ಶಾಮನೂರು ಶಿವಶಂಕರಪ್ಪನವರ ಆರೋಗ್ಯ ವಿಚಾರಿಸಿದ ಶ್ರೀ ತರಳಬಾಳು ಜಗದ್ಗುರುಗಳವರು.

  •  
  •  
  •  
  •  
  •    Views  

ದಿನಾಂಕ:02-01-2025
ಸ್ಥಳ: ಬೆಂಗಳೂರು 

ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬೆಂಗಳೂರಿನಲ್ಲಿ ಮಾಜಿ ಸಚಿವರು, ದಾವಣಗೆರೆಯ ಶಾಸಕರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶರಣ ಶಾಮನೂರು ಶಿವಶಂಕರಪ್ಪ ರವರ ಆರೋಗ್ಯ ವಿಚಾರಿಸಿದರು.

ಕಳೆದ ಹತ್ತು ದಿನಗಳಿಂದ ಉತ್ತರ ಭಾರತದಲ್ಲಿನ ಪೂರ್ವ ನಿಗದಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶ್ರೀ ಜಗದ್ಗುರುಗಳವರು ಬೆಂಗಳೂರಿನ ವಿಮಾನ ನಿಲ್ದಾಣದಿಂದ ತರಳಬಾಳು ಕೇಂದ್ರಕ್ಕೆ ಆಗಮಿಸಿದ ತಕ್ಷಣವೇ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಇಲಾಖೆಯ ಸಚಿವರಾದ ಶ್ರೀ ಎಸ್.ಎಸ್.ಮಲ್ಲಿಕಾರ್ಜುನ್ ರವರು ತಮ್ಮ ತಂದೆಯ ಆರೋಗ್ಯದ ಬಗ್ಗೆ ಶ್ರೀ ಜಗದ್ಗುರುಗಳವರಿಗೆ ಮಾಹಿತಿ ನೀಡಿದರು. 

ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರು ಅನಾರೋಗ್ಯದ ಕಾರಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ತಿಳಿದು ಶ್ರೀ ಜಗದ್ಗುರುಗಳವರು ಮುಂಬೈಯಿಂದ ಇಂದು ಬೆಂಗಳೂರಿಗೆ ಆಗಮಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಖುದ್ದಾಗಿ ಮಣಿಪಾಲ್ ಆಸ್ಪತ್ರೆಗೆ ದಯಮಾಡಿಸಿ ಶಿವಶಂಕರಪ್ಪರವರ ಕುಶಲೋಪರಿ ವಿಚಾರಿಸಿದರು ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಶತೋತ್ತರ ಆಯುಷಿಯಾಗುವಂತೆ ಆಶೀರ್ವದಿಸಿದರು. ಶ್ರೀ ಜಗದ್ಗುರುಗಳವರ ದರ್ಶನದಿಂದ ಆನಂದತುಂದಿಲರಾದ ಶಿವಶಂಕರಪ್ಪನವರು ಪೂಜ್ಯರಿಗೆ ಭಕ್ತಿ ಕಾಣಿಕೆ ಅರ್ಪಣೆ ಮಾಡಿ ಪ್ರಣಾಮಗಳನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಎಸ್.ಎಸ್.ಮಲ್ಲಿಕಾರ್ಜುನ್ ರವರು, ದಾವಣಗೆರೆ ಜಿಲ್ಲೆಯ ಲೋಕಸಭಾ ಸದಸ್ಯರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರು, ವೀರಶೈವ ಮಹಾಸಭಾ ಕರ್ನಾಟಕ ರಾಜ್ಯದ ಅಧ್ಯಕ್ಷರಾದ ಶ್ರೀ ಶಂಕರ್ ಬಿದರಿರವರು, ಸೇರಿದಂತೆ ಹಲವು ಗಣ್ಯರು, ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರು ಹಾಜರಿದ್ದರು.

ವಿಶ್ವಾದ್ಯಂತ ವಚನಸಾಹಿತ್ಯವನ್ನು ಪ್ರಚುರಪಡಿಸಬೇಕೆಂಬ ಹಿರಿಯ ಗುರುಗಳ ಆಶಯದಂತೆ ಮೊಬೈಲ್ ಆಪ್ ನಲ್ಲಿ ಸಿದ್ಧಪಡಿಸಿರುವ ಬಸವಾದಿ ಶರಣರ 22 ಸಾವಿರ ವಚನಗಳನ್ನು ಒಳಗೊಂಡಿರುವ ಶಿವಶರಣರ ವಚನ ಸಂಪುಟ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದ್ದು, ಇದರಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ದರಾಮ ಸೇರಿ ಎಲ್ಲಾ ಶಿವಶರಣರ ವಚನಗಳು ಲಭ್ಯವಿದೆ. ವಚನಗಳು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಉರ್ದು ಸೇರಿದಂತೆ ಹಲವಾರು ಭಾಷೆಗಳಲ್ಲಿ ತರ್ಜುಮೆಗೊಂಡು,ಗಾಯನ ರೂಪದಲ್ಲಿಯೂ ವಚನಗಳನ್ನು ಆಲಿಸುವ ವಿಶೇಷತೆಯನ್ನು ಮೊಬೈಲ್ ಆಪ್ ಹೊಂದಿದೆ ಎಂದು ಶ್ರೀ ಜಗದ್ಗುರುಗಳವರು ತೋರಿಸಿದ್ದನ್ನು ಶಿವಶಂಕರಪ್ಪನವರು ಮತ್ತು ಕುಟುಂಬವರ್ಗದವರು ಕುತೂಹಲದಿಂದ ನೋಡಿದರು.