ಸಜ್ಜನಿಕೆಯ ಗೌರವರ್ಣದ ಎಸ್.ಎಂ.ಕೃಷ್ಣ ನೆನಪು

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಾರಿನಲ್ಲೋ ಬಸ್ಸು-ರೈಲಿನಲ್ಲೋ ಪಯಣಿಸುವಾಗ ಅನೇಕ ಗಿಡಮರಗಳು, ಸುಂದರವಾದ ಗುಡ್ಡಬೆಟ್ಟಗಳು ಕಾಣಿಸಿದರೆ ವಿಮಾನಯಾನದಲ್ಲಿ ಮೇಲಿನಿಂದ ನೋಡುವಾಗ ಬಳುಕುತ್ತಾ ಹರಿಯುವ ನದಿಗಳು, ಇರುವೆಗಳ ಸಾಲಿನಂತೆ ಸಾಗುವ ವಾಹನಗಳು, ಮಕ್ಕಳು ಜೋಡಿಸಿಟ್ಚ ಆಟಿಕೆಗಳಂತೆ ಕಟ್ಟಡಗಳು, ಗೂಗಲ್ ಮ್ಯಾಪ್ ನಂತೆ ನಗರ ಪ್ರದೇಶಗಳು ಕಾಣಿಸುತ್ತವೆ. ಆದರೆ ಅವಾವೂ ನೆನಪಿನಲ್ಲಿ ಉಳಿಯುವುದಿಲ್ಲ. ಪ್ರಯಾಣಿಸುವ ವಾಹನದ ಹೊರಗೆ ಕಾಣಿಸುವ ಜನರಾಗಲೀ, ಗಂಟೆಗಟ್ಟಲೆ ಅಕ್ಕಪಕ್ಕದಲ್ಲಿ ಕುಳಿತು ಪ್ರಯಾಣಿಸುವ ಸಹಪ್ರಯಾಣಿಕರಾಗಲೀ, ಪ್ರಯಾಣ ಮುಗಿದ ಮೇಲೆ ಯಾರ ನೆನಪೂ ಇರುವುದಿಲ್ಲ. ಆಗಸದಲ್ಲಿ ತೇಲುವ ಮೋಡಗಳನ್ನು ನೋಡಿದರೂ ಮನಸ್ಸೆಂಬ ಐಕ್ಲೌಡ್ (iCloud) ನಲ್ಲಿ ಅವು ಶಾಶ್ವತವಾಗಿ ದಾಖಲಾಗುವುದಿಲ್ಲ. ವಿಮಾನಗಳಲ್ಲಿ ಪ್ರಯಾಣಿಸುವಾಗಲಂತೂ ಅಕ್ಕಪಕ್ಕದಲ್ಲಿ ಕುಳಿತವರು ಸ್ಥಾನಮಾನದ ಬಿಗುಮಾನದಿಂದಲೋ ಏನೋ ಅನೇಕರು ತುಟಿಪಿಟಿಕ್ ಎನ್ನದೆ ಬಾಯಿಗೆ ಬೀಗ ಹಾಕಿದವರಂತೆ ಕುಳಿತುಕೊಂಡಿರುತ್ತಾರೆ. ಈ ಹಿಂದೆ ರೈಲು-ಬಸ್ಸುಗಳಲ್ಲಿ ಕುಳಿತು ಗಂಟೆಗಟ್ಟಲೆ ಪ್ರಯಾಣಿಸುವವರು ಪರಸ್ಪರ ಸಂಭಾಷಣೆಯಲ್ಲಿ ತೊಡಗಿ ಪ್ರಯಾಣ ಮುಗಿಯುವ ವೇಳೆಗೆ ಕೆಲವೊಮ್ಮೆ ಹತ್ತಿರದ ಬಂಧುಗಳೇ ಆಗಿಬಿಡುತ್ತಿದ್ದರು. ಈಗೀಗಲಂತೂ ಮೊಬೈಲ್ ಬಂದ ಮೇಲೆ ಎಲ್ಲರ ಕಣ್ಣು ಕಿಟಕಿಯಾಚೆ ನೋಡದೆ ಕೈಯಲ್ಲಿರುವ ಮೊಬೈಲ್ ಮೇಲೆಯೇ “ಅನಿಮಿಷ” ದೃಷ್ಟಿ ನೆಟ್ಟು ಪಕ್ಕದವರನ್ನು ಕಣ್ಣೆತ್ತಿಯೂ ಸಹ ನೋಡದಂತಾಗಿದೆ. ಇದನ್ನು “ದೃಷ್ಟಿಯೋಗ” ಎನ್ನಬೇಕೋ “ಶಿವಯೋಗ” ಎನ್ನಬೇಕೋ ದೇವರೇ ಬಲ್ಲ! ಜನರ ಕೈಯಲ್ಲಿರುವ ಮೊಬೈಲ್ ಹಾಲು ಕೊಡುವ ಹಸುವಿನ ಕೆಚ್ಚಲಿದ್ದಂತೆ. ಆದರೆ ಜನರು ಕೆಚ್ಚಲಿಗೆ ಅಂಟಿಕೊಂಡಿರುವ ಉಣ್ಣೆಯಂತಾಗಿದ್ದಾರೆ! “ಉಣ್ಣೆ ಕೆಚ್ಚಲೊಳಗಿರ್ದು ಉಣ್ಣದದು ನೊರೆವಾಲು” ಎಂದು ಸರ್ವಜ್ಞ ಹೇಳುವಂತೆ ಹಾಲನ್ನು ಕುಡಿಯುವ ಬದಲು ರಕ್ತವನ್ನು ಹೀರುವ ಮನಃಸ್ಥಿತಿ ಜನರದಾಗಿದೆ.
ಕೆಲವೊಮ್ಮೆ ಪ್ರಯಾಣಿಸುವ ವಾಹನ ಡಿಕ್ಕಿ ಹೊಡೆದು ಯಾರಿಗಾದರೂ ಅಪಘಾತ ಉಂಟಾದರೆ ಆ ದುರ್ಘಟನೆ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ. ತನಗೇ ಅಪಘಾತವಾಗಿ ಕೈಕಾಲು ಮೂಳೆ ಮುರಿದರೆ ಜೀವನದುದ್ದಕ್ಕೂ ನರಳುತ್ತಾ ಪರಿತಪಿಸಬೇಕಾಗುತ್ತದೆ. ಅನಾಯಾಸವಾಗಿ ಪ್ರಯಾಣಿಸುವಾಗ ಯಾರಾದರೂ ಆತ್ಮೀಯ ಸ್ನೇಹಿತರು ಅಪರೂಪಕ್ಕೆ ಸಿಕ್ಕರೆ “ಯುಗಾದಿ ಚಂದ್ರ”ನನ್ನು ನೋಡಿದಂತಾಯಿತು ಎಂದು ಖುಷಿಪಡುತ್ತಾರೆ. ಪ್ರಯಾಣದ ವೇಳೆ ಆಕಸ್ಮಿಕವಾಗಿ ಭೇಟಿಯಾದ ಸ್ನೇಹಿತರ ಮಿಲನವನ್ನು ಆ ಖುಷಿಯ ಕ್ಷಣಗಳಲ್ಲಿ ಮೊಬೈಲ್ ನಲ್ಲಿ ಕ್ಲಿಕ್ಕಿಸಿಕೊಳ್ಳಲು ಮರೆತರೂ ಮನಸ್ಸೆಂಬ ಮೊಬೈಲ್ ತಕ್ಷಣವೇ ಕ್ಲಿಕ್ಕಿಸಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ನಡೆಸಿದ ಮಾತುಕತೆಯನ್ನೂ ಸಹ ಮನಸ್ಸೆಂಬ ಮೊಬೈಲ್ ತಕ್ಷಣವೇ ವೀಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತದೆ. ನಿಮ್ಮ ಕೈಯಲ್ಲಿರುವ ಮೊಬೈಲ್ ನಲ್ಲಿ ಫೋಟೋಗಳನ್ನು, ವೀಡಿಯೋಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಇಂತಿಷ್ಟೇ ಗಿಗಾಬೈಟ್ ಎಂದು ನಿರ್ದಿಷ್ಟ ಪ್ರಮಾಣದ ಜಾಗ ಇರುತ್ತದೆ. ಅದಕ್ಕಿಂತ ಹೆಚ್ಚು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಮನಸ್ಸೆಂಬ ಮೊಬೈಲಿಗೆ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಲು ಯಾವ ಮಿತಿಯೂ ಇಲ್ಲ. ಅದರಲ್ಲಿರುವುದು ಅಗಾಧವಾದ, ಅನಿರ್ದಿಷ್ಟವಾದ ಸ್ಥಳಾವಕಾಶ (unlimited space). ಮನುಷ್ಯನ ಮೆದುಳು ದತ್ತಾಂಶವನ್ನು (Data) ಸಂಗ್ರಹಿಸಿಡಬಲ್ಲ ಕಂಪ್ಯೂಟರಿನ CPU ಇದ್ದಂತೆ. ಆದರಲ್ಲಿ ಯಾವುದನ್ನು ನೆನಪಿಟ್ಟುಕೊಳ್ಳಬೇಕು, ಯಾವುದನ್ನು ಅಳಿಸಿಹಾಕಬೇಕು ಎಂಬ ವಿವೇಕ ಮಾತ್ರ ಮನುಷ್ಯನಿಗಿರಬೇಕು. ಕೆಲವೊಮ್ಮೆ ಬಹಳ ವರ್ಷಗಳ ನಂತರ ಕೆಲವು ಒಳ್ಳೆಯ ಸಂಗತಿಗಳೂ ತಕ್ಷಣವೇ ನೆನಪಿಗೆ ಬರುವುದಿಲ್ಲ. ಕಂಪ್ಯೂಟರ್ನಲ್ಲಿ ಒಮ್ಮೆ delete ಆದ ಫೈಲ್ ಗಳನ್ನು Recycle Bin ನಿಂದ ಪುನಃ recover ಮಾಡಿಕೊಳ್ಳಲು ಬರುವಂತೆ ಮರೆತು ಹೋದ ಘಟನೆಗಳು ಇದ್ದಕ್ಕಿದ್ದಂತೆಯೇ ಯಾವುದೋ ಪ್ರಸಂಗದಲ್ಲಿ ನೆನಪಾಗುತ್ತವೆ.
ಬಹಳ ವರ್ಷಗಳ ಹಿಂದೆ ನಡೆದ ಅಂತಹ ಎರಡು ಸ್ಮರಣೀಯ ಘಟನೆಗಳು ನಿನ್ನೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ವಾರ್ತೆ ಕೇಳಿದಾಗ ಇದ್ದಕ್ಕಿದ್ದಂತೆಯೇ ನೆನಪಾದವು. ಮೊದಲನೆಯದು ರಾಜ್ಯದ ಒಂದು ಪ್ರಸಿದ್ಧ ದಿನಪತ್ರಿಕೆಯ ದಾವಣಗೆರೆ ಆವೃತ್ತಿಯ ಉದ್ಘಾಟನಾ ಸಮಾರಂಭವಿತ್ತು. ನಮ್ಮ ಲಿಂಗೈಕ್ಯ ಗುರುಗಳ ಕಾಲದಲ್ಲಿ ನಮ್ಮ ಮಠದ ವಕೀಲರಾಗಿದ್ದ ಆಗಿನ ಕಾನೂನು ಸಚಿವರಾದ ಹಾರನಹಳ್ಳಿ ರಾಮಸ್ವಾಮಿಯವರು ಸ್ವತಃ ಸಿರಿಗೆರೆಗೆ ಬಂದು ನಮ್ಮನ್ನು ಆಹ್ವಾನಿಸಿದ್ದರು. ಕಾರ್ಯಕ್ರಮದ ನಿರ್ವಾಹಕರು “ಈಗ ಸನ್ಮಾನ್ಯ ಮುಖ್ಯಮಂತ್ರಿಗಳು ದೀಪ ಬೆಳಗಿಸುವುದರ ಮೂಲಕ ಸಮಾರಂಭದ ಉದ್ಘಾಟನೆಯನ್ನು ಮಾಡುತ್ತಾರೆ” ಎಂದು ಪ್ರಕಟಿಸಿದಾಗ ನಮ್ಮನ್ನೂ ಒಳಗೊಂಡಂತೆ ವೇದಿಕೆಯ ಮೇಲಿದ್ದ ಎಲ್ಲ ಗಣ್ಯವ್ಯಕ್ತಿಗಳೂ ಎದ್ದು ಹೋಗಿ ದೀಪದ ಸುತ್ತ ನಿಂತೆವು. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮೊದಲು ದೀಪ ಹಚ್ಚದೆ ಕಾರ್ಯಕರ್ತರು ಅವರ ಕೈಗೆ ಕೊಟ್ಟ ಮುಂಬತ್ತಿಯನ್ನು ಸೌಜನ್ಯದಿಂದ ಪಕ್ಕದಲ್ಲಿದ್ದ ನಮ್ಮ ಕೈಗೆ ಕೊಡಲು ಮುಂದಾದರು. “ಉದ್ಘಾಟಕರು ನೀವು, ನೀವೇ ಮೊದಲು ದೀಪ ಹಚ್ಚಿ” ಎಂದರೂ ನಮ್ಮನ್ನು ಒತ್ತಾಯಪಡಿಸಿದರು. ಬಹಳ ವರ್ಷಗಳ ಹಿಂದೆ ಭಾರತದ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ದಿವಂಗತ ಅಧ್ಯಕ್ಷ ಭುಟ್ಟೋರವರು ಕಾಶ್ಮೀರದ ಯಾವುದೋ ಸಭೆಯಲ್ಲಿ “ಪಹಲೇ ಆಪ್, ಪಹಲೇ ಆಪ್” ಎಂದು ಒತ್ತಾಯಿಸಿದ ಸನ್ನಿವೇಶ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ನೆನಪಾಯಿತು. ನಾವೂ ಸಹ ಅಷ್ಟೇ ಸೌಜನ್ಯದಿಂದ ನಮ್ಮ ಪಕ್ಕದಲ್ಲಿದ್ದ ಮತ್ತೊಂದು ಪ್ರತಿಷ್ಠಿತ ಮಠದ ಸ್ವಾಮಿಗಳಿಗೆ ಮೊದಲು ದೀಪ ಹಚ್ಚಲು ಹೇಳಿದರೂ ಅವರು ನಿರಾಕರಿಸಿದ ಕಾರಣ ಅನಿವಾರ್ಯವಾಗಿ ನಾವೇ ಹಚ್ಚಬೇಕಾಯಿತು.
ಆ ಸ್ವಾಮಿಗಳ ಸೌಜನ್ಯಕ್ಕೆ ಮನಸೋತು ನಂತರ ಅವರಿಗೆ ದೀಪ ಹಚ್ಚಲು ಮುಂಬತ್ತಿ ಕೊಟ್ಟಾಗ ಮತ್ತೆ ಅವರು ಸ್ಪಷ್ಟವಾಗಿ ನಿರಾಕರಿಸಿದರು. ವೇದಿಕೆಯಲ್ಲಿ ಕುಳಿತುಕೊಂಡ ಮೇಲೆ ಏಕೆ ನಿರಾಕರಿಸಿದಿರೆಂದು ಕೇಳಿದಾಗ “ಬಡವರ ಗುಡಿಸಲಿನಲ್ಲಿ ರಾತ್ರಿ ಒಂದು ಹೊತ್ತು ಲಾಟೀನು ಉರಿಸಲೂ ಎಣ್ಣೆ ಇಲ್ಲದಿರುವಾಗ ಈ ರೀತಿ ಸಭೆ ಸಮಾರಂಭಗಳಲ್ಲಿ, ದೀಪಾವಳಿ, ಕಾರ್ತೀಕ ಮತ್ತಿತರ ಹಬ್ಬ ಹರಿದಿನಗಳಲ್ಲಿ ದೀಪ ಹಚ್ಚಲು ಎಣ್ಣೆ ಬಳಸುವುದು ದುರುಪಯೋಗ!” ಎಂದು ಅವರು ಹೇಳಿದರು. ಸ್ವಾಮಿಗಳಿಗೆ ಬಡವರ ಬಗ್ಗೆ ಇರುವ ಕಾಳಜಿ ಮೆಚ್ಚಬೇಕಾದ್ದೇ. ಆದರೆ ಎಂತಹ ಕಡುಬಡವನಾದರೂ ತಲೆಗೆ ಹಚ್ಚಲು ಎಣ್ಣೆ ಇಲ್ಲದಿದ್ದರೂ ದೇವರಿಗೆ ದೀಪ ಹಚ್ಚದಿರುವಷ್ಟು ಭಕ್ತಿಯ ಬಡತನ ನಮ್ಮ ದೇಶದಲ್ಲಿ ಯಾವ ಬಡವನಿಗೂ ಇಲ್ಲ. “ಸ್ವಾಮಿಗಳಾದವರೇ ದೀಪ ಹಚ್ಚುವುದಿಲ್ಲವೆಂದರೆ ರಾಜಕಾರಣಿಗಳು ಈ ದೇಶದಲ್ಲಿ ಬೆಂಕಿ ಹಚ್ಚುತ್ತಾರೆ” ಎಂದು ನಮ್ಮ ಭಾಷಣದಲ್ಲಿ ಕಟುವಾಗಿ ಹೇಳಬೇಕಾಯಿತು. ಸಭಿಕರ ಕರತಾಡನದ ಮಧ್ಯೆ ಕೃಷ್ಣರವರು ನಮ್ಮತ್ತ ನಗೆ ಬೀರಿದರು. ಅನೇಕ ಬಾರಿ ನಮ್ಮನ್ನು ಭೇಟಿಯಾದಾಗಲೆಲ್ಲಾ ಅವರ ಕಿವಿಗಳು ನಮಗೆ ಶ್ರವಣ ಬೆಳಗೊಳದ ಗೊಮ್ಮಟೇಶ್ವರ ಕಿವಿಗಳಂತೆ ಕಾಣಿಸುತ್ತಿದ್ದವು! ಅವರ ಮುಖದಲ್ಲಿ ಸದಾ ಮಂದಹಾಸ. ಕರ್ನಾಟಕದಲ್ಲಿ ಅವರಂತೆ ಇಂಗ್ಲೀಷ್ ಮಾತನಾಡಬಲ್ಲ ಮತ್ತೊಬ್ಬ ರಾಜಕಾರಣಿಯನ್ನು ನಾವು ನೋಡಿಲ್ಲ.
ಇನ್ನು ಎರಡನೆಯ ಪ್ರಸಂಗ. ನಮ್ಮ ಮಠದ ವಾರ್ಷಿಕ ಸಮಾರಂಭವಾದ ಸರ್ವಜನಾಂಗದ ಶಾಂತಿಯ ತೋಟವೆಂದೇ ಪ್ರಖ್ಯಾತಿಯನ್ನು ಪಡೆದ 9 ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವ 2003 ಫೆಬ್ರವರಿ ತಿಂಗಳು ಚಿಕ್ಕಮಗಳೂರಿನಲ್ಲಿ ಏರ್ಪಾಡಾಗಿತ್ತು. ಕೊನೆಯ ದಿನವಾದ ಹುಣ್ಣಿಮೆಯಂದು ಸಭೆಯಲ್ಲಿ ಸಹಸ್ರಾರು ಜನರು ಕಿಕ್ಕಿರಿದು ಸೇರಿದ್ದರು. ಸಾಂಪ್ರದಾಯಿಕವಾಗಿ ವರ್ಷಕ್ಕೊಮ್ಮೆ ಬೆಳ್ಳಿ ಸಿಂಹಾಸನದ ಮೇಲೆ ನಾವು ಕುಳಿತಿದ್ದು ನಮ್ಮ ಪಕ್ಕದಲ್ಲಿಯೇ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರು ಕುಳಿತಿದ್ದರು.
ಆಗ ಚಿಕ್ಕಮಗಳೂರಿನಲ್ಲಿ ಬಾಬಾಬುಡನ್ ಗಿರಿ ದತ್ತಪೀಠದ ಹೋರಾಟದ ಕಾವು ಏರಿತ್ತು. ಕೋಮು ಗಲಭೆ ಉಂಟಾಗುವ ಆತಂಕ ಪರಿಸ್ಥಿತಿಯ ಕಾರ್ಗತ್ತಲು ಕವಿದಿತ್ತು. ಸಂಪ್ರದಾಯಕ್ಕೆ ವಿರುದ್ಧವಾಗಿ ಬೆಳ್ಳಿಸಿಂಹಾಸನದಿಂದ ಕೆಳಗಿಳಿದು ನಿಂತು ಪಕ್ಕದಲ್ಲಿದ್ದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಕೈಗೆ ಮುಂಬತ್ತಿಯನ್ನು ಕೊಟ್ಟು, ಸಭೆಯಲ್ಲಿ ಕಿಕ್ಕಿರಿದು ಸೇರಿದ್ದ ಸಹಸ್ರಾರು ಜನರ ಕೈಯಲ್ಲಿ ಮುಂಬತ್ತಿಗಳನ್ನು ಕಾರ್ಯಕರ್ತರಿಂದ ಕೊಡಿಸಿ ಬೆಳಗಿಸಿ ಕೋಮು ಸೌಹಾರ್ದತೆ ಮತ್ತು ಸಾಮರಸ್ಯ ಮೂಡಿಸುವ ಪ್ರತಿಜ್ಞಾವಿಧಿಯನ್ನು ಬೋಧಿಸಿದ ದೃಶ್ಯ ಇನ್ನೂ ಜನರ ಕಣ್ಮುಂದೆ ರಾರಾಜಿಸುತ್ತಿದೆ. ಆ ವರ್ಷ ಯಾವ ಅಹಿತಕರ ಘಟನೆಯೂ ನಡೆಯಲಿಲ್ಲವೆಂದು ಚಿಕ್ಕಮಗಳೂರು ಜನತೆ ಈಗಲೂ ಸಂಸ್ಮರಿಸುತ್ತಿದೆ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.12-12-2024.