ಸಾಸಿವೆಹಳ್ಳಿ ಏತ ನೀರಾವರಿ ಯೋಜನೆ ಯಶಸ್ವಿ ಕಾರ್ಯಾರಂಭ

  •  
  •  
  •  
  •  
  •    Views  

ಸಿರಿಗೆರೆ (22-9-2024)

ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಯು ಭರಮಸಾಗರ ಮತ್ತು ಜಗಳೂರು ಏತ ನೀರಾವರಿ ಯೋಜನೆಗಳಿಗಿಂತ ಬಹಳ ಹಿಂದೆಯೇ ಮಂಜೂರಾಗಿದ್ದು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಇದು ಒಂದು ತಾಲ್ಲೂಕಿಗೆ ಸೀಮಿತವಾದುದಲ್ಲ. ಇದರ ವ್ಯಾಪ್ತಿಯಲ್ಲಿ ಈ ಕೆಳಗಿನ ಆರು ತಾಲ್ಲೂಕುಗಳ 121 ಕೆರೆಗಳು ಬರುತ್ತವೆ:

1. ಹೊನ್ನಾಳಿ
 2. ಭದ್ರಾವತಿ
 3. ಚನ್ನಗಿರಿ
 4. ದಾವಣಗೆರೆ  
5. ಹೊಳಲ್ಕೆರೆ  
6. ಚಿತ್ರದುರ್ಗ

ಈ ಯೋಜನೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿರುವುದಿಲ್ಲ. ಸಾಸಿವೆಹಳ್ಳಿ ಜಾಕ್ ವೆಲ್ ಸಮೀಪ ತಮ್ಮ ಜಮೀನಿನಲ್ಲಿ ಕೆಲಸ ಮಾಡದಂತೆ ಕೆಲವರು ರೈತರು ಹೈಕೋರ್ಟ್ ನಿಂದ ತಡೆಯಾಜ್ಞೆ (Injunction) ತಂದಿದ್ದರು. ಕಳೆದ ಎರಡು ವರ್ಷಗಳಿಂದ ಈ ಕೇಸು ಹಾಗೆಯೇ ಮುಂದುವರಿಯುತ್ತಾ ಬಂದಿತ್ತು. 

ಪರಮಪೂಜ್ಯ ಶ್ರೀ ಜಗದ್ಗುರುಗಳವರು ಹೈಕೋರ್ಟಿನ ಅಸಿಸ್ಟೆಂಟ್ ಅಡ್ವೋಕೇಟ್ ಜನರಲ್ ಅವರೊಂದಿಗೆ ಮಾತನಾಡಿ ನ್ಯಾಯಾಲಯಕ್ಕೆ ಸರಿಯಾದ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸಿದ ಮೇಲೆ ಎರಡೇ ವಾರಗಳಲ್ಲಿ ಕೇಸು ವಜಾ ಆಗಿರುತ್ತದೆ. ದಿನಾಂಕ 7-3-2024 ರಂದು ನೀಡಿದ ಹೈಕೋರ್ಟ್ ತೀರ್ಪು ಈ ಕೆಳಕಂಡಂತೆ ಇದೆ:

ಹೈಕೋರ್ಟಿನಿಂದ ಈ ತೀರ್ಪು ಬರದೇ ಹೋಗಿದ್ದರೆ ಈಗ ಮಾಡುತ್ತಿರುವ ಕಾಮಗಾರಿಯನ್ನು ಮುಂದುವರಿಸಲು ಆಗುತ್ತಿರಲಿಲ್ಲ. ಹೈಕೋರ್ಟ್ ತಡೆಯಾಜ್ಞೆ ತೆರವಾದ ತಕ್ಷಣವೇ ನೀರಾವರಿ ಇಲಾಖೆಯ ಇಂಜಿನಿಯರುಗಳು  ದಕ್ಷತೆಯಿಂದ ಕಾರ್ಯಪ್ರವೃತ್ತರಾಗಿ ಹತ್ತೇ ದಿನಗಳಲ್ಲಿ ಸಾಸಿವೆಹಳ್ಳಿ ಚಾಕ್ವೆಲ್ ವರೆಗೆ ವಿದ್ಯುತ್ ಕಂಬಗಳನ್ನು ನಿಲ್ಲಿಸಿರುತ್ತಾರೆ.

ಮುಂದೆ ಎದುರಾದ ಮತ್ತೊಂದು ಮುಖ್ಯವಾದ ಸಮಸ್ಯೆ ಎಂದರೆ ವಿದ್ಯುತ್ ಪೂರೈಕೆ.  KPTCL ಮ್ಯಾನೇಜಿಂಗ್ ಡೈರೆಕ್ಟರ್ ಆದ ಪಂಕಜ್ ಕುಮಾರ್ ಪಾಂಡೆಯವರೊಂದಿಗೆ ಶ್ರೀ ಜಗದ್ಗುರುಗಳವರು  ಮಾತನಾಡಿದ್ದು ಅವರು ಒಂದೇ ವಾರದಲ್ಲಿ ದಿನಾಂಕ 29-7-2024 ರಂದು ಈ ಕೆಳಕಂಡಂತೆ 17330 KVA ವಿದ್ಯುತ್ ಸರಬರಾಜು ಆದೇಶವನ್ನು ಮಾಡಿ ಅದರ ಪ್ರತಿಯನ್ನು ಪರಮಪೂಜ್ಯರಿಗೆ ಕಳುಹಿಸಿ ಕೊಟ್ಟಿರುತ್ತಾರೆ.

ಈ ಆದೇಶದನ್ವಯ ಕರ್ನಾಟಕ ನೀರಾವರಿ ನಿಗಮದವರು ಒಂದು ಕೋಟಿ 89 ಲಕ್ಷ ರೂ. ಗಳನ್ನು ವಿದ್ಯುತ್ ಇಲಾಖೆಗೆ ಕಟ್ಟಿರುತ್ತಾರೆ.

ಲಿಂಗೈಕ್ಯ ಗುರುವರ್ಯರ ಜನ್ಮಸ್ಥಳವಾದ ಮುತ್ತುಗದೂರು ಕೆರೆಗೆ ಏನಾದರೂ ಮಾಡಿ ಅವರ ಶ್ರದ್ಧಾಂಜಲಿ ದಿನವಾದ ಸೆಪ್ಟೆಂಬರ್ 24 ರಂದೇ ನೀರು ಹರಿಸಬೇಕೆಂಬ ಪರಮಪೂಜ್ಯರ ಸತ್ಸಂಕಲ್ಪದಂತೆ ನೀರಾವರಿ ಇಲಾಖೆಯ ಇಂಜಿನಿಯರ್ ಗಳು ಬಹಳ ಕಷ್ಟಪಟ್ಟು ಸಾಸಲು ಗುಡ್ಡದವರೆಗೆ ನೀರು ತಂದಿರುತ್ತಾರೆ. ಈ ಮಧ್ಯೆ ತನ್ನ ಅಡಿಕೆ ತೋಟದ ಮಧ್ಯೆ ಹಾದು ಹೋಗುತ್ತಿರುವ ಪೈಪ್ ಲೈನ್ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದ ಬಿ.ದುರ್ಗದ ರೈತನನ್ನು ಪರಮಪೂಜ್ಯರು ಮಠಕ್ಕೆ ಕರೆಸಿ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆಯನ್ನು ನೀಡಿ ಅಡ್ಡಿಪಡಿಸದಂತೆ ಮಾಡಿರುತ್ತಾರೆ.

ಈಗ ಟ್ರಯಲ್ ರನ್ ಮಾತ್ರ ನಡೆಯುತ್ತಿದೆ. ಇನ್ನೂ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಇದೇ ರೀತಿ ಆರೂ ತಾಲೂಕುಗಳ 121 ಕೆರೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಟ್ರಯಲ್ ರನ್ ಮಾಡಬೇಕಾಗಿದೆ. ಈ ಯೋಜನೆ ಒಬ್ಬ ವ್ಯಕ್ತಿಯಿಂದ ಅಲ್ಲ. ಇದರ ಹಿಂದೆ ಅನೇಕ ಜನರ ಸಹಕಾರ ಮತ್ತು ಸಹಯೋಗ ಇದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಪರಮ ಪೂಜ್ಯರು ಆಶಿಸಿದ್ದಾರೆ.

-ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ.