ಸರಣಿ ಸುಳ್ಳು ಹಬ್ಬಿಸುವ ನಯವಂಚಕರಿಗೆ ಗೋವಿನ ಹಾಡಿನ ಸತ್ಯದ ಪಾಠ !

  •  
  •  
  •  
  •  
  •    Views  

ತರಳಬಾಳು ಕೇಂದ್ರದ ಹಾಸ್ಯ ಸಂಜೆ: ನಗೆಗಡಲಿನಲ್ಲಿ ಮಿಂದೆದ್ದ ಸಭಿಕರು
-------------------------------------------

ಬೆಂಗಳೂರು ಮಹಾನಗರದ ಆರ್.ಟಿ. ನಗರದ ತರಳಬಾಳು ಕೇಂದ್ರದಲ್ಲಿ ತರಳಬಾಳು ಸಮಿತಿ ಆಯೋಜಿಸಿದ್ದ ಹಾಸ್ಯ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಸಂಜೆ ಬಹು ಅರ್ಥಪೂರ್ಣವಾಗಿ ನಡೆಯಿತು.

ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಕೇಂದ್ರದ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಗಳೂರು ನಿವಾಸಿಗಳ, ಹಿರಿಯರ, ಮಹಿಳೆಯರ, ಯುವಕರನ್ನು ನಗೆಗಡಲಲ್ಲಿ ಮಿಂದೇಳುವಂತೆ ಮಾಡಿತು.

ಸಿರಿಗೆರೆಯ ಅಕ್ಕನ ಬಳಗದ ವಿದ್ಯಾರ್ಥಿಗಳು ಮತ್ತು ಉತ್ತಂಗಿ ತೋಟಪ್ಪನವರ ಸುಶ್ರಾವ್ಯ ವಚನಗಾಯನವು ಸಭಿಕರನ್ನು ಭಕ್ತಿ ಲೋಕಕ್ಕೆ ಕರೆದೊಯ್ಯುದಿತು.  

ಒಂದೆಡೆ ಪೂಜ್ಯ ಶ್ರೀ ಜಗದ್ಗುರುಗಳವರೊಂದಿಗೆ, ಅತಿಥಿ ಗಣ್ಯರು ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆಯ ಸಮಯದಲ್ಲಿ ಅಕ್ಕನ ಬಳಗದವರ ಕಂಠದಿಂದ ಹೊರಹೊಮ್ಮಿದ ತತ್ವಪದ...

ಗುರುವೆ ನಾನು ಒಂದು ಸೊನ್ನೆ ಸೊನ್ನೆಗೆಲ್ಲಿ ಬೆಲೆಯಿದೆ
ಸೊನ್ನೆ ಹಿಂದೆ ಇದ್ದರಂಕಿ ಸೊನ್ನೆಗಾಗ ಬೆಲೆಯಿದೆ
ಸೊನ್ನೆಗಾಗ ಬೆಲೆಯಿದೆ||

ಗುರುವೆ ನೀವು ನನ್ನ ಹಿಂದೆ ಅಂಕಿಯಾಗಿ ಬಂದಿರಿ !
ಸೊನ್ನೆಯಾದ ನನ್ನ ಬಾಳ್ಗೆ ಬೆಳಕ ತಂದು ತುಂಬಿರಿ

ನಿಮ್ಮನಳಿದ  ನನ್ನ ಬದುಕು ನಿಮ್ಮಾಣೆಗೂ ಶೂನ್ಯವು

ಅಲ್ಪ ಬುದ್ಧಿ ಅತಿಯಾಸೆ ಅಹಂಕಾರ ಭರಿತವು 

ಅಂಕಿಯಿದ್ದರೇನೆ ಬೆಲೆಯಿಹುದು ಸೊನ್ನೆಗೆ
ಹಿಂದೆ ಗುರುವು ಇದ್ದರೇನೇ ಬೆಲೆಯು ನನ್ನ ಇರುವಿಗೆ

ಗುರುವಂದನೆಯ ಗಾಯನವು ಎಲ್ಲರ ಮನದಲ್ಲಿ ಭಕ್ತಿ ಶ್ರೀಮಂತಿಕೆಯನ್ನು ಹೊರಸೂಸಿತು.

ನಯವಂಚಕರಿಗೆ ಗೋವಿನ ಹಾಡಿನ ಸತ್ಯದ ಪಾಠ...!!
----------------------------------------

ಸ್ವಾರ್ಥ ಸಾಧನೆಗಾಗಿ, ಹಾಲಿಟ್ಟವರಿಗೆ ವಿಷ ಇಕ್ಕುವ ಧೂರ್ತರೇ ಎಲ್ಲಾ ಕಡೆ ಇರುವ ಪ್ರಸ್ತುತ ಸಂದರ್ಭದಲ್ಲಿ ತರಳಬಾಳು ಕಲಾಸಂಘದ ವಿದ್ಯಾರ್ಥಿಗಳು ಅಭಿನಯಿಸಿದ ಗೋವಿನ ಹಾಡು ನೃತ್ಯ ರೂಪಕವು “ಸತ್ಯವೇ ನಮ್ಮ ತಾಯಿ ತಂದೆ| ಸತ್ಯವೇ ನಮ್ಮ ಬಂಧು ಬಳಗ” ಎಂದು ಝೇಂಕರಿಸಿದ ಪ್ರದರ್ಶನವು  ಸತ್ಯದ ಬಲ ಎಂಬುದು ಶಿವನ ತ್ರಿಶೂಲವಿದ್ದಂತೆ. ಅದು ಯಾವಾಗಲೂ ಕಹಿ ಮತ್ತು ಮೊನಚು ಎಂದು ಅರ್ಥೈಸಿ ಪ್ರೇಕ್ಷಕರ ಕಣ್ಣುಗಳನ್ನು ತೆರವುಗೊಳಿಸಿತು. ಎಲ್ಲ ಕಾಲಕ್ಕೂ ಸತ್ಯಕ್ಕೆ ಜಯವಾಗುತ್ತದೆ ಎಂಬುದನ್ನು ನಿರೂಪಿಸಿದರು. ಸತ್ಯಮೇವ ಜಯತೆ!  ನಾನೃತಮ್ !!

ಚಳಿ ಬಿಡಿಸಿದ ಕೃಷ್ಣೇಗೌಡರ ಬಿಸಿ ಬಿಸಿ ಹಾಸ್ಯ...!!
-------------------------------------------------- 

ಕಾರ್ತಿಕ ಮಾಸ, ಬೆಂಗಳೂರಿನಲ್ಲಿ ಮೋಡ ಮುಸುಕಿದ ಅತೀ ತಂಪಿನ ವಾತಾವರಣ, ಚಳಿಗೆ ಜನ ಸಂಜೆಯ ನಂತರ ಹೊರ ಬಾರದ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲಿಯೂ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಹಾಸ್ಯ ಸಂಜೆಯ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ವಾಗ್ಮಿಗಳಾದ ಪ್ರೋ.ಕೃಷ್ಣೇಗೌಡರಿಂದ ಬಂದ ಪ್ರತಿ ಮಾತು ಬದುಕಿನ ಸೌಂದರ್ಯತೆಯನ್ನು ಅನುಭವಿಸುವ ಜೊತೆ ಬದುಕಿನಲ್ಲಿ ಏನು ಮಾಡಿದರು ಇಷ್ಟಪಟ್ಟು ಮಾಡಬೇಕು, ಬೇರೆಯವರಿಗೆ ಅಲ್ಲ ನಮಗೋಸ್ಕರ ನಮ್ಮ ಸಂತೋಷಕ್ಕಾಗಿ ಮಾಡಿ ಅದನ್ನು ಅನುಭವಿಸಬೇಕು. ಪ್ರತಿಯೊಂದನ್ನು ರಚನಾತ್ಮಕ, ಭಾವನಾತ್ಮಕ ಮತ್ತು ಪ್ರಶಂಸನೀಯ ದೃಷ್ಟಿಯಿಂದ ನೋಡುವ ಭಾವನೆಯನ್ನು ಬೆಳೆಸಿಕೊಳ್ಳಬೇಕು.

ಹಾಸ್ಯದಲ್ಲಿ ಪ್ರತಿಸಲ ಹೊಸತನ್ನು ನಿರೀಕ್ಷಿಸುತ್ತಾರೆ ಇದು ನಮಗೊಂದು ಸವಾಲಿದ್ದಂತೆ. ನಮ್ಮ ದಿನನಿತ್ಯದ ಬದುಕಲ್ಲಿ ಹೊಸತು ಸಿಗುತ್ತದೆ, ನಮ್ಮನ್ನು ನಮ್ಮಿಂದ ಹೊರಗಡೆ ನಿಂತು ನೋಡಿದರೆ ಅನೇಕ ತಮಾಷೆಗಳು ಕಾಣಸಿಗುತ್ತವೆ. ಎಂದು ಅಭಿಮತಿಸಿ ಮಾತು ಆರಂಭಿಸಿದ ಪ್ರೊ. ಕೃಷ್ಣೇಗೌಡರು ಕಂಠದಿಂದ ಹೊರ ಬಂದ ಹಾಸ್ಯ ಚಟಾಕಿಗಳು ಸಂಪದ್ಭರಿತ ತಮಾಷೆಯ ಮಳೆ ಸುರಿಸಿದವು.

ತರಳಬಾಳು ಮಠವು ನನಗೆ ಅತಿ ದೊಡ್ಡದಾದ ಗೌರವವನ್ನು ನೀಡಿದೆ. ಕಳೆದ 35 ವರ್ಷಗಳಿಂದ ತರಳಬಾಳು ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದ ಕಾರ್ಯಕ್ರಮಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ತರಳಬಾಳು ಹುಣ್ಣಿಮೆ ಮಹೋತ್ಸವದ ಖಾಯಂ ಅತಿಥಿಯಾಗಿ ಭಾಗವಹಿಸಿದ್ದೇನೆ ತರಳಬಾಳು ಮಠಕ್ಕೆ ಬರುವುದೆಂದರೆ ನನಗೆ ಧನ್ಯತೆಯ ಭಾವ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಹಾಸ್ಯದ ಮೋಡಿ ಮಾಡಿದ ಡಾ.ಬೆಣ್ಣೆ ಮತ್ತು ಕೋಗಳಿ ಕೊಟ್ರೇಶ್ ಜೋಡಿ:
------------------------------------------------ 

ಪಶು ವೈದ್ಯರಾದ ಡಾ. ಬಸವರಾಜ ಬೆಣ್ಣೆ ರವರು ತಮ್ಮ ವೃತ್ತಿ ಬದುಕಿನ ಹಾಸ್ಯ ಸಂದರ್ಭಗಳ ಜೊತೆ ಉತ್ತರ ಕರ್ನಾಟಕದ ಜವಾರಿ ಹಾಸ್ಯ ಸೊಗಡನ್ನು ಉಣಬಡಿಸಿದರು.  ಶರಣ ಕೋಗಳಿ ಕೊಟ್ರೇಶ್ ರವರ ಹಾಸ್ಯ ಭಾಷಣಕ್ಕೆ ಜನರು ಬಿದ್ದು ಬಿದ್ದು ನಕ್ಕರು. ಧ್ವನಿಯಿಂದ ವಿವಿಧ ವಾದ್ಯಗಳನ್ನು ನುಡಿಸಿದ ಅವರ ಪ್ರತಿಭೆ ವಿಶೇಷವಾಗಿ ಎಲ್ಲರ ಮನ ಸೆಳೆಯಿತು. ತಮ್ಮ ಹಾಸ್ಯದ ಹಾವ, ಭಾವಗಳ ಪ್ರದರ್ಶನದ ಮೂಲಕ ಕೋಗಳಿ ಕೊಟ್ರೇಶ್, ನೆರೆದಿದ್ದವವರನ್ನು ಬಿದ್ದು ಬಿದ್ದು ನಗುವಂತೆ ಮಾಡಿದರು. ಇಬ್ಬರ ಜೋಡಿ ಸುಮಾರು ಒಂದೂವರೆ ತಾಸು, ನರೆದಿದ್ದ ಸಹಸ್ರಾರು ಪ್ರೇಕ್ಷಕರಿಗೆ ನಗೆಯೂಟ ಬಡಿಸಿದರು.

ಜಂಜಾಟದ ಬದುಕಿಗೆ ತೃಪ್ತಿ ತಂದ ಹಾಸ್ಯ ಸಂಜೆ: 
-------------------------------------------------- 

ಸಾನ್ನಿಧ್ಯ ವಹಿಸಿ ಆಶೀರ್ವಚನ ಕರುಣಿಸಿದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬೆಂಗಳೂರಿನ ಒತ್ತಡ ಮತ್ತು ಜಂಜಾಟದಲ್ಲಿರುವ ನಮ್ಮ ಶಿಷ್ಯರುಗಳಿಗೆ ಅವರ ಮನಸ್ಸನ್ನು ತಿಳಿಗೊಳಿಸುವ ಉದ್ದೇಶದಿಂದ ಈ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಎಲ್ಲರೂ ಸಂತೋಷ ಪಟ್ಟಿರುವುದು ತೃಪ್ತಿ ತಂದಿದೆ.  ಎಂದರು.

ನಗುವುದು ಮಾನವನ ಸಹಜವಾದ ಧರ್ಮ. ನಗಿಸುವುದು ನಾವು ಆಚರಿಸಬಹುದಾದ, ಪರಧರ್ಮ. ಮತ್ತೊಬ್ಬರ ನಗುವನ್ನು ಕೇಳುತ್ತಾ, ನಾವು ನಗುವುದು ಅತಿಶಯದ ಧರ್ಮ. ನಾವು ನಗುವ, ನಗಿಸುವ, ಮತ್ತೊಬ್ಬರನ್ನು ನಗಿಸುವಾಗ ನಾವೂ ನಗುವಂತಹ ಭಾವವನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

ತಮ್ಮ ಅನುಭವದ ಮೂರ್ನಾಲ್ಕು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡ ಶ್ರೀ ಜಗದ್ಗುರುಗಳವರ ಆಶೀರ್ವಚನವು ಮತ್ತೊಮ್ಮೆ ಎಲ್ಲರನ್ನೂ ನಗೆಗಡಲಲ್ಲಿ ಮಿಂದೇಳುವಂತೆ ಮಾಡಿತು.

2025ರ ಜನವರಿ-11 ರಂದು ಇದೇ ವೇದಿಕೆಯಲ್ಲಿ ತರಳಬಾಳು ಕೇಂದ್ರದ ಸಮಿತಿಯವರು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತರಳಬಾಳು ಕೇಂದ್ರದ ಕಾರ್ಯಕ್ರಮಗಳಿಗೆ ತಮ್ಮ ಬಂಧು ಮಿತ್ರರಿಗೆ, ಮಕ್ಕಳನ್ನು ಕರೆದುಕೊಂಡು ಬರುವಂತೆ ಶ್ರೀ ಜಗದ್ಗುರುಗಳವರು ಸೂಚಿಸಿದರು.

ವಿಶ್ರಾಂತ ನ್ಯಾಯಮೂರ್ತಿಗಳಾದ ಶರಣ ಜಸ್ಟೀಸ್ ಶಿವರಾಜ್ ಪಾಟೀಲ್ ರವರು, IPS ಅಧಿಕಾರಿ ಶ್ರೀ ಯತೀಶ್ ಚಂದ್ರ, ವಿಶ್ರಾಂತ ಪೋಲೀಸ್ ವರಿಷ್ಠಾಧಿಕಾರಿ ಶ್ರೀ ಶಿವಕುಮಾರ್, ನೀರಾವರಿ ನಿಗಮದ ವಿಶ್ರಾಂತ ಎಂ.ಡಿ. ಶ್ರೀ ಮಲ್ಲಿಕಾರ್ಜುನ ಗುಂಗೆ, ಹಿರಿಯರಾದ ಶ್ರೀ ಶಿವಾನಂದ್,  ತರಳಬಾಳು ಕೇಂದ್ರದ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಾತಿ, ಸೇರಿದಂತೆ ತರಳಬಾಳು ಕೇಂದ್ರದ ಪದಾಧಿಕಾರಿಗಳು, ಉಪಸ್ಥಿತರಿದ್ದರು.

ತರಳಬಾಳು ಕೇಂದ್ರದ ಸಮಿತಿಯ ಅಧ್ಯಕ್ಷರಾದ ಶರಣ ಚಂದ್ರಪ್ಪನವರು ಸ್ವಾಗತಿಸಿ, ಕೇಂದ್ರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ನೀಡಿದರು.

ತರಳಬಾಳು ಕೇಂದ್ರದ ಸಿಬ್ಬಂದಿಯವರ ಪ್ರೀತಿ ಸೌಜನ್ಯದ ದಾಸೋಹ ವ್ಯವಸ್ಥೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.