ಬರದ ನಾಡಾಗಿದ್ದ ಜಗಳೂರು ತಾಲ್ಲೂಕು ಕೆರೆಗಳಿಗೆ ಶ್ರೀ ತರಳಬಾಳು ಜಗದ್ಗುರುಗಳವರಿಂದ ಬಾಗಿನ ಸಮರ್ಪಣೆ

  •  
  •  
  •  
  •  
  •    Views  

ಸ್ಥಳ: ಜಗಳೂರು ತಾಲ್ಲೂಕು 

ಶ್ರೀ ಜಗದ್ಗುರುಗಳವರ ಶಾಶ್ವತ ಸ್ಮರಣೀಯ ಜಲಕೈಂಕರ್ಯಕ್ಕೆ ಹರಿದು ಬಂದ ಭಕ್ತಿ ಕೃತಜ್ಞತೆ

ನೀರು ಎನ್ನುವ ಶಬ್ದ ಕೇಳಿದರೇನೇ ಅದೊಂದು ಅನನ್ಯ ಅನುಭೂತಿ ಎಂದು ಹಸಿದಿದ್ದ,  ಶಾಶ್ವತ ಬರಪೀಡಿತ ಪ್ರದೇಶ ಎಂದು ರಾಜ್ಯದಲ್ಲಿಯೇ ಹಣೆಪಟ್ಟಿ ಕಟ್ಟಿಕೊಂಡು ನರಳುತ್ತಿದ್ದ ಜಗಳೂರು ತಾಲ್ಲೂಕಿನಾದ್ಯಂತ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪ ಶ್ರಮ, ಸರ್ಕಾರದ ಸಹಕಾರ, ಶಾಸಕರು, ಸಚಿವರುಗಳ ಕಾರ್ಯ ತತ್ಪರತೆಯ ಫಲವಾಗಿ ಕೆರೆಗಳು ತುಂಬಿ ನಳನಳಿಸುತ್ತಿವೆ.

ಕುಡಿಯುವ ನೀರಿಗೆ ಬರ. ಕೃಷಿಗೆ ನೀರಿಲ್ಲದ ಸ್ಥಿತಿ. ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿರುವ ನೀರಿನ ಪ್ರಮಾಣದಿಂದಾಗಿ ಫಲವತ್ತಾದ ಕೃಷಿಭೂಮಿ ಬರಡಾಗಿ,  ಸತ್ವಃ ಹೀನವಾಗಿದ್ದ ಅಲ್ಲೊಂದು ಇಲ್ಲೊಂದು ತೋಟಗಳು ಇಂದು ಅಕ್ಷರಶಃ  ಕಂಗೊಳಿಸುತ್ತಿವೆ.

ಭಗೀರಥನ ಕಠಿಣ ಪ್ರಯತ್ನದಿಂದ ಸ್ವರ್ಗದಲ್ಲಿರುವ ಗಂಗಾನದಿ ಧರೆಗಿಳಿದು, ಹಿಮಾಲಯದಲ್ಲಿ ಧುಮ್ಮಿಕ್ಕಿ, ಬಯಲಲ್ಲಿ ಭೋರ್ಗರೆದು, ಭಗೀರಥನ ಪೂರ್ವಜರಿಗೆ ಪ್ರೇತಲೋಕದಿಂದ ಮುಕ್ತಿ ನೀಡಿದರೆ, ಶ್ರೀ ತರಳಬಾಳು ಜಗದ್ಗುರುಗಳವರ ಶಾಶ್ವತ ಸ್ಮರಣೀಯ ಜಲಕೈಂಕರ್ಯದ ಯಶಸ್ಸಿನ ಪರಿಣಾಮ ಇಂದು ಜಗಳೂರು ಕೆಲವೇ ವರ್ಷಗಳಲ್ಲಿ ಮಲೆನಾಡಾಗಿ ಭಾಷ್ಯ ಬರೆಯಲಿದೆ.

ಇಂದು ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಜಗಳೂರು ತಾಲ್ಲೂಕಿನ ಹಿರೇಅರಕೆರೆ, ಮುಷ್ಟಿಗರ ಹಳ್ಳಿ, ಗೋಡೆ, ಮರಿಕುಂಟೆ, ಅಸಗೋಡು ಗ್ರಾಮದ ಕೆರೆಗಳನ್ನು ವೀಕ್ಷಿಸಿ ಬಾಗೀನ ಸಮರ್ಪಿಸಿದರು.

ಶ್ರೀ ಜಗದ್ಗುರುಗಳವರ ಆಗಮನವು ಪ್ರತಿ ಹಳ್ಳಿಗಳಲ್ಲಿ ಸಂಭ್ರಮ ತಂದಿತ್ತು. ಶ್ರೀ ಪೂಜ್ಯರ ಶಾಶ್ವತ ಸ್ಮರಣೀಯ ಜಲಕೈಂಕರ್ಯಕ್ಕೆ ಮನೆ ಮನೆಗಳಲ್ಲಿ ಭಕ್ತಿ ಕೃತಜ್ಞತೆಯು ಮೇಳೈಸಿತ್ತು. ಪೂರ್ಣಕುಂಭ ಹಿಡಿದ ಮಹಿಳೆಯರು ಶ್ರೀ ಜಗದ್ಗುರುಗಳವರನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು. ಪೂಜ್ಯರೊಂದಿಗೆ ಸಾಗಿದ ಮೆರವಣಿಗೆಯಲ್ಲಿ  ಜನರ ಉತ್ಸಾಹ ಮುಗಿಲು ಮುಟ್ಟಿತ್ತು. ಊರಿಗೆ ಊರೇ ಸಂಭ್ರಮಪಡುವ ಅಪರೂಪದ ಕಾರ್ಯಕ್ರಮ ಇದಾಗಿತ್ತು.

ಅಸಗೋಡಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು ಆಶೀರ್ವಚನ ದಯಪಾಲಿಸಿದರು, ಮಾನ್ಯ ಶಾಸಕರಾದ ಶ್ರೀ ಬಿ. ದೇವೇಂದ್ರಪ್ಪನವರು, ಮಾಜಿ ಶಾಸಕರುಗಳಾದ ಶ್ರೀ ರಾಮಚಂದ್ರಪ್ಟನವರು, ಶ್ರೀ ಹೆಚ್.ಪಿ.ರಾಜೇಶ್ , ಬ್ರಾಹ್ಮಣ ಅಭಿವೃದ್ಧಿಯ ಮಂಡಳಿಯ ಅಧ್ಯಕ್ಷ ಶ್ರೀ ಅಸಗೋಡು ಜಯಸಿಂಹರವರು, ಮುಖಂಡರಾದ ಕೆ.ಪಿ.ಪಾಲಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು, ಸ್ಥಳೀಯ ಹಿರಿಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.