ಸರಳತೆಯ ಸಾಕಾರ ಮೂರ್ತಿ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

  •  
  •  
  •  
  •  
  •    Views  

ಶ್ರದ್ಧಾಂಜಲಿ ವಿಶೇಷ ಲೇಖನ ಮಾಲಿಕೆ #109

ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ವರ್ಷದ ಪುಣ್ಯಸ್ಮರಣೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಅವರ ಕುರಿತು ಒಂದೆರಡು ಘಟನೆಗಳನ್ನು ಓದುಗರ ಗಮನಕ್ಕೆ ತರಲು ಇಚ್ಚಿಸುತ್ತೇನೆ.

ಶ‍್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಹತ್ತಿರದಿಂದ ಕಂಡು ಅವರೊಂದಿಗೆ ಭಾಲಕನಾಗಿದ್ದಾಗ ಮಾತನಾಡಿದ ಮತ್ತು ಮಾತೃ ವಾತ್ಸಲ್ಯವನ್ನು ಅನುಭವಿಸಿದ ಲಕ್ಷಾಂತರ ಭಕ್ತಾದಿಗಳಂತೆ ನನಗೂ ಅಂತಹ ಅನುಭವ ಆಗಿರುವುದನ್ನ ನೆನೆದಾಗ ಅನೇಕ ಬಾರಿ ಬಾವೋದ್ವೇಗಕ್ಕೆ ಒಳಗಾಗಿ ಮಾಡಿ ಮಾತು ಹೊರಡದಂತಾಗುತ್ತದೆ, ಮನಸ್ಸು ಮೌನವಾಗುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ದುಗ್ಗಾಣಿ ಮಠವೆಂದು ಕರೆಸಿಕೊಳ್ಳುತ್ತಿದ್ದ ತರಳಬಾಳು ಶ್ರೀಮಠವನ್ನು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯ ಶಕ್ತಿ ಕೇಂದ್ರವನ್ನಾಗಿ ಬೆಳೆಸಿದ ಕೀರ್ತಿ ಹಿರಿಯ ಜಗದ್ಗುರುಗಳಿಗೆ ಸಲ್ಲುತ್ತದೆ. 

ಬಡವರು ದಿಕ್ಕು ದೆಸೆ ಇಲ್ಲದವರ ನೋವಿಗೆ ಸದಾ ಸ್ಪಂದಿಸುತ್ತಿದ್ದ ಕರುಣಾಮಯಿ. ಸಾವಿರಾರು ಭಕ್ತಾದಿಗಳನ್ನ ಗುರುಗಳು ಜಾತಿ ಮತ ಎಣಿಸದೆ ಓದು, ನೌಕರಿ ಇತ್ಯಾದಿ ಸಹಾಯ ಮಾಡಿ ಅವರನ್ನೇ ಆಸ್ತಿಯಾಗಿ ಮಾಡಿದ್ದರು. 

ಅವರೆಲ್ಲರ ಏಳಿಗೆಗಳನ್ನು ಕಂಡು ಸಂತೋಷ ಪಡುತ್ತಿದ್ದ ಅಪರೂಪದ ವ್ಯಕ್ತಿತ್ವದ ಶಕ್ತಿ ರೂಪವೇ ಹಿರಿಯ ಜಗದ್ಗುರುಗಳವರು. ತಮಗೆ ಸರಿ ಕಾಣದಿದ್ದರೆ ಯಾವುದೇ ಮುಲಾಜಿಲ್ಲದೆ ಅಷ್ಟೇ ಕಠಿಣವಾಗಿ ವರ್ತಿಸುತ್ತಿದ್ದ ನೇರನಡೆಯ ಧೀರತನ. 

ಇಡೀ ರಾಜ್ಯ ಮಾತ್ರವಲ್ಲ ದೇಶವೇ ಸಿರಿಗೆರೆ ಎಂಬ ಕುಗ್ರಾಮವನ್ನು ಬೆರಗಾಗಿ ನೋಡುವಂತೆ ಮಾಡಿದ್ದ ಜಗದ್ಗುರುಗಳವರು ರಾಜಕೀಯವಾಗಿಯೂ ಶ್ರೀಮಠವನ್ನು ಅಷ್ಟೇ ಪ್ರಬಲ ಶಕ್ತಿ ಕೇಂದ್ರವನ್ನಾಗಿಸಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ. 

ಸ್ವಾತಂತ್ರ್ಯ ಪೂರ್ವದಲ್ಲಿ ಸರ್ಕಾರದ ಸಹಾಯವಿಲ್ಲದೆ ತಾವೇ ಖುದ್ದಾಗಿ ನಿಂತು ಶಾಲಾ ಶಿಕ್ಷಕರುಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಶಾಲೆಯನ್ನು ಕಟ್ಟಿ ನಿರ್ಮಿಸಿದ್ದನ್ನ ಆಗ ಶಿಕ್ಷಕರಾಗಿದ್ದ ನಮ್ಮ ತಂದೆ ಲಿಂ. ಜಿ.ದುರ್ಗಪ್ಪನವರು ಆಗಾಗ ಜ್ಞಾಪಿಸಿಕೊಳ್ಳುತ್ತಿದ್ದರು. 

ಭಾರತ ಸೇವಾದಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡ ಈ ಶೈಕ್ಷಣಿಕ ಸುಧಾರಣೆಯ ಕ್ರಮಗಳು ದೇಶಾದ್ಯಂತ ವಾರ್ತಾ ಇಲಾಖೆಯ ಮೂಲಕ ಗಮನ ಸೆಳೆದಿತ್ತು. ಆಗ ಸಿನಿಮಾ ಮಂದಿರಗಳಿಲ್ಲ, ಚಲನಚಿತ್ರ ಪ್ರದರ್ಶನಕ್ಕೆ ಮುನ್ನ ಸಿರಿಗೆರೆ ಶ್ರೀಮಠದ ಈ ಸನ್ನಿವೇಶ ವಾರ್ತಾ ಇಲಾಖೆ ಮೂಲಕ ಬಿತ್ತರವಾಗುತ್ತಿತ್ತಂತೆ. 

ಹಾಗಾಗಿ ಕರ್ನಾಟಕದಲ್ಲಿ ಸಿರಿಗೆರೆ, ಮಠವೆಂದರೆ ಅತ್ಯಂತ ಪ್ರಭಾವಿ ಮಠ ಎಂದೆ ಖ್ಯಾತಿಗಳಿಸಿದ್ದ ಕಾಲ ಸಿರಿಗೆರೆ ಮಠವೆಂದರೆ ರಾಜಕೀಯ ಮಠವೆಂದೆ ನಿಮಿತವಾಗಿತ್ತು. ಚುನಾವಣೆಗಳಲ್ಲಿ ಗುರುಗಳು ಯಾರನ್ನು ಬೆಂಬಲಿಸುತ್ತಾರೆಯೋ ಅವರೇ ಗೆದ್ದು ಬರುತ್ತಿದ್ದರು. ಚುನಾವಣೆಗೆ ನಿಂತ ಅಭ್ಯರ್ಥಿಯನ್ನು ಗೆಲ್ಲಿಸುವುದು ಮತ್ತು ಸೋಲಿಸುವುದು ಎರಡೂ ಗುರುಗಳಿಗೆ ತಿಳಿದಿತ್ತು. 

ಚಿತ್ರದುರ್ಗದ ಪ್ರಬಲ ರಾಜಕಾರಣಿಯಾಗಿದ್ದ ಆಗಿನ ಮುಖ್ಯಮಂತ್ರಿ ಆಗಿದ್ದ ಎಸ್.ನಿಜಲಿಂಗಪ್ಪನವರನ್ನು ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಬೇಕೆಂಬ ಕಾರಣದಿಂದ ಅವರ ವಿರುದ್ಧ ಪ್ರಬಲರಲ್ಲದ ಜಿ.ಟಿ.ರಂಗಪ್ಪ ಎಂಬುವರನ್ನು ಗೆಲ್ಲಿಸಿ ಚರಿತ್ರೆ ನಿರ್ಮಾಣ ಮಾಡಿದ್ದರು. 

ರಾಜಕೀಯವಾಗಿ  1952 ರಿಂದಲೇ ಜಗಳೂರು ಜೆ.ಮೊಹಮ್ಮದ್ ಇಮಾಮ್ ಸಾಹೇಬ್, ಎಚ್.ಸಿದ್ದವೀರಪ್ಪ, ಕೊಂಡಜ್ಜಿ ಬಸಪ್ಪ, ಜಿ. ಶಿವಪ್ಪ, ಜಿ.ದುಗ್ಗಪ್ಪ, ಮಾರ್ಗದ ಮಲ್ಲಪ್ಪ, ಎಂ.ಜಿ.ಹಾಲಪ್ಪ ಮುಂತಾದವರನ್ನು ನಿರಾಯಾಸವಾಗಿ ಗೆಲ್ಲಿಸುತ್ತಿದ್ದರು. ಅವರ ಸನ್ಯಾಸ ಜೀವನ ಮುಳ್ಳಿನ ಹಾದಿಯಾಗಿತ್ತು. ಯಾವಾಗಲೂ ಅಲೆಗಳ ವಿರುದ್ಧ ಗುರುವರ್ಯಯರು ತಮಗೆ ಬಂದ ತೊಂದರೆ ಅಡಚಣೆಗಳನ್ನೇ ಮೆಟ್ಟಿಲುಗಳನ್ನಾಗಿ ಸ್ವೀಕರಿಸಿ ನುಡಿದಂತೆ ನಡೆದು ಶ್ರೀಮಠದ ಶಿಷ್ಯ ಕೋಟೆಯನ್ನು ಕಾಯಕದಲ್ಲಿ ತೊಡಗಿಸಿ ದುಡಿಯುವ ಮಠವನ್ನಾಗಿ ಪರಿವರ್ತಿಸಿ ಬೆಳೆಸಿದ ಕೀರ್ತಿ ಹಿರಿಯ ಜಗದ್ಗುರುಗಳವರಿಗೆ ಸಲ್ಲುತ್ತದೆ. 

ಸಮಾಜದ ಹಿರಿಯ ಗಣ್ಯರಾಗಿದ್ದ ಲಿಂಗೈಕ್ಯ ಎಸ್.ಆರ್.ಮಲ್ಲಪ್ಪ ತಿ.ರು.ಮ ಅವರ ಅಭಿಪ್ರಾಯದಂತೆ ದಸರಾ ಉತ್ಸವದ ಮಾದರಿಯಲ್ಲಿ ತರಳಬಾಳು ಪರಂಪರೆಯ ಹೆಸರಿನಿಂದಲೇ ಚರಿತ್ರಾರವಾದ ಳಬಾಳು ಹುಣ್ಣಿಮೆ ಮಹೋತ್ಸವವನ್ನು 1950ರ ದಶಕದಿಂದಲೇ ಪ್ರಾರಂಭ ಮಾಡಿ ಹವ್ಯಾಹತವಾಗಿ ಕಾರ್ಯಕ್ರಮವನ್ನು ಯಶಸ್ವಿ ನಡೆಸಿಕೊಂಡು ಬರುತ್ತಿರುವುದು

ಹಿರಿಯ ಜಗದ್ಗುರುಗಳವರು ಪ್ರವಾಸ ಪ್ರಿಯರು ಕೂಡ ಆಗಿದ್ದರಿಂದ ಕೇಳಿದ್ದೇನೆ ಆಗಾಗ ನೂರಾರು ಭಕ್ತಾದಿಗಳನ್ನ ಕರೆದುಕೊಂಡು ಪ್ರವಾಸ ಮಾಡುತ್ತಿದ್ದಾರಂತೆ. ಒಮ್ಮೆ ನೂರಾರು ಭಕ್ತಾದಿಗಳೊಂದಿಗೆ ಕಾಶಿಗೆ ದಯಮಾಡಿಸಿದ್ದ ಹಿರಿಯ ಜಗದ್ಗುರುಗಳವರು ತಮ್ಮ ಪೂರ್ವಾಶ್ರಮದ ವಿದ್ಯಾರ್ಥಿ ದೆಸೆಯಲ್ಲಿ ಸಂಸ್ಕೃತ ಪಾಠವನ್ನು ಕಲಿಸಿದ್ದ, ಗೃಹಸ್ಥರಾಗಿದ್ದ ಗೌರಿನಾಥ್ ಪಾಠಕ್ ಎಂಬ ಶಿಕ್ಷಕರನ್ನ ಕಾಣಲು ಭಕ್ತಾದಿಗಳನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದರಂತೆ. 

ಆಗ ಸಂಸ್ಕೃತ ಶಿಕ್ಷಕರನ್ನು ಕಂಡ ಹಿರಿಯ ಜಗದ್ಗುರುಗಳವರು ತಾವೊಬ್ಬ ಕರ್ನಾಟಕದ ಉತ್ತುಂಗದ ಸ್ಥಿತಿಯಲ್ಲಿದ್ದ ಪ್ರಭಾವಶಾಲಿ ಮಠದ ಪೀಠಾಧಿಪತಿಗಳೆನ್ನುವುದನ್ನು ಗಣನೆಗೆ ತೆಗೆದುಕೊಳ್ಳದೆ ವಿನೀತ ಭಾವದಿಂದ ಗೃಹಸ್ಥ ಶಿಕ್ಷಕ ಗೌರಿನಾಥ್ ಪಾಠಕ್ ದಂಪತಿಗಳ ಪಾದಗಳಿಗೆ ಭಕ್ತಿ ಪೂರ್ವಕವಾಗಿ ಸಾಷ್ಟಾಂಗ ಪ್ರಣಾಮಗಳನ್ನು ಮಾಡಿದ ಘಟನೆಯನ್ನು ಕಂಡ ಎಲ್ಲಾ ಭಕ್ತಾದಿಗಳಿಗೆ ಆಶ್ಚರ್ಯವಾಯಿತಂತೆ.

ಇಂತಹ ಅಪರೂಪದ ಮಹಾನ್ ಚೇತನ ಹಿರಿಯ ತರಳಬಾಳು ಜಗದ್ಗುರುಗಳವರ ಕರಕಮಲ ಸಂಜಾತರಾದ ಪರಮಪೂಜ್ಯ ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಿರಿಯ ಜಗದ್ಗುರುಗಳವರ ಕನಸನ್ನ ಅತ್ಯಂತ ಯಶಸ್ವಿಯಾಗಿ ನನಸು ಮಾಡುತ್ತಿದ್ದು ದೇಶ ವಿದೇಶಗಳಲ್ಲಿ ಬಸವ ತತ್ವಗಳ ಪ್ರಚಾರ, ಆಧುನಿಕ ತಂತ್ರಜ್ಞಾನ ಬಳಸಿ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಚರಿತ್ರಾರ್ಹ ಕಾರ್ಯ ಇಂದು ಇಡೀ ದೇಶದ ಗಮನ ಸೆಳೆಯುವಂತಾಗಿದೆ. 

ಮುಂದಿನ ದಿನಮಾನಗಳಲ್ಲಿ ಇನ್ನಿತರ ರಾಜ್ಯಗಳಿಗೂ ಸಹ ಇದೇ ಮಾದರಿಯ ಪರಮಪೂಜ್ಯರ ಈ ಯೋಜನೆ ಜಾರಿಗೆ ಬಂದು ರೈತರ ಬಾಳ ಬೆಳಕಾಗಿ ದೇಶದ ಕೃಷಿಗೆ ಮತ್ತಷ್ಟು ಬಲ ನೀಡಿ ತನ್ನ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದರಲ್ಲಿ ಸಂಶಯವಿಲ್ಲ. 

ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುವುದಾಗಿ ಮನಗಂಡಿರುವ ಪೂಜ್ಯರು ಹಳ್ಳಿಗಾಡಿನ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನದಾಸೋಹ, ದುಡಿಯುವ ಕೈಗಳಿಗೆ ಕೆಲಸ, ತೀರ್ಪುಗಳು ದೇಶಾದಾದ್ಯಂತ ವಚನ ನೃತ್ಯ ರೂಪಕ ಪ್ರದರ್ಶನಗಳು ಇಂತಹ ಹತ್ತು ಹಲವಾರು ಸಮಾಜೋದ್ಧಾರಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಿರಿಗೆರೆ ಶ್ರೀಮಠ ಬಸವ ತತ್ವಗಳನ್ನು ನಿಜ ಅರ್ಥದಲ್ಲಿ ಆಚರಣೆಗೆ ತಂದಿರುತ್ತಾರೆ. ಲಕ್ಷಾಂತರ ಮಂದಿ ಶ್ರೀಮಠದ ಸಹಾಯದಿಂದ ದೇಶವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಹಾಗೆ ಆಗಿರುವುದು ಹೆಗ್ಗಳಿಕೆಯಾಗಿದೆ. ಹಾಗಾಗಿ ಮಠಗಳ ಪರಂಪರೆಯಲ್ಲಿ ಸಿರಿಗೆರೆ ಇಂದಿಗೂ ಅಗ್ರಸ್ಥಾನವೆಂದರೆ ತಪ್ಪಾಗಲಾರದು.

ಲೇಖನ :
ಡಿ.ಪ್ರಸನ್ನಕುಮಾರ್