ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಿರಿಗೆರೆ ವಿದ್ಯಾರ್ಥಿನಿಗೆ ತೃತೀಯ ಸ್ಥಾನ
ಕರ್ನಾಟಕ ರಾಜ್ಯ ಸರ್ಕಾರ ಸಂವಿಧಾನ ದಿನಾಚರಣೆ ಕುರಿತು ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಿರಿಗೆರೆಯ ಎಂ.ಬಸವಯ್ಯ ವಸತಿ ಪದವಿ ಕಾಲೇಜು ವಿದ್ಯಾರ್ಥಿನಿ ಶ್ರೀರಕ್ಷಾ ತೃತೀಯ ಬಹುಮಾನ ಪಡೆದಿರುತ್ತಾರೆ.
ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಬೆಂಗಳೂರಿನ ಗೃಹ ಕಛೇರಿ ಕೃಷ್ಣಾದಲ್ಲಿ ವಿದ್ಯಾರ್ಥಿನಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡುವುದರ ಮೂಲಕ ಅಭಿನಂದಿಸಿರುತ್ತಾರೆ.
ಕರ್ನಾಟಕ ರಾಜ್ಯದ ವಿವಿಧ ಪದವಿ ಕಾಲೇಜುಗಳ 400 ವಿದ್ಯಾರ್ಥಿಗಳು “ಸಂವಿಧಾನ ಓದು ಅಭಿಯಾನ” ಕಾರ್ಯಕ್ರಮದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರಥಮ ಸ್ಥಾನ ಕೋಲಾರದ ಶ್ರೀ ವಿದ್ಯಾ, ದ್ವಿತೀಯ ಸ್ಥಾನ ಕೊಪ್ಪಳದ ಶಶಿಕಲಾ ಶಂಕರಪ್ಪ ಹಾಗೂ ತೃತೀಯ ಸ್ಥಾನವನ್ನು ಕುಮಾರಿ ಶ‍್ರೀರಕ್ಷಾ ಸಿರಿಗೆರೆ ಇವರುಗಳು ಪಡೆದಿರುತ್ತಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಶ‍್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಕುಮಾರಿ ಶ್ರೀರಕ್ಷಾ ಕಳೆದ ತಿಂಗಳು ನವೆಂಬರ್ ನಲ್ಲಿ ನಡೆದ "ತರಳಬಾಳು ನುಡಿ" ಹಬ್ಬದ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ, ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.