ಪರಿಶುಭ್ರತೆಯ ರಾಜಕಾರಣದ ಹಿರಿಯ ಕೊಂಡಿ ಕಳಚಿದೆ: ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣಾ ನಿಧನಕ್ಕೆ ಶ್ರೀ ತರಳಬಾಳು ಜಗದ್ಗುರುಗಳವರ ಸಂತಾಪ

ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮಂಗಳವಾರ ಮುಂಜಾನೆ ನಿಧನವಾಗಿರುವುದು ನಾಡಿನ ಹಿರಿಯ ರಾಜಕೀಯ ಮುತ್ಸದ್ದಿಗಳ ಪರಂಪರೆಯ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಳೆದ 6 ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷ ತುಂಬು ಜೀವನ ನಡೆಸಿ ಇಂದು ಇಹಲೋಕ ತ್ಯಜಿಸಿರುವ ಎಸ್ ಎಂ ಕೃಷ್ಣ ರವರು ಎಂದೂ ಸಂಯಮದ ಗೆರೆ ದಾಟಿದವರಲ್ಲ, ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ತಲೆದೋರಿದೆ ಕಾವೇರಿ ಚಳುವಳಿ, ಡಾ.ರಾಜ್ ಕುಮಾರ್ ಅಪಹರಣ ಪ್ರಕರಣ, ಬರಗಾಲದ ಬಿಸಿ ಇಂತಹ ಕಠಿಣ ಸಂದರ್ಭದಲ್ಲಿಯೂ ವಿರೋಧ ಪಕ್ಷದ ಬೋರ್ಗೆರೆಯುವ ಟೀಕೆ ಟಿಪ್ಪಣಿಗಳನ್ನು ಸಮ ಚಿತ್ತದಿಂದ ಎದುರಿಸಿ ಸಮಸ್ಯೆಗಳನ್ನು ಪರಿಹರಿಸಿದವರು, ಅವರ ಪ್ರತಿ ಮಾತಿನ ಹಿಂದೆ ಅಧ್ಯಯನ ಶೀಲತೆ ವ್ಯಕ್ತವಾಗುತ್ತಿತ್ತು. ಮುಖ್ಯಮಂತ್ರಿ, ವಿದೇಶಾಂಗ ಸಚಿವ, ರಾಜ್ಯಪಾಲರಂತ ಹುದ್ದೆಗಳಲ್ಲಿ ಕಳಂಕ ರಹಿತವಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದವರು. ಇಂದಿನ ತಲೆಮಾರಿನ ರಾಜಕೀಯ ಧುರೀಣರಿಗೆ ಅವರ ರಾಜಕೀಯ ಜೀವನ ತೆರೆದಿಟ್ಟ ಪುಸ್ತಕ ವಿದ್ದಂತೆ.ಬೆಂಗಳೂರಿನ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದ ಎಸ್.ಎಂ.ಕೃಷ್ಣ ಅವರಿಂದಲೇ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಸಿಲಿಕಾನ್ ಸಿಟಿ, ಐಟಿ- ಬಿಟಿ ಸಿಟಿ ಎಂಬ ಹೆಸರು ಬಂದಿತ್ತು.
ನಮ್ಮ ಮಠದೊಂದಿಗೆ ದೀರ್ಘಕಾಲದಿಂದಲೂ ಅತ್ಯಂತ ಭಕ್ತಿ ಗೌರವ ಹೊಂದಿದ್ದ ಕೃಷ್ಣಾರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಿರಂತರವಾಗಿ ಮಾರ್ಗದರ್ಶನ ಪಡೆಯುತ್ತಿದ್ದರು. ಮಠದ ವಾರ್ಷಿಕ ಕಾರ್ಯಕ್ರಮವಾದ ತರಳಬಾಳು ಹುಣ್ಣಿಮೆ ಮಹೋತ್ಸವಗಳಲ್ಲಿ ಪಾಲ್ಗೊಂಡಿದ್ದರು. ಅರಸೀಕೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಿಗದಿಯಾದಗ, ಗುಜಾರಾತ್ ನಲ್ಲಿ ಭೂಕಂಪದಿಂದ ಅನಾಹುತ ಸಂಭವಿಸಿತ್ತು.ಪರಂಪರೆಯಂತೆ 9 ದಿನಗಳು ನಡೆಯಬೇಕಿದ್ದ ಅರಸೀಕೆರೆ ಹುಣ್ಣಿಮೆಯನ್ನು ಗುಜಾರಾತ್ನಲ್ಲಿ ಭೂಕಂಪದ ನೋವಿಗೆ ಮಿಡಿಯುವ ಕಾರ್ಯಕ್ರಮವನ್ನಾಗಿ ರೂಪಿಸಿ ಮಹೋತ್ಸವದ ಕೊನೆಯ ದಿನ ಪಲ್ಲಕ್ಕಿ ಉತ್ಸವವನ್ನು ರದ್ದುಗೊಳಿಸಿ, ನಾವು ಉತ್ಸವದ ಬದಲಾಗಿ ಅರಸೀಕೆರೆಯ ಬೀದಿಗಳಲ್ಲಿ ಸಂಚರಿಸಿ ಹಣ ಸಂಗ್ರಹಿಸಿ ಸಂತ್ರಸ್ತರಿಗೆ ಕಳುಹಿಸಿದಾಗ ಅವರು ಸಹ ಅಂದಿನ ದಿನದ ರಾತ್ರಿ ಕಾರ್ಯಕ್ರಮದಲ್ಲಿ ಅವರು ತಮ್ಮ ಧರ್ಮ ಪತ್ನಿ ಶ್ರೀಮತಿ ಪ್ರೇಮಾರವರೊಂದಿಗೆ ಭಾಗವಹಿಸಿ ಮಠದ ಸಾಮಾಜಿಕ ಕಳಕಳಿಯನ್ನು ಪ್ರತ್ಯಕ್ಷವಾಗಿ ಕಂಡಂತಾಯಿತು ಎಂದು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನಮ್ಮ ಸಂಕಲ್ಪದಂತೆ ಹೊನವಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲು ನೆರವಾಗಿದ್ದರು. ಒಮ್ಮೆ ಅವರು ಯಾತ್ರೆಯ ಸಂದರ್ಭದಲ್ಲಿ ಮಠಕ್ಕೆ ಆಶೀರ್ವಾದಕ್ಕೆ ಆಗಮಿಸುವುದಾಗಿ ಬಯಕೆ ವ್ಯಕ್ತಪಡಿಸಿದಾಗ ಅದೇ ಸಮಯದಲ್ಲಿ ಪೂರ್ವ ನಿಗದಿಯಂತೆ ನಾವು ವಿದೇಶದಲ್ಲಿರುವುದಾಗಿ ತಿಳಿಸಿದರೂ ಸಹ ಸಾವಿರಾರು ಸಂಖ್ಯೆಯಲ್ಲಿ ಜನರೊಂದಿಗೆ ಆಗಮಿಸಿ ನಮ್ಮ ಅನುಪಸ್ಥಿತಿಯಲ್ಲಿ ಲಿಂಗೈಕ್ಯ ಗುರುವರ್ಯರ ಗದ್ದುಗೆಗೆ ಆಗಮಿಸಿ ಭಕ್ತಿ ಗೌರವ ಸಮರ್ಪಿಸಿದ್ದು ಅವರು ಮಠದ ಮೇಲೆ ಇಟ್ಟಿದ್ದ ಪೂಜ್ಯ ಭಾವನೆಯನ್ನು ಅನಾವರಣಗೊಳಿಸಿತ್ತು.
ರಾಜಕಾರಣದಲ್ಲಿ ಅತ್ಯಂತ ಶಾಂತ ಸ್ವಭಾವದ, ಸಜ್ಜನ, ಕೃಷ್ಣ ಪರಿಶುಭ್ರತೆಗೆ ಮಾದರಿಯಾದವರು. ವಿಶ್ವಬಂಧು ಮರುಳಸಿದ್ಧ, ಬಸವಾದಿ ಶರಣರು ,ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.