ಜಗತ್ತಿಗೆ ಬಸವಧರ್ಮ ಎಂದೆಂದಿಗೂ ಪ್ರಸ್ತುತ : ಶ‍್ರೀ ತರಳಬಾಳು ಜಗದ್ಗುರುಗಳವರು
ಬಸವ ಧರ್ಮ ಜಗತ್ತಿಗೆ ಎಂದೆಂದಿಗೂ ಪ್ರಸ್ತುತ ಎಂದು ಸಿರಿಗೆರೆ ಮಠದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಹುಲಿಕಲ್ಲು ಗ್ರಾಮದಲ್ಲಿ ಗುರುವಾರ ಶ್ರೀ ವೀರಮಾಸ್ತಮ್ಮದೇವಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಕ್ಕೆ ಕಾಲಮಿತಿ ಇಲ್ಲ. ಕಾನೂನುಗಳು ಆಯಾ ದೇಶಕ್ಕೆ ತಕ್ಕಂತೆ ರಚನೆಯಾಗುತ್ತವೆ. ಆದರೆ ಬಸವ ಧರ್ಮ ಇಡೀ ಜಗತ್ತಿಗೆ ಅನ್ವಯಿಸುತ್ತದೆ. ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಜ್ಞಾನದ ಜ್ಯೋತಿ ಪ್ರತಿಯೊಬ್ಬರ ಮನ, ಮನಸ್ಸುಗಳನ್ನು ಬೆಳಗುತ್ತದೆ. ಭಗವಂತನಲ್ಲಿ ಧನ ಸಂಪತ್ತು ಕೇಳಿಕೊಳ್ಳುವ ಬದಲು ಸಮಸ್ಯೆ ಎದುರಿಸುವ ಶಕ್ತಿ ನೀಡು ಎಂದು ಪ್ರಾರ್ಥಿಸಿಕೊಳ್ಳಿ ಎಂದರು.
ನೀರಾವರಿ ಯೋಜನೆಯ ಕಾಮಗಾರಿ ಕೈಗೊಳ್ಳಲು ಸರ್ಕಾರ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತದೆ. ಆದರೆ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ತೋರುತ್ತಾರೆ. ಪರಿಹಾರಕ್ಕಾಗಿ ರೈತರು ಕಾನೂನು ಮೊರೆ ಹೊದಾಗ ನ್ಯಾಯಾಧೀಶರು ಸತ್ಯ ಅರಿತು ಕಾನೂನು ಬದ್ಧವಾಗಿ ಸೂಕ್ತ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು. ಪುರಾತನ ಕಾಲದ ಶುಂಠಿ ಮಠದ ಜೀರ್ಣೋದ್ಧಾರಕ್ಕೆ ಭಕ್ತರ ನೆರವು ಅಗತ್ಯ. ಮಠದಿಂದ ಶಾಲೆ ಉತ್ತಮವಾಗಿ ನಡೆಯುತ್ತಿದೆ. ಈ ಭಾಗದ ಜನರಿಗೆ ಶೈಕ್ಷಣಿಕವಾಗಿ, ಧಾರ್ಮಿಕ ಆಚರಣೆಗೆ ಹೆಚ್ಚು ಒತ್ತು ನೀಡುವ ಮೂಲಕ ಜನೋಪಕಾರ್ಯ ಮಾಡಲು ಶ್ರೀ ಮಠ ಬದ್ಧವಾಗಿದೆ ಎಂದರು.
ಹಿರಿಯ ಲೇಖಕಿ ಮಧುರಾ ಆಶೋಕ್ ಕುಮಾರ ಮಾತನಾಡಿ, ಹುಲಿಕಲ್ಲು ಗ್ರಾಮಕ್ಕೆ ತನ್ನದೆಯಾದ ಇತಿಹಾಸ ಹೊಂದಿದೆ. ಗ್ರಾಮದ ವೀರಮಾಸ್ತಮ್ಮದೇವಿ ದೇವಸ್ಥಾನವೂ ಪುರಾತನವಾದದ್ದು. ದೈವ ಶಕ್ತಿ, ಧಾರ್ಮಿಕ ಆಚರಣೆ ನಂಬಿಕೆಯ ತಳಹದಿಯ ಮೇಲೆ ಧರ್ಮ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಎಸ್.ಎಂ.ಗುರುಲಿಂಗಸ್ವಾಮಿ ಮಾತನಾಡಿ, ಭಕ್ತರ ಸಹಕಾರ, ಗ್ರಾಮದ ಹಾಗೂ ನಿರ್ದೇಶಕರ ಶ್ರಮದಿಂದ ಉತ್ತಮವಾದ ವೀರಮಾಸ್ತಮ್ಮದೇವಿ ದೇವಾಲಯ ಹಾಗೂ ಸಮುದಾಯ ಭವನವನ್ನು ಲೋಕಾರ್ಪಣೆ ಗೊಳಿಸಲಾಗಿದೆ. ಈ ಭಾಗದ ಭಕ್ತರು ಸಮುದಾಯ ಭವನವನ್ನು ಸದ್ಬಳಕೆಮಾಡಿಕೊಳ್ಳಬೇಕು. ದೇವಿಯ ಧಾರ್ಮಿಕ ಕೈಂಕರ್ಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಸಿರಿಗೆರೆ ಶ್ರೀಗಳನ್ನು ಪೂರ್ಣಕುಂಭಕಳಶ, ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ಸ್ವಾಗತಿಸಲಾಯಿತು. ಹುಲಿಕಲ್ಲು ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಶ್ರೀವೀರಮಾಸ್ತಮ್ಮದೇವಿ ದೇವಾಲಯ ಟ್ರಸ್ಟ್ ಉಪಾಧ್ಯಕ್ಷ ಎಂ.ಗಂಗಾಧರ್, ಕಾರ್ಯದರ್ಶಿ ಪ್ರಭುದೇವ್, ನಿರ್ದೆಶಕ ಸಿದ್ದಲಿಂಗೇಶ್ವರ್, ಮಂಜುನಾಥ್, ವೀರೇಶ್, ಲೋಕೇಶ್, ಮಂಜುನಾಥ್, ತೋಂಟದಾರ್ಯ, ಮಹೇಶ್, ವಿ.ಎಸ್.ಎಸ್.ಎನ್ ಅಧ್ಯಕ್ಷ ದೇವರಾಜು, ಕಣ್ಣೂರು ಪ್ರಭುದೇವರ್, ಚಂದ್ರಣ್ಣ, ಎಂ.ತಿಪ್ಪೆರುದ್ರಯ್ಯ, ಹುಳ್ಳೆನಹಳ್ಳಿ ಸೋಮಣ್ಣ, ಶಿವಣ್ಣ ಇತರರು ಇದ್ದರು.