋ ಕುರಿತು ಆಲೋಚಿಸಿದಾಗ ತಮ್ಮ ಮನಸ್ಸು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನೂ ಅವರು ದಾಖಲಿಸುತ್ತಾರೆ. ದಿನಚರಿ ಮನಸ್ಸಿನ ಕಿಟಕಿ. ಆ ಕಿಟಕಿಯ ಮೂಲಕ ವ್ಯಕ್ತಿತ್ವವನ್ನು ಅಳೆಯಬಹುದು. ದಿನಚರಿ ಖಾಸಗಿ ಆಸ್ತಿ ಇನ್ನೊಬ್ಬರು ಅದನ್ನು ಬರೆದವರ ಜೀವಿತ ಕಾಲದಲ್ಲಿ ನೋಡುವುದು ಸಾಧ್ಯವಿಲ್ಲ ಎಂಬುದು ಒಂದು ಸಾಮಾನ್ಯ ತಿಳವಳಿಕೆ. ಇದರಿಂದ ಬರವಣಿಗೆಯಲ್ಲಿ ಮನಸ್ಸು ಮುಕ್ತವಾಗಿರುತ್ತದೆ. ಆದರೆ ಉನ್ನತ ಮನಸ್ಸುಗಳ ದಿನಚರಿಗೆ ರಹಸ್ಯದ ಬೇಲಿ ಬೇಕಿರುವುದಿಲ್ಲ. ಏಕೆಂದರೆ ಆ ಅಭಿವ್ಯಕ್ತಿ ಕೇವಲ ತನಗಾಗಿಯಲ್ಲ. ಆದ್ದರಿಂದಲೇ ದಿನಚರಿಯೂ ಕೂಡ ಉತ್ತಮ ಸಾಹಿತ್ಯವಾಗಿರುವುದೂ: ಚರಿತ್ರೆಯ ಭಾಗವಾಗಿರುವುದು.

ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ದಿನಚರಿ ಇಂಥ ಅಪರೂಪದ ಬರವಣಿಗೆ. ಇದಕ್ಕೆ “ಆತ್ಮನಿವೇದನೆ” ಎಂಬುದಕ್ಕಿಂತಲೂ ಉತ್ತಮವಾದ ಹೆಸರಿಡುವುದು ಸಾಧ್ಯವಿಲ್ಲ. ಈ ನಿವೇದನೆಯಲ್ಲಿ ಲೌಕಿಕ ಪಾರಮಾರ್ಥಿಗಳ ನಡುವೆ ಒದ್ದಾಡುವ ಚೇತನವೊಂದರ ಚಿತ್ರವಿದು : ತನ್ನ ಸುತ್ತಲಿನ ಪರಿಸರಕ್ಕೆ ಸ್ಪಂದಿಸಬಲ್ಲ ಹೃದಯವೊಂದರ ಕಳಕಳಿಯಿದೆ: ತಾವೇ ಒಬ್ಬರು ಸ್ವಾಮಿಗಳಾಗಿದ್ದು ಜೊತೆ ಸ್ವಾಮಿಗಳ ಅವ್ಯವಹಾರಗಳಿಗೆ ಕೆರಳುವ ಧೈರ್ಯವಿದೆ : ಶಿಷ್ಯಕೋಟಿಯ ಮೌಢ್ಯಕ್ಕೆ ಪರಿತಪಿಸುವ ಅಂತಃಕರಣವಿದೆ : ಲೋಕಕಲ್ಯಾಣದ ಸಮಾಜ ಸುಧಾರಣೆಯ ಕನಸುಗಳ ಅಭಿವ್ಯಕ್ತಿಯಿದೆ. 

ಒಂದು ಮನಸ್ಸು ಎಷ್ಟು ಕಡೆಯಿಂದ ಎಷ್ಟು ಕಾರಣಗಳಿಗಾಗಿ ಮುದುಡುತ್ತದೆ ಮತ್ತು ಅರಳುತ್ತದೆ ಎಂಬುದು ಈ ಆತ್ಮನಿವೇದನೆಯಲ್ಲಿ ಸ್ಪಷ್ಟಗೊಳ್ಳುತ್ತದೆ. ಎರಡು ವರ್ಷಗಳ ಈ ದಿನಚರಿಯನ್ನು ಸಂಪಾದಿಸಿದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಬರೆದಿರುವ ಇಪ್ಪತ್ತು ಪುಟಗಳ ಸಂಪಾದಕೀಯ ತುಂಬ ಸ್ವಾರಸ್ಯವೂ ರೋಚಕವೂ ಆಗಿದೆ. ತಾವು ಪಟ್ಟಕ್ಕೆ ಬಂದುದರ ಹಿನ್ನೆಲೆ, ತಮಗೆ ಈ ದಿನಚರಿಗಳು ಕಣ್ಣಿಗೆ ಬಿದ್ದ ಸಂದರ್ಭ, ತಾವು ಅವನ್ನು ಸಂಪಾದಿಸಿದ ಬಗೆ ಅದರಲ್ಲಿ ತೋರಿದ ಧೋರಣೆ - ಇವೆಲ್ಲವನ್ನೂ ಅವರು ಸ್ವಾರಸ್ಯವಾಗಿ ಹೇಳಿದ್ದಾರೆ. ಈ ಸಂಪಾದಕೀಯದಿಂದ ದಿನಚರಿಯನ್ನು ಗ್ರಹಿಸಲು ವಿಶೇಷವಾದ ನೆರವು ದೊರೆಯುತ್ತದೆ. ತಮ್ಮ ಸಂಪಾದನೆಯ ಕೆಲಸದಲ್ಲಿ ಅವರು ತೋರಿರುವ ವಸ್ತು ನಿಷ್ಠೆಯನ್ನು ಯಾರಾದರೂ ಮೆಚ್ಚಲೇಬೇಕು. ದೈನಂದಿನ ಲೌಕಿಕ ವ್ಯವಹಾರದ ಸಂಗತಿಗಳನ್ನು ಕಳೆದು, ಕೆಲವರು ವ್ಯಕ್ತಿಗಳ ಹೆಸರನ್ನು ಬಿಟ್ಟಿರುವುದಲ್ಲದೆ ಇತರ ಯಾವ ಬದಲಾವಣೆಯನ್ನೂ ಮಾಡುವ ಗೋಜಿಗೆ ಹೋಗಿಲ್ಲ. ತಮ್ಮ ಹಿರಿಯರ ಸತ್ಯಪಥವನ್ನೇ ಅವರು ಅನುಸರಿಸಿದ್ದಾರೆ. ಈ ದಿನಚರಿಯ ಬಗೆಗೆ ಅವರು ಹೇಳಿರುವ ಮಾತುಗಳು ಉಲ್ಲೇಖಾರ್ಹವಾಗಿದೆ.

"ಇದು ಪ್ರಜ್ಞಾಪೂರ್ವಕವಾಗಿ ಒಂದು ಪುಸ್ತಕವನ್ನು ಬರೆಯಬೇಕೆಂಬ ಉದ್ದೇಶದಿಂದ ಬರೆದ ಗ್ರಂಥವಲ್ಲ. ಅಂದಂದಿನ ಸ್ವಾನುಭವದ ಹಿನ್ನಲೆಯಲ್ಲಿ ಆತ್ಮದಲ್ಲಿ ಸಹಜವಾಗಿ ಉದಯಿಸಿದ ಅಂತರಂಗದ ತೀವ್ರತರವಾದ ನೈಜ ಭಾವನೆಗಳ ಮಿಡಿತ ಇಲ್ಲಿದೆ. ಜೀವನದಲ್ಲಿ ಎಲ್ಲ ಲೌಕಿಕ ಸುಖಾನುಭವಗಳನ್ನೂ ಪಡೆದು ಜುಗುಪ್ಪೆಗೊಂಡು ನಿರಾಸಕ್ತಿ ಹೊಂದಿ ಒಂದು ಕಾಲು ಈ ಲೋಕದಲ್ಲಿಯೂ ಮತ್ತೊಂದು ಕಾಲು ಪರಲೋಕದಲ್ಲಿಯೂ ಇರುವ ಇಳಿವಯಸ್ಸಿನವರು ಬರೆದ ಆತ್ಮಕಥೆಯು ಇದಲ್ಲ. ವಯಸ್ಸು ಕಳೆದ ಮೇಲೆ ಹಿಂದಿನದನ್ನೇ ಸ್ಮರಿಸಿಕೊಂಡು ಪರಿಪರಿಯಾಗಿ ಹಳಹಳಿಸುವ ಹತಾಶಭಾವನೆಯಾಗಲೀ ನಿಜವನ್ನು ಮುಚ್ಚಿಟ್ಟು ಸುಳ್ಳನ್ನು ಪೋಣಿಸಿ ಹೆಗ್ಗಳಿಕೆಗಾಗಿ ಬರೆಯುವ ಆತ್ಮಕಥೆಯ ಆತ್ಮವಂಚನೆಯಾಗಲೀ, ಕಪಟತನವಾಗಲೀ ಇಲ್ಲಿಲ್ಲ. 23-24ರ ಹರೆಯದಲ್ಲಿ ಬರೆದ ಈ ಬರವಣಿಗೆಯಲ್ಲಿ ವಯಸ್ಸಿಗೆ ಸಹಜವಾದ ಆಸೆ ಆಕಾಂಕ್ಷೆಗಳ ಸೆಳೆತ. ಅದಕ್ಕೂ ಮೀರಿದ ಅಪರೂಪವಾದ ಆಧ್ಯಾತ್ಮಿಕ ಸಾಧನಾಕಾಂಕ್ಷೆಯ ಅಂತರAಗದ ತುಡಿತವೂ ಇದ್ದು ಜೀವಂತ ಬರಹವೆನ್ನಿಸುತ್ತದೆ. ನಡೆನುಡಿಯ ಪಾರದರ್ಶಕತೆಯನ್ನು ಪ್ರತಿಬಿಂಬಿಸುವ ಈ ಬರಹವು ಬಸವಣ್ಣನವರ ಭಕ್ತಸ್ಥಲದ ವಚನಗಳ ಗದ್ಯರೂಪವೇನೋ ಎನ್ನುವಂತಿದೆ".

“ಆತ್ಮನಿವೇದನೆ”ಯನ್ನು ಓದುವವರಿಗೆ ಮಾತ್ರ ಸಂಪಾದಕರ ಈ ಮಾತುಗಳ ಯಥಾರ್ಥತೆಯ ಅರಿವಾಗುತ್ತದೆ. ದಿನಚರಿಯ ಪುಟಗಳನ್ನು ಪರಿತಾಪ-ಹಂಬಲ, ವಿಚಾರ-ವಿಶ್ವಾಸ, ಸ್ವಾಧ್ಯಾಯ, ಶರಣಾಗತಿ, ಸ್ಥಿರತೆ-ಸಂತೃಪ್ತಿ, ಸದ್ಗುರು-ಶ್ರೀರಕ್ಷೆ, ವಿಪತ್ತು-ದಿವ್ಯಾನುಗ್ರಹ, ತ್ರಿರತ್ನಗಳು ಸತ್ಯ-ಬ್ರಹ್ಮಚರ್ಯ-ಪರೋಪಕಾರ, ಅಧಮ ಗುರುಗಳು-ಮೂರ್ಖಶಿಷ್ಯರು ಮತ್ತು ಒಳಸಂಚು-ಆಹುತಿ! ಎಂಬ ಹತ್ತು ಶೀರ್ಷಿಕೆಗಳಲ್ಲಿ ವರ್ಗೀಕರಿಸಲಾಗಿದೆ. ಪುಸ್ತಕವು ದಿನಚರಿಯ ಕೆಲವು ಮೂಲ ಪುಟಗಳನ್ನೂ, ಅನೇಕ ಚಿತ್ರಗಳನ್ನೂ ಒಳಗೊಂಡಿದೆ. ಅಗತ್ಯವೆನ್ನಿಸಿದಲ್ಲಿ ಸಂಪಾದಕರು ಟಿಪ್ಪಣಿಗಳನ್ನು ಒದಗಿಸಿದ್ದಾರೆ. ದಿನಚರಿಯಲ್ಲಿ ದೊರೆವ ನೀತಿನುಡಿಗಳನ್ನು ಪ್ರತ್ಯೇಕವಾಗಿ ಪಟ್ಟಿಮಾಡಿ ಕೊಡಲಾಗಿದೆ.

"ಅಧ್ಯಾತ್ಮ ಜಿಜ್ಞಾಸುಗಳಿಗೆ ಮತ್ತು ಯಾವುದೇ ಮಠದ ಸ್ವಾಮಿಗಳಾಗುವವರಿಗೆ ಈ ಡೈರಿಯು ಒಂದು ಕೈಪಿಡಿಯಾಗಬಲ್ಲದು" ಎಂದು ಸಂಪಾದಕರು ಭಾವಿಸಿದ್ದಾರೆ. ಈಗಾಗಲೇ ಸ್ವಾಮಿಗಳಾಗಿರುವವರೂ ಇದನ್ನು ಓದುವುದು ಒಳ್ಳೆಯದು. ಕನ್ನಡದ ಆಧ್ಯಾತ್ಮಿಕ ಸಾಹಿತ್ಯಕ್ಕೆ ಇದೊಂದು ಸ್ಪೋಪಜ್ಞ ಕೊಡುಗೆ.


ಡಾ. ಹಾ.ಮಾ.ನಾಯಕ