ದೀಪಾವಳಿಯೋ ಪಟಾಕಿಗಳ ಹಾವಳಿಯೋ?

  •  
  •  
  •  
  •  
  •    Views  

ದೀಪಾವಳಿ ಹಬ್ಬ ಬಂತೆಂದರೆ ಭಾರತೀಯರಿಗೆ ಎಲ್ಲಿಲ್ಲದ ಸಂಭ್ರಮ ಹಾಗೂ ಸಡಗರ. ಸಹಸ್ರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಈ ದೀಪಾವಳಿ ಇಂದು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ ಹೆಚ್ಚು ಸಾಂಸ್ಕೃತಿಕ ಆಚರಣೆಯಾಗಿ (cultural event) ಪರಿಣಮಿಸಿ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಕಳೆದ ಮೇ ತಿಂಗಳು ಬಸವ ಜಯಂತಿಯ ನಿಮಿತ್ತ ದುಬೈಗೆ ಹೋದಾಗ ಅಲ್ಲಿಯ “ಅಲ್ ಮನ್ಖೂಲ್” ಎಂಬ ಬಡಾವಣೆಯಲ್ಲಿ ಹಿಂದೂಗಳು ದೀಪಾವಳಿಯ ಸಂದರ್ಭದಲ್ಲಿ ತಮ್ಮ ಬಹುಮಹಡಿ ವಾಸದ ಮನೆಗಳನ್ನು ಜಗಮಗಿಸುವ ವಿದ್ಯುದ್ದೀಪಗಳಿಂದ ಅಲಂಕರಿಸಿರುವುದನ್ನು ವಿಭಿನ್ನ ಧರ್ಮೀಯರೂ ಸಹಸ್ರಾರು ಸಂಖ್ಯೆಯಲ್ಲಿ ಬಂದು ನೋಡಿ ಖುಷಿಪಡುತ್ತಾರೆಂದು ದುಬೈ ಬಸವ ಬಳಗದ ಸಂಘಟಕರು ತೋರಿಸಿದರು. ಅನೇಕ ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಹೋದಾಗ ದೀಪಾವಳಿ ಹಬ್ಬದ ಪ್ರಯುಕ್ತ ಸಿಡ್ನಿಯಲ್ಲಿರುವ ಆ ದೇಶದ ಪಾರ್ಲಿಮೆಂಟ್ ಭವನ ವಿದ್ಯುದ್ದೀಪಗಳಿಂದ ಜಗಮಗಿಸುತ್ತಿರುವುದು ನಮ್ಮ ಕಣ್ಮನ ಸೆಳೆಯಿತು. ಸ್ವದೇಶಕ್ಕೆ ಹಿಂತಿರುಗುವಾಗ ಮೇಲ್ಬೋರ್ನ್ ನಗರದ ವಿಮಾನನಿಲ್ದಾಣದಲ್ಲಿ ಸುಂದರವಾದ ಮಂಟಪವನ್ನು ನಿರ್ಮಿಸಿ ಅದರ ಮಧ್ಯೆ ಗಣೇಶ ಗೌರಿಯ ವಿಗ್ರಹಗಳನ್ನಿಟ್ಟು ಸಿಂಗರಿಸಲಾಗಿತ್ತು. ಭಾರತೀಯ ಪ್ರಯಾಣಿಕರು ತಮ್ಮ ಕೈಯಲ್ಲಿದ್ದ ನಾಣ್ಯಗಳನ್ನು ಕಾಣಿಕೆಯಾಗಿ ಗಣೇಶನಿಗೆ ಅರ್ಪಿಸುತ್ತಿದ್ದರು. ವಿದೇಶೀ ಪ್ರಯಾಣಿಕರ ಮಗುವೊಂದು ಗಣೇಶನ ವಿಗ್ರಹವನ್ನು ಕುತೂಹಲದಿಂದ ನೋಡುತ್ತಿತ್ತು. ಆ ಮಗು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ತಂದೆ ನಮ್ಮಿಂದ ಕೇಳಿ ತಿಳಿದುಕೊಂಡು ವಿವರಿಸಿದಾಗ ಮಗುವಿನ ಮುಖ ಅರಳಿತು. ರಾತ್ರಿ ವೇಳೆ ವಿಮಾನದಲ್ಲಿ ಪ್ರಯಾಣಿಸುವಾಗ ಖಂಡ ಖಂಡಾಂತರಗಳಲ್ಲಿ ಹತ್ತಾರು ಕಿ.ಮೀ ಎತ್ತರದಿಂದ ಕೆಳಗೆ ಕಾಣಿಸುವ ನಗರಪ್ರದೇಶಗಳು ವಿದ್ಯುದ್ದೀಪಗಳಿಂದ ಜಗಮಗಿಸಿ ದೀಪಾವಳಿ ಹಬ್ಬದ ಸಡಗರದಲ್ಲಿರುವಂತೆ ಭಾಸವಾಗುತ್ತವೆ. ಭಾರತೀಯರು ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ಮನೆಗಳಲ್ಲಿ ದೀಪಾಲಂಕಾರ ಮಾಡಿದರೆ ನಭೋಮಂಡಲದಲ್ಲಿ ಮಿನುಗುವ ಗ್ರಹನಕ್ಷತ್ರಗಳು ನಿತ್ಯವೂ ದೀಪಾವಳಿಯ ಸಡಗರದಲ್ಲಿರುವಂತೆ ತೋರುತ್ತವೆ!

ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯಲು ಮಕ್ಕಳು ಮತ್ತು ಯುವಕರು ತುದಿಗಾಲ ಮೇಲೆ ನಿಂತಿರುತ್ತಾರೆ. ದೀಪಾವಳಿಯಂದು ಅವರು ಹಾರಿಸುವ ಪಟಾಕಿಗಳು ಶತ್ರುಸೈನ್ಯಗಳ ಮಧ್ಯೆ ನಡೆಯುವ ಮದ್ದುಗುಂಡುಗಳ ಆರ್ಭಟವನ್ನೂ ನಾಚಿಸುವಷ್ಟು ಭೀಕರ ಸದ್ದಿನಿಂದ ಕೂಡಿರುತ್ತವೆ. ಬಾಲ್ಯದಲ್ಲಿ ಕೇಳಿದ ಹಿರಿಯ ತಲೆಮಾರಿನ ಸಾಹಿತಿಗಳಾದ ಎಲ್.ಗುಂಡಪ್ಪನವರ ಛಂದೋಬದ್ಧವಾದ ಕನ್ನಡ ಕವಿತೆ ಹೀಗಿದೆ: 

ಅಪ್ಪನ ಜೇಬಿನ ದುಡ್ಡುಗಳೆಲ್ಲ
ಚಟಪಟಗುಟ್ಟುತ ಸಿಡಿಯುವುವು 
ಒಪ್ಪದ ನೀತಿಯ ಮಾತುಗಳೆಲ್ಲ 
ತಟ್ಟನೆ ದಾರಿಯ ಹಿಡಿಯುವುವು 

ಬಗೆ ಬಗೆ ಬಣ್ಣದ ಹೂಗಳ ರೂಪದಿ
ಹಾರುತ ಬುಸು ಬುಸುಗುಟ್ಟುವುವು
ಉರಿಯನು ಸುರಿಸುತ ಮೊರೆಯುತ ತಿರುಗುತ
ಸರಸರನೆಲ್ಲೆಡೆ ಹರಿಯುವುವು

ಸರುವರ ಕಿವಿಗಳ ಕೊರೆಯುವುವು
ಮೂಗಿನ ಸೆಲೆಗಳನೊಡೆಯುವುವು
ಸಾರವ ತೊರೆಯುತ ಕಡೆಯಲಿ ಕಪ್ಪಗೆ 
ನೆಲದಲಿ ಧೊಪ್ಪನೆ ಕೆಡೆಯುವುವು!

ಶಿಶುವಿಹಾರದ ಮಕ್ಕಳಿಗೆ ಇಂತಹ ಸುಲಭಗ್ರಾಹ್ಯವಾದ ಅಚ್ಚಗನ್ನಡದ ಕವಿತೆಗಳನ್ನು ಹೇಳಿಕೊಟ್ಟು ಮಕ್ಕಳು ಕುಣಿದಾಡುವಂತೆ ಮಾಡಬಹುದು. ಅದರ ಬದಲು ಅರ್ಥವಾಗದ ಇಂಗ್ಲೀಷ್ ಭಾಷೆಯ “Baa, Baa, black sheep..." ಮುಂತಾದ ನರ್ಸರಿ Rhyme ಗಳನ್ನು ಕಲಿಸಿಕೊಡುವ ಇಂಗ್ಲಿಷ್ ಭಾಷಾ ಮೋಹ ಏಕೆ? ಎಳೆಯ ಮಕ್ಕಳು “Baa, Baa” ಎಂಬ ಇಂಗ್ಲಿಷ್ ಶಬ್ದಗಳನ್ನು ಕನ್ನಡದ “ಬಾ, ಬಾ” ಎಂದು ತಪ್ಪಾಗಿ ಗ್ರಹಿಸಿ “ಬ್ಯಾ, ಬ್ಯಾ” ಎನ್ನುವ ಕುರಿಗಳನ್ನಾಗಿ ಏಕೆ ಮಾಡಬೇಕು?


ಪಟಾಕಿ ಹೊಡೆಯುವ ಪದ್ಧತಿ ನಮ್ಮ ದೇಶದಲ್ಲಿ ಯಾವಾಗ ಬಂತೋ ಏನೋ ಅದರ ಇತಿಹಾಸದ ಗೊಡವೆಗೆ ಹೋಗುವುದಿಲ್ಲ. ನಮಗೆ ತಿಳಿದಿರುವ ಮಟ್ಟಿಗೆ ರಾಮಾಯಣ, ಮಹಾಭಾರತ ಇತ್ಯಾದಿ ಪ್ರಾಚೀನ ಗ್ರಂಥಗಳಲ್ಲಿ ದೀಪಗಳನ್ನು ಹಚ್ಚಿದ ಉಲ್ಲೇಖವಿದೆಯೇ ಹೊರತು ಎಲ್ಲೂ ಪಟಾಕಿಗಳನ್ನು ಸಿಡಿಸಿದ ಉಲ್ಲೇಖವಿಲ್ಲ. ಇದರಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸಾಕಷ್ಟು ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದರೂ ಸುಧಾರಣೆ ಕಂಡುಬಂದಿಲ್ಲ. ಬೆಂಕಿಯ ಜ್ವಾಲೆಯತ್ತ ಹಾರಿ ಸುಟ್ಟು ಕರಕಲಾಗುವ ಚಿಟ್ಟೆಗಳಂತೆ ಚಿಕ್ಕ ಮಕ್ಕಳು ಅನಾಹುತಗಳಿಗೆ ಒಳಗಾಗುತ್ತಿದ್ದಾರೆ. ಇದನ್ನು ಮನಗಂಡ ಸುಪ್ರೀಂಕೋರ್ಟ್ ಪರಿಸರಕ್ಕೆ ಹಾನಿಕಾರಕವಾದ ಪಟಾಕಿಗಳನ್ನು ನಿಷೇಧಿಸಿ ಹಸಿರು ಪಟಾಕಿಗಳನ್ನು ಬಳಸಲು ನಿರ್ದೇಶಿಸಿದ್ದರೂ ಅವಘಡಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ನಮ್ಮ ದೇಶದಲ್ಲಿ ಇತ್ತೀಚೆಗೆ ಪಟಾಕಿ ಹೊಡೆಯುವುದು ದೀಪಾವಳಿಗೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್ ಆಟದಲ್ಲಿ ಗೆದ್ದಾಗ ಆಟಗಾರರ ಅಭಿಮಾನಿಗಳು ಪಟಾಕಿ ಸಿಡಿಸಿ ಖುಷಿಪಡುತ್ತಾರೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಬೆಂಬಲಿಗರೂ ಸಹ ಖುಷಿಗಾಗಿ ಪಟಾಕಿ ಹೊಡೆಯುತ್ತಾರೆ. “ಪಟಾಕಿ ಹೊಡೆಯುವುದು” ಎಂಬುದಕ್ಕೆ ಹೀನಾರ್ಥವೂ ಇದೆ. ಅದು ಹೇಗೆ ಬಂತೋ ಏನೋ ಭಾಷಾತಜ್ಞರು ಚಿಂತಿಸುವುದೊಳಿತು. “ಅವನು ಬಹಳ ಪಟಾಕಿ ಹೊಡೆಯುತ್ತಾನೆ” ಎನ್ನುವ ಆಡುಮಾತಿನಲ್ಲಿ ಪೊಳ್ಳುತನ ಎಂಬ ಹೀನಾರ್ಥ ಅಡಗಿದೆ. 

ಪಾಶ್ಚಾತ್ಯ ದೇಶಗಳಲ್ಲಿ ಪರಿಸರ/ಶಬ್ದಮಾಲಿನ್ಯ ಮತ್ತು ಸಾರ್ವಜನಿಕರ ಹಿತರಕ್ಷಣೆಯ ದೃಷ್ಟಿಯಿಂದ ಪಟಾಕಿ ಹೊಡೆಯುವ ಸ್ವಾತಂತ್ರ್ಯವನ್ನು ಜನರಿಗೆ ಕೊಟ್ಟಿಲ್ಲ. ಆದರೆ ಜನರ ಮನರಂಜನೆಗಾಗಿ ಆಯಾಯ ಪಟ್ಟಣ/ನಗರದ ಪುರಸಭೆಗಳೇ ಸಿಡಿಮದ್ದು ಸಿಡಿಸಲು ಲೈಸೆನ್ಸ್ ಪಡೆದ ಅನುಭವವುಳ್ಳ ಪರಿಣಿತರಿಂದ ವರ್ಷದಲ್ಲಿ ನಿರ್ದಿಷ್ಟ ದಿನಾಂಕದಂದು ನಿಯಮಿತ ವೇಳೆಯಲ್ಲಿ Fireworks ಕಾರ್ಯಕ್ರಮವನ್ನು ಏರ್ಪಡಿಸುತ್ತವೆ. ಒಮ್ಮೆ ಜರ್ಮನಿಯ ಫ್ರಾಂಕ್ ಫುರ್ಟ್ ನಗರದ ಸಮೀಪದಲ್ಲಿರುವ ಫ್ರಾನ್ಸ್ ದೇಶದ “ಬೀಚ್” ಎಂಬ ನಗರದಲ್ಲಿ ಏರ್ಪಾಡಾದ ಸೆಮಿನಾರ್ ನಲ್ಲಿ ಉಪನ್ಯಾಸ ನೀಡಲು ಆಹ್ವಾನಿತರಾಗಿ ಹೋದಾಗ ನೋಡಿದ ರುದ್ರರಮಣೀಯವಾದ Fireworks ಕಾರ್ಯಕ್ರಮ! ಅದೊಂದು ನಗರದ ಮಧ್ಯಭಾಗದಲ್ಲಿರುವ ದೊಡ್ಡ ಬೆಟ್ಟ. ಯಾವ ದಿಕ್ಕಿನಿಂದ ನೋಡಿದರೂ ಅದರ ನೆತ್ತಿಯ ಮೇಲೆ ಕಂಗೊಳಿಸುವ ವಿಶಾಲವಾದ ಕೋಟೆ. ಫ್ರಾನ್ಸ್ ಮತ್ತು ಜರ್ಮನಿಯ ಮಧ್ಯೆ ನಡೆದ ಅನೇಕ ಯುದ್ಧಗಳಲ್ಲಿ ಲಕ್ಷಾಂತರ ಸೈನಿಕರ ಸಾವು-ನೋವುಗಳಿಗೆ ಮೂಕಸಾಕ್ಷಿಯಾದ ಭದ್ರವಾದ ಕೋಟೆ. 

ಯುದ್ಧದ ಸಂದರ್ಭಗಳಲ್ಲಿ ಜನರೆಲ್ಲರೂ ಈ ಕೋಟೆಯೊಳಗೆ ಆಶ್ರಯವನ್ನು ಪಡೆಯುತ್ತಿದ್ದರು. ಬೆಟ್ಟದ ಮೇಲಿರುವ ಈ ಕೋಟೆ ಗತಕಾಲದ ಭಯಾನಕ ಯುದ್ಧಗಳ ಪ್ರತೀಕವಾದರೆ, ಬೆಟ್ಟದ ತಪ್ಪಲಲ್ಲಿರುವ ಉದ್ಯಾನವನ ಶಾಂತಿಯ ಸಂಕೇತವಾಗಿತ್ತು. ಸಂಜೆ 9 ಗಂಟೆಗೆ ಕೋಟೆಯತ್ತ ಹೋದಾಗ ಕೋಟೆಯ ಪ್ರವೇಶದ್ವಾರದ ಇಳಿಜಾರಿನ ಹಸಿರು ಹುಲ್ಲಿನ ಮೇಲೆ ಆಬಾಲವೃದ್ಧರಾಗಿ ಸಾವಿರಾರು ಜನರು ಜಮಾಯಿಸಿದ್ದರು. ಬೆಟ್ಟದ ಕೆಳಗಿನ ಬೀದಿಗಳಲ್ಲಿಯೂ ಜನರು ತುದಿಗಾಲ ಮೇಲೆ ನಿಂತಿದ್ದರು. ಅವರೆಲ್ಲರ ದೃಷ್ಟಿ ಆಕಾಶದತ್ತ ನೆಟ್ಟಿತ್ತು. ಕಾರಣ ಪ್ರತಿವರ್ಷ ಇಲ್ಲಿ ನಡೆಯುವ Fireworks! ಸ್ಥಳೀಯ ಜಾನಪದ ಶೈಲಿಯ ಸುಮಧುರ ಸಂಗೀತದ ಹಿನ್ನೆಲೆಯಲ್ಲಿ “ಢಂ, ಢುಂ” ಎಂದು ಸಿಡಿದ ಪಟಾಕಿಗಳು ಆಗಸದಲ್ಲಿ ಒಮ್ಮೆಲೇ ಹಸಿರು, ಕೆಂಪು, ಹಳದಿ, ನೀಲಿವರ್ಣಗಳಿಂದ ಕೂಡಿದ ನಕ್ಷತ್ರಗಳಾಗಿ ಪರಿಣಮಿಸಿ ವಿವಿಧ ವಿನ್ಯಾಸಗಳ ಮನಮೋಹಕ ಚಿತ್ತಾರವನ್ನು ಬಿಡಿಸುತ್ತಿದ್ದವು. ಪಟಾಕಿ ಮತ್ತು ಮದ್ದಿನ ಆರ್ಭಟದಲ್ಲಿ ಜನರು ಖುಷಿಯಿಂದ ಮೈಮರೆತು ಕೇಕೆ ಹೊಡೆಯುತ್ತಿದ್ದರು. ಆದರೆ ಅವು ಹಿಂದಿನ ದಿನ ಕೋಟೆಯೊಳಗೆ ನೋಡಿದ ಭೀಕರ ದೃಶ್ಯಗಳಿಂದ ತುಂಬಾ ಘಾಸಿಗೊಂಡಿದ್ದ ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುವಲ್ಲಿ ವಿಫಲವಾಗಿ ಶತಮಾನಗಳ ಹಿಂದಕ್ಕೆ ಹೋಗಿ ಆ ಕೋಟೆಯ ಸುತ್ತ ನಡೆದ ಭೀಕರ ಕಾಳಗದ ಪ್ರತ್ಯಕ್ಷ ದರ್ಶನವನ್ನುಂಟುಮಾಡಿದ್ದವು! ಕಾಲಚಕ್ರ ಉರುಳಿದೆ. ಫ್ರಾನ್ಸ್ ಮತ್ತು ಜರ್ಮನಿ ಈಗ ಮಿತ್ರರಾಷ್ಟ್ರಗಳಾಗಿ ಯೂರೋಪ್ ಒಕ್ಕೂಟಕ್ಕೆ ಕೈಜೋಡಿಸಿವೆ.

ಬೆಳಕು ಜ್ಞಾನದ ಸಂಕೇತ; ಕತ್ತಲು ಅಜ್ಞಾನದ ಸಂಕೇತ. “ತಮಸೋ ಮಾ ಜ್ಯೋತಿರ್ಗಮಯ” ಎಂದು ಶತಮಾನಗಳಿಂದ ಗಿಳಿಪಾಠ ಹೇಳಿದ್ದೇ ಹೇಳಿದ್ದು. ನಮ್ಮ ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಿದೆಯೇ? ನಮ್ಮ ಬದುಕು ಕತ್ತಲಿಂದ ಬೆಳಕಿನೆಡೆಗೆ ಸಾಗಿದೆಯೇ? ನಮ್ಮ ದೇಶದಲ್ಲಿ ಬೆಂಕಿ ಹಚ್ಚುವುದು ಸುಲಭ; ದೀಪ ಹಚ್ಚುವುದು ಬಹಳ ಕಷ್ಟ! ಇತ್ತೀಚೆಗೆ ಸಭೆ ಸಮಾರಂಭಗಳಲ್ಲಿ ಸುಲಭವಾಗಿ ದೀಪ ಹಚ್ಚಲು ಪ್ರತಿಯೊಂದು ಬತ್ತಿಯ ಮೇಲೂ ಕರ್ಪೂರದ ಬಿಲ್ಲೆ ಇಡುವ ಪದ್ಧತಿಯನ್ನು ಅನುಭವಿ ಕಾರ್ಯಕರ್ತರು ಜಾರಿಗೆ ತಂದಿದ್ದಾರೆ. ಆದರೂ ಉದ್ಘಾಟಕರು ದೀಪ ಹಚ್ಚಿದ ಕೆಲವೇ ಸೆಕೆಂಡುಗಳಲ್ಲಿ ದೀಪ ಆರಿ ಮಂಕು ಕವಿದಿರುತ್ತದೆ! ಇದು ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಸಂಕೇತವಾಗುವುದರ ಬದಲು ಬೆಳಕಿನಿಂದ ಕತ್ತಲೆಯ ಕಡೆಗೆ ಧಾವಿಸುತ್ತಿರುವುದರ ಸಂಕೇತವಾಗಿದೆ. ನಮ್ಮ ಜನ ನಾಯಕರು ವೇದಿಕೆಯ ಮೇಲೆ ದೀಪ ಹಚ್ಚುವುದಕ್ಕಿಂತ ತಮ್ಮ ಭಾಷಣಗಳಲ್ಲಿ ಪಟಾಕಿ ಸಿಡಿಸುವುದೇ ಜಾಸ್ತಿ!   ಅನೇಕ ದೀಪಾವಳಿಗಳು ಬಂದು ಹೋಗಿವೆ. ಆದರೂ ಮನುಷ್ಯನ ಹೃದಯ ಮಾತ್ರ ಇನ್ನೂ ಕಗ್ಗತ್ತಲ ಕೋಣೆಯಾಗಿಯೇ ಉಳಿದಿದೆ.

ಇಂತಹ ಹಬ್ಬಗಳಂದು ಪುರಾಣ ಕಾಲದಲ್ಲಿದ್ದ ನರಕಾಸುರ, ತಾರಕಾಸುರ, ರಾವಣಾಸುರ ಇತ್ಯಾದಿ ರಾಕ್ಷಸರ ವಧೆಯಾಯಿತೆಂದು ತಿಳಿಯದೆ ಅವರೆಲ್ಲರೂ ನಮ್ಮೊಳಗೇ ಇನ್ನೂ ಜೀವಂತವಾಗಿದ್ದಾರೆಂದು ಭಾವಿಸಿ ನಮ್ಮೊಳಗಿರುವ ರಾಕ್ಷಸೀ ಗುಣಗಳನ್ನು ನಿರ್ಮೂಲನಗೊಳಿಸಿಕೊಳ್ಳುವ ಪ್ರಯತ್ನ ಮಾಡಿದರೆ ಈ ಹಬ್ಬಗಳು ಸಾರ್ಥಕವಾದಾವು. ಈ ಹಿನ್ನೆಲೆಯಲ್ಲಿ ಬಹಳ ಹಿಂದೆ ಬರೆದ ನಮ್ಮ ಕವಿತೆ:

ಮತ್ಸರದ ಬತ್ತಿ

ಹತ್ತಿ ಉರಿಯುತಿದೆ ಸುತ್ತಲೂ
ಮತ್ಸರದ ಸುರುಸುರು ಬತ್ತಿ 

ಹಚ್ಚಲಾದೀತೇ ಅದರಿಂದ
ಮತ್ತೊಂದು ಹಣತೆಯ ಬತ್ತಿ!

ಹಣತೆ ಹಣತೆಯ ಕೂಡಿದರೆ
ಕಂಗೊಳಿಸುವುದು ಜ್ಯೋತಿ 

ಹಣತೆ ಬಿರುಸಿನ ಕುಡಿಕೆಯ ಕೂಡಿದರೆ ಉಗುಳುವುದು ಬೆಂಕಿ

ಯಾರ ಬದುಕಿನ ಅಂಗಳದಲ್ಲಿ
ಯಾರು ಇಡುವರೋ ಬತ್ತಿ 

ಅದು ಸಿಡಿದಾಗಲೇ ಗೊತ್ತು ಬತ್ತಿ ಇಟ್ಟವನ ಯುಕ್ತಿ!

ಸುಳಿಯದಿರು ಸತ್ತಂತಿಹ ಪಟಾಕಿಗಳಿದ್ದೆಡೆಯಲ್ಲಿ 
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.31-10-2024.