ಪ್ರೇಮದ ಭರವಸೆಯೇ ಬಾಳಿನ ಬೆಳಕು
ಕಳೆದ ವಾರ ಮುಂಬಯಿಗೆ ಹೊರಡುವ ಹಿಂದಿನ ಸಂಜೆ ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ನಮ್ಮ ತರಳಬಾಳು ಕೇಂದ್ರವನ್ನು ತಲುಪಿದಾಗ ಕೆಲವೇ ತಿಂಗಳಲ್ಲಿ ಹಸೆಮಣೆ ಏರಲಿರುವ ಎರಡು ಜೋಡಿ ನವ ವಧೂ-ವರರು ನಮ್ಮ ದರ್ಶನಾಶೀರ್ವಾದಕ್ಕೆಂದು ಕಾದಿದ್ದರು. ಇಬ್ಬರೂ ನವ ವಧುಗಳು ಡಾಕ್ಟರುಗಳಾದರೆ ಅವರನ್ನು ಬಾಳಸಂಗಾತಿಗಳಾಗಿ ವರಿಸಿದವರು ಎಂಜಿನಿಯರುಗಳು. ಆ ಇಬ್ಬರು ವರರಲ್ಲಿ ಒಬ್ಬರು ಸಾಫ್ಟ್ ವೇರ್ ಕಂ ಸಿನೆಮಾ ನಟರು. ಅವರೇ ಕನ್ನಡದ ಸುಪ್ರಸಿದ್ಧ ನಟ ಡಾಲಿ ಧನಂಜಯ! ಅವರ ಪರಿಚಯ ನಮಗೆ ಇರಲಿಲ್ಲ. ಅವರು ಸ್ಯಾಂಡಲ್ ವುಡ್ ಸಿನಿಮಾ ನಟರೆಂದು ನಮ್ಮ ಕಾರ್ಯದರ್ಶಿ ವಿಶ್ವನಾಥ್ ಪರಿಚಯಿಸಿದರು. ಅದುವರೆಗೆ “ಸ್ಯಾಂಡಲ್ ವುಡ್” ಎಂದರೆ ಶ್ರೀಗಂಧದ ಮರ ಎಂದಷ್ಟೇ ಗೊತ್ತಿದ್ದ ನಮಗೆ “ಸ್ಯಾಂಡಲ್ ವುಡ್ ನಟ”ರೆಂದರೆ ಏನೆಂದು ಗೊತ್ತೇ ಇರಲಿಲ್ಲ. ನೇರವಾಗಿ ಡಾಲಿ ಧನಂಜಯರನ್ನೇ ಕೇಳಿಬಿಟ್ಟೆವು. ಇಂಗ್ಲಿಷ್/ಹಿಂದಿ ಸಿನಿಮಾ ನಟ-ನಟಿಯರನ್ನು ಹಾಲಿವುಡ್, ಬಾಲಿವುಡ್ ಎಂದು ಕರೆದಂತೆ ಕನ್ನಡದ ಸಿನಿಮಾಗಳಲ್ಲಿ ನಟಿಸುವವರನ್ನು ಸ್ಯಾಂಡಲ್ ವುಡ್ ನಟ-ನಟಿಯರೆಂದು ಕರೆಯುತ್ತಾರೆಂದು ಗೊತ್ತಾಗಿದ್ದೇ ಅವರಿಂದ. ನಮ್ಮ ಸುತ್ತ ಇದ್ದ ಮಠದ ಶಾಲಾಮಕ್ಕಳು ನಮ್ಮತ್ತ ನೋಡಿ ಬಾಯಿ ಮುಚ್ಚಿಕೊಂಡು ಮುಸುಮುಸು ನಗುವುದನ್ನು ನೋಡಿ ಸಿನಿಮಾ ನಟ-ನಟಿಯರ ಬಗ್ಗೆ ನಮಗಿರುವ ಅಜ್ಞಾನ ಮರುಕವನ್ನುಂಟು ಮಾಡಿತು. ಅಷ್ಟೇ ಅಲ್ಲ, ಶಾಲೆಯ ಪಠ್ಯಪುಸ್ತಕಗಳಲ್ಲಿ ಇಲ್ಲದ ಮತ್ತು ಯಾವ ಅಧ್ಯಾಪಕರೂ ತರಗತಿಗಳಲ್ಲಿ ಬೋಧಿಸದೇ ಇರುವ ಸಿನಿಮಾ ನಟ-ನಟಿಯರ ವಿಚಾರ ಈ ಮಕ್ಕಳಿಗೆ ಹೇಗೆ ಗೊತ್ತು ಎಂದು ಆಶ್ಚರ್ಯವನ್ನೂ ಉಂಟು ಮಾಡಿತು. ಗುರು ದ್ರೋಣಾಚಾರ್ಯರ ಪ್ರತಿಮೆಯನ್ನೇ ಮುಂದಿಟ್ಟುಕೊಂಡು ಬಿಲ್ಲುವಿದ್ಯೆಯಲ್ಲಿ ಅರ್ಜುನನನ್ನೂ ಮೀರಿಸಿದ ಅಪ್ರತಿಮ ವೀರನಾದ ಮಹಾಭಾರತದ ಏಕಲವ್ಯನ ಕಥಾಪ್ರಸಂಗ ನೆನಪಾಯಿತು. ಆಧುನಿಕ ಭಾರತದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಸಿನಿಮಾ ನಟ-ನಟಿಯರನ್ನೇ ಪ್ರತಿಮಾ ಪುರುಷರನ್ನಾಗಿ ಮಾಡಿಕೊಂಡು ತಮ್ಮ ವಾಸದ ಕೊಠಡಿಯ ಗೋಡೆಗಳ ಮೇಲೆ ಅವರ ಆಕರ್ಷಕ ಹಾವಭಾವದ ಚಿತ್ರಗಳನ್ನು ಅಂಟಿಸಿಕೊಂಡು ಕನಸಿನ ಲೋಕದಲ್ಲಿ ವಿಹರಿಸುವ “ಏಕLoveವ್ಯರು” ಇವರು ಎನಿಸಿತು! ಇವರಿಗೆ ಸಿನಿಮಾ ನಟ-ನಟಿಯರನ್ನು ಕುರಿತಂತೆ ಪರೀಕ್ಷೆಯಲ್ಲಿ ಹತ್ತು ಪ್ರಶ್ನೆಗಳನ್ನು ಕೊಟ್ಟು ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರ ಬರೆಯಿರಿ ಎಂದು ಕೇಳಿದರೆ ಒಂದೇ ಗಂಟೆಯಲ್ಲಿ ಹತ್ತೂ ಪ್ರಶ್ನೆಗಳಿಗೆ ಉತ್ತರಿಸಿ ಹುಡುಗಿಯರಿಗಿಂತ ಹೆಚ್ಚಾಗಿ ಹುಡುಗರೇ ಮೇಲುಗೈ ಸಾಧಿಸಿ ನೂರಕ್ಕೆ ಇನ್ನೂರು ಅಂಕಗಳನ್ನು ಪಡೆದು ರ‍್ಯಾಂಕ್ ಗಳಿಸಿ ಹೆಬ್ಬೆರಳನ್ನು ಕತ್ತರಿಸಿಕೊಳ್ಳುವ ಪ್ರಸಂಗವೇ ಬರುವುದಿಲ್ಲ ಎನಿಸಿತು!
ಡಾಲಿ ಧನಂಜಯರವರ ಬಾಳಸಂಗಾತಿಯಾಗಿ ಕೈಹಿಡಿಯಲಿರುವ ಡಾ.ಧನ್ಯತಾ ನಮ್ಮ ಮಠಕ್ಕೆ ಹತ್ತಿರದಲ್ಲಿರುವ ಹೊಳಲ್ಕೆರೆ ತಾಲ್ಲೂಕು ಶಿವಪುರ ಗ್ರಾಮದವಳು. ಹುಟ್ಟೂರಿನ ಹಳೆಯ ಹೆಸರು “ಕಾಗೆ ಬೂದಿಹಾಳು”, ಶಕುನ ಸಾಲಾವಳಿ ಹೊಂದುವುದಿಲ್ಲವೆಂದು ವಧುವಿನ ಹೆಸರನ್ನು ಬದಲಾಯಿಸಿ ಲಗ್ನಪತ್ರಿಕೆಗಳಲ್ಲಿ ಜನ್ಮನಾಮಕ್ಕೆ ಬ್ರಾಕೆಟ್ ಸುತ್ತುವಂತೆ, ಆರು ದಶಕಗಳ ಹಿಂದೆ “ಕಾಗೆ ಬೂದಿಹಾಳು” ಹೆಸರನ್ನು ಸಂಪೂರ್ಣ ಅಳಿಸಿಹಾಕಿ “ಶಿವಪುರ” ಎಂದು ಮರುನಾಮಕರಣ ಮಾಡಿದವರು ನಮ್ಮ ಪರಮಾರಾಧ್ಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ. ಹಳೆಯ ಊರಾದ “ಕಾಗೆ ಬೂದಿಹಾಳಿ”ನಲ್ಲಿ ಹುಟ್ಟಿದ ಡಾ. ಧನ್ಯತಾ ಈಗ ಡಾಲಿ ಧನಂಜಯರ ಬಾಳ ಜೀವನದಲ್ಲಿ ಶರಣ ಸಂಪ್ರದಾಯದ “ಕೋಗಿಲೆ”ಯಾಗಿದ್ದಾಳೆ. ಬೆಂಗಳೂರಿನಲ್ಲಿ ಇಬ್ಬರೂ ಒಟ್ಟಿಗೆ ಬಂದು ನಮಸ್ಕರಿಸಿ ನಮ್ಮ ಕೈಗೆ ಕೊಟ್ಟ ಮದುವೆ ಆಮಂತ್ರಣ ಪತ್ರಿಕೆ ನೂರಾರು ರೂ.ಗಳ ದುಬಾರಿ ವೆಚ್ಚದ ಆಕರ್ಷಕ ಆಹ್ವಾನ ಪತ್ರಿಕೆಯಾಗಿರಲಿಲ್ಲ. ಕೇವಲ ಎರಡೂವರೆ ರೂ.ಗಳ ಇನ್ಲ್ಯಾಂಡ್ ಲೆಟರ್ ಮಾದರಿಯ ಕೈಬರಹದ ಪತ್ರವಾಗಿತ್ತು.
"ಪ್ರೇಮದ ಭರವಸೆಯೇ ಬಾಳಿನ ಬೆಳಕು. ಜಗದ ಯಾವ ಮೂಲೆಯಲ್ಲಿದ್ದರೂ ಕುಟುಂಬಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವಾದ ಮಾಡಬೇಕು,'' ಎಂದು ಕನ್ನಡದಲ್ಲಿಯೂ, “We invite you to witness the beginning of our beautiful journey together as one" ಎಂದು ಇಂಗ್ಲಿಷಿನಲ್ಲಿಯೂ Actor-Doctor ಮದುವೆಗೆ ಬಂದು ಹರಸಬೇಕೆಂದು ಬರೆದ ಕೈಬರಹದ ಆಹ್ವಾನ ಪತ್ರ ಸುಪ್ರಸಿದ್ಧ ನಟನೊಬ್ಬನ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿತ್ತು.
ಯಾವುದೇ ಮದುವೆಗೆ ಹೋಗಲಿ ನವ ದಂಪತಿಗಳು ಆಶೀರ್ವಾದ ಪಡೆಯಲೆಂದು ನಮ್ಮ ಹತ್ತಿರ ಬಂದಾಗ ಕೆಲವು ಪ್ರಶ್ನೆಗಳನ್ನು ಕೇಳಿ “ವಧೂವರರ ಪರೀಕ್ಷೆ ಮಾಡುವುದು ನಮ್ಮದೊಂದು ಹುಚ್ಚು” ನಮ್ಮ ಪ್ರಶ್ನಾವಳಿಗಳು: 1) In a computer, what is more important: Hardware or software? 2) Among husband and wife, who is hardware and who is software? 3) If there is a bug in the program code, what will you do? ಮೊದಲನೆಯ ಪ್ರಶ್ನೆಗೆ ಡಾಲಿ ಧನಂಜಯ ಹಾಡ್೯ ವೇರ್ ಮತ್ತು ಸಾಫ್ಟ್ ವೇರ್ ಎರಡೂ ಮುಖ್ಯ ಎಂದು ಸರಿಯಾದ ಉತ್ತರ ಕೊಟ್ಟರು. ಸಾಫ್ಟ್ ವೇರ್ ಗೆ ಹಾರ್ಡ್ ವೇರ್ ಆಶ್ರಯ ಬೇಕೇ ಬೇಕು. ಇಲ್ಲದಿದ್ದರೆ ಸಾಫ್ಟ್ ವೇರ್ ಕಾರ್ಯನಿರ್ವಹಿಸಲು ಆಗುವುದಿಲ್ಲ. ಅದೇ ರೀತಿ ಸಾಫ್ಟ್ ವೇರ್ ಇಲ್ಲದಿದ್ದರೆ, ಹಾರ್ಡ್ ವೇರ್ ಒಂದು ನಿಷ್ಪ್ರಯೋಜಕ ಡಬ್ಬ. ಇನ್ನು ಗಂಡ-ಹೆಂಡತಿಯರಲ್ಲಿ ಯಾರು ಹಾರ್ಡ್ ವೇರ್, ಯಾರು ಸಾಫ್ಟ್ ವೇರ್ ಎಂಬ ನಮ್ಮ ಎರಡನೇ ಪ್ರಶ್ನೆಗೆ ಹೆಂಡತಿ ಸಾಫ್ಟ್ ವೇರ್ ಎಂದು ಡಾಲಿ ಧನಂಜಯ ತಪ್ಪು ಉತ್ತರ ಕೊಟ್ಟರು. ಹಾಗೆ ಹೇಳುವುದು ಪುರುಷ ದೌರ್ಜನ್ಯವಾಗುತ್ತದೆ ಎಂದಾಗ ಡಾ.ಧನ್ಯತಾ ಸೌಜನ್ಯದಿಂದ ತಲೆತಗ್ಗಿಸಿದಳು. ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ಗಂಡ ಸಾಫ್ಟ್ ವೇರ್ ಆಗಬೇಕಾಗುತ್ತದೆ, ಹೆಂಡತಿ ಹಾರ್ಡ್ ವೇರ್ ಆಗಬೇಕಾಗುತ್ತದೆ. ಮತ್ತೆ ಕೆಲವು ಪ್ರಸಂಗಗಳಲ್ಲಿ ಗಂಡ ಹಾರ್ಡ್ ವೇರ್ ಆಗಬೇಕಾಗುತ್ತದೆ, ಹೆಂಡತಿ ಸಾಫ್ಟ್ ವೇರ್ ಆಗಬೇಕಾಗುತ್ತದೆ ಎಂದಾಗ ಇಬ್ಬರೂ ಮುಗುಳು ನಗೆ ಬೀರಿದರು.
ಇನ್ನು ಮೂರನೇ ನಮ್ಮ ಪ್ರಶ್ನೆಗೆ ಉತ್ತರಿಸಲು ಇಬ್ಬರೂ ಹಿಂಜರಿದರು. ಸಾಫ್ಟ್ ವೇರ್ ಎಂಜಿನಿಯರುಗಳು ಕಂಪ್ಯೂಟರ್ ಪ್ರೋಗ್ರಾಂ ಕೋಡ್ ಬರೆಯುವಾಗ bugಗಳು ಬರುತ್ತವೆ. ಇಂಗ್ಲಿಷ್ ಶಬ್ದಕೋಶದಲ್ಲಿ bug ಅಂದರೆ “ತಿಗಣೆ”, ಅಪ್ರೋಗ್ರಾಂ ಕೋಡ್ ಬರೆಯುವಾಗ ಬರುವ bugಗಳನ್ನು debug ಮಾಡಲು ಎಷ್ಟೇ ಪರಿಣತರಾಗಿದ್ದರೂ ತಿಗಣೆಯನ್ನು ತಿಕ್ಕಿ ಹೊಸಕಿ ಹಾಕಿದಷ್ಟು ಸುಲಭವಲ್ಲ, ಹಾಗೆಯೇ ದಾಂಪತ್ಯ ಜೀವನದಲ್ಲಿ bugಗಳು ಬರುತ್ತವೆ. ಅವುಗಳನ್ನು ನೀವೇ ಒಟ್ಟಿಗೆ ಕುಳಿತು ಸರಿಪಡಿಸಿಕೊಳ್ಳಬೇಕು. ನಿಮ್ಮ ದಾಂಪತ್ಯ ಜೀವನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಿಜವಾಗಿ ನಿಮ್ಮ ಹಿತಹಾರೈಸುವ ಬಂಧುಗಳು ಯಾರೆಂದು ಸರಿಯಾಗಿ ಗುರುತಿಸಿಕೊಳ್ಳಬೇಕು. ಇಲ್ಲದಿದ್ದರೆ ಅಕ್ಷತೆ ಹಾಕಿದವರೇ ಅನೇಕರು ನಿಮ್ಮನ್ನು ದಿಕ್ಕುತಪ್ಪಿಸಿ ಕ್ಷತಿಗೊಳಿಸುತ್ತಾರೆ. ನೀವು ಸಪ್ತಪದಿ ತುಳಿದ ಅಗ್ನಿಗೆ ಮತ್ತಷ್ಟೂ ಹಗೆತನದ ತುಪ್ಪ ಸುರಿಯುತ್ತಾರೆ. ನಿಮ್ಮೀರ್ವರ ಮಧ್ಯೆ “ಕುರುಕ್ಷೇತ್ರ” ಕದನ ಉಂಟಾಗುವಂತೆ ಮಾಡಿ ಗಿರಗಿರನೆ ಕೋರ್ಟು ಸುತ್ತಿಸುತ್ತಾರೆ. ಅವರ ಬದಲು ನಿಮ್ಮ ಆತ್ಮೀಯ ಸ್ನೇಹಿತರನ್ನು ಸಂಪರ್ಕಿಸಿರಿ. ನಿಮ್ಮಲ್ಲಿ ಯಾರದು ತಪ್ಪು-ಒಪ್ಪು ಎಂದು ಅವರಿಂದ ಮನವರಿಕೆ ಮಾಡಿಕೊಳ್ಳಿರಿ. ಆಗ ನಿಮ್ಮ ದಾಂಪತ್ಯ ಜೀವನದ “ಕುರುಕ್ಷೇತ್ರ ಕದನ”ವು ಕರ್ನಾಟಕ ಸಂಗೀತದಲ್ಲಿ ಕೇಳಲು ಇಂಪಾದ “ಕದನ ಕುತೂಹಲ” ರಾಗವಾಗುತ್ತದೆ!
If you are wrong, you must accept it If you are right, you must keep your mouth shut! (ನಿಮ್ಮದು ತಪ್ಪಾಗಿದ್ದರೆ ಬಿಗುಮಾನವಿಲ್ಲದೆ ಒಪ್ಪಿಕೊಳ್ಳಿರಿ! ನಿಮ್ಮದು ಸರಿಯಾಗಿದ್ದರೆ ಬಾಯಿಮುಚ್ಚಿಕೊಂಡು ತೆಪ್ಪಗಿರಿ!) ಈಗಾಗಲೇ ಮದುವೆಯಾದವರಿಗೂ ಮುಂದೆ ಮದುವೆಯಾಗುವವರಿಗೂ ಹೊಸ ವರ್ಷದ ಶುಭಾಶಂಸನೆಗಳು! Marriages are made in Heaven, but take care that they don't end in Hell! (ಸ್ವರ್ಗದಲ್ಲಾದ ಮದುವೆಗಳು ನರಕದಲ್ಲಿ ಕೊನೆಗೊಳ್ಳದಿರಲಿ!)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.2-1-2025.