ತುಂಬಿ ಹರಿದ ಶಾಂತಿವನ ಮಿನಿಡ್ಯಾಂ ಸಂತಸ ವ್ಯಕ್ತಪಡಿಸಿದ ಶ್ರೀ ತರಳಬಾಳು ಜಗದ್ಗುರುಗಳವರು
"ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕರೆದರೆ ಜನಪ್ರತಿನಿಧಿಗಳು ಜನರಷ್ಟೆ ಅಲ್ಲ ತಾಯಿ ತುಂಗಭದ್ರೆಯೂ ಓಡಿ ಅವರಿದ್ದಲ್ಲಿಗೆ ಬರುತ್ತಾಳೆ" ಎಂದು ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರು ಕೊಟ್ಟೂರು ತರಳಬಾಳು ಹುಣ್ಣಿಮೆಯಲ್ಲಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದ್ದರು. ಈ ಮಾತು ಅಕ್ಷರಶಃ ನಿಜವಾದುದೆಂದು ಭರಮಸಾಗರ ಮತ್ತು ಜಗಳೂರು ತಾಲ್ಲೂಕಿನ ರೈತರು ಮಾತನಾಡುತ್ತಿದ್ದಾರೆ.
ಭರಮಸಾಗರ ಕೆರೆ ಮತ್ತು ಬಯಲು ಸೀಮೆಯ ಜಗಳೂರು ತಾಲ್ಲೂಕಿನ 57 ಕೆರೆಗಳು ಮಳೆ ಮತ್ತು ಏತ ನೀರಾವರಿಯ ಯೋಜನೆಯಡಿ ತುಂಗ ಭದ್ರೆಯರು ಹರಿದ ಪರಿಣಾಮ ಮೈದುಂಬಿ ಹರಿದು ಕೋಡಿ ಬಿದ್ದಿವೆ. ಜಗಳೂರು ಮತ್ತು ಭರಮಸಾಗರ ಕೆರೆಗೆ ಕಳೆದ ಭಾನುವಾರ ಶ್ರೀ ಜಗದ್ಗುರುಗಳವರು ಬಾಗಿನ ಸಮರ್ಪಿಸಿದ ಸಂಭ್ರಮದಲ್ಲಿರುವಾಗಲೇ ಸಿರಿಗೆರೆ ಸಮೀಪದ ಶಾಂತಿವನ ಕಿರು ಜಲಾಶಯವು ತುಂಬಿ ಹರಿಯುತ್ತಿದೆ.
ಶ್ರೀ ಜಗದ್ಗುರುಗಳವರ ಹತ್ತಾರು ಏತನೀರಾವರಿ ಯೋಜನೆಗಳಿಗೆ ಶಾಂತಿವನ ಜಲಾಶಯ ಮಾತೃ ಸ್ವರೂಪಿಯಾಗಿದೆ. ಏತನೀರಾವರಿ ಯೋಜನೆಯಡಿ ಬರುವ ಸುಮಾರು 500 ಕ್ಕೂ ಅಧಿಕ ಕೆರೆಗಳ ಗಂಗಾವತರಣವಾಗಲು ಮೂಲ ಪ್ರೇರಣೆ ಶಾಂತಿವನ ಈ ಜಲಾಶಯ!
ನಿನ್ನೆ ಈ ಜಲಾಶಯ ತುಂಬಿ ಹೆಚ್ಚುವರಿ ನೀರು ಭರಮಸಾಗರ ಕೆರೆಯತ್ತ ಹರಿಯಲು ಪ್ರಾರಂಭಿಸಿದೆ. ಈಗಾಗಲೇ ಸಿರಿಗೆರೆಯ ಮೂರು ಕೆರೆಗಳಲ್ಲಿ ಜಲ ಸಮೃದ್ಧಿಯಾಗಿ ಕೋಡಿಬಿದ್ದಿದೆ. ಸುತ್ತಮುತ್ತಲಿನ ಭಕ್ತಾದಿಗಳ ರೈತರ ಮಖದಲ್ಲಿ ಮಂದಹಾಸ ಮೂಡಿದೆ. ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಟಿ ಮತ್ತು ಸಂಕಲ್ಪ ಶಕ್ತಿ ಸಿರಿಗೆರೆ ಸುತ್ತಮುತ್ತಲಿನ ರೈತರಿಗೆ ಅನುಕೂಲ ಮಾಡಿಕೊಡುವ ಮಹೋನ್ನತ ಉದ್ದೇಶದಿಂದ ಶಾಂತಿವನದಲ್ಲಿ ನಿರ್ಮಾಣವಾಗಿರುವ “ಶಾಂತಿವನ ಕಿರುಜಲಾಶಯ”ವನ್ನು ಶ್ರೀಮಠದ ವೆಚ್ಚದಿಂದಲೇ ನಿರ್ಮಿಸಲಾಗಿದೆ. 200 ಎಕರೆ ವಿಸ್ತೀರ್ಣದ ಶಾಂತಿವನದ ಮಧ್ಯಭಾಗದಲ್ಲಿ ಹತ್ತಾರು ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಜಲಾಶಯವು 40 ಅಡಿ ಆಳ ಹೊಂದಿದ್ದು ಮೇಲ್ಭಾಗದಲ್ಲಿರುವ ಹಳ್ಳದಲ್ಲಿ ಸುಮಾರು 2 ಕಿ.ಮೀ. ದೂರದವರೆಗೆ ನೀರು ನಿಲ್ಲಿಸುವ ಸಾಮರ್ಥ್ಯ ಹೊಂದಿದೆ.