ಸಿರಿಗೆರೆ ಮಠ ಸಿರಿಗರ ಹಿಡಿದವರ ಸರಿದಾರಿಗೆ ತಂದು ನಿಲ್ಲಿಸುವ ಕೆಲಸ ಮಾಡಿದೆ : ತುಮಕೂರು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು
ಪರಮಪೂಜ್ಯರ ಸನ್ನಿಧಾನಕ್ಕೆ ಪ್ರಣಾಮಗಳು.
ತಾವು ತಮ್ಮ ಸಾರಸ್ವತ ಕೆಲಸ-ಕಾರ್ಯ ಹಾಗೂ ಅಧ್ಯಯನ-ಅಧ್ಯಾಪನಗಳೊಂದಿಗೆ ಕ್ಷೇಮವೆಂದು ಭಾವಿಸುತ್ತೇವೆ.
2024, ನವೆಂಬರ್ ಮಾಹೆಯ ದಿನಾಂಕ 8, 9, 10 ಮೂರು ದಿನಗಳ ಕಾಲ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಆಶ್ರಯದಲ್ಲಿ ನಡೆದ “ನುಡಿಹಬ್ಬ- 2024” ಕಾರ್ಯಕ್ರಮವು ಅಭೂತಪೂರ್ವವಾಗಿ ನಡೆದು ಬಂತು.
ವಿದ್ವತ್ಪೂರ್ಣ ಗೋಷ್ಠಿಗಳಿಂದ ಕೂಡಿದ ಮೂರು ದಿನಗಳ ತರಳಬಾಳು “ನುಡಿಸಮ್ಮೇಳನ” ನಾಡಿಗೆ ಒಂದು ಸಶಕ್ತ ಸಂದೇಶವನ್ನು ನೀಡಿದೆ. ಕನ್ನಡದ ಹಿರಿಮೆ, ಗರಿಮೆಗಳ ತಾಕತ್ತನ್ನು ಭೂರಿ ಭೂರಿಯಾಗಿ ಪ್ರದರ್ಶಿಸಿದೆ. ಸಮ್ಮೇಳನದ ಆಶಯ ಮತ್ತು ಸದಾಶಯ ನಿಜಕ್ಕೂ ಸಾರ್ಥಕವಾಯಿತು. ಸಿರಿಗೆರೆ ಬೃಹನ್ಮಠವು ಕನ್ನಡನಾಡಿನ ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಶ್ರೀಮಂತಿಸುವಲ್ಲಿ ಅಹಂಭೂಮಿಕೆಯನ್ನು ವಹಿಸಿದೆ.
ಸಿರಿಗೆರೆ ಬೃಹನ್ಮಠವು ಬರೀ ಒಂದು ಮಠ, ಒಂದು ಪೀಠವಾಗಿ ಮಾತ್ರ ಗುರುತಿಸಿಕೊಂಡಿಲ್ಲ; ಅದು ಒಂದು ಪಾಠವಾಗಿ, ಪಠ್ಯವಾಗಿ ಕೂಡ ಗುರುತಿಸಿಕೊಂಡಿದೆ. ಬೃಹನ್ಮಠವು ಈ ನಾಡಿನ ಜನಗಳಿಗೆ ಶಿಸ್ತು, ಸಂಯಮ ಹಾಗೂ ಬದ್ಧತೆಯನ್ನು ಕಲಿಸಿಕೊಂಡು ಬಂದಿದೆ. ಸಮಯಪಾಲನೆಯ ವಿಷಯದಲ್ಲಿ ಸಿರಿಗೆರೆ ತರಳಬಾಳು ಬೃಹನ್ಮಠವು ತುಂಬ ಕಟ್ಟುನಿಟ್ಟು. ತಮ್ಮ ಗುರುಗಳು ಸಮಯಪಾಲನೆಯ ವಿಷಯದಲ್ಲಿ ಯಾವತ್ತೂ “ಸಮಝೋತಾ” ಮಾಡಿಕೊಂಡವರಲ್ಲ. ಅದು ಮಂತ್ರಿಯಾದರೂ ಸರಿ, ಮುಖ್ಯಮಂತ್ರಿಯಾದರೂ ಸರಿ, ಸಮಯಕ್ಕೆ ಸರಿಯಾಗಿ ಸಮಾರಂಭಕ್ಕೆ ಬಾರದೆ ಇದ್ದರೆ ಅವರಿಗೆ ಶಾಸನ, ಅನುಶಾಸನ ಕಾದುಕೊಂಡಿರುತ್ತಿತ್ತು. ಇದು ನಾವು ಕಂಡು ಕೇಳಿದ ಸತ್ಯ.
ಅವತ್ತು ನಾವು ಸಮಾರಂಭದಲ್ಲಿ ಹೇಳಿದ ಹಾಗೆ,“ಸಿರಿಗೆರೆ" ಮಠವು “ಸಿರಿಗರ” ಹಿಡಿದವರನ್ನು ಸರಿದಾರಿಯಲ್ಲಿ ತಂದುನಿಲ್ಲಿಸುವ ಕೆಲಸ ಮಾಡಿದೆ ಇದು ಕಾರಣ, ಅದೆಂಥ ಅತಿರಥ, ಮಹಾರಥರೇ ಇರಲಿ ಬೃಹನ್ಮಠದ “ಸಾರ್ವಭೌಮ” ತೇಜಸ್ಸಿಗೆ ತಲೆಬಾಗಿ ನಿಂತುಕೊಂಡಿದ್ದಾರೆ. ತಾವು ನಿರಂತರ ಅಧ್ಯಯನಶೀಲರು. ತಮ್ಮ ಅಧ್ಯಯನ ತಮಗೆ ಮಾತ್ರ ಮೀಸಲಾಗಿರದೆ ಅದು ನಾಡಿಗರ ಧೀಶಕ್ತಿಯನ್ನು ಹೆಚ್ಚಿಸುವುದಕ್ಕೆ ಕಾರಣವಾಗಿದೆ. ತಮ್ಮ ಬರಹ, ಲೇಖನಗಳು ಜನಗಳ ಮಾನಸವನ್ನು ಎಚ್ಚರಿಸಿಕೊಂಡು ಮಾತ್ರವಲ್ಲ, ಅವು ಜನಮಾನಸವನ್ನು ಎತ್ತರಿಸಿಕೊಂಡು ಬಂದಿವೆ. ತಾವು ವಿವಾದಾತೀತರು. ತಾವು ಸನಾತನ ಮತ್ತು ವಿನೂತನಗಳ ಕೂಡಲಸಂಗಮ. ತಮ್ಮ ಅಸ್ಖಲಿತ ಸಂಸ್ಕೃತ ಪ್ರೇಮದಿಂದ ಸಂಸ್ಕೃತ ಸಾರಸ್ವತ ಇನ್ನಷ್ಟು ಮತ್ತಷ್ಟು ಶ್ರೀಮಂತವಾಗಿದೆ.
ಸಮೃದ್ಧ ಗುಣಮಾನಸರಾದ ತಾವು "ಗಣಕಮಾನಸರು'' ಕೂಡ ಅಹುದು. ತಮ್ಮಿಂದ ಬರೀ ಸಮಕಾಲೀನರಷ್ಟೇ ಲಾಭಾನ್ವಿತರೆಂದು ಹೇಳುವಂತಿಲ್ಲ; ತಾವು ಸಾಹಿತ್ಯ ಹಾಗೂ ಸಾರಸ್ವತ ಕ್ಷೇತ್ರದಲ್ಲಿ ಅಂಗದ ಹೆಜ್ಜೆಯನ್ನು ಮೂಡಿಸಿದ್ದರಿಂದ ತಮ್ಮ ಸಮಕಾಲೀನರಲ್ಲದವರು ಕೂಡ ತಮ್ಮಿಂದ ಲಾಭಾನ್ವಿತರಾಗುತ್ತ ಇರುತ್ತಾರೆ. ಇದು ಸತ್ಯ. ನಮ್ಮನ್ನು ಬೃಹನ್ಮಠದ ಕಾರ್ಯಕ್ರಮಕ್ಕೆ ಬರಮಾಡಿಕೊಂಡು ಪ್ರೀತಿ, ವಿಶ್ವಾಸ, ವಾತ್ಸಲ್ಯವನ್ನು ತೋರಿಸಿದಿರಿ. ನಿಜಕ್ಕೂ ನಾವು ಪುಳಕಿತರಾದೆವು.
ಶಾಂತಿವನದಲ್ಲಿ ಪೂಜೆ, ಪ್ರಸಾದ ಮಾಡಿಕೊಂಡು ಅಲ್ಲಿನ ಹೃದ್ಯ ಮತ್ತು ಹೃದಯಂಗಮ ವಾತಾವರಣವನ್ನು ಅನುಭವಿಸಿದೆವು. ಅಲ್ಲಿನ ಸಸ್ಯಸಿರಿ ಮತ್ತು ಜಲಸಿರಿ ನಮ್ಮನ್ನು ಇಮ್ಮಡಿ, ಮುಮ್ಮಡಿ ಖುಶಿಗೆ ಒಳಗುಮಾಡಿತು. ನಮ್ಮ ಶ್ರೀಮಠ ಹಾಗೂ ತಪೋವನಕ್ಕೆ ಒಮ್ಮೆ ಸಹಜವಾಗಿ ದಯಮಾಡಿಸೋಣವಾಗಲಿ ಎಂದು ಬಿನ್ನವಿಸುತ್ತ ಮತ್ತೊಮ್ಮೆ ತಮ್ಮ ಸನ್ನಿಧಾನಕ್ಕೆ ಗೌರವದಿಂದ ವಂದಿಸುತ್ತೇವೆ.
ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು
ಹಿರೇಮಠ, ತಪೋವನ, ತುಮಕೂರು