ಮಲ್ಲಗಂಬ ತರಬೇತುದಾರ ಮಂಜುನಾಥ್ ಕೊಳಚಿ ಶಿವೈಕ್ಯ : ಶ್ರೀ ತರಳಬಾಳು ಜಗದ್ಗುರುಗಳವರು ಸಂತಾಪ

  •  
  •  
  •  
  •  
  •    Views  

ಸಿರಿಗೆರೆ 14-1-2025 :
ಮಂಜುನಾಥ್ ಕೊಳಚಿ ಮರಣದಿಂದ ಮಲ್ಲಕಂಭ ಮುರಿದುಬಿದ್ದಂತಾಗಿದೆ; ಮಲ್ಲಿಹಗ್ಗ ಹರಿದಂತಾಗಿದೆ!  ಅವನು ಮಠಕ್ಕೆ ಸಲ್ಲಿಸಿದ ಸೇವೆ, ಕಲೆಗೆ ಮಾಡಿದ ಸಮರ್ಪಣೆ ಅನುಪಮ. ಚಿರಸ್ಮರಣೀಯ. ಅವನ ತಂದೆ-ತಾಯಿಗೆ ಉಂಟಾದ ದುಃಖದಲ್ಲಿ ನಾವೂ ಭಾಗಿ. 

ಅವನ ಕೈಯಲ್ಲಿ ತಯಾರಾದ ಮಕ್ಕಳೇ ಧೃತಿಗೆಡದಿರಿ! ಅವನು ಕಲಿಸಿದ ಕಲೆಯನ್ನು ಎದೆಗುಂದದೆ ಮಂದುವರಿಸುವುದೇ ಆವನ ಆತ್ಮಕ್ಕೆ ನೀವು ಸಲ್ಲಿಸುವ ನಮನ ಮತ್ತು ಶಾಂತಿ!

- ತರಳಬಾಳು ಶ್ರೀಗಳವರು

----------------------------------------

ವಿಶ್ವವಿದ್ಯಾಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಮಲ್ಲಗಂಬ ತರಬೇತುದಾರ ಮಂಜುನಾಥ್ ಕೊಳಚಿ ಅಗಲಿದ್ದು ಸಿರಿಗೆರೆಯ ಪರಿಸರದಲ್ಲಿ ದೊಡ್ಡ ಶೂನ್ಯ ಆವರಿಸಿದಂತಾಗಿದೆ ಎಂದು ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಗುಣಗಾನ ಮಾಡಿ ಪುಷ್ಪ ಅರ್ಪಿಸಿ ಸಂತಾಪ ಸೂಚಿಸಿದರು.

ಜವರಾಯ ಬಂದಾರೆ ಬರಿಗೈಲಿ ಬರಲಿಲ್ಲ
ಕುಡುಗೋಲು ಕೊಡಲೊಂದು  ಹೆಗಲೇರಿ
ಒಳ್ಳೊಳ್ಳೆ ಮರಗಳ ಕಡಿ ಬಂದಾ....

ಮಲ್ಲರು ತಮ್ಮ ದೇಹವನ್ನು ಬಿಲ್ಲಿನಂತೆ ಬಾಗಿಸುತ್ತಾ, ಬಳ್ಳಿಯಂತೆ ಬಳುಕಿಸುತ್ತಾ, ಸಪೂರ ಕಂಬದ ಮೇಲೆ ವಿವಿಧ ಪಟ್ಟುಗಳನ್ನು ಹಾಕುತ್ತಿದ್ದರೆ ನೋಡುಗರಿಗೆ ಅದು ಮೈನವಿರೇಳುವಂತೆ ಮಾಡುತ್ತದೆ. ಕಣ್ಣು ರೆಪ್ಪೆ ಮಿಟುಕಿಸುವ ಕಾಲಾವಧಿಯಲ್ಲಿ ವೈವಿಧ್ಯ ಕಸರತ್ತುಗಳನ್ನು ಪ್ರದರ್ಶಿಸುತ್ತ ನೆರೆದವರನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಕಲೆ ನಿಜಕ್ಕೂ ಅದ್ಭುತ ಮತ್ತು ಸಾಹಸಮಯ. ಈ ಮಲ್ಲರು ಕಂಬದ ಮೇಲೆ ಹಾಕುವ ಈ ಕಸರತ್ತಿಗೆ "ಮಲ್ಲಗಂಬ" ಎಂದು ಕರೆಯುತ್ತಾರೆ. ಇದು ಕಲೆಯು ಹೌದು, ಕ್ರೀಡೆಯು ಹೌದು. ವಿಜಯನಗರ ಅರಸರು ಮತ್ತು ಶಿವಾಜಿ ಮಹಾರಾಜರ ಕಾಲದಲ್ಲಿ ಈ ಕಲೆ ಜನಪ್ರಿಯವಾಗಿತ್ತು. ಇದನ್ನು ಬಾಳಂಬಟ್ಟರು ಎಂಬ ಗುರುಗಳು ಸೈನಿಕರಿಗೆ ದೈಹಿಕ ಕಸರತ್ತಿನ ತರಬೇತಿಯ ಭಾಗವಾಗಿ ರೂಪಿಸಿದರು. ಈ ದೇಸಿಯ ಕಲೆಯು ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದೆ. ಇಂತಹ ರೋಮಾಂಚಕಾರಿ ಕ್ರೀಡೆಯನ್ನು ಮಧ್ಯ ಕರ್ನಾಟಕದ ಸಿರಿಗೆರೆಯ ಶಾಲಾ ಆವರಣದಲ್ಲಿ ಪರಿಚಯಿಸದ ಕೀರ್ತಿ ಮಂಜುನಾಥ್ ಕೊಳಚಿಯವರಿಗೆ ಸಲ್ಲುತ್ತದೆ. "ಮಲ್ಲಗಂಬ" ಬಾಲಕರ ಕ್ರೀಡೆಯಾದರೆ, "ಮಲ್ಲಿಹಗ್ಗ" ಬಾಲಕಿಯರದಾಗಿತ್ತು. ಹಗ್ಗದ ಮೇಲೆ ಹಾಕುವ ಕಸರತ್ತಿಗೆ "ಹಗ್ಗದ ಮಲ್ಲಗಂಬ" ಎಂದೇ ಕರೆಯುತ್ತಿದ್ದರು. ಇದನ್ನು ಗಮನಿಸಿದ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು "ಮಲ್ಲಿಹಗ್ಗ" ( ಮಲ್ಲಿಯರು ಎಂದರೆ ಬಾಲಕಿಯರು ಹಗ್ಗದ ಮೇಲೆ ಹಾಕುವ ಕಸರತ್ತಿಗೆ) ಎಂದು ನಾಮಕರಣ ಮಾಡಿ, ಈ ಬಹುವಾಗಿ ಪ್ರೋತ್ಸಾಹಿಸಿದರು. 

ಬಾಗಲಕೋಟೆ ಜಿಲ್ಲೆಯ ತುಳಸೀಗೇರಿ ಆಂಜನೇಯಸ್ವಾಮಿ ದೇವಾಲಯಕ್ಕೆ ತುಂಬಾ ಪ್ರಸಿದ್ಧಿಯಾದಂತೆ ಮಲ್ಲಗಂಬ ಕ್ರೀಡೆಯ ತವರೂರು ಹೌದು. ಇದೇ ಗ್ರಾಮದ ಯುವಕ ಮಂಜುನಾಥನಿಗೆ ಪರಿಸರದ ಪ್ರಭಾವದಿಂದ ಈ ಕಲೆ ಕರಗತವಾಗಿತ್ತು.‌ ಹಾಗಾಗಿ ಮುಂದೆ ತನ್ನ ಜೀವನಕ್ಕೆ ಇದೇ ಕಲೆಯನ್ನು ಆಧಾರ ಮಾಡಿಕೊಂಡು, ದೈಹಿಕ ಶಿಕ್ಷಣ ಶಿಕ್ಷಕ ತರಬೇತಿ ಪಡೆದಿದ್ದರು. ಮುಂದೆ ಎಂ.ಪಿ.ಇಡಿ ಪದವಿಯನ್ನೂ ಗಳಿಸಿದರು. ಉದ್ಯೋಗ ಅರಸಿ ಸಿರಿಗೆರೆಗೆ ಆಗಮಿಸಿದರು. ಇಲ್ಲಿಯ ಸಾಂಸ್ಕೃತಿಕ ಪರಿಸರದಲ್ಲಿ ಈ ಕ್ರೀಡೆಯನ್ನು ಪರಿಚಯಿಸಿ, ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. 2012ರಲ್ಲಿ ಆರಂಭವಾದ "ಜಾನಪದ ಸಿರಿ ಸಂಭ್ರಮದ" ಪ್ರಮುಖ ಆಕರ್ಷಣೆ ಈ ಮಲ್ಲಗಂಬ ಮತ್ತು ಮಲ್ಲಹಗ್ಗ ಆಗಿತ್ತು. ಹೀಗಾಗಿ ಸಿರಿಗೆರೆಯ ವಿದ್ಯಾರ್ಥಿಗಳು ತರಳಬಾಳು ಹುಣ್ಣಿಮೆ, ಮೈಸೂರು ದಸರಾ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ರಾಜ್ಯ, ರಾಷ್ಟ್ರದ ಅನೇಕ ಪ್ರಮುಖ ಉತ್ಸವಗಳಲ್ಲಿ, ಮುಂಬಯಿ, ಸಾಂಗ್ಲಿ, ದೇಹಲಿ, ಭೂಪಾಲ್, ಹೈದರಾಬಾದ್ ಮುಂತಾದ ನಗರಗಳಲ್ಲಿ ನೂರಾರು ಪ್ರದರ್ಶನ ಮಾಡಿದ್ದಾರೆ. 

ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಮಲ್ಲಗಂಬ, ಮಲ್ಲಿಹಗ್ಗದ ಕಸರತ್ತು ಮತ್ತು ಸಾಹಸವನ್ನು ನೂರಾರು ಸಲ ನೋಡಿದರೂ ಮತ್ತೆ ಮತ್ತೆ ಅದೇ ಕುತೂಹಲದಿಂದ ವೀಕ್ಷಿಸುತ್ತಿದ್ದರು.

ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ಕೇಂದ್ರ ಕಛೇರಿಯ ಸಿಬ್ಬಂದಿ, ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಮಲ್ಲಗಂಬ ತರಬೇತುದಾರ ಮಂಜುನಾಥ್ ಕೊಳಚಿ ಅವರಿಂದ ತರಬೇತಿ ಪಡೆದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಸಾಹಸದ ನೆನಪು.