50 ವರ್ಷಗಳ ನಂತರ ತುಂಬಿ ಹರಿದ ಜಗಳೂರು ಕೆರೆ : ಸಿರಿಗೆರೆ ಶ್ರೀಗಳ ಸಂತಸದ ಹೊನಲು
ಅಪರೂಪಕ್ಕೆ ಮಗಳು ತವರ ಮನೆಗೆ ಬಂದಾಗ ತಾಯಿ ಮಗಳನ್ನು ನೋಡುತ್ತಾಳೆ, ಮಗಳು ತಾಯಿಯನ್ನು ನೋಡುತ್ತಾಳೆಯೆ ಹೊರತು ಮಾತೇ ಹೊರಡುವುದಿಲ್ಲ. ಅಂತಹ ಒಂದು ಸಂತೋಷದ ಸ್ಥಿತಿಯಲ್ಲಿ ನಾವು ನೀವೆಲ್ಲರೂ ಇದ್ದೇವೆ. ನಿನ್ನೆ ನಮ್ಮ ಮೊಬೈಲ್ ಗೆ ಜಗಳೂರಿನ ಜನ ಕೆರೆ ನೀರಿನಲ್ಲಿ ಕುಣಿದಾಡುತ್ತಿರುವ ವಿಡಿಯೋ ನಮ್ಮ ಮೊಬೈಲ್ ಗೆ ಬಂದಾಗ ಎಷ್ಟು ಸಂತೋಷವಾಯ್ತು ಅಂದರೆ ತಕ್ಷಣವೇ ನಾವು ಜಗಳೂರು ಶಾಸಕ ದೇವೇಂದ್ರಪ್ಪನವರಿಗೆ ಕರೆ ಮಾಡಬೇಕು ಅಂತ ಇದ್ದ ಹಾಗೆಯೇ ಅವರಿಂದಲೇ ಫೋನ್ ಕರೆ ಬಂತು.
ಬೆಳಗ್ಗೆ ನಾವು ವಾಯುವಿಹಾರದಲ್ಲಿದ್ದಾಗ ಜಗಳೂರು ಕೆರೆ ಕೋಡಿ ತುಂಬಿ ಹರಿಯುವ ವಿಡಿಯೋವನ್ನು ನೋಡಿ ತಕ್ಷಣ ಹೊರಟು ಬರಬೇಕೆಂದು ಅನ್ನಿಸಿತು. ಆದರೆ ಹರಿಹರದ ಕಾರ್ಯಕ್ರಮವೊಂದರದಲ್ಲಿ ಭಾಗವಹಿಸಬೇಕಾಗಿದ್ದುದರಿಂದ ಕೆರೆ ನೋಡಲು ತಕ್ಷಣವೇ ಬರಲಾಗಲಿಲ್ಲ. ಇದುವರೆಗೂ ಈ ಭಾಗದಲ್ಲಿ 10 ಕೆರೆಗಳು ಕೋಡಿ ಬಿದ್ದಿವೆ. ಮೊಟ್ಟಮೊದಲು ನಾವು ಇಲ್ಲಿ ನೆನಪಿಸಿಕೊಳ್ಳಬೇಕಾದುದು 400-500 ವರ್ಷಗಳ ಹಿಂದೆ ಈ ಕೆರೆಯನ್ನು ಕಟ್ಟಿಸಿದ ತಿಮ್ಮಪ್ಪನಾಯಕನನ್ನು. ಆತ ಎಷ್ಟು ದೂರದೃಷ್ಟಿ ಇಟ್ಟುಕೊಂಡು ಕೆರೆಯನ್ನು ನಿರ್ಮಿಸಿದನು. ಆ ಕಾಲದಲ್ಲಿ ಜೆ.ಸಿ.ಬಿ, ಹಿಟಾಚಿಯಂತಹ ಯಂತ್ರೋಪಕರಣಗಳ ಸಹಾಯವಿರಲಿಲ್ಲ. ಆಗ ಈ ಕೆರೆಯ ನಿರ್ಮಾಣದಲ್ಲಿ ಕೈಜೋಡಿಸಿದ ಹಳ್ಳಿಯ ಜನರನ್ನು ಸಹ ಈ ಸಂದರ್ಭದಲ್ಲಿ ನೆನೆಯಲೇಬೇಕು. ಈ ಕೆರೆಯನ್ನು ಕಟ್ಟಲು ಪರಿಶ್ರಮಿಸಿದವರಾರೂ ನಮ್ಮ ಕಣ್ಣಮುಂದೆ ಈಗ ಇಲ್ಲ. ಅವರ ಶ್ರಮದ ಫಲ ನೆನಪು ಮಾಡಿಕೊಳ್ಳದಿದ್ದರೆ ನಾವು ಕೃತಘ್ನರಾಗುತ್ತೇವೆ. ಇದರ ಬಗ್ಗೆ ಇತಿಹಾಸ ಬಲ್ಲವರಿಂದ ಒಂದು ಪುಟ್ಟ ಗ್ರಂಥವನ್ನು ಇಲ್ಲಿನ ಶಾಸಕರು ಮತ್ತು ನೀವೆಲ್ಲ ಸೇರಿ ಸಾಹಿತಿಗಳಿಂದ ಹೇಗೆ ಕೆರೆ ನಿರ್ಮಾಣವಾಯಿತು ಎಂದು ಬರೆಸಬೇಕು.
ಕಳೆದ 50 ವರ್ಷಗಳಿಂದ ಈ ಕೆರೆಗೆ ನೀರು ಹರಿದು ಬರದಿರಲು ಕಾರಣಗಳೇನು? ನಮ್ಮ ಪ್ರಕೃತಿಯಲ್ಲಿ ಮನುಷ್ಯನಿಗೆ ಬೇಕಾದುದ್ದೆಲ್ಲವೂ ಇದೆ. ಅದನ್ನು ಬಳಕೆ ಮಾಡಿಕೊಳ್ಳುವ ಕ್ಷಮತೆ ಬೇಕಾಗಿದೆ. 2018ರಲ್ಲಿ ಇಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆದಾಗಿನಿಂದ ಇದರ ತೀವ್ರತೆ ಹೆಚ್ಚಾಯಿತು.
ನಾವು ಹೇಳಿದ ಮಾತುಗಳನ್ನು ಶಾಸಕ ದೇವೇಂದ್ರಪ್ಪ ಹೇಗೆ ಕೇಳಿಸಿಕೊಂಡ್ರೋ ಗೊತ್ತಿಲ್ಲ. “ರಾ ರಾ…” ಎಂದರೆ ತೆಲುಗಿನಲ್ಲಿ ಬಾ ಬಾ ಎಂದರ್ಥ. ಇಲ್ಲಿ “ರಾ ರಾ” ಎಂದರೆ ರಾಜೇಶ್ ಮತ್ತು ರಾಮಚಂದ್ರಪ್ಪ. 2018ರಲ್ಲಿ ಜಗಳೂರು ತರಳಬಾಳು ಶಿಷ್ಯರಿಗೆ ರಾ ರಾ ಎಂದು ಕರೆದರೆ, ಈ ಹೊತ್ತು ತುಂಗಭದ್ರೆಯು ರಾ…ರಾ… ಕರೆಸಿರುವ ಯೋಜನೆ ಇದಾಗಿರುವುದು ಬಹಳ ಸಂತಸವನ್ನುಂಟು ಮಾಡಿದೆ.
ಈಗಿನ ಮುಖ್ಯಮಂತ್ರಿ ಅಂದೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಈ ಸಂದರ್ಭದಲ್ಲಿ ನೆನೆಯಲೇಬೇಕು. ನಮ್ಮ ಒತ್ತಾಸೆಗೆ ಮಣಿದು ಅವರು ಕೇವಲ 15 ದಿನಗಳಲ್ಲಿ ಬಜೆಟ್ ನಲ್ಲಿ 500 ಕೋಟಿ ರೂ.ಗಳನ್ನು ಜಗಳೂರು ಹಾಗೂ ಭರಮಸಾಗರ ಎರಡೂ ಯೋಜನೆಗಳಿಗೆ ಮೀಸಲಿಟ್ಟರು. ಅಂದಿನ ಮಂತ್ರಿಗಳಾದ ಆಂಜನೇಯ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಇವರೆಲ್ಲರ ಜೊತೆ ನಿರಂತರವಾಗಿ ನಾವು ಸಂಪರ್ಕದಲ್ಲಿದ್ದೆವು. ಬಜೆಟ್ ನಲ್ಲಿ ಸೇರಿರುವ ಬಗ್ಗೆ ಏನು ಖಾತ್ರಿ ಅಂತ ನಾವು ಅವರನ್ನು ಕೇಳಿದೆವು. ರಾಜೇಶ್ ಅದರ ಕರಡು ಪ್ರತಿ ನೋಡಿದ್ದಾರೆ ಎಂದು ಖಾತ್ರಿಪಡಿಸಿಕೊಂಡೆವು. ಆಗ 500 ಕೋಟಿ ಮಂಜೂರಾಗಿದ್ದು, ಅದು ಜಾರಿಯಾಗುವ ಹೊತ್ತಿಗೆ ಸರಕಾರ ಬದಲಾಗಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದರು.
2019ರಲ್ಲಿ ರಾಮಚಂದ್ರಪ್ಪ ಜಗಳೂರು ಶಾಸಕನಾಗಿದ್ದ. ಆಗ ನಾವು ಗೋಕಾಕಿನಲ್ಲಿ ನೆರೆ ಸಂತ್ರಸ್ತರ ಪರಿಹಾರ ವಿತರಣೆಗಾಗಿ ಅಲ್ಲಿಗೆ ಹೋಗಿದ್ದೆವು. ರಾತ್ರಿ ಸುಮಾರು 9 ಘಂಟೆಗೆ ರಾಮಚಂದ್ರಪ್ಪ ಕರೆ ಮಾಡಿದರು. ರಾಮಚಂದ್ರಪ್ಪ ಬಹಳ ಸಂತೋಷದಿಂದ ಅನುದಾನ ಬಿಡುಗಡೆಯ ಆದೇಶ ಆಗಿದೆಯೆಂದು ನಮಗೆ ತಿಳಿಸಿದರು. ಮೊಬೈಲ್-ಗೆ ಕಳುಹಿಸಿಕೊಡಲು ತಿಳಿಸಿದೆವು. ಕಳುಹಿಸಿದ ಪ್ರತಿಯನ್ನು ನಾವು ನೋಡಿ ರಾಮಚಂದ್ರಪ್ಪನಿಗೆ ಸಿಕ್ಕಾಪಟ್ಟೆ ಗಲಾಟೆ ಮಾಡಿ, ಯೋಜನೆಗೆ ಮಂಜೂರಾಗಬೇಕಾದ ಹಣ 1200 ಕೋಟಿ ರೂಪಾಯಿಗಳು. ಆದರೆ 250 ಕೋಟಿ ರೂಪಾಯಿಗಳು ಮಂಜೂರಾಗಿದೆ ಎಂದು ಗಲಾಟೆ ಮಾಡಿ, ತಕ್ಷಣವೇ 5 ಜನ ಕ್ಯಾಬಿನೆಟ್ ಮಂತ್ರಿಗಳಿಗೆ ಕರೆ ಮಾಡಿ ನಮ್ಮ ಅಸಮಾಧಾನ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದೆವು.
30-8-2019 ರಂದು 250 ಕೋಟಿ ರೂಗಳ ಅನುದಾನದ ಆದೇಶ ಮಂಜೂರಾಗಿತ್ತು. ನಮ್ಮ ಒತ್ತಾಸೆಯಂತೆ ಮುಖ್ಯಮಂತ್ರಿಗಳು 7-9-2019 ರಂದು 1200 ಕೋಟಿ ರೂಗಳು ಮಂಜೂರು ಮಾಡಿದರು. ಆ ಮರು ಆದೇಶದಲ್ಲಿ ದಿನಾಂಕ: 30-8-2019 ರ ಆದೇಶ ಹಿಂಪಡೆಯಲಾಯಿತು. ದಾವಣಗೆರೆ ಜಿಲ್ಲೆ ಹಾಗೂ ಜಗಳೂರು ತಾಲ್ಲೂಕುಗಳ ಈ ಕೆರೆಗಳಿಗೆ ತುಂಗಭದ್ರಾ ನೀರನ್ನು ಎತ್ತುವ ಬಗ್ಗೆ ಹೀಗೆ ಮರು ಆದೇಶ ಮಾಡಿದ್ದು ಪ್ರಾಯಶಃ ಸರ್ಕಾರದಲ್ಲಿ ಇಂತಹ ಆದೇಶ ಹಿಂದೆಂದೂ ಇಲ್ಲವೇನೋ ಎಂದೆನಿಸುತ್ತದೆ. ಜಗಳೂರು ಕೆರೆಗೆ 660 ಕೋಟಿ ರೂ.ಗಳು ಮಂಜೂರಾಗಿತು. ಹಾಗಾಗದೇ ಹೋಗಿದ್ದರೆ ಈ ದಿನ ನಿಮ್ಮ ಕೆರೆಗೆ ನೀರು ಖಂಡಿತ ಬರುತ್ತಿರಲಿಲ್ಲ.
ಇದರ ಹಿನ್ನೆಯಲ್ಲಿ ಅಪಾರವಾದ ಶ್ರಮವಿದೆ. ನಮ್ಮ ಶ್ರಮವಷ್ಟೇ ಅಲ್ಲ. ನಮ್ಮ ಮೇಲೆ ಅಪಾರ ಗೌರವ, ಶ್ರದ್ಧೆ ಇಟ್ಟುಕೊಂಡಿರುವ ಎಲ್ಲಾ ಪಕ್ಷಾತೀತ ರಾಜಕೀಯ ದುರೀಣರು, ಎಲ್ಲಾ ಅಧಿಕಾರಿಗಳು ಸಹಕರಿಸಿದ್ದಾರೆ. ಹೀಗಾಗಿ ಅವರೆಲ್ಲರನ್ನೂ ವೈಯಕ್ತಿಕವಾಗಿ ಹೆಸರಿಸಲಾಗದಿದ್ದರೂ ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಜಗಳೂರು ಭಾಗದ ಭಕ್ತರ ಪರವಾಗಿ ಹಾರ್ಧಿಕವಾಗಿ ಅಭಿನಂದಿಸಲು ಬಯಸುತ್ತೇವೆ.
ಈ ಕಾರ್ಯಕ್ಕೆ ನಾನಾ ವಿಘ್ನಗಳು ಬಂದವು. ಇವೆರಡೂ ಯೋಜನೆಗಳಿಗಿಂತ ಮುಂಚೆ ನಾವು ಮಂಜೂರು ಮಾಡಿಸಿದ್ದು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ, ಅದು 121 ಕೆರೆಗಳಿಗೆ ತುಂಗಭದ್ರೆ ನೀರು ಹರಿಸುವ 850 ಕೋಟಿ ರೂ.ಗಳ ಯೋಜನೆ ಇದಾಗಿತ್ತು. ಆ ಯೋಜನೆ ಜಗಳೂರು ನೀರಾವರಿ ಯೋಜನೆಗಿಂತ ಮುಂಚಿನ ಯೋಜನೆಯಾದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಹಾಗಾದರೂ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ ಯಶಸ್ವಿಯಾದೆವು.
ಈ ಯೋಜನೆಯ ಮೊದಲ ವಿಘ್ನ ಸಾಸ್ವೆಹಳ್ಳಿ ತುಂಗಭದ್ರಾ ನದಿಯ ದಡದಲ್ಲಿ ಒಬ್ಬ ರೈತನ ಜಮೀನಿನಲ್ಲಿ ಜಾಕ್ ವೆಲ್ ನಿರ್ಮಾಣವಾಗಬೇಕಿತ್ತು. ಆ ರೈತನಿಗೆ ಭೂ ಸ್ವಾಧೀನಾಧಿಕಾರಿಗಳು ಭೂ ಪರಿಹಾರ ನೀಡಿದ್ದು ಒಂದು ಎಕರೆಗೆ ಕೇವಲ 1,50,000 ರೂಪಾಯಿಗಳು ಮಾತ್ರ. ಖುಷ್ಕಿ ಜಮೀನು ಎಂದು ತಪ್ಪಾಗಿ ಪರಿಗಣಿಸಿ, ಆ ಹಣ ಮಂಜೂರಾಗಿತ್ತು. ಆ ರೈತ ಕೋರ್ಟಿನಲ್ಲಿ ಕೇಸ್ ಹಾಕಿದ. ನಾವು ಅವನನ್ನು ಕರೆಸಿ ಮಾತನಾಡಿದೆವು. ಅವನ ಬಗ್ಗೆ ನಮಗೆ ಅನುಕಂಪೆ ಇತ್ತು. "ನೀನು ಕೋರ್ಟಿಗೆ ಹೋಗು ಅದರಲ್ಲೇನೂ ತಪ್ಪಿಲ್ಲ, ನಾವು ನಿನಗೆ ಬೆಂಬಲಿಸುತ್ತೇವೆ. ಆದರೆ ಕೆಲಸ ಮಾಡಲು ಅಡ್ಡಿ ಬರಬೇಡ, ಒಪ್ಪಿಕೋ" ಎಂದು ಹೇಳಿ ನಾವು ಅವನ ಹತ್ತಿರ ಮಾತನಾಡಿದೆವು. ಅವನಿಗೆ ಭರವಸೆ ಮೂಡಲೆಂದು “ನೋಡಪ್ಪ ಆ ಕಾಮಗಾರಿ ಮುಗಿದು ಜಾಕ್ ವೆಲ್ ನಿರ್ಮಾಣವಾದ ಮೇಲೆ ಅದರ ಬೀಗದ ಕೈಯನ್ನು ನಾವು ನಮ್ಮ ಮಠದ ವಶಕ್ಕೆ ತೆಗೆದುಕೊಳ್ಳುತ್ತೇವೆ. ನಿನಗೆ ಕೋರ್ಟಿನಿಂದ ಸೂಕ್ತವಾದ ಪರಿಹಾರ ಬಂದ ಮೇಲೆ ಮಾತ್ರ ನಾವು ಬೀಗದ ಕೈ ಕೋಡುತ್ತೇವೆ. ನಮ್ಮ ಮಾತಿನ ಮೇಲೆ ಭರವಸೆ ಇಟ್ಟುಕೋ, ನೀನು ಈ ಕಾಮಗಾರಿ ಮುಂದುವರಿಯಲು ಒಪ್ಪಿಕೋ ಎಂದು ಹೇಳಿದ ಮೇಲೆ ಅವನು ಒಪ್ಪಿಕೊಂಡನು. ಹೀಗೆ ಕೆಲಸ ಪೂರ್ಣಗೊಂಡಿತು.
ಈಗ ಎರಡು ವರ್ಷಗಳಿಂದ ಕೋರ್ಟಿನಲ್ಲಿದ್ದ ಕೇಸ್ ನ ಬೀಗದ ಕೈ ವಾಪಾಸು ತೆಗೆದುಕೊಳ್ಳಬೇಕಾಗಿತ್ತು. ನಮ್ಮ ದೊಡ್ಡ ಗುರುಗಳ 32ನೆಯ ಶ್ರದ್ಧಾಂಜಲಿ ಸೆಪ್ಟಂಬರ್ 24 ರಂದು ಅವರ ಜನ್ಮಸ್ಥಳ ಮುತ್ತಗದೂರಿನಲ್ಲಿರುವ ಕೆರೆಗೆ ನೀರು ಹರಿಯಿತು. ಈಗ ಬೀಗದ ಕೈಯನ್ನು ಟ್ರಯಲ್ ರನ್ ಆದ ಮೇಲೆ ತೆಗೆದುಕೊಳ್ಳುವ ಹೊಣೆಗಾರಿಕೆ ನಮ್ಮದಾಗಿತ್ತು.
ದೈವೀ ಕೃಪೆ ಹೇಗಿತ್ತು ಅಂದರೆ ರೈತನ ಕೋರ್ಟ್ ಕೇಸು ನೀರು ಹರಿದ ನಾಲ್ಕೇ ದಿನಗಳಲ್ಲಿ ಇತ್ಯರ್ಥವಾಗಿ ಆ ರೈತನಿಗೆ ಒಂದು ಎಕರೆಗೆ 22 ಲಕ್ಷದ 50 ಸಾವಿರ ರೂಪಾಯಿಗಳನ್ನು ನೀಡಲು ಆದೇಶ ಮಾಡಿತು. ಮುಂಚೆ ಆ ರೈತನಿಗೆ ಮಂಜೂರಾದ ಹಣ ಎಕರೆಗೆ 1 ಲಕ್ಷದ 50 ಸಾವಿರ ಮಾತ್ರ. ಎರಡೂ ಮೊತ್ತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ರೈತನಿಗೆ 22 ಲಕ್ಷ 50 ಸಾವಿರ ರೂಪಾಯಿಗಳು ಮತ್ತು ಶೇ.12 ಬಡ್ಡಿ ಕೊಡಬೇಕು ಹಾಗೂ ಸ್ವಲೇಶಿಯಂ ಅದೆಲ್ಲ ಸೇರಿ ರೈತನಿಗೆ ಸುಮಾರು 7 ಕೋಟಿ ರೂಪಾಯಿಗಳು ಸಿಗುತ್ತಿವೆ. ಇದು ನಮಗೆ ಬಹಳ ಸಂತಸದ ಸಂಗತಿಯಾಗಿದೆ.
ಇದನ್ನು ಹೇಗೆ ಹೇಳಬೇಕೆಂದು ಯೋಚಿಸಿ, ನಾವು ಮೊನ್ನೆ ಒಂದು ಲೇಖನ ಬರೆದದ್ದು "ಧರ್ಮ ಮತ್ತು ಕಾನೂನು ಕೈ ಜೋಡಿಸಿದಾಗ" ಎಂತಹ ಒಳ್ಳೆಯ ಕಾರ್ಯ ಆಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಈ ಯೋಜನೆ ಕಾರ್ಯರೂಪಕ್ಕೆ ಬರಲು ನಮ್ಮ ಅಧಿಕಾರಿಗಳು ಬಹಳ ಶ್ರಮಿಸಿದ್ದಾರೆ. ಹಿಂದಿನ ಎಂ.ಡಿ ಆಗಿದ್ದಂತಹ ಮಲ್ಲಿಕಾರ್ಜುನ್ ಗುಂಗೆಯವರು ಹಗಲು ರಾತ್ರಿ ಸ್ಥಳದಲ್ಲೇ ಇದ್ದು ನಮ್ಮ ನಿರೀಕ್ಷೆಯಂತೆ ನಾವು ಏನೇನು ಬಯಸಿದ್ದೆವೋ, ಅದನ್ನೆಲ್ಲಾ ಅವರು ಮಂಜೂರು ಮಾಡಿ ನೆರವಾದ್ದನ್ನು ನಾವು ಮರೆಯಲಾಗದು. ಇದರಿಂದ ವೈಯಕ್ತಿಕವಾಗಿ ಅವರಿಗಾದ ಲಾಭ ಎಂದರೆ ನಿವೃತ್ತಿಯ ಅಂಚಿನಲ್ಲಿರುವಾಗ ಆ ಪುಣ್ಯ ಕಾರ್ಯದಿಂದ ಅವರಿಗೆ ಒಂದು ಹೆಣ್ಣು ಮಗುವಿನ ಜನನವಾಗಿದೆ. ಆ ಮಗುವಿನ ಹೆಸರು "ಸಿಂಧು" ಎಂದು ನಾಮಕರಣ ಮಾಡಲಾಗಿದೆ. ಒಳ್ಳೆ ಕಾರ್ಯ ಮಾಡುತ್ತಾ ಹೋದರೆ ನಿಮ್ಮೆಲ್ಲರಿಗೂ ತೃಪ್ತಿ ಸಿಗುತ್ತದೆ.
ಈ ಕೆರೆಗೆ ನೀರು ದಸರಾ ಹಬ್ಬದ ಸಂದರ್ಭದಲ್ಲಿ ಬಂದಿರುವುದು ಒಂದು ವಿಶೇಷ. ಈ ವರ್ಷ ವಿಶೇಷ ರೀತಿಯ ದಸರಾ ಹಬ್ಬದ ಅನುಭವ ನಿಮಗಾಗಿದೆ. ಈ ಹಬ್ಬದಲ್ಲಿ "ಅಂಬು" ಹೊಡೆಯುವುದು ಎನ್ನುತ್ತೀರಲ್ಲಾ!! "ಅಂಬು" ಎಂದರೆ ಬಾಣ ಎಂದರ್ಥ. ಅಂಬು ಎಂಬುದಕ್ಕೆ ನೀರು ಎಂಬ ಇನ್ನೊಂದು ಅರ್ಥವೂ ಇದೆ. ಇಲ್ಲಿ "ಅಂಬು" ಹೊಡೆಯುವುದು ಎಂದರೆ ಲಿಫ್ಟ್ ಇರಿಗೇಷನ್ ನಲ್ಲಿ ನೀರು ಹೊಡೆಯುವುದು ಎಂಬ ಅರ್ಥವನ್ನು ನೀವು ಗ್ರಹಿಸಬಹುದಾಗಿದೆ. ಹಾಗಾಗಿ ಇದೊಂದು ಅವಿಸ್ಮರಣೀಯ ದಿನವಾಗಿದೆ.
ನಮ್ಮ ಶಾಸಕರು ಹೇಳುತ್ತಿದ್ದರು, ಅವರು 10-15 ವರ್ಷದ ಹುಡುಗನಿದ್ದಾಗ ಈ ಕೆರೆ ತುಂಬಿ ಕೋಡಿ ಬಿದ್ದಿತ್ತು ಎಂದು. ಇಲ್ಲಿಗೆ 50 ವರ್ಷಗಳ ಸಂಭ್ರಮ ಇದು. ಪ್ರಾಯಶಃ ಈಗಿನ ಯುವಕರೇನು ಇದ್ದೀರಿ, ನೀವು ಪ್ರತಿ ವರ್ಷ ಕೆರೆ ತುಂಬಿ ಕೋಡಿ ಹರಿಯುವುದನ್ನು ನೋಡಿಯೇ ನೋಡುತ್ತೀರಿ ಎನ್ನುವ ವಿಶ್ವಾಸ ನಮಗಿದೆ.