ಶಿವಶರಣರ ವಚನ ಸಂಪುಟ ತಂತ್ರಾಂಶಕ್ಕೆ ಮರಾಠಿ ಮತ್ತು ರಷ್ಯನ್ ಅನುವಾದ ಸೇರ್ಪಡೆ

  •  
  •  
  •  
  •  
  •    Views  

೧೨ನೆಯ ಶತಮಾನದಲ್ಲಿ ಬಸವ, ಅಲ್ಲಮ, ಅಕ್ಕ ಮೊದಲಾದ ಶಿವಶರಣರು ಕನ್ನಡ ನಾಡಿನ ಅಮರ ಚೇತನರು. ಅವರು ವಚನ ಸಾಹಿತ್ಯದ ಮೂಲಕ ಪ್ರತಿಪಾದಿಸಿದ ಸಮಾನತೆ, ಕಾಯಕ, ದಾಸೋಹ ತತ್ತ್ವಗಳು ವಿಶ್ವಮಾನ್ಯ. ಇಂತಹ ಹಿರಿದಾದ ಆದರ್ಶಗಳನ್ನೊಳಗೊಂಡ  ವಚನ ಸಾಹಿತ್ಯದ ಸಂಶೋಧನೆ, ಪ್ರಚಾರ, ಅನುವಾದ, ಅನುಷ್ಠಾನಕ್ಕಾಗಿ ದುಡಿದವರ ಸಂಖ್ಯೆ ಅಪಾರ. ಅದರಲ್ಲಿ  ಪ್ರಶಸ್ತಿ, ಪ್ರಚಾರಗಳನ್ನು ಬಯಸದೆ,   ಕೇವಲ ಆತ್ಮಸಂತೋಷಕ್ಕಾಗಿ ಕೆಲಸ ಮಾಡುವವರಲ್ಲಿ ಪ್ರೊ. ಶಾಲಿನಿ ದೊಡ್ಡಮನಿಯವರು ಅಗ್ರಗಣ್ಯರು. 

ವಚನ ಸಾಹಿತ್ಯದ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರೊ. ಶಾಲಿನಿತಾಯಿಯವರು ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತರು. ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ. ಬಾಲ್ಯದ ಶಿಕ್ಷಣ ಮರಾಠಿ ಭಾಷೆಯಲ್ಲಿ. ಮದುವೆಯಾಗಿ ಬಂದದ್ದು ಅಥಣಿ  ತಾಲೂಕಿನ ಉಗಾರ ಖುರ್ದು ಗ್ರಾಮಕ್ಕೆ. ಮರಾಠಿ ಮತ್ತು ಕನ್ನಡ ಎರಡೂ ಭಾಷಾ ಪರಿಸರದಲ್ಲಿ ಬೆಳೆದ ಇವರಿಗೆ ದುಭಾಷೆಗಳಲ್ಲಿ ಪರಿಣತಿ.‌ ಭಾಷಾ ಶಿಕ್ಷಕಿಯಾಗಿ ವೃತ್ತಿಯನ್ನು ಆರಂಭಿಸಿ, ಮಾಡೆಲ್ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಆನಂತರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಮರಾಠಿಯಲ್ಲಿ ಅನೇಕ ಸ್ವತಂತ್ರ ಕೃತಿಗಳನ್ನು ರಚಿಸಿದ್ದರೂ ಅನುವಾದ ಕಾರ್ಯದಲ್ಲಿ ಹೆಚ್ಚು ಆಸಕ್ತಿ. ವಿಶೇಷವಾಗಿ ವಚನ ಸಾಹಿತ್ಯದ ಕಡೆಗೆ ಒಲವು. ಹಾಗಾಗಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮುಂತಾದವರ ಸಮಗ್ರ ವಚನಗಳು, ಚನ್ನಬಸವಣ್ಣ, ಸಿದ್ಧರಾಮರ ಆಯ್ದ ವಚನಗಳನ್ನು, ತರಂಗಿಣಿ, ಕದಳಿ ಕರ್ಪೂರ ಮುಂತಾದ ಕಾದಂಬರಿಗಳನ್ನು  ಮರಾಠಿಗೆ ಅನುವಾದಿಸಿದ್ದಾರೆ. ಶಿವಯೋಗಿ ಸಿದ್ಧರಾಮ, ಫ ಗು ಹಳಕಟ್ಟಿಯವರು, ಹರ್ಡೇಕರ ಮಂಜಪ್ಪ, ಚನ್ನಬಸವ ಪಟ್ಟದ್ದೆವರು ಮೊದಲಾದವರ ಜೀವನ ಚರಿತ್ರೆಗಳನ್ನು ಮರಾಠಿ ಭಾಷೆಯಲ್ಲಿ ರಚಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ಕೃತಿಗಳು ಇವರ ಲೇಖನಿಯಿಂದ ಮೂಡಿರುವುದು ಬೆರಗು ಮೂಡಿಸುತ್ತದೆ.

ಶಾಲಿನಿತಾಯಿಯವರ ಪರಿಚಯ ಆಗಿದ್ದು ಬೆಳಗಾವಿಯ ಪ್ರಕಾಶ್ ಗಿರಿಮಲ್ಲನವರ ಮೂಲಕ. (ವಚನ ಸಾಹಿತ್ಯದ ಅನುವಾದ, ಪ್ರಕಟಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ, ಸಮಸ್ಯೆ, ಪ್ರಶ್ನೆಗಳಿಗೆ ನಾನು ಶರಣು ಹೋಗುವುದೇ ಗಿರಿಮಲ್ಲನವರ ಬಳಿ. ಅದಕ್ಕಾಗಿ ಪ್ರಕಾಶ್ ಗಿರಿಮಲ್ಲನವರ ಬಗ್ಗೆ ಪ್ರತೇಕವಾಗಿ ಬರೆಯಬೇಕು) ಹತ್ತಾರು ವರ್ಷಗಳಿಂದ ಸಿರಿಗೆರೆಯ ಪೂಜ್ಯರ ದರ್ಶನ ಪಡೆಯಬೇಕೆಂಬ ಹಂಬಲ ಶಾಲಿನಿತಾಯಿಯವರದು. ಅದು ಸಾಧ್ಯವಾಗಿದ್ದು ಮೊನ್ನೆ ಸೋಮವಾರ.‌  ಆ ದಿನ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಪೂಜ್ಯರ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಸೇವೆ, ನ್ಯಾಯದಾನ ಕಂಡು ಬೆರಗು. ಶಬರಿ ರಾಮನನ್ನು ಕಂಡ ಸಂಭ್ರಮ.‌ 

ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ . ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿವೃದ್ಧಿ ಪಡಿಸಿರುವ "ಶಿವಶರಣರ ವಚನ ಸಂಪುಟ" ಮೊಬೈಲ್ ತಂತ್ರಾಂಶದಲ್ಲಿ ಈಗಾಗಲೇ ಶಿವಶರಣರ ೨೨ ಸಾವಿರ  ವಚನಗಳನ್ನು ಅಳವಡಿಸಲಾಗಿದೆ. ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಭಾಷೆಗಳ ಅನುವಾದವನ್ನು ಸಹ ನೋಡಬಹುದು. ಜಗತ್ತಿನ ಯಾವ ಮೂಲೆಯಲ್ಲಾದರೂ ಕುಳಿತು ಈ ತಂತ್ರಾಂಶದಲ್ಲಿ ಸಮಗ್ರ ವಚನ ಸಾಹಿತ್ಯವನ್ನು ಕೆಲವೇ ಸೆಕೆಂಡ್ ಗಳಲ್ಲಿ ಹುಡುಕಬಹುದು.‌ ಈ ತಂತ್ರಾಂಶಕ್ಕೆ ವಚನಗಳ  ಮರಾಠಿ ಅನುವಾದ ಅಳವಡಿಸುವ ಸಲುವಾಗಿ "ಹುಡುಕುವ ಬಳ್ಳಿ ಕಾಲಿಗೆ ತೊಡರಿದಂತೆ'' ಎಂಬಂತಾಯಿತು ಶಾಲಿನಿತಾಯಿಯವರ ಪರಿಚಯ. ಇವರು ಅನುವಾದಿಸಿರುವ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ಧರಾಮ ಮುಂತಾದವರ ಮರಾಠಿಗೆ ಅನುವಾದಿಸಿರುವ ವಚನಗಳನ್ನು ಮೊಬೈಲ್ ತಂತ್ರಾಂಶಕ್ಕೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರೊಂದಿಗೆ ಶಾಲಿನಿತಾಯಿಯವರ ಇನ್ನೊಂದು ಬಹುದೊಡ್ಡ ಕನಸ್ಸೆಂದರೆ, ಮರಾಠಿಗೆ ಅನುವಾದಿಸಿರುವ "ಶೂನ್ಯ ಸಂಪಾದನೆ" ಪ್ರಕಟಣೆ. ಸಾವಿರಕ್ಕೂ ಹೆಚ್ಚು ಪುಟಗಳ ಈ ಕೃತಿಯ ಪ್ರಕಟಣೆಯ ಜವಾಬ್ದಾರಿಯನ್ನು ಪೂಜ್ಯರು ವಹಿಸಿಕೊಂಡಿರುವುದು.

ಶಾಲಿನಿತಾಯಿಯವರು ಯಾವ ಬಿರುದು ಸನ್ಮಾನಗಳ ಬಗ್ಗೆ ತಲೆಕೆಡಿಸೊಕೊಳ್ಳದೆ, ತಮ್ಮ ಪಾಡಿಗೆ ತಾವು ಬಸವಾದಿ ಶರಣರ ವಚನ ಸಾಹಿತ್ಯವನ್ನು ಮರಾಠಿಗರಿಗೆ ತಲುಪಿಸುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಬಸವಾಭಿಮಾನಿಗಳಿದ್ದಾರೆ. ಹಾಗಾಗಿ ಇವರ ಕೃತಿಗಳ ಓದುಗರ ದೊಡ್ಡ ಬಳಗವೇ ಇದೆ. ಆದುದರಿಂದ ಇವರ  ಹಲವು ಕೃತಿಗಳು ಮರು ಮುದ್ರಣದ ಭಾಗ್ಯವನ್ನು ಕಂಡಿವೆ. ಎರಡೂ ಭಾಷೆಗಳ ನಡುವೆ ಸೇತುವೆಯಾಗಿ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಇವರಿಗೆ ಇನ್ನಷ್ಟು ಆರೋಗ್ಯ ಭಾಗ್ಯ ದೊರಕಲಿ, ಶರಣರ ಸಂತರ ಆಶೀರ್ವಾದ ದೊರಕಲಿ ಎಂದು ಆಶಿಸುತ್ತೇನೆ. 

 - ನಾಗರಾಜ ಸಿರಿಗೆರೆ