ವಿರಕ್ತರಿಗೊಂದು ನೀತಿ ಸಂಹಿತೆ

  •  
  •  
  •  
  •  
  •    Views  

ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #108

ಣ ಧಾರ್ಮಿಕ ಗ್ರಂಥಗಳನ್ನೇ ಉರು ಹಚ್ಚಿ ನೆರೆದ ಮೂಢಭಕ್ತರ ಮುಂದೆ ಪುಸ್ತಕದ ಕಾಯಿಯನ್ನು ಪುಂಖಾನುಪುಂಖವಾಗಿ ಒದರಿ ಬಿಡುವಂತಹ ಕುಖ್ಯಾತಿಗೆ ಜಗ್ಗಿ ಹೋಗಿರುವ ಸಾಧುಸಜ್ಜನರು, ಮಠಾಧಿಪತಿಗಳು ಸ್ವಲ್ಪ ಈ ಗ್ರಂಥದ ಮೇಲೆ ಕಣ್ಣಾಯಿಸಿದರೆ ಒಳ್ಳೆಯದು. ಬೇಕನ್ ಒಂದು ಕಡೆ ಹೇಳಿದ್ದಾನೆ “ಕೆಲವು ಪುಸ್ತಕಗಳ ರುಚಿ ನೋಡಬೇಕು, ಕೆಲವನ್ನು ನುಂಗಬೇಕು, ಆದರೆ ಇನ್ನೂ ಕೆಲವನ್ನು ಜಗಿದು ಜೀರ್ಣಿಸಿಕೊಳ್ಳುವಂತಹದು" ಈ ಕೃತಿಯನ್ನು ಒಂದಾವರ್ತಿ ಓದಿ ಮುಗಿಸಿದ ನಂತರ ಸಹೃದಯ ಓದುಗರು ಸಹಜವಾಗಿ ಕೊನೆಯ ವಾಕ್ಯಕ್ಕೆ ಹೆಚ್ಚು ಗಮನ ಕೊಡಬೇಕೆನಿಸುತ್ತದೆ. ಕೇವಲ 174 ಪುಟಗಳಲ್ಲಿ ಏನೋ ಮಹತ್ತರವಾದುದನ್ನು ಆಸ್ವಾದಿಸಿದ ತೃಪ್ತಿ, ಸಂತೃಪ್ತಿ “ಆತ್ಮನಿವೇದನೆ” ನೀಡುವಲ್ಲಿ ಸಾಫಲ್ಯವನ್ನು ಪಡೆದಿದೆ.

ಇಂದಿನ ಮಠಗಳೊಳಗಿನ ಮಾರೀಚರ ಕಥೆ: ಅದರ ಆಡಂಬರ-ಅಟ್ಟಹಾಸ ಲೀಲಾ ವಿನೋದಗಳು, ಧರ್ಮನಾಸ್ತಿಕತೆ. ದೇವರು ದಿಂಡರ ಹೆಸರಿನಲ್ಲಿ ದುರ್ಬಲರು ಅಜ್ಞಾನಿಗಳನ್ನು ಪೋಷಿಸುವ ಬಗ್ಗೆ ಎಷ್ಟು ರೋಚಕವೋ ಅಷ್ಟೇ ವಾಸ್ತವಿಕತೆಯಲ್ಲಿ ಭಯಾನಕವು ಹೌದು: ಶೈಕ್ಷಣಿಕ ಪ್ರಗತಿಯ ಹೆಸರಿನಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನೇ ಹಿಡಿದು ತನ್ಮೂಲಕ ಭಾರಿ ಕುಳಗಳಾಗಿ ಸಣ್ಣ ಸಣ್ಣ ಬಂಡವಾಳಗಾರರು-ಮಾಲೀಕರಾಗುತ್ತಿರುವುದು ಇಂದು ಸಾಮಾನ್ಯ ನೋಟ. ಕಾವಿಯ ಮರೆಯಲ್ಲಿ ಅಡಗಿರುವ ಇವರ ಅಸುರಿ ಪ್ರವೃತ್ತಿಗಳು ಕಾಲಗೆಜ್ಜೆ ಎಳೆಯ ನಿನಾದ ಕಿವಿಗೆ ಬಿದ್ದಕೂಡಲೇ ಉನ್ಮಾದಕ್ಕೆ ಒಳಗಾಗಿ ವಿಷಯ ಲಂಪಟರಾಗುತ್ತಿರುವ ಹಲವು ಹತ್ತು ದೃಷ್ಟಾಂತಗಳನ್ನು ನೋಡುತ್ತಿರುವಾಗ ಕೈಜೋಡಿಸುವ ಬದಲು ಕೆರತೋರಿಸುವ ಮನಸ್ಸಾಗುತ್ತದೆ. 

ಇಂತಹ ಮಠಗಳಲ್ಲಿ ಅಡಗಿರುವ ವಿಷ ಜಂತುಗಳ ನೂರುನೋಟ ತಮ್ಮ ಸುತ್ತಮುತ್ತ ಕೊಳೆತು ನಾರುತ್ತಿವೆ. ಆದರೆ ಸುಮಾರು 3 ದಶಕದ ಹಿಂದೆಯೇ ಈ ಅಖಂಡ ಸತ್ಯವನ್ನು ಭವಿಷ್ಯತ್ತಿನ ದಿನಗಳನ್ನು ಸ್ವತಃ ಕಂಡು ಸ್ವಾನುಭವದಿಂದ ಅವುಗಳನ್ನು ವೀಕ್ಷಿಸಿ ಮನನೊಂದು ಹೇಳಲಾಗದ ಇನ್ನೊಬ್ಬರ ಮುಂದೆ ಅಭಿವ್ಯಕ್ತಗೊಳಿಸಲಾರದ ದೃಶ್ಯ ಘಟನೆಗಳ ದಿನಚರಿಯ ರೂಪದಲ್ಲಿ ಸಿರಿಗೆರೆಯ ಬೃಹನ್ಮಠದ ಹಿರಿಯ ಸ್ವಾಮಿಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಕಾಲಗರ್ಭದಲ್ಲಿ ಹೂತುಹೋಗಿ ಧೂಳಿನ ಕಣಕಣದೊಡನೆ ಬೆರೆದುಹೋಗಿದ್ದ ಇಂತಹ ಅಮೂಲ್ಯ ನಿಧಿಯನ್ನು ಶೋಧಿಸಿ ಪರಿಷ್ಕರಿಸಿ ಪುಸ್ತಕದ ರೂಪದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬೆಳಕಿಗೆ ತಂದಿರುವುದು ಈ ನಾಡು-ನುಡಿ ಸಾಹಿತ್ಯ ಶಾರದೆಯ ಪುಣ್ಯ.

ಒಟ್ಟಾರೆ ಕೃತಿಯನ್ನು ಅಭ್ಯಸಿಸಿದಾಗ ತಮ್ಮ ಮನಸ್ಸಿನೊಳಗೆ ಇಹ-ಪರದ ನಡುವಿನ ಸಂಘರ್ಷದಲ್ಲಿ ತೊಳಲಾಡುತ್ತಿರುವ ಪುಣ್ಯ ಜೀವಿಯೊಂದರ ಹೃದಯ ಬಡಿತ: ಈ ಐಹಿಕ ಜಗತ್ತಿನ ಡಾಂಭಿಕತೆ, ತೃಷೆ, ಹಾಹಾಕಾರ, ಅಂಧಕಾರಗಳಿಗೆ ಮರುಗುವ ನಾಡಿಮಿಡಿತ, ಹುಟ್ಟು ಸಾವುಗಳ ಚಕ್ರಭ್ರಮಣದಲ್ಲಿ ಪರಿತಪಿಸುತ್ತಿರುವ, ಹಪಹಪಿಸುತ್ತಿರುವ ಚೇತನವೊಂದರ ತುಡಿತ. ಕಳ್ಳಮಾರ್ಜಾಲ ವೇಷಧಾರಿ ಸನ್ಯಾಸಿ-ಸ್ವಾಮಿಗಳ ಬದುಕಿನ ಬಗೆಯನ್ನು ಕಂಡು ಕೆರಳುವ ಪ್ರತಿಭಟನೆಯ ಸಂಕೇತ, ಬಂಡಾಯದ ಆವೇಶ, ನಯ- ನಾಜೂಕಿನ ವ್ಯಂಗ್ಯ ವಿಡಂಬನೆಯ ಮೂಲಕ ಹೇಳುವ ಕಿವಿಮಾತಿನ ವಿಚಾರ ಪ್ರಚೋದಕವಾದ ಸನ್ನಿವೇಶ ಇಲ್ಲಿ ಮೈತಾಳಿದೆ.

ಸುಮಾರು ಎರಡು ವರ್ಷಗಳ ನಡುವೆ (1937-38) ಕ್ಲುಪ್ತ ಅವಧಿಯಲ್ಲಿ ಹದವಾದ ಮತ್ತು ಪಕ್ವಗೊಂಡ ಮನಸ್ಸೆಷ್ಟೊಂದರ ಚಿಂತನೆ,ಜೀವವೊಂದು ಭಗವಂತನಲ್ಲಿ ದೈನ್ಯದಿಂದ ಒಪ್ಪಿಕೊಳ್ಳುವ ನಿವೇದನೆ, ತನ್ಮೂಲಕ ಭಗವಂತನ ಸಾಕ್ಷಾತ್ಕಾರದ ಆರಾಧನೆ, ಸಮಾಜ-ಧರ್ಮದ ಬಗೆಗಿನ ಕಳಕಳಿಯನ್ನು ಹೊಂದಿರುವ ಹೃದಯವೊಂದರ ಚಡಪಡಿಸುವ ನೋಟ ಈ ದಿನಚರಿ ನೀಡುತ್ತದೆ. ಉಂಡು ಮಲಗುವ ದಿನದ ಕಾಯಕದ ಬದಲಿಗೆ ಸದಾ ಎಚ್ಚೆತ್ತ ಆತ್ಮ-ಜಾಗೃತಗೊಂಡ ಮನಕ್ಕೊಂದು ಚಿಂತಿಸುವ ರೀತಿಯ ಬಗೆಯನ್ನು ಈ ದಿನಚರಿ ದಾಖಲಿಸುತ್ತದೆ. ಉತ್ತಮ ದಿನಚರಿ ಸಭ್ಯ ವ್ಯಕ್ತಿ ಶಕ್ತಿಯೊಂದರ ಜೀವನಾನುಭವಗಳ ಮಾನದಂಡ. ಇಂತಹ ಕಡೆ ಒಬ್ಬನ ವ್ಯಕ್ತಿಗತ ಅನುಭವ ಕೆಲವೊಮ್ಮೆ ಲೋಕದ ಹಲವು ಹತ್ತು ಜೀವ-ಜೀವನಗಳ ಪ್ರತಿಬಿಂಬವಾಗಬಹುದು, ಅಷ್ಟೇ ವೈವಿಧ್ಯಮಯ ಬದುಕಿನ ಕಠೋರ ಸತ್ಯಗಳಾಗಬಹುದು. ಈ ಎಲ್ಲಾ ಸೊಗಡು ಈ ದಿನಚರಿಯಲ್ಲಿ ಕಂಡು ಬರುವುದರಿಂದ ಇದೊಂದು ಮೆಲುಕು ಹಾಕಬಹುದಾದ ಉತ್ತಮ ಸಾಹಿತ್ಯ.

ಬಾಲ್ಯದ ಬಾಲಿಷವಾದ ಕಲ್ಪನೆಯಲ್ಲ, ಅರವತ್ತರ ನಂತರದ ಅರುಳೋ ಮರುಳೆ ಎಂಬ ಸಂದೇಹ ಬೇಕಿಲ್ಲ. ಹುಚ್ಚು ಆವೇಶಗಳಿಗೆ ಅಪವಾದವಾದ ತಾರುಣ್ಯದಲ್ಲಿನ ಮಾಗಿದ ಮನಸ್ಸು ಬುದ್ಧಿಯೊಂದು ಸ್ವತಃ ಆಲೋಚಿಸಿ ಚಿಂತಿಸಿ, ವಯಸ್ಸಿಗೆ ಸಹಜವಾದ ಗಾಂಭೀರ್ಯ, ಘನತೆಯ ಅಡಿ ಎಲ್ಲಾ ಚಿಂತನೆಗಳು ರೂಪಗೊಂಡಿವೆ. ಪರಿತಾಪ-ಹಂಬಲ, ವಿಚಾರ-ವಿಶ್ವಾಸ, ಸ್ವಾಧ್ಯಾಯ-ಶರಣಾಗತಿ, ಸ್ಥಿರತೆ ಸಂತೃಪ್ತಿ ಸದ್ಗುರು, ಶ್ರೀರಕ್ಷೆ, ವಿಪತ್ತು, ಬ್ರಹ್ಮಚರ್ಯ, ಪರೋಪಕಾರ, ಅಧಮ ಗುರುಗಳು, ಮೂರ್ಖ ಶಿಷ್ಯರು ಹಾಗೂ ಒಳಸಂಚು-ಆಹುತಿ ಎಂಬ ಹತ್ತು ಭಾಗಗಳಲ್ಲಿ ಚಿಂತನೆ - ಆಲೋಚನಾಗತಿಯ ವಿವಿಧ ಮಜಲುಗಳನ್ನು ಕಾಣಬಹುದು. ಒಂದೆಡೆ ಕಲೆಹಾಕಿರುವ ನೀತಿ ವಾಕ್ಯ ಮತ್ತು ಸಂಭಾಷಣೆಗಳು ನಮ್ಮನ್ನು ಕ್ಷಣ ಕಾಲ ಚಿಂತಿಸುವಂತೆ ಮಾಡಿ ಗಲಿಬಿಲಿಗೊಳಿಸುತ್ತವೆ. ಏನೇ ಆಗಲಿ ಇಲ್ಲಿ ದಿನಚರಿ ಸುಪ್ತಚೇತನವೊಂದರ ವ್ಯಕ್ತಿತ್ವವನ್ನು ಕುರಿತು ಸತ್ಯ ಶೋಧನೆಯನ್ನು ಪ್ರತಿನಿಧಿಸುತ್ತದೆ. ಒಬ್ಬ ಸೃಜನಶೀಲ ವೈರಾಗಿ ಕ್ರೂರ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಬಗೆಯನ್ನು ನಮ್ಮ ಮುಂದಿಟ್ಟು ದಿನಚರಿ ಸಹ್ಯವೆನಿಸುತ್ತದೆ. ಸ್ವಾಮಿಗಳಾದವರು, ಆಗಬೇಕೆಂದು ಕನಸು ಕಂಡವರು ಒಮ್ಮೆ ಈ ಕೃತಿಯನ್ನು ಅಭ್ಯಸಿಸಿದರೆ ಒಳ್ಳೆಯದು.

ಬಿ.ಎನ್.ಜಯದೇವಪ್ಪ