ಕನ್ನಡ ಭುವನೇಶ್ವರಿಯ ಕೊರಗು...

  •  
  •  
  •  
  •  
  •    Views  

ನ್ನಡ ರಾಜ್ಯೋತ್ಸವ ಬಂತೆಂದರೆ ಎಲ್ಲೆಡೆ ಸಂಭ್ರಮ. ಕನ್ನಡ ಬಾವುಟಗಳ ಹಾರಾಟ! ಕನ್ನಡ ಭುವನೇಶ್ವರಿಯ ತೇರನೆಳೆಯಲು ನಾ ಮುಂದು ತಾ ಮುಂದು ಎಂಬ ಉತ್ಸಾಹ.

ತೇರನೆಳೆವವರು ನಾವು- ಎಲ್ಲಿದ್ದರೇನು?
ಬೊಂಬಾಯಿ, ಮದರಾಸು, ಕಲ್ಕತ್ತ, ಡೆಲ್ಲಿ
ಎಲ್ಲೆಂದರಲ್ಲಿ!

ಕನ್ನಡದ ಉಸಿರಾಡುವೆದೆಗಳಿರುವಲ್ಲಿ
ಕನ್ನಡದ ಸತ್ವಗಳ ಬೀಜಗಳ ಚೆಲ್ಲಿ
ತೇರ ಮಿಣಿ ಹರಿದಿರಲು
ಹಿಡಿದುಕೊಳ್ಳಿರೋ ಅದನು
ಎಲ್ಲಿದ್ದರೇನು?

ಓ ಎಳೆಯಿರೋ ಕನ್ನಡದ ತೇರ
ನೀವು ನಿಂತಿರುವ ನೆಲೆಗಳಿಂದ
ನಾವೆಲ್ಲರೂ ಒಂದು ತೇರೆಳೆವ ಜನರು
ಆ ಊರೋ, ಈ ಊರೋ, ಹಿಂದೆಯೋ ಮುಂದೆಯೋ 
ಎಲ್ಲಿಯೋ ಒಂದು ಕಡೆ ಕೈಹಾಕಿದವರು!

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಕವಿಹೃದಯದಿಂದ ಮೂಡಿಬಂದ ಈ ಭಾವಪೂರ್ಣ ಕವಿತೆ ಸಾಹಿತ್ಯ ಸರಸ್ವತಿಯ ಅಂಗಳದಲ್ಲಿ ಕನ್ನಡ ಭುವನೇಶ್ವರಿಯ ವಿಶ್ವ ವಿರಾಟ್ ರೂಪದರ್ಶನವನ್ನು ಮೂಡಿಸುತ್ತದೆ. ಸಾಹಿತ್ಯವು ಗದ್ಯ ಪದ್ಯಗಳಿಂದ ಕೂಡಿದ್ದರೂ ಮುದ್ದಣ್ಣನು ತನ್ನ “ರಾಮಾಶ್ವಮೇಧ” ಕೃತಿಯಲ್ಲಿ “ಪದ್ಯಂ ವದ್ಯಂ ಗದ್ಯಂ ಹೃದ್ಯಂ” ಎಂದು ಪದ್ಯಕ್ಕಿಂತ ಗದ್ಯಕ್ಕೆ ಹೆಚ್ಚು ಮನ್ನಣೆ ಕೊಟ್ಟು ಹೊಸಗನ್ನಡದ ಮುಂಗೋಳಿಯೆನಿಸಿದ್ದಾನೆ. ಸಂಸ್ಕೃತದಲ್ಲಿಯೂ ಸಹ “ಗದ್ಯಂ ಕವೀನಾಂ ನಿಕಷಂ ವದಂತಿ” ಅಂದರೆ ಪದ್ಯಕ್ಕಿಂತ ಗದ್ಯವನ್ನು ಬರೆಯುವುದು ಕಷ್ಟಕರ ಎಂದು ವಿಮರ್ಶಕರು ಬಣ್ಣಿಸುತ್ತಾರೆ. ಹಾಗೆ ನೋಡಿದರೆ ಎರಡೂ ಕಷ್ಟಕರವೇ. “ಉಪಮಾ ಕಾಳಿದಾಸಸ್ಯ, ಭಾರವೇರರ್ಥಗೌರವಂ, ದಂಡಿನಃ ಪದಲಾಲಿತ್ಯಂ, ಮಾಘೇ ಸಂತಿ ತ್ರಯೋ ಗುಣಾಃ” ಎನ್ನುವಂತೆ ಒಂದೊಂದು ಕೃತಿಯಲ್ಲಿ ಒಂದೊಂದು ವಿಶಿಷ್ಟ ಕಾವ್ಯಗುಣವನ್ನು ಕಾಣಬಹುದು. ನಮ್ಮ ದೃಷ್ಟಿಯಲ್ಲಿ ಗದ್ಯವು ಸಮತಲದಲ್ಲಿ ಬಳುಕುತ್ತಾ ತುಂಬಿ ಹರಿಯುವ ಮನಮೋಹಕವಾದ ನದಿಯಾದರೆ, ಪದ್ಯವು ಕಲ್ಲು ಬಂಡೆಗಳ ಮಧ್ಯೆ ಜುಳು ಜುಳು ನಿನಾದ ಮಾಡುತ್ತಾ ಹರಿಯುವ ಝರಿಯಂತೆ! ಬೆಟ್ಟದ ಮೇಲಿಂದ ಭೋರ್ಗರೆಯುತ್ತಾ ಪ್ರಪಾತಕ್ಕೆ ಧುಮ್ಮಿಕ್ಕುವ ಸುಂದರ ಜಲಪಾತದಂತೆ! ಗದ್ಯ-ಪದ್ಯಗಳಿಂದ ಕೂಡಿದ ಒಟ್ಟು ಸಾಹಿತ್ಯ ನದಿಯ ನೀರನ್ನು ಅಣೆಕಟ್ಟಿನಲ್ಲಿ ಹಿಡಿದಿಟ್ಟ ಜಲಾಶಯವಿದ್ದಂತೆ! ಹೊಲ-ಗದ್ದೆ-ತೋಟಗಳಿಗೆ ನೀರುಣಿಸಿದಂತೆ ಸಹೃದಯ ಓದುಗರ ರಸಾಸ್ವಾದನೆ!

ಎಲ್ಲಾ ದೇಶಗಳಲ್ಲೂ ಇಂತಹ ಸಂದರ್ಭಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಪರಿಪಾಠವಿದೆ. ನಮ್ಮ ದೇಶದಲ್ಲಿ ಸಾಹಿತ್ಯ, ಸಂಗೀತ, ಸಮಾಜ ಸೇವೆ ಇತ್ಯಾದಿ ವಿವಿಧ ರಂಗಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಪದ್ಮಶ‍್ರೀ, ಪದ್ಮಭೂಷಣ, ಪದ್ಮವಿಭೂಷಣ ಇತ್ಯಾದಿ ಪ್ರಶಸ್ತಿಗಳನ್ನು ಕೊಟ್ಟರೆ, ದೇಶಕ್ಕಾಗಿ ಹೋರಾಡಿದ ಸೈನಿಕರಿಗೆ ವೀರಚಕ್ರ, ಪರಮ ವೀರಚಕ್ರ ಮುಂತಾದ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಸ್ವಾತಂತ್ರ್ಯ ಪೂರ್ವಕಾಲದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿಯೂ ಸಹ ಸರ್, ರಾವ್ ಬಹದ್ದೂರ್ ಇತ್ಯಾದಿ ಬಿರುದುಗಳನ್ನು ಕೊಡಲಾಗುತ್ತಿತ್ತು. ಮಹಾತ್ಮಾ ಗಾಂಧೀಜಿಯವರಿಗೆ ಕೈಸರ್-ಎ-ಹಿಂದ್ ಎಂಬ ಪ್ರಶಸ್ತಿಯನ್ನು ಬ್ರಿಟಿಷ್ ಸರಕಾರವು ಕೊಟ್ಟಿತ್ತು. ಆದರೆ ಗಾಂಧೀಜಿಯು 1920 ರಲ್ಲಿ ಕೈಗೊಂಡಿದ್ದ ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಅದನ್ನು ಹಿಂದಿರುಗಿಸಿದರು.

ರಾಜಮಹಾರಾಜರ ಕಾಲದಲ್ಲೂ “ರಾಜಸೇವಾಸಕ್ತ, ರಾವ್ ಬಹದ್ದೂರ್, ರಾಜಸೇವಾ ಧುರೀಣ, ಧರ್ಮಪ್ರವರ್ತ, ಧರ್ಮಪ್ರಕಾಶ” ಮುಂತಾದ ಬಿರುದುಗಳನ್ನು ಕೊಡಲಾಗುತ್ತಿತ್ತು. ರಾಜರಾದವರಿಗೂ ಸಹ ಅವರವರ ಶೌರ್ಯ ಪರಾಕ್ರಮಗಳನ್ನು ಬಣ್ಣಿಸುವ “ಛಲದಂಕಮಲ್ಲ ಅಂಕತ್ರಿಣೇತ್ರ, ಅರಿಭಯಂಕರ, ರಾಜ ಮಾರ್ತಾಂಡ” ಮುಂತಾದ ಬಿರುದುಗಳು ಇರುತ್ತಿದ್ದವು. ಜನರಿಂದಲೇ ದೊರೆತ ಬಿರುದುಗಳೂ ಉಂಟು. ಹರಿಶ್ಚಂದ್ರನು ಸತ್ಯಹರಿಶ್ಚಂದ್ರ ಆಗಿದ್ದು ಹೀಗೆಯೇ. ಕರ್ಣನು ದಾನಶೂರನಾಗಿ, ಬಸವಣ್ಣನು ಭಕ್ತಿ ಭಂಡಾರಿಯಾಗಿ, ಅಲ್ಲಮನು ಅನುಭಾವಿಯಾಗಿ, ಅಕ್ಕಮಹಾದೇವಿಯು ವೈರಾಗ್ಯನಿಧಿಯಾಗಿ, ಸಿದ್ಧರಾಮನು ಕರ್ಮಯೋಗಿಯಾಗಿ, ಗಾಂಧೀಜಿ ಮಹಾತ್ಮರಾಗಿ, ಸುಭಾಸ್ ಚಂದ್ರ ಬೋಸ್ ನೇತಾಜಿಯಾಗಿ ಜನಮಾನಸದಲ್ಲಿ ನೆಲೆಗೊಂಡರು.

ಈ ಗೌರವಾನ್ವಿತ ಬಿರುದುಗಳು ಈಗ ಜನರ ಬಾಯಲ್ಲಿ ವ್ಯಂಗ್ಯವಾಗಿ ಹೀನಾರ್ಥವನ್ನು ಪಡೆದುಕೊಂಡಿರುವುದು ವಿಷಾದನೀಯ. ಮಹಾಸುಳ್ಳುಗಾರನಿಗೆ “ಅವನಾ, ಮಹಾ ಸತ್ಯಹರಿಶ್ಚಂದ್ರ!”, ಜಿಪುಣಾಗ್ರೇಸರನನ್ನು ಕುರಿತು “ಅವನಾ, ದಾನಶೂರ ಕರ್ಣ” ಎಂಬಂತಹ ಕಟೂಕ್ತಿಗಳು ಬಳಕೆಯಲ್ಲಿವೆ. ಒಳ್ಳೆಯ ಅರ್ಥವುಳ್ಳ ಶಬ್ದಗಳಿಗೆ ಹೀಗೆ ಹೀನಾರ್ಥ ಪ್ರಾಪ್ತವಾದರೆ ಕೆಲವು ಹೀನಾರ್ಥವುಳ್ಳ ಶಬ್ದಗಳು ಉದಾತ್ತ ಅರ್ಥ ಪಡೆದಿರುವುದೂ ಉಂಟು. ತಾಯಿ ಮಗುವಿನ ಕೆನ್ನೆ ಸವರಿ “ಛೀ ಕಳ್ಳ!” ಎಂದು ಉದ್ಗರಿಸುವುದು ಪ್ರೀತಿಯ ದ್ಯೋತಕ! ಈ ಪ್ರೀತಿಯ ಉದ್ಗಾರವನ್ನು ಕೇಳಿದ ಕೆಲ ಮಕ್ಕಳು ದೊಡ್ಡವರಾದ ಮೇಲೆ ಮಹಾ ಕಳ್ಳರಾಗಿ ಸಾರ್ಥಕಗೊಳಿಸಿದವರೂ ಇದ್ದಾರೆ! ಸಾಂಸ್ಕೃತಿಕವಾಗಿ ಸದ್ಬಳಕೆಯಲ್ಲಿದ್ದ ಅನೇಕ ಶಬ್ದಗಳು ಸಹ ಈಗ ದುರ್ಬಳಕೆಯಾಗುತ್ತಿವೆ. ರಾತ್ರಿಯಿಡೀ ಇಸ್ಪೀಟ್ ಆಡುವುದು “ಅಖಂಡ ಭಜನೆ” ಆಗಿದೆ. ಮದ್ಯಪಾನ ಮಾಡುವುದು “ತೀರ್ಥ ಸೇವನೆ” ಆಗಿದೆ. ಶಬ್ದಗಳ ಅರ್ಥವನ್ನು ನಿಘಂಟು ನಿಗದಿ ಮಾಡುವುದಿಲ್ಲ; ಬದಲಾಗಿ ಉಚ್ಚರಿಸುವಾಗಿನ ಧ್ವನಿಯೇ ಅದನ್ನು ನಿರ್ಧರಿಸುತ್ತದೆ.

ಒಮ್ಮೆ ಬೆಂಗಳೂರಿನಿಂದ ಸಿರಿಗೆರೆಗೆ ಪ್ರಯಾಣಿಸುತ್ತಿರುವಾಗ ಯಶವಂತಪುರದ ವೃತ್ತವೊಂದರ ಬಳಿ ವಾಹನಗಳ ದಟ್ಟಣಿಯಲ್ಲಿ ನಮ್ಮ ಕಾರು ಕೆಲಹೊತ್ತು ನಿಂತಾಗ ಬಣ್ಣಬಣ್ಣದ ದಪ್ಪ ಅಕ್ಷರಗಳಲ್ಲಿ ಬರೆದ ಒಂದು ಬೋರ್ಡ್ ಕಾಣಿಸಿತು. ಅದರಲ್ಲಿ ಮೋಟಾರ್ ಸೈಕಲ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಎಚ್ಚರಿಸುವ ಮಾತುಗಳು ಹೀಗಿದ್ದವು: “ನಿಮಗೀರುವುದು ಒಂದೇ ತಲೆ, ಅದನ್ನು ರಕ್ಷೀಸಿ”. ಕರ್ನಾಟಕದ ರಾಜಧಾನಿಯಲ್ಲಿ ಕನ್ನಡವು “ಗೀರಿ”ಸಿಕೊಳ್ಳುತ್ತಿರುವ ಇಂಥ ದುಃಸ್ಥಿತಿಯನ್ನು ಕಂಡು ನಮಗೆ ತುಂಬಾ ವ್ಯಥೆಯಾಯಿತು. ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀಮತಿ ಬಿ.ಟಿ.ಲಲಿತಾನಾಯಕ್ ರವರು ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿ ಬಹಳ ವರ್ಷಗಳ ಹಿಂದೆ ನಡೆದ ಬೆಳುದಿಂಗಳ ಕವಿಗೋಷ್ಠಿ “ಕಾವ್ಯಪೂರ್ಣಿಮಾ” ದಲ್ಲಿ ವಾಚಿಸಿದ “ಕೊರಗಬೇಡ ಕನ್ನಡಮ್ಮ” ಎಂಬ ಕೆಳಗಿನ ಕವಿತೆ ನೆನಪಾಯಿತು:

ಆಚೆ ಮನೆ ಮಲೆಯಾಳಿಯಮ್ಮ ಈಚೆ ಮನೆ ತಮಿಳರಮ್ಮ 
ಉತ್ತರದ ಹಿಂದಿಯಮ್ಮ ಗುಜರಾತಿನ ಮಾರ್ವಾಡಿಯಮ್ಮ 
ಎಲ್ಲ ಸೇರಿ ಕೂಡಿದೊಡನೆ... ಕನ್ನಡಮ್ಮನ ಸ್ಥಿತಿಯ ಕಂಡು 
“ವೆರಿ ಸೀರಿಯಸ್ಸು” ಎಂದು ಎಮರ್ಜನ್ಸಿ ವಾರ್ಡಿನಲ್ಲಿ 
ಹಾಕಿಬಿಟ್ಟರು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.28-11-2024.