ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಫ್ಲೆಕ್ಸ್ ಅಥವಾ ಬ್ಯಾನರ್ ಹಾಕುವುದನ್ನು ನಿಷೇಧಿಸಿದೆ

ಭರಮಸಾಗರದಲ್ಲಿ ಬರುವ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ಅಭಿಮಾನದಿಂದ ದಾರಿ ಬೀದಿಗಳಲ್ಲಿ ಯಾವುದೇ ಫ್ಲೆಕ್ಸ್ ಅಥವಾ ಬ್ಯಾನರ್ ಹಾಕುವುದನ್ನು ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರು ನಿಷೇಧಿಸಿರುತ್ತಾರೆ. ಖುಷಿಯಿಂದ ಪಟಾಕಿ ಹೊಡೆಯುವುದನ್ನು ಸಹ ವಾಯು ಮಾಲಿನ್ಯದ ಕಾರಣ ನಿಷೇಧಿಸಿದ್ದಾರೆ.
ಎಷ್ಟೋ ವೇಳೆ ರಾಜ್ಯದಲ್ಲಿ ಅನೇಕ ಕಡೆ ಈ ಫ್ಲೆಕ್ಸ್ ಮತ್ತು ಬ್ಯಾನರ್ ಗಳು ಸಮಾಜದಲ್ಲಿ ಸಂಘರ್ಷ ಮತ್ತು ಕೋಲಾಹಲಕ್ಕೂ ಕಾರಣವಾಗಿವೆ. ಆದಕಾರಣ ಕೆಲವಾರು ವರ್ಷಗಳಿಂದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ಫ್ಲೆಕ್ಸ್ ಬ್ಯಾನರ್ ಬಳಸಲು ಅವಕಾಶ ಕೊಡದೆ ಅನುಸರಿಸಿಕೊಂಡು ಬಂದಿರುವ ಈ ನಿಯಮವನ್ನು ಭಕ್ತಾದಿಗಳು ಯಾರೂ ಉಲ್ಲಂಘಿಸಬಾರದಾಗಿ ಸೂಚಿಸಿದೆ.
ಕರ್ನಾಟಕದ ಉಚ್ಚ ನ್ಯಾಯಾಲಯವೂ ಸಹ ಈ ಫ್ಲೆಕ್ಸ್ ಬ್ಯಾನರ್ ಹಾವಳಿಯನ್ನು ನಿಷೇಧಿಸಿದೆ. ಆದರೂ ಜನರು ನ್ಯಾಯಾಲಯದ ಆದೇಶವನ್ನು ಕಡೆಗಣಿಸಿದ್ದಾರೆ. ಆದರೆ ನಮ್ಮ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನ್ಯಾಯಾಲಯದ ಆದೇಶವನ್ನು ತಪ್ಪದೆ ಪಾಲಿಸಿಕೊಂಡು ಬರಲಾಗಿದ್ದು ಇದಕ್ಕಾಗಿ ಲಕ್ಷಾಂತರ ರೂ. ಹಣದ ಅಪವ್ಯಯವನ್ನು ಮಾಡದೆ ಅದನ್ನೇ ಸತ್ಕಾರ್ಯಕ್ಕೆ ಬಳಸಬೇಕಾಗಿ ಪರಮಪೂಜ್ಯರು ನಿರ್ದೇಶಿಸಿರುತ್ತಾರೆ.
ಕಾರ್ಯದರ್ಶಿ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ