ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!

  •  
  •  
  •  
  •  
  •    Views  

ರ್ಮ ಮತ್ತು ಕಾನೂನು ಮೇಲ್ನೋಟಕ್ಕೆ ಬೇರೆ ಬೇರೆಯಾಗಿ ಕಂಡುಬಂದರೂ ಅವುಗಳ ಸದಾಶಯ ಮಾತ್ರ ಒಂದೇ. ಅದುವೇ ವ್ಯಕ್ತಿ ಮತ್ತು ಸಮಾಜದ ಹಿತ. ಒಂದು ದೃಷ್ಟಿಯಲ್ಲಿ ಧರ್ಮ ಬೇರೆಯಲ್ಲ, ಕಾನೂನು ಬೇರೆಯಲ್ಲ ಎಂದು ಹೇಳಬಹುದಾದರೂ ಗಣಿತದ ಲೆಕ್ಕಾಚಾರದಂತೆ ಕಾನೂನು = ಧರ್ಮ ಎಂದು ಸಮೀಕರಿಸಿ ಹೇಳಲಾಗದು. ಧರ್ಮದ ಉತ್ತಮ ಅಂಶಗಳು ಕಾನೂನಿನಲ್ಲಿ ಇವೆ, ನಿಜ. ಅಂದ ಮಾತ್ರಕ್ಕೆ ಕಾನೂನು ಪರಿಪೂರ್ಣ ಅಲ್ಲ. ವಿಭಿನ್ನ ಕಾಲಘಟ್ಟಗಳಲ್ಲಿ, ವಿಭಿನ್ನ ಭೂಭಾಗಗಳಲ್ಲಿ ಕಾನೂನು ಬದಲಾವಣೆಯಾಗುತ್ತಾ ಹೋಗುತ್ತದೆ. ಆದರೆ ಧರ್ಮ ದೇಶಾತೀತ ಮತ್ತು ಕಾಲಾತೀತ. ಕಾನೂನು ದೇಶ ಮತ್ತು ಕಾಲಕ್ಕೆ ಪರಿಸೀಮಿತ. ಭಾರತದ ಕಾನೂನು ಅಮೇರಿಕಾದಿ ಬೇರೆ ದೇಶಗಳಿಗೆ ಅನ್ವಯಿಸುವುದಿಲ್ಲ. ಕಾನೂನು ಆಯಾಯ ದೇಶದ ಕಟ್ಟಳೆಯಾದರೆ, ಧರ್ಮ ಪ್ರತಿಯೊಬ್ಬರ ಜೀವನದ ಕಟ್ಟಳೆ.

“ಧರ್ಮ” ಎಂಬ ಸಂಸ್ಕೃತ ಶಬ್ದಕ್ಕೆ ಸಂದರ್ಭಾನುಸಾರ ಅನೇಕ ಅರ್ಥಗಳಿವೆ. ಸ್ಥೂಲವಾಗಿ ಧರ್ಮ ಎಂದರೆ ಕರ್ತವ್ಯ, ಕಟ್ಟಳೆ, ನ್ಯಾಯ, ನೀತಿ, ಗುಣಸ್ವಭಾವ, ಸದಾಚಾರ, ಸನ್ನಡತೆ ಎನ್ನಬಹುದು. ಈ ಎಲ್ಲ ಅರ್ಥಗಳನ್ನು ಕೊಡಬಲ್ಲ ಒಂದೇ ಶಬ್ದ ಬೇರಾವ ಭಾಷೆಗಳಲ್ಲಿಯೂ ಇಲ್ಲ. ಧರ್ಮ ಶಬ್ದದ ಪೂರ್ಣ ಅರ್ಥವನ್ನು ಪ್ರತಿಧ್ವನಿಸುವ ಪರ್ಯಾಯ ಶಬ್ದ (synonymn) ಸಂಸ್ಕೃತದಲ್ಲಿಯೂ ಇಲ್ಲ. ಇದರ ಅರ್ಥವನ್ನು ವ್ಯಾಖ್ಯಾನಿಸಬಹುದೇ ಹೊರತು ಬೇರೆ ಭಾಷೆಗಳಿಗೆ ಅನುವಾದಿಸುವುದು ಕಷ್ಟ. ದೇಶ-ಕಾಲಗಳನ್ನು ಮೀರಿ ಮನುಕುಲದ ಒಳಿತನ್ನು ಹಾರೈಸುವಂತಹದು ಧರ್ಮ. “ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ” ಎಂದು ಬಸವಣ್ಣನವರು ಹೇಳುವಂತೆ ಧರ್ಮ ಇಹ ಮತ್ತು ಪರ ಎರಡಕ್ಕೂ ಸಂಬಂಧಿಸಿದ್ದು. ಧರ್ಮ ಎಂದರೆ ಜೀವನಾದರ್ಶಗಳ ಗತಿವಿಧಾನ. ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ ಧರ್ಮಗಳೆಂದರ್ಥವಲ್ಲ. ಅವುಗಳು ಮತಧರ್ಮಗಳು. ಈ ಎಲ್ಲ ಮತಧರ್ಮಗಳ ಮೂಲಪುರುಷರಿಗೆ ಮತೀಯ ದೃಷ್ಟಿ ಇರಲಿಲ್ಲ. “ವಸುಧೈವ ಕುಟುಂಬಕಮ್” ಎಂಬ ಮಾನವತೆಯ ವಿಶಾಲ ದೃಷ್ಟಿ ಇತ್ತು. ಪ್ರಜ್ವಲಿಸುವ ದೀಪಕ್ಕೆ ಮಂಕು ಕವಿದಂತೆ ಅವರ ಬೋಧನೆಗೆ ಕಾಲಾನಂತರ ಮಂಕು ಕವಿಯಿತು. ಅವರು ನಡೆದ ಹೆದ್ದಾರಿಗಳು ಹಾಳಾದವು. ಅವರ ಅನುಯಾಯಿಗಳಿಂದ ಕವಲು ದಾರಿಗಳಾದವು, ತಗ್ಗು ಗುಂಡಿಗಳು ಉಂಟಾದವು.

ಕಾನೂನು ಪರಿಪಾಲನೆ ಮತ್ತು ಧರ್ಮ ಪರಿಪಾಲನೆ ಮಾಡುವ ಜನರ ಮನೋಧರ್ಮ ಬೇರೆ ಬೇರೆ. ಸಾಮಾನ್ಯರು ಶಿಕ್ಷೆಯ ಭಯದಿಂದ, ಒಲ್ಲದ ಮನಸ್ಸಿನಿಂದ ಕಾನೂನು ಪರಿಪಾಲನೆ ಮಾಡುತ್ತಾರೆ. ಧರ್ಮಭೀರುಗಳು ಉತ್ತಮ ಸಂಸ್ಕಾರದಿಂದ, ಆತ್ಮಸಾಕ್ಷಿಯಾಗಿ ಧರ್ಮ ಪರಿಪಾಲನೆ ಮಾಡುತ್ತಾರೆ. ಎರಡೂ ಸಹ ಮನುಷ್ಯನನ್ನು ಸರಿದಾರಿಯಲ್ಲಿ ನಡೆಸುತ್ತವೆ. ಆದರೆ ಒಂದು ಬಲವಂತದಿಂದ ಪಾಲನೆಯಾದರೆ ಮತ್ತೊಂದು ಸ್ವಪ್ರೇರಣೆಯಿಂದ ಪಾಲನೆಯಾಗುತ್ತದೆ. ತಪ್ಪು ಮಾಡಿದ ವ್ಯಕ್ತಿ ತನ್ನ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟುಕೊಳ್ಳದೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಾನೂನಿನ ಕುಣಿಕೆಯಿಂದ ಪಾರಾಗುವುದು ಹೇಗೆಂದು ಸದಾ ಯೋಚಿಸುತ್ತಿರುತ್ತಾನೆ. ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಸರಣಿ ತಪ್ಪುಗಳನ್ನು ಮಾಡುತ್ತಾನೆ. ಮಾನ-ಮರ್ಯಾದೆ ಉಳಿಸಿಕೊಳ್ಳಲು ಹೆಣಗಾಡುತ್ತಾನೆ. ತಪ್ಪು ಮಾಡದ ಧರ್ಮಭೀರುವು ಏನೇ ಆರೋಪಗಳು ಬಂದರೂ ಎದೆಗುಂದದೆ ಧೈರ್ಯವಾಗಿ ಎದುರಿಸುತ್ತಾನೆ. ಮಠ-ಮಂದಿರ-ಮಸೀದಿ-ಚರ್ಚುಗಳಿಗೆ ಜನರು ತಮ್ಮ ಲೌಕಿಕ ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಹೋಗುತ್ತಾರೆ. ವಾಸ್ತವವಾಗಿ ಅಲ್ಲಿಗೆ ಹೋಗಬೇಕಾಗಿರುವುದು ತಮ್ಮ ಲೌಕಿಕ  ಕಾಮನೆಗಳ ಇಷ್ಟಾರ್ಥ ಸಿದ್ಧಿಗಾಗಿ ಅಲ್ಲ. “ಕರ-ಚರಣಕೃತಂ  ವಾ ಕಾಯಜಂ ಕರ್ಮಜಂ ವಾ ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ. ಜಯ ಜಯ ಕರುಣಾಬ್ಧೇ ಶ್ರೀಮಹಾದೇವ ಶಂಭೋ!” ಎಂದು ಶಂಕರಾಚಾರ್ಯರು ಪ್ರಾರ್ಥಿಸಿದಂತೆ ನಿತ್ಯಜೀವನದಲ್ಲಿ ಮಾಡಿದ ತಪ್ಪುಗಳಿಗಾಗಿ ತಾವು ನಂಬಿದ ದೇವರ ಕ್ಷಮೆ ಯಾಚಿಸುವುದಕ್ಕೆ. “ಎನ್ನ ತಪ್ಪು ಅನಂತ ಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ. ಇನ್ನು ತಪ್ಪಿದನಾದೊಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕೂಡಲಸಂಗಮದೇವಾ!” ಎಂದು ಬಸವಣ್ಣನವರು ಪ್ರಾರ್ಥಿಸಿದಂತೆ ಮತ್ತೆಂದೂ ತಪ್ಪು ಮಾಡದ ಹಾಗೆ ದೃಢ ಸಂಕಲ್ಪ ಮಾಡುವುದಕ್ಕೆ.

ಪ್ರಜಾಪ್ರಭುತ್ವದಲ್ಲಿ ಆಯಾಯ ದೇಶದ ಜನರ ಒಳಿತಿಗಾಗಿ ಮಾಡಿದ ಕಾನೂನುಗಳು ಸಂವಿಧಾನ ಎನಿಸಿದರೆ ಹಿಂದಿನ ರಾಜ ಮಹಾರಾಜರುಗಳ ಕಾಲದಲ್ಲಿ ಗೌತಮ, ಬೌಧಾಯನ, ಆಪಸ್ತಂಭ, ಹಾರೀತ, ವಸಿಷ್ಠ ಇತ್ಯಾದಿ ಋಷಿಮುನಿಗಳು ಬರೆದ ಧರ್ಮಶಾಸ್ತ್ರಗಳು, ಪರಾಶರ, ಮನು, ಯಾಜ್ಞವಲ್ಕ್ಯ, ಬೃಹಸ್ಪತಿ, ಕಾತ್ಯಾಯನ ಇತ್ಯಾದಿ ಸ್ಮೃತಿಗಳು ರಾಜ್ಯ/ದೇಶದ ಆಡಳಿತ ನಿರ್ವಹಣೆಯ ಸಂವಿಧಾನಗಳಾಗಿದ್ದವು. ಘನಘೋರ ಮಹಾಭಾರತ ಯುದ್ಧ ಮುಗಿದ ಮೇಲೆ ರಾಜ್ಯದ ಗದ್ದುಗೆಯನ್ನೇರುವ ಸಂದರ್ಭದಲ್ಲಿ ಧರ್ಮರಾಯನು ಶರಶಯ್ಯೆಯಲ್ಲಿದ್ದ ಭೀಷ್ಮರಿಂದ ಪಡೆದ ಉಪದೇಶದ ಮಾತು:

ತದ್ರಾಜ್ಯೇ ರಾಜ್ಯಕಾಮಾನಾಂ ನಾನ್ಯೋ ಧರ್ಮಃ ಸನಾತನಃ | 
ಋತೇ ರಕ್ಷಾಂ ತು ವಿಸ್ಪಷ್ಟಾಂ ರಕ್ಷಾ ಲೋಕಸ್ಯ ಧಾರಿಣೀ ||

(ರಾಜರಿಗೆ ರಾಜ್ಯದ ಪ್ರಜೆಗಳನ್ನು ಚೆನ್ನಾಗಿ ಸಂರಕ್ಷಿಸುವುದಕ್ಕಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ). ರಾಜಕೀಯ ಧುರೀಣರು ಜನರ ಹಿತಕ್ಕಾಗಿ ಶ್ರಮಿಸಬೇಕು, ಅಧಿಕಾರದ ಗದ್ದುಗೆಗಾಗಿ ಕಾದಾಡುವಂತಾಗಬಾರದು

ಹಲವು ವರ್ಷಗಳಿಂದ ಸರಕಾರದೊಂದಿಗೆ ವ್ಯವಹರಿಸಿ ಮಂಜೂರು ಮಾಡಿಸಿಕೊಟ್ಟ ಕೋಟ್ಯಂತರ ರೂ. ಗಳ ಅನೇಕ ಏತ ನೀರಾವರಿ ಯೋಜನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಗ್ರಾಮೀಣ ಜನರ ಜೀವನಾಡಿಗಳಾದ ನೂರಾರು ಕೆರೆಗಳಿಗೆ ತುಂಗಭದ್ರೆಯು ಧುಮ್ಮಿಕ್ಕಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಭರಮಸಾಗರ, ಜಗಳೂರು ಜೋಡಿ ಏತ ನೀರಾವರಿ ಯೋಜನೆಗಳಿಗಿಂತ ಮುಂಚಿತವಾಗಿ ಮಂಜೂರಾದ 121 ಕೆರೆಗಳಿಗೆ ನೀರು ಹರಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯು ಅನೇಕ ಕಾನೂನು ತೊಡಕುಗಳ ಕಾರಣ ನೆನೆಗುದಿಗೆ ಬಿದ್ದಿತ್ತು. “ಶ್ರೇಯಾಂಸಿ ಬಹು ವಿಘ್ನಾನಿ” (ಒಳ್ಳೆಯ ಕಾರ್ಯಗಳಿಗೆ ಅನೇಕ ವಿಘ್ನಗಳು) ಎನ್ನುವಂತೆ ಈ ಯೋಜನೆಯ ಕಾಮಗಾರಿಗಳು ಆರಂಭಗೊಂಡಾಗ ಬಂದೊದಗಿದ ಮೊದಲ ವಿಘ್ನ ಎಂದರೆ ತುಂಗಭದ್ರಾ ನದೀತೀರದಲ್ಲಿರುವ ಬಡ ರೈತನೊಬ್ಬನ ಜಮೀನಿನಲ್ಲಿ ಜಾಕ್ವೆಲ್ ನಿರ್ಮಾಣಕ್ಕೆ ಉಂಟಾದ ಅಡೆ ತಡೆ. ಆತನು ತನ್ನ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದರೂ ಭೂ ಸ್ವಾಧೀನಪಡಿಸಿಕೊಂಡಾಗ ರೆವಿನ್ಯೂ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸ್ಥಳ ಪರಿಶೀಲನೆ ಮಾಡದೆ ಖುಷ್ಕಿ ಜಮೀನು ಎಂದು ಪರಿಗಣಿಸಿ ಒಂದು ಎಕರೆಗೆ ಕೇವಲ ಒಂದೂವರೆ ಲಕ್ಷ ರೂ. ಮೌಲ್ಯವನ್ನು ನಿಗದಿಪಡಿಸಿದ್ದರು. ಇದರಿಂದ ಹತಾಶನಾದ ಬಡರೈತ ತನ್ನ ಜಮೀನಿನಲ್ಲಿ ನಡೆಯುವ ಕಾಮಗಾರಿಗೆ ತಡೆಯೊಡ್ಡಿ ಹೆಚ್ಚಿನ ಪರಿಹಾರ ಕೋರಿ ಕೋರ್ಟಿನ ಮೊರೆ ಹೋಗಿದ್ದ.

ಆತನನ್ನು ನಮ್ಮ ಮಠದ ಸದ್ಧರ್ಮ ನ್ಯಾಯಪೀಠಕ್ಕೆ ಕರೆಸಿ ಆತನ ಸಂಕಷ್ಟಕ್ಕೆ ಮರುಗಿ ಅವನ ಮುಂದಿಟ್ಟ ನಮ್ಮ ಪ್ರಸ್ತಾವನೆ: “ನೀನು ಕೋರ್ಟ್ ಕೇಸನ್ನು ಮುಂದುವರಿಸು. ಆದರೆ ಜಾಕ್ವೆಲ್ ನಿರ್ಮಾಣಕ್ಕೆ ಅಡ್ಡಿಪಡಿಸಬೇಡ. ಕಟ್ಟಡದ ಕಾಮಗಾರಿ ಮುಗಿದ ಮೇಲೆ ಅದರ ಬೀಗದ ಕೈಯನ್ನು ಕಂಟ್ರಾಕ್ಟರ್ ನಮ್ಮ ಮಠಕ್ಕೆ ತಂದು ಕೊಡಬೇಕು. ನಿನಗೆ ಸೂಕ್ತ ಪರಿಹಾರ ಸಿಗುವವರೆಗೂ ಆ ಬೀಗದ ಕೈ ಮಠದ ವಶದಲ್ಲಿಯೇ ಇರುತ್ತದೆ. ಅದನ್ನು ನೀರಾವರಿ ಇಲಾಖೆಯ ವಶಕ್ಕೆ ಕೊಡುವುದಿಲ್ಲ” ಎಂಬ ಭರವಸೆಯನ್ನು ಕೊಟ್ಟಾಗ ಶ್ರದ್ಧಾಭಕ್ತಿಯುಳ್ಳ ಬಡ ರೈತ ನಮ್ಮ ಮಾತಿಗೆ ಓಗೊಟ್ಟು ಸಕಾರಾತ್ಮಕವಾಗಿ ಸ್ಪಂದಿಸಿದ. ನಮ್ಮ ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿ ದಿನದಂದೇ (ಸೆ.24) ನೀರು ಹರಿಸಬೇಕೆಂಬ ನಮ್ಮ ಸತ್ಸಂಕಲ್ಪ ಈಡೇರಿತು. ನೀರಾವರಿ ಇಲಾಖೆಯ ಅಧಿಕಾರಿಗಳು, ಇಂಜಿನಿಯರುಗಳು ಮತ್ತು ಕೆಲಸಗಾರರು ಅಹೋರಾತ್ರಿ ಕಾರ್ಯನಿರ್ವಹಿಸಿದ ಪರಿಣಾಮವಾಗಿ ತುಂಗಭದ್ರಾ ನದಿಯ ನೀರು ಸುಮಾರು 60 ಕಿ.ಮೀ ದೂರದಲ್ಲಿರುವ ನಮ್ಮ ಲಿಂಗೈಕ್ಯ ಗುರುವರ್ಯರ ಜನ್ಮಸ್ಥಳವಾದ ಮುತ್ತುಗದೂರು ಕೆರೆಗೆ ಕಳೆದ ಸೆಪ್ಟೆಂಬರ್ 24 ರಂದು ಧುಮ್ಮಿಕ್ಕಿತು. ರೈತರು ಹರ್ಷೋದ್ಗಾರಗೈದರು.

ಪ್ರಯೋಗಾರ್ಥವಾಗಿ ಉಳಿದೆಲ್ಲ ಕೆರೆಗಳಿಗೆ ನೀರು ಹರಿಸಿದ ಮೇಲೆ ರೈತನಿಗೆ ಮಾತುಕೊಟ್ಟಂತೆ ಜಾಕ್ವೆಲ್ ಕಟ್ಟಡದ ಬೀಗದ ಕೈಯನ್ನು ನಮ್ಮ ವಶಕ್ಕೆ ಪಡೆಯಬೇಕೆಂಬ ಆಲೋಚನೆ ಮಾಡುತ್ತಿದ್ದಂತೆಯೇ ಎರಡು ವರ್ಷಗಳ ಹಿಂದೆ ದಾವಣಗೆರೆಯ ಕೋರ್ಟಿನಲ್ಲಿ ದಾಖಲಿಸಿದ್ದ ಬಡ ರೈತನ ಕೇಸಿನ ತೀರ್ಪೂ ಸಹ ನಾಲ್ಕು ದಿನಗಳ ಹಿಂದೆ ಪ್ರಕಟವಾಯಿತು. ನ್ಯಾಯಾಲಯವು ಬಡ ರೈತನ ಜಮೀನನ್ನು ಖುಷ್ಕಿ ಜಮೀನು ಎಂದು ಪರಿಗಣಿಸಿರುವುದು ನ್ಯಾಯಸಮ್ಮತವಲ್ಲವೆಂದೂ ಕಂದಾಯ ಇಲಾಖೆಯು ರೈತನಿಗೆ 1 ಕೋಟಿ ರೂ. ಗಳಿಗೂ ಹೆಚ್ಚು ಪರಿಹಾರವನ್ನು ಜಮೀನು ಸ್ವಾಧೀನ ಪಡೆದುಕೊಂಡ ದಿನಾಂಕದಿಂದ ಶೇ. 12 ರಂತೆ ಬಡ್ಡಿ ಸೇರಿಸಿ ಶೇ.100 ರಷ್ಟು ಸೋಲಾಶಿಯಂ ಸಹ ಕೊಡಬೇಕೆಂದು ತೀರ್ಪು ನೀಡಿರುತ್ತದೆ. ಇದರಿಂದ ವಕೀಲರ ಲೆಕ್ಕಾಚಾರದ ಪ್ರಕಾರ ರೈತನಿಗೆ ಸುಮಾರು ಆರೇಳು ಕೋಟಿ ರೂ. ಬರುತ್ತದೆ. ಧರ್ಮ ಮತ್ತು ಕಾನೂನು ಕೈಜೋಡಿಸಿದರೆ ಹೇಗೆ ಜಗದ ಒಳಿತನ್ನು ಮಾಡಬಹುದು ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ?

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ | 
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ಭವೇತ್ || 
ಓಂ ಶಾಂತಿಃ, ಶಾಂತಿಃ ಶಾಂತಿಃ!  – ಶಾಂತಿಮಂತ್ರ

(ಜಗದ ಜನರೆಲ್ಲರೂ ಸುಖವಾಗಿರಲಿ!
ಎಲ್ಲರೂ ಆರೋಗ್ಯಕಾಯರಾಗಿರಲಿ!
ಎಲ್ಲರ ದೃಷ್ಟಿ ಒಳಿತಾಗಿರಲಿ!
ಯಾರೂ ದುಃಖಿಸದಿರಲಿ!)

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.3-10-2024.